ನವದೆಹಲಿ(ಸೆ.24): ಪ್ರತಿ ಶುಕ್ರವಾರ ಬೆಳಿಗ್ಗೆ ಕನ್ನಡ ಪ್ರಭದ ನನ್ನ ಅಂಕಣ ನೋಡಿ ಫೋನ್ ಮಾಡುವ ಸಂಸದರಲ್ಲಿ ಸುರೇಶ ಅಂಗಡಿ ಕೂಡ ಒಬ್ಬರು.ತುಂಬಾ ಕಷ್ಟ ಪಟ್ಟು ಕಾದು ಕೇಂದ್ರ ಮಂತ್ರಿ ಆಗಿದ್ದರು.2004 ರಲ್ಲೇ ಸಂಸದರಾದರು ಕೂಡ ಅಂಗಡಿ ಅವರಿಗೆ ಅಧಿಕಾರ ಎಂದು ಸಿಕ್ಕಿದ್ದು 2019 ರಲ್ಲಿ.ಆದರೆ ವಿಧಿ ಆಟ ನೋಡಿ ಒಂದು ವರ್ಷದಲ್ಲಿ ಎಲ್ಲವನ್ನು ಉಧ್ವಸ್ತ ಮಾಡಿ ಹೋಯಿತು.

ಸುರೇಶ ಅಂಗಡಿ ಕರ್ನಾಟಕದ ಸಂಸದರಲ್ಲಿ ಅತ್ಯಂತ ಜೆಂಟಲ್ ಮೆನ್ ಸಂಸದ.ಸಾದಾ ಸೀದಾ ವ್ಯಕ್ತಿತ್ವ.ಯಾವುದೇ ಕೆಟ್ಟ ಅಭ್ಯಾಸಗಳಿರಲಿಲ್ಲ.ಆರೋಗ್ಯದ ವಿಚಾರದಲ್ಲಿ ಕಟ್ಟು ನಿಟ್ಟು.ದಿನವೂ ನಡಿಗೆ ತಪ್ಪಿಸುವವರಲ್ಲ.ಹಿತ ಮಿತ ವ್ಯಾಯಾಮ.ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಊಟ ದಿಲ್ಲಿ ಯಲ್ಲಿದ್ದರು ಬೇಕಿತ್ತು ಅವರಿಗೆ.

ಸೋಲಿಲ್ಲದ ಸರದಾರ, ಅದೃಷ್ಟದ ರಾಜಕಾರಣಿ ಅಂಗಡಿ!

ಸುರೇಶ ಅಂಗಡಿ ತುಂಬಾ ಆರ್ ಎಸ್ ಎಸ್ ನಲ್ಲಿ ಕೆಲಸ ಮಾಡಿರಲಿಲ್ಲ ಆದರೂ ಸಂಘ ನಿಷ್ಠ ಬಿಜೆಪಿ ರಾಜಕಾರಣಿ.ಯಡಿಯೂರಪ್ಪ ಅನಂತ ಕುಮಾರ ಇಬ್ಬರಿಗೂ ಆತ್ಮೀಯರು.ಸಿಮೆಂಟ್ ವ್ಯಾಪಾರ ಮಾಡುತ್ತಲೇ ಬೆಳಗಾವಿ ಯಂಥ ಕ್ಲಿಷ್ಟ ಸಮಿಕರಣದ ಜಿಲ್ಲೆಯಲ್ಲಿ ಬಿಜೆಪಿ ರಾಜಕಾರಣ ಮಾಡಿದವರು.ಕೋರೆ ಕತ್ತಿ ಜಾರಕಿಹೊಳಿ ಜೊಲ್ಲೆ ಇವರೆಲ್ಲ ಬಿಜೆಪಿಗೆ ನಂತರ ಬಂದವರು ಆದರೆ ಮೊದಲಿನಿಂದಲೂ ಬಿಜೆಪಿ ಗೆ ಲಿಂಗಾಯಿತ ಮುಖ ಎಂದರೆ ಅದು ಅಂಗಡಿ ಸಾಹೇಬರು.

2004 ರಲ್ಲಿ ಬಾಬಾ ಗೌಡ ಪಾಟೀಲರು ಪಕ್ಷ ಬಿಟ್ಟು ಹೋದ ನಂತರ ಬಿಜೆಪಿ ಕನ್ನಡ ಮರಾಠಿ ಇಬ್ಬರನ್ನು ಆಕರ್ಷಿಸಬಲ್ಲ ಹಿಂದುತ್ವ ದ ಅಡಿಯಲ್ಲಿ ಒಟ್ಟಿಗೆ ತರಬಲ್ಲ ಅಭ್ಯರ್ಥಿ ಬೇಕಿತ್ತು.ಅನಂತ ಕುಮಾರ ಪ್ರಮೋದ ಮುತಾಲಿಕ್ ಅವರಿಗೆ ನೀವು ನಿಲ್ಲಿ ಎಂದು ಹೇಳಿದಾಗ ಮುತಾಲಿಕ್ ಇಲ್ಲ ಎಂದಿದ್ದರಿಂದ ಟಿಕೆಟ್ ಸುರೇಶ ಅಂಗಡಿಗೆ ಸಿಕ್ತು.ಮೊದಲ ಅವಧಿಯ ಪ್ರಥಮಾರ್ಧ ದಲ್ಲಿ ಅಷ್ಟೇನು ಸಕ್ರಿಯ ಇರಲಿಲ್ಲ.ಆದರೆ ಯಾವಾಗ ಯಡಿಯೂರಪ್ಪ ವಿರುದ್ಧ ಬಿಜೆಪಿ ಯಲ್ಲಿ ಬಂಡಾಯ ಶುರು ಆಯಿತೋ ದಿಲ್ಲಿಯಲ್ಲಿ ಬಿ ಎಸ್ ವೈ ಪರವಾಗಿ ದಿಲ್ಲಿಯಲ್ಲಿ ಗಟ್ಟಿಯಾಗಿ ಮಾತನಾಡಿದ್ದು ಸುರೇಶ ಅಂಗಡಿ ಮಾತ್ರ.ಇದರಿಂದ ಅಂಗಡಿ ಮತ್ತು ಅನಂತ ಕುಮಾರ ಸಂಬಂಧ ಕೂಡ ಆಗ ಬಿಗದಾಯಿಸಿತ್ತು.

ಅಪರೂಪದ ಫೋಟೋ ಹಂಚಿಕೊಂಡು ಸುರೇಶ್ ಅಂಗಡಿಯವರನ್ನ ಸ್ಮರಿಸಿದ ಮೋದಿ

ಆದರೆ ಯಾವಾಗ ಯಡಿಯೂರಪ್ಪ ಬಿಜೆಪಿ ಬಿಟ್ಟು ಹೊರಗೆ ಹೋದರೊ ಸುರೇಶ ಅಂಗಡಿ ನೇರವಾಗಿ ನಾನು ನಿಮ್ಮ ಜೊತೆ ಬರೋಲ್ಲ ಎಂದು ಹೇಳಿ ದ್ದರಿಂದ ಮುಂದೆ ಅಂಗಡಿ ಯಡಿಯೂರಪ್ಪ ಸಂಬಂಧ ಅಷ್ಟಕಷ್ಟೇ ಎಂಬಂತೆ ಆಗಿತ್ತು.ಹೀಗಾಗಿ 2016 ರಲ್ಲಿ ಸಂಪುಟಕ್ಕೆ ಲಿಂಗಾಯಿತರು ಬೇಕು ಎನ್ನುವ ಪ್ರಶ್ನೆ ಬಂದಾಗ ಯಡಿಯೂರಪ್ಪ ಶಿವಕುಮಾರ ಉದಾಸಿ ಹೆಸರು ಹೇಳಿದರೆ ಅನಂತ ಕುಮಾರ ಸುರೇಶ ಅಂಗಡಿ ಗೆ ಮಂತ್ರಿ ಮಾಡಿ ಲಿಂಗಾಯಿತ ರಿಗೆ ಪ್ರಾತಿನಿಧ್ಯ ಕೊಡಿ ಎಂದು ಹೇಳುತ್ತಿದ್ದರು.ಅಷ್ಟರಲ್ಲಿ ಸುರೇಶ ಅಂಗಡಿ ಕಿರಿಯ ಪುತ್ರಿ ವಿವಾಹ ಜಗದೀಶ ಶೆಟ್ಟರ್ ಮಗ ಸಂಕಲ್ಪ ಜೊತೆ ನೆರವೇರಿತ್ತು.ಹೀಗಾಗಿ ಬೀಗರ ಪರವಾಗಿ ಜಗದೀಶ ಶೆಟ್ಟರ್ ಕೂಡ ದಿಲ್ಲಿಯಲ್ಲಿ ಓಡಾಟ ಆರಂಭಿಸಿದ್ದರು.ಕೊನೆಗೆ ಎಷ್ಟೇ ಪ್ರಯತ್ನ ಪಟ್ಟರು ಅನಂತ ಹೆಗ್ಡೆ ಕೇಂದ್ರ ಸಚಿವರಾದಾಗ ಆಗಷ್ಟೇ ಸಂಸದೀಯ ಸಚಿವರಾಗಿದ್ದ ಅನಂತ ಕುಮಾರ ಸುರೇಶ ಅಂಗಡಿಗೆ ಸಂಸದರು ಅಧಿಕಾರಿಗಳಿಗೆ ಸರ್ಕಾರಿ ಮನೆ ಹಂಚುವ ಅಧಿಕಾರವಿರುವ ಸಂಸದೀಯ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದರು.

ದಿಲ್ಲಿಯಲ್ಲಿ ಏಕದಂ ಸುರೇಶ ಅಂಗಡಿ ಪ್ರಭಾವ ಶುರು ಆಗಿದ್ದು ಆಗ.zee ಮೀಡಿಯಾ ದ ಸುಭಾಷ ಚಂದ್ರ ಜಿಂದಾಲ್ ನಂಥ ಶ್ರೀಮಂತ ಸಂಸದರು ಕೂಡ ಈ ಮನೆ ಕೊಡಿ ಆ ಮನೆ ಕೊಡಿ ಎಂದು ಸುರೇಶ ಅಂಗಡಿ ಭೇಟಿಗೆ ಬರ ತೊಡಗಿದರು.ಅಂಗಡಿ ಅದನ್ನು ಎಂಜಾಯ್ ಮಾಡುತ್ತಿದ್ದರು.ಆದರೆ ಅಂಗಡಿ ಅವರಿಗೆ ಹೇಗಾದರೂ ಮಾಡಿ ಕೇಂದ್ರದಲ್ಲಿ ಮಂತ್ರಿ ಆಗಲೇಬೇಕು ಎಂಬ ಆಸೆಯಿತ್ತು.

2019 ರಲ್ಲಿ ಸಂಘ ದ ಒತ್ತಾಸೆಯ ಕಾರಣದಿಂದ ಸುರೇಶ ಅಂಗಡಿ ಮಂತ್ರಿ ಆದರೂ ಕ್ಯಾಬಿನೆಟ್ ಮಂತ್ರಿ ಆಗಲಿಲ್ಲ ಎಂದು ಬೇಸರವಿತ್ತು.ಆದರೆ ಮುಂದೆ ರೈಲ್ವೆ ಖಾತೆ ಸಿಕ್ಕಾಗ ಸಿಕ್ಕಾಪಟ್ಟೆ ಸಕ್ರಿಯರಾಗಿ ಕೆಲಸ ಮಾಡತೊಡಗಿದರು.ಉತ್ತರ ಕರ್ನಾಟಕಕ್ಕೆ ಹೆಚ್ಚು ಕೆಲಸ ಮಾಡಿ ತೋರಿಸಬೇಕೆಂಬ ಇಚ್ಚಾ ಶಕ್ತಿ ಅವರಿಗಿತ್ತು

ರಾಜ್ಯ ರಾಜಕಾರಣಿಗಳನ್ನು ದಿಗ್ಬ್ರಮೆಗೊಳಿಸಿದ ಸುರೇಶ್‌ ಅಂಗಡಿ ಹಠಾತ್‌ ನಿಧನ

ನನಗೆ ತುಂಬಾ ಹುಷಾರಿಲ್ಲದಾಗ ಫೆಬ್ರವರಿ ಯಲ್ಲಿ  ಸುರೇಶ ಅಂಗಡಿ ನನ್ನನ್ನು ಭೇಟಿ ಆಗಲು ಹುಬ್ಬಳ್ಳಿಗೆ ಬಂದು ಒಂದು ಗಂಟೆ ಕುಳಿತು ಹರಟೆ ಹೊಡೆದು ಹೋಗಿದ್ದರು.ತೀರ 15 ದಿನಗಳ ಹಿಂದೆ ಫೋನ್ ಮಾಡಿ ನೋಡಿ ಧಾರವಾಡ ಬೆಳಗಾವಿ ಬಗ್ಗೆ ಹೇಳಿದಂಗೆ ಮಾಡಿ ತೋರಿಸಿದ್ದೇನೆ ಎಂದು ಖುಷಿಯಿಂದ ಹೇಳಿ ಕೊಂಡಿದ್ದರು.ನನಗೆ ಲಾಕ್ ಡೌನ್ ಅವಧಿಯಲ್ಲಿ ತುಂಬಾ ಸಲ ಫೋನ್ ಮಾಡಿ ಪ್ರಶಾಂತ ನಿಮಗೆ ಶ್ವಾಸಕೋಶದ ಸೋಂಕು ಇದೆ ಹುಷಾರಾಗಿರಿ ಎಂದು ಎಚ್ಚರಿಸುತ್ತಿದ್ದರು.ಆದರೆ ವಿಧಿ ನೋಡಿ ಅದೇ ಕರೋನಾ ದಿಂದ ಶ್ವಾಸಕೋಶಕ್ಕೆ ಸೋಂಕು ತಗುಲಿ ಹೊರಟು ಹೋದರು.ಹೋಗಿ ಬನ್ನಿ ಸರ್ ನಿಮ್ಮ ಜೆಂಟಲ್ ಮೆನ್ ವ್ಯಕ್ತಿತ್ವ ಸದಾ ನೆನಪಿನಲ್ಲಿರುತ್ತದೆ.