ಅಧಿಕ ಮಾಸ ಮುಗಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುತ್ತೇವೆ ಎಂದು ಕಳೆದ ವಾರ ಭೇಟಿ ಆಗಿದ್ದ ಬೊಮ್ಮಾಯಿ ಸಾಹೇಬರಿಗೆ ಅಮಿತ್‌ ಶಾ ಮತ್ತು ಜೆ.ಪಿ.ನಡ್ಡಾ ಹೇಳಿ ಕಳುಹಿಸಿದ್ದರು. ಆದರೆ ಈಗ ಬರುತ್ತಿರುವ ಸುದ್ದಿಗಳ ಪ್ರಕಾರ, ಕೇಂದ್ರ ಸಂಪುಟ ಪುನಾರಚನೆಯ ಸರ್ಕಸ್‌ ಶೀಘ್ರವೇ ನಡೆಯಲಿದ್ದು ಅದರ ಜತೆಯೇ ಕರ್ನಾಟಕದ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರ ಆಯ್ಕೆ ಹಾಗೂ ಕೋರ್‌ ಕಮಿಟಿ ರಚಿಸುತ್ತೇವೆ ಎಂದು ದಿಲ್ಲಿ ಬಿಜೆಪಿ ಮೂಲಗಳು ಹೇಳುತ್ತಿವೆ.

- ನಾತು ಕಾಲಂ

ಅಧಿಕ ಮಾಸ ಮುಗಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುತ್ತೇವೆ ಎಂದು ಕಳೆದ ವಾರ ಭೇಟಿ ಆಗಿದ್ದ ಬೊಮ್ಮಾಯಿ ಸಾಹೇಬರಿಗೆ ಅಮಿತ್‌ ಶಾ ಮತ್ತು ಜೆ.ಪಿ.ನಡ್ಡಾ ಹೇಳಿ ಕಳುಹಿಸಿದ್ದರು. ಆದರೆ ಈಗ ಬರುತ್ತಿರುವ ಸುದ್ದಿಗಳ ಪ್ರಕಾರ, ಕೇಂದ್ರ ಸಂಪುಟ ಪುನಾರಚನೆಯ ಸರ್ಕಸ್‌ ಶೀಘ್ರವೇ ನಡೆಯಲಿದ್ದು ಅದರ ಜತೆಯೇ ಕರ್ನಾಟಕದ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರ ಆಯ್ಕೆ ಹಾಗೂ ಕೋರ್‌ ಕಮಿಟಿ ರಚಿಸುತ್ತೇವೆ ಎಂದು ದಿಲ್ಲಿ ಬಿಜೆಪಿ ಮೂಲಗಳು ಹೇಳುತ್ತಿವೆ. ಹಾಗಾದರೆ ಇದು ಯಾವಾಗ ಎಂಬ ಪ್ರಶ್ನೆ ಕೇಳಿದರೆ ‘ಮೋದಿ ಒಬ್ಬರಿಗೇ ಗೊತ್ತು’ ಎಂಬ ಉತ್ತರ ಬರುತ್ತದೆ. ದಿಲ್ಲಿ ಬಿಜೆಪಿ ಹಿರಿಯ ನಾಯಕರು ಪಾರ್ಲಿಮೆಂಟ್‌ನಲ್ಲಿ ಖಾಸಗಿಯಾಗಿ ಹೇಳಿರುವ ಪ್ರಕಾರ, ಕರ್ನಾಟಕದಲ್ಲಿ ಇಷ್ಟುದೊಡ್ಡ ಸೋಲು ಆಗುತ್ತದೆ ಅಂತ ಗೊತ್ತಿದ್ದರೂ ಕೂಡ ನನಗೆ ಸರಿಯಾಗಿ ಯಾರು ಬಂದು ಸ್ಥಿತಿಗತಿ ಬ್ರೀಫಿಂಗ್‌ ಮಾಡಲಿಲ್ಲ. ಅದು ಹೇಗೆ ನಿರ್ಣಯಗಳು ತಪ್ಪಾದವು ಎಂದು ಮೋದಿ ಸಾಹೇಬರು ತೀವ್ರವಾಗಿ ಬೇಸರದಲ್ಲಿದ್ದಾರೆ. ಹೀಗಾಗಿ ಮೋದಿ ಬೇಸರದ ಮೌನದಿಂದ ನೇಮಕದ ನಿರ್ಣಯಗಳು ಇಷ್ಟೊಂದು ತಡ ಆಗುತ್ತಿವೆ ಅಂತೆ.

ಡಿಕೆ ಬ್ರದರ್ಸ್‌ ಚದುರಂಗ ಬಿಜೆಪಿ ತಾಳುತ್ತಾ?

ಕಾಂಗ್ರೆಸ್ಸಿಗರು ಒಂದು ಬಾರಿ ಅಧಿಕಾರ ಹಿಡಿದ ಮೇಲೆ ಪಕ್ಷ ಸಂಘಟನೆ ಮಾಡುವುದು ವಿರಳಾತಿ ವಿರಳ. ಆದರೆ ಈ ಬಾರಿ ರಾಜ್ಯ ಕಾಂಗ್ರೆಸ್‌ ನಾಯಕರ ವೇಗ ಮತ್ತು ಶೈಲಿ ಗಮನಿಸಿದರೆ ಆಡಳಿತಕ್ಕಿಂತ ಒಂದು ಪಟ್ಟು ಹೆಚ್ಚು ಒತ್ತು ಪಕ್ಷ ಸಂಘಟನೆ ಮೇಲೆ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ಮುಂಬರುವ ಲೋಕಸಭಾ ಚುನಾವಣೆ ಫಲಿತಾಂಶ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಮತ್ತು ಖರ್ಗೆ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುವುದು ಕೂಡ ಸಂಘಟನೆ ಸಕ್ರಿಯತೆಗೆ ಒಂದು ಪ್ರಮುಖ ಕಾರಣ. ಒಂದು ರೀತಿ ವೈಚಾರಿಕವಾದ ಸಿದ್ಧಾಂತದ ರಾಜಕಾರಣ ಮಾಡುವ ಸಿದ್ದರಾಮಯ್ಯ ಅವರನ್ನು ಎದುರಿಸುವುದು ಕೇಡರ್‌ ಇರುವ ಸಂಘ ಪರಿವಾರ ಮತ್ತು ಬಿಜೆಪಿಗೆ ಸುಲಭ. ಆದರೆ ಪ್ರತಿ ಹೆಜ್ಜೆಯಲ್ಲೂ ಚದುರಂಗದಾಟ ಆಡುವ ಡಿ.ಕೆ.ಶಿವಕುಮಾರ್‌ ಮತ್ತು ಅವರ ಸಹೋದರ-ಸಂಸದ ಡಿ.ಕೆ. ಸುರೇಶ್‌ ಅವರನ್ನು ಬಿಜೆಪಿ ಹಾಗೂ ಜೆಡಿಎಸ್‌ ಹೇಗೆ ಎದುರಿಸುತ್ತವೆ ಎನ್ನುವುದು ಪ್ರಶ್ನಾರ್ಥಕ. ಡಿ.ಕೆ. ಶಿವಕುಮಾರ್‌ ಒಕ್ಕಲಿಗರ ಭವಿಷ್ಯದ ನಾಯಕನಾಗಬೇಕಾದರೆ ಜೆಡಿಎಸ್‌ ಒಡೆಯಬೇಕು ಎನ್ನುವುದು ಡಿಕೆ ಬ್ರದರ್ಸ್‌ ರಣತಂತ್ರವಾದರೆ, ಹೀನಾಯ ಸೋಲಿನಿಂದ ತತ್ತರಿಸಿ ಹೋಗಿರುವ ರಾಜ್ಯ ಬಿಜೆಪಿಯನ್ನು ಚೇತರಿಸಿಕೊಳ್ಳಲು ಬಿಡದಂತೆ ಏಟಿನ ಮೇಲೆ ಏಟು ಕೊಡಬೇಕು ಎಂಬ ಆಲೋಚನೆ ಇನ್ನೊಂದು ಕಡೆ. ಇವೆಲ್ಲ ಮಾಡಿ ಕರ್ನಾಟಕದಿಂದ ಲೋಕಸಭೆಗೆ 20 ಸೀಟು ಗೆಲ್ಲಿಸಿಕೊಟ್ಟರೆ ಕಾಂಗ್ರೆಸ್‌ ಹೈಕಮಾಂಡ್‌ ಮುಖ್ಯಮಂತ್ರಿ ಸ್ಥಾನವನ್ನು ತಾಂಬೂಲದ ತಟ್ಟೆಯಲ್ಲಿಟ್ಟು ಕೊಡುತ್ತದೆ ಎನ್ನುವ ಆಲೋಚನೆ ಮಗದೊಂದು ಕಡೆ. ಇದನ್ನೆಲ್ಲಾ ಸ್ಥಳೀಯವಾಗಿ ಎದುರಿಸುವ ಶಕ್ತಿ, ಸಾಮರ್ಥ್ಯ ಇರುವ ನಾಯಕ ಯಾರು ಎನ್ನುವುದು ಬಿಜೆಪಿ ಹೈಕಮಾಂಡ್‌ಗೆ ತಲೆನೋವು ತಂದಿರುವ ವಿಷಯ.

India Gate: ಕೇವಲ 100 ಸಂಸತ್ ಸ್ಥಾನಕ್ಕೆ ಕಾಂಗ್ರೆಸ್ ಟಾರ್ಗೆಟ್!

ಡಿ.ಕೆ. ಸುರೇಶ್‌ ಬರ್ತಾರಾ ಬೆಂಗಳೂರು ಉತ್ತರಕ್ಕೆ?

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬಿಟ್ಟು ಬೆಂಗಳೂರು ಉತ್ತರಕ್ಕೆ ಬರಲು ಸಂಸದ ಡಿ.ಕೆ. ಸುರೇಶ್‌ ಯೋಚನೆ ಮಾಡುತ್ತಿದ್ದಾರೆ. ಹೀಗಾಗಿಯೇ ಅಲ್ಲಿನ ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಗೋಪಾಲಯ್ಯ ಮತ್ತು ಭೈರತಿ ಬಸವರಾಜ್‌ ಅವರನ್ನು ಡಿಕೆ ಬ್ರದರ್ಸ್‌ ಸೆಳೆಯುವ ಗಂಭೀರ ಪ್ರಯತ್ನ ಮಾಡುತ್ತಿದ್ದಾರೆ. ಮೊದಲನೆಯದಾಗಿ, ಬಿಬಿಎಂಪಿ ಚುನಾವಣೆಯಲ್ಲಿ ಇದು ದೊಡ್ಡ ಲಾಭ ಆಗಬಹುದು ಎನ್ನುವುದು ಡಿಕೆ ಬ್ರದರ್ಸ್‌ ತರ್ಕ. ಆದರೆ ಎರಡನೆಯದಾಗಿ, ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಇದು ಸಹಾಯವಾಗಬಹುದು ಎಂಬುದು ಇನ್ನೊಂದು ಲೆಕ್ಕ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಶಾಸಕ ಸ್ಥಾನಕ್ಕೆ ಬಿಜೆಪಿಯ ಮೂವರು ರಾಜೀನಾಮೆ ನೀಡಿದರೆ, ಸಂಸತ್ತಿನ ಜೊತೆಗೆ ಉಪಚುನಾವಣೆಗಳು ನಡೆಯುತ್ತವೆ. ಆಗ ಶಾಸಕರು ಪುನರಪಿ ಗೆಲ್ಲಲು ಸಾಧ್ಯವಾಗುತ್ತದೆ. ಜೊತೆಗೆ ಅದೇ ವಾತಾವರಣದಲ್ಲಿ ಬಿಜೆಪಿಯನ್ನು ಕೂಡ ಮಣಿಸಬಹುದು ಎನ್ನುವ ರಣತಂತ್ರ ಡಿಕೆ ಬ್ರದರ್ಸ್‌ರದ್ದು. ಬೆಂಗಳೂರಿನಲ್ಲಿ ಬಿಜೆಪಿ ನಿಂತಿರುವುದೇ ಬ್ರಾಹ್ಮಣರು, ಒಕ್ಕಲಿಗರು ಮತ್ತು ಉತ್ತರ ಭಾರತೀಯರ ವೋಟಿನ ಮೇಲೆ. ಡಿ.ಕೆ.ಸುರೇಶ್‌ ರೂಪದಲ್ಲಿ ಪ್ರಬಲ ಒಕ್ಕಲಿಗ ನಾಯಕ ಬೆಂಗಳೂರಿನ ರಾಜಕಾರಣಕ್ಕೆ ಬಂದರೆ ಮುಂದಿನ 10 ವರ್ಷ ಕಾಂಗ್ರೆಸ್‌ಗೆ ಲಾಭ, ಬಿಜೆಪಿಗೆ ನಷ್ಟಎನ್ನುವ ಆಲೋಚನೆ ಡಿಕೆ ಬ್ರದರ್ಸ್‌ಗೆ ಇದ್ದ ಹಾಗೆ ಕಾಣುತ್ತದೆ. ಆದರೆ ಇದಕ್ಕೆ ಸದ್ಯ ಬಿಜೆಪಿಯಲ್ಲಿರುವ ಮೂವರು ಶಾಸಕರು ಇನ್ನೊಂದು ಉಪಚುನಾವಣೆಯ ರಿಸ್‌್ಕಗೆ ಒಪ್ಪುತ್ತಾರಾ? ಹಾಗೇನಾದರೂ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋದರೂ ಅವರಿಗೆ ಸಿಗುವುದು ಏನು ಎನ್ನುವುದು ಮುಂದಿನ ಪ್ರಶ್ನೆ.

ಕಾರ್ಪೊರೇಟರ್‌ಗಳು ಕೂಡ ಗಾಳದಲ್ಲಿ

ಗಾಳ ತಯಾರಿಸೋದು ಹೇಗೆ? ಒಗೆಯೋದು ಹೇಗೆ? ಮೀನು ಸಿಕ್ಕಿ ಹಾಕಿಸೋದು ಹೇಗೆ? ಎಂಬುದನ್ನು ಡಿ.ಕೆ.ಶಿವಕುಮಾರ್‌ಗೆ ಹೇಳಿಕೊಡಬೇಕಾ? ಅದರಲ್ಲಿ ಅವರು ಪಳಗಿದ ಆಟಗಾರ. ಬೆಂಗಳೂರು ಉಸ್ತುವಾರಿ ವಹಿಸಿಕೊಂಡ ಮೇಲೆ ನಡೆದಿರುವ ಗುತ್ತಿಗೆಗಳ ತನಿಖೆಯನ್ನು ಮಾಡಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ದಾಳ ಒಗೆದಿದ್ದೇ ತಡ, ಬೆಂಗಳೂರಿನ ಲೋಕಲ್‌ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗಿದೆ. ಏಕೆಂದರೆ ಒಬ್ಬರೋ ಇಬ್ಬರೋ ಬಿಟ್ಟರೆ ಸರ್ವ ಪಕ್ಷಗಳಲ್ಲೂ ಅಲಿಬಾಬಾ ಮತ್ತು 40 ಕಳ್ಳರ ಪಡೆಯೇ ಇದೆ. ಡಿ.ಕೆ.ಶಿವಕುಮಾರ್‌ ಈ ತನಿಖೆಯ ದಾಳ ಒಗೆದ ನಂತರ ಬಿಜೆಪಿಯ 30ಕ್ಕೂ ಹೆಚ್ಚು ಮಹಾನಗರ ಪಾಲಿಕೆ ಸದಸ್ಯರು ಕಾಂಗ್ರೆಸ್‌ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಎಲ್ಲಿ ಕಾಂಗ್ರೆಸ್‌ ಗೆಲ್ಲಲು ಸಾಧ್ಯ ಇಲ್ಲವೋ ಅಲ್ಲಿ ಬಿಜೆಪಿಗರನ್ನು ಜೊತೆಗೆ ತೆಗೆದುಕೊಳ್ಳುವುದು ಬಿಬಿಎಂಪಿಗೆ ಲಾಭ ಆಗಿಯೇ ಆಗುತ್ತದೆ. ಜೊತೆಗೆ ಲೋಕಸಭೆಯಲ್ಲೂ ಲಾಭ ಆಗಬಹುದು ಎಂಬ ಲೆಕ್ಕಾಚಾರ ಡಿಕೆ ಅವರದ್ದು. ರಾಷ್ಟ್ರ ಮಟ್ಟದಲ್ಲಿ ಸಿಬಿಐ ಮತ್ತು ಇ.ಡಿ. ಬಳಸಿ ಬಿಜೆಪಿ ಹೇಗೆ ಬೇಟೆ ಆಡುತ್ತದೆಯೋ ಅದೇ ರಾಜಕೀಯ ಚದುರಂಗ ದಾಟವನ್ನು ಡಿಕೆ ಇಲ್ಲಿ ಆಡುತ್ತಿದ್ದಾರೆ. ಉvಛ್ಟಿyಠಿhಜ್ಞಿಜ ಜಿs ್ಛaಜ್ಟಿಜ್ಞಿ ್ಝಟvಛಿ a್ಞd ಡಿa್ಟಬಿಡಿ.

ತೆಲಂಗಾಣ, ಆಂಧ್ರದಲ್ಲಿ ಮೆತ್ತಗಾದ ಬಿಜೆಪಿ

ಇನ್ನೇನು ಹೈದರಾಬಾದ್‌ನಲ್ಲಿ ಮುಂದಿನ ಸರ್ಕಾರ ನಮ್ಮದೇ ಎಂದು ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ ಏಕ್‌ದಂ ಉಲ್ಟಾಹೊಡೆದಿದ್ದು, ಅಮಿತ್‌ ಶಾ ಮತ್ತು ಕೆಸಿಆರ್‌ ಪುತ್ರ ರಾಮರಾವ್‌ ನಡುವೆ ಮಾತುಕತೆ ನಡೆಯುತ್ತಿವೆ ಎಂಬ ಸುದ್ದಿಗಳಿವೆ. ಅದರ ಮೊದಲ ಸಂಕೇತವಾಗಿ ಕೆಸಿಆರ್‌ ವಿರುದ್ಧ ಬೆಂಕಿ ಉಗುಳುತ್ತಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ… ಅವರನ್ನು ಬದಲಿಸಿ ಕೆಸಿಆರ್‌ ಜೊತೆಗೆ ಒಳ್ಳೆಯ ಸಂಬಂಧ ಇರುವ ಕಿಶನ್‌ ರೆಡ್ಡಿಗೆ ಅಧ್ಯಕ್ಷ ಸ್ಥಾನ ಕೊಡಲಾಗಿದೆ. ಕೆಸಿಆರ್‌ ವಿರುದ್ಧ ಬಿಜೆಪಿ ಘರ್ಜನೆಯಿಂದ ರೇವಂತ್‌ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್‌ ಚೇತರಿಸಿಕೊಳ್ಳುತ್ತಿದೆ ಎಂದು ಸಮೀಕ್ಷೆಗಳು ಹೇಳುತ್ತಿರುವುದರಿಂದ ಬೇಕಾದರೆ ಬಿಜೆಪಿ ಸೀಟು ಕಡಿಮೆ ಆಗಲಿ, ಆದರೆ ಇಬ್ಬರ ಜಗಳದಲ್ಲಿ ಕಾಂಗ್ರೆಸ್‌ ಚಿಗುರುವುದು ಬೇಡ ಎಂಬ ಚಿಂತನೆಯಲ್ಲಿ ಅಮಿತ್‌ ಶಾ ಇದ್ದಂತಿದೆ. ಅತ್ತ ಆಂಧ್ರದಲ್ಲಿ ಮೂರು ತಿಂಗಳ ಹಿಂದೆ ಚಂದ್ರಬಾಬು ನಾಯ್ಡು ಜೊತೆ ಅಮಿತ್‌ ಶಾ ಮಾತುಕತೆ ನಂತರ ಏಕಾಏಕಿ ಜಗನ್‌ ಮೋಹನ್‌ ರೆಡ್ಡಿ ಅವಿಶ್ವಾಸ ಗೊತ್ತುವಳಿ ಹಾಗೂ ದಿಲ್ಲಿ ಬಿಲ… ವಿಚಾರದಲ್ಲಿ ಮೋದಿ ಸರ್ಕಾರವನ್ನು ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಬೇಕಾದರೆ ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಕೊನೆ ಘಳಿಗೆಯಲ್ಲಿ ಮೈತ್ರಿ ಮಾಡಿಕೊಳ್ಳೋಣ. ಆದರೆ ಚಂದ್ರಬಾಬು ಜೊತೆ ಹೋಗಬೇಡಿ ಎಂದು ಅಮಿತ್‌ ಶಾ ಅವರಿಗೆ ಹೇಳಿರುವುದರಿಂದ ಬಿಜೆಪಿ ಆಂಧ್ರದಲ್ಲೂ ಕೂಡ ಪೂರ್ತಿ ಮೆತ್ತಗಾಗಿದೆ. ಸದ್ಯ ಬಿಜೆಪಿ ಇರಲಿ, ಕಾಂಗ್ರೆಸ್‌ ಇರಲಿ ತಾವು ಮನೆ ಕಟ್ಟದಿದ್ದರೂ ಪರವಾಗಿಲ್ಲ. ಪರಸ್ಪರರು ಪಾಯ ಹಾಕಲು ಬಿಡಬಾರದು ಎನ್ನುವ ಪ್ರಯತ್ನದಲ್ಲಿ ಇದ್ದಾರೆ.

ಕಾಂಗ್ರೆಸ್‌ಗೆ ಆಮ್‌ ಆದ್ಮಿ ಸಂಕಟ

ಆಮ್‌ ಆದ್ಮಿ ಪಾರ್ಟಿ ನಾಯಕ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಕಾಂಗ್ರೆಸ್‌ ಜೊತೆ ಹೋಗುವ ಮನಸ್ಸು ಇಲ್ಲ. ಆದರೆ ‘ಇಂಡಿಯಾ’ ಒಕ್ಕೂಟ ಸೇರದೆ ತಟಸ್ಥರಾಗಿ ದೂರ ಉಳಿದರೆ ಬಿಜೆಪಿ ಹತ್ತಿರ ಹೋಗುತ್ತಿದ್ದಾರೆ ಎಂಬ ಆರೋಪ ಬರಬಹುದು ಎಂಬ ಕಾರಣಕ್ಕೆ ಅರವಿಂದ ಕೇಜ್ರಿವಾಲ್‌ ‘ಇಂಡಿಯಾ’ ಒಕ್ಕೂಟ ಸೇರಿಕೊಂಡಿದ್ದರು. ಕಾಂಗ್ರೆಸ್‌ ಜತೆ ಮಾತುಕತೆಗಳು ಆರಂಭ ಆದಾಗ ಖರ್ಗೆ ಸಾಹೇಬರು ಬರೀ ದಿಲ್ಲಿ ಮತ್ತು ಪಂಜಾಬ್‌ಗಷ್ಟೇ ಸೀಮಿತವಾಗಿ ಮೈತ್ರಿ ಮಾಡಿಕೊಳ್ಳೋಣ ಎಂದಾಗ ಒಪ್ಪದ ಆಮ್‌ ಆದ್ಮಿ ಪಾರ್ಟಿ, ಇಲ್ಲ ನಾವು ದಿಲ್ಲಿಯ 7, ಪಂಜಾಬ್‌ನ 13ರಲ್ಲಿ 5 ಸೀಟು ಬಿಟ್ಟು ಕೊಡುತ್ತೇವೆ, ನೀವು ನಮಗೆ ಹರಿಯಾಣ, ಮಧ್ಯಪ್ರದೇಶ ಮತ್ತು ಗುಜರಾತ್‌ ಸೇರಿ 7 ಸೀಟು ಬಿಟ್ಟು ಕೊಡಿ ಎಂದು ಹೇಳಿದ್ದರಿಂದ ಕಾಂಗ್ರೆಸ್‌ ನಾಯಕರಿಗೆ ಈಗ ‘ಇದು ಆಗೋಲ್ಲ ಹೋಗೋಲ್ಲ’ ಅನ್ನುವುದು ಅರಿವಾಗಿದೆ. ಒಂದು ವೇಳೆ ಬೇರೆ ರಾಜ್ಯಗಳಲ್ಲಿ ಆಮ್‌ ಆದ್ಮಿ ಪಾರ್ಟಿಗೆ ಸೀಟು ಬಿಟ್ಟು ಕೊಟ್ಟರೆ ರಾಷ್ಟ್ರೀಯ ಪಾರ್ಟಿ ಆಗಲು ನಾವೇ ಅವಕಾಶ ಕೊಟ್ಟಹಾಗೆ ಎಂದು ಕಾಂಗ್ರೆಸ್‌ಗೆ ಅನ್ನಿಸುತ್ತಿದ್ದರೆ, ತಾನು ಪೊಲಿಟಿಕ್ಸ್‌ ಶುರು ಮಾಡಿದ್ದೇ ಕಾಂಗ್ರೆಸ್‌ ವಿರುದ್ಧ. ಈಗ ಮೈತ್ರಿ ಮಾಡಿಕೊಂಡು ಮಧ್ಯಮ ವರ್ಗದ ವೋಟ್‌ ಬ್ಯಾಂಕ್‌ ಬಿಜೆಪಿಗೆ ಹೋದರೆ ಎನ್ನುವ ಚಿಂತೆ ಆಪ್‌ಗೆ. ಹೀಗಾಗಿ ಇಬ್ಬರಿಗೂ ಒಬ್ಬರಿಗೊಬ್ಬರ ಜೊತೆ ಹೋಗುವ ಮನಸ್ಸು ಇಲ್ಲ. ಆದರೆ ಮೊದಲು ನೀವು ಬೇಡ ಅನ್ನಿ ನೀವು ಬೇಡ ಅನ್ನಿ ಎಂದು ಕಾಯುತ್ತಿದ್ದಾರೆ ಅಷ್ಟೇ.

ಕೇರಳ ಮಾಜಿ ಸಿಎಂ ಸಮಾಧಿ ನೋಡೋಕೆ 2 ದಿನ ಪ್ಯಾಕೇಜ್: ಲೋಕಲ್‌ ಪ್ರಶಾಂತ್‌ ಕಿಶೋರರಿಂದ ಸೋತ ರಾಜ್ಯ ಬಿಜೆಪಿ ನಾಯಕರು!

ಬಿಜೆಪಿಗೆ ಕರ್ನಾಟಕ ಕಲಿಸಿದ ಪಾಠ

ಕರ್ನಾಟಕದ ಮತದಾರರು ಹೀನಾಯವಾಗಿ ಸೋಲಿಸಿದ ನಂತರ ದಿಲ್ಲಿ ಬಿಜೆಪಿ ನಾಯಕತ್ವ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಂನಲ್ಲಿ ವರ್ಷಾಂತ್ಯಕ್ಕೆ ನಡೆಯುವ ಚುನಾವಣೆಗೆ ತುಂಬಾ ಬೇಗ ತಯಾರಿ ಶುರು ಮಾಡಿದೆ. ಕರ್ನಾಟಕದಲ್ಲಿ ದಿಲ್ಲಿಯವರು ಬಂದು ಹೇಳುತ್ತಿದ್ದರು, ಇಲ್ಲಿನವರು ಹಿಂಬಾಲಿಸುತ್ತಿದ್ದರು ಅನ್ನುವ ಹಾಗೆ ಇತ್ತು. ಆದರೆ ಚುನಾವಣೆಗೆ 3 ತಿಂಗಳು ಮುಂಚೆ ಸ್ವತಃ ಮೋದಿ ಕುಳಿತುಕೊಂಡು ಮೂರು ಗಂಟೆಗಳ ಸ್ಥಳೀಯ ರಾಜಕಾರಣ ಸಮೀಕರಣಗಳು, ಟಿಕೆಟ್‌ ಹಂಚಿಕೆ ಬಗ್ಗೆ ರಾಜ್ಯದ ನಾಯಕರಿಂದ ಫೀಡ್‌ಬ್ಯಾಕ್‌ ಪಡೆದಿದ್ದಾರೆ. ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ನಾಯಕತ್ವ, ಛತ್ತೀಸ್‌ಗಢದಲ್ಲಿ ಸಾಮೂಹಿಕ ನಾಯಕತ್ವ ಎನ್ನುವುದು ಬಿಜೆಪಿ ನಾಯಕರ ಸಭೆಯಲ್ಲಿ ತೀರ್ಮಾನ ಆಗಿದೆ. ಆದರೆ ವಸುಂಧರಾ ರಾಜೇ ಸಿಂಧಿಯಾ ವಿಷಯದಲ್ಲಿ ಏನು ಮಾಡಬೇಕು? ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಆಗಿ ಘೋಷಿಸಬೇಕಾ, ಬೇಡವಾ? ಎಂಬ ಬಗ್ಗೆ ಇನ್ನೂ ನಿರ್ಣಯ ಆಗಿಲ್ಲ. ಈಗಿನ ಸರ್ವೇಗಳು ಹೇಳುತ್ತಿರುವ ಪ್ರಕಾರ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಪುನರಪಿ ಗೆಲ್ಲುವ ಸಾಧ್ಯತೆ ಜಾಸ್ತಿ. ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ವಿರುದ್ಧ 20 ವರ್ಷದ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ. ರಾಜಸ್ಥಾನದಲ್ಲಿ ಮಾತ್ರ ಒಂದು ಅವಕಾಶ ಬಿಜೆಪಿಗೆ ಇರುವ ಹಾಗೆ ವಾತಾವರಣ ಇದೆ.