ನವದೆಹಲಿ(ಸೆ.24): ಬೆಳಗಾವಿ ಪಾಲಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸೋಲಿಲ್ಲದ ಸರದಾರ, ಅದೃಷ್ಟದ ರಾಜಕಾರಣಿ. 2004ರಿಂದ ಸತತ 4 ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿಸಿದ್ದರು.

"

ದೇಶದಲ್ಲಿ ಬಿಜೆಪಿ ಪರ ಅಲೆ ಇರಲಿ, ಬಿಡಲಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಅಂಗಡಿ ಅವರದ್ದೇ ಗೆಲುವು. ಮೂಲತಃ ಉದ್ಯಮಿಯಾಗಿದ್ದ ಅವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ರಾಜ್ಯದ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದ ಅವರು ಬೆಳಗಾವಿಯಲ್ಲಿ ಪಕ್ಷವನ್ನು ಬೇರುಮಟ್ಟದಲ್ಲಿ ಭದ್ರಪಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅಂಗಡಿ ಅವರು 1996ರಲ್ಲಿ ಬಿಜೆಪಿಯ ಬೆಳಗಾವಿ ಘಟಕದ ಉಪಾಧ್ಯರಾಗಿ, ನಂತರ 2001ರಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಮೊದಲ ಬಾರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಅವರು ಗೆಲುವು ಸಾಧಿಸಿದ್ದರು. ಮೊದಲ ಚುನಾವಣೆಯಲ್ಲೇ ಅವರು ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ರಾಜಕಾರಣಿ ವಸಂತರಾವ್ ಪಾಟೀಲ್ ಅವರ ಪುತ್ರ ಅಮರ ಸಿನ್ಹಾ ಪಾಟೀಲ್‌ರನ್ನು ಮಣಿಸಿದ್ದರು. ನಂತರ 2009, 2014 ಮತ್ತು 2019 ಹೀಗೆ ಎಲ್ಲ ಚುನಾವಣೆಗಲ್ಲೂ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರನೆನಿಸಿದರು.

ಬರ್ತ್‌ಡೇ ಗಿಫ್‌ಟ್- ಸದಾ ಅದೃಷ್ಟವನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡು ತಿರುಗುತ್ತಿದ್ದ ಅಂಗಡಿ ಅವರಿಗೆ ಕೇಂದ್ರ ಸಂಪುಟದಲ್ಲೂ ಸಚಿವ ಸ್ಥಾನ ಸಿಕ್ಕಿದ್ದೂ ಒಂದು ಅದೃಷ್ಟ.

"

ಸತತ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಅಂಗಡಿ ಅವರಿಗೆ ಪ್ರಧಾನಿ ಮೋದಿ ಅವರು ಹುಟ್ಟುಹಬ್ಬದ ಉಡುಗೊರೆ ಎನ್ನುವಂತೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಿದ್ದರು. ಘಟಾನುಘಟಿಗಳೇ ಕೇಂದ್ರ ಸಚಿವ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದಾಗ ಅಂಗಡಿ ಅವರಿಗೆ ಈ ಸ್ಥಾನ ಒಲಿದು ಬಂದದ್ದೇ ಒಂದು ಅಚ್ಚರಿ. ಆದರೆ, ಕೇಂದ್ರ ರೈಲ್ವೆ ಖಾತೆ ರಾಜ್ಯಸಚಿವರಾಗಿ ಸುಮಾರು 15 ತಿಂಗಳ ಕಾಲ ಎಲ್ಲರೂ ಮೆಚ್ಚುವ ರೀತಿಯಲ್ಲಿ ನಿಭಾಯಿಸಿದ ಅಂಗಡಿ ಅವರು ಉತ್ತರ ಕರ್ನಾಟಕ ಅದರಲ್ಲೂ ಬೆಳಗಾವಿ ಭಾಗದಲ್ಲಿ ರೈಲ್ವೆ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ನೆನೆಗುದಿಗೆ ಬಿದ್ದಿದ್ದ ಅನೇಕ ರೈಲ್ವೆ ಯೋಜನೆಗಳಿಗೆ ಅವರು ಚುರುಕು ನೀಡಿದ್ದರು.

ಸೆ.9ರಂದು ಕೊನೇ ಕಾರ್ಯಕ್ರಮ: ಸೆ.9 ರಂದು ನಡೆದ ಅನಂತಪುರ-ನವದೆಹಲಿ ಕಿಸಾನ್ ರೈಲು ಸಂಚಾರಕ್ಕೆ ಬೆಳಗಾವಿಯ ತಮ್ಮ ಕಚೇರಿಯಿಂದ ಸುರೇಶ ಅಂಗಡಿ ಅವರು ಹಸಿರುನಿಶಾನೆ ತೋರಿದ್ದರು. ಇದುವೇ ಅವರು ಭಾಗವಹಿಸಿದ ಕೊನೇ ಕಾರ್ಯಕ್ರಮವಾಗಿತ್ತು. ಆ ನಂತರ ಅವರು ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಬಂಧ ದೆಹಲಿಗೆ ತೆರಳಿದ್ದರು. ಸೆ.11ರಂದು ಕೋವಿಡ್ ದೃಢಪಟ್ಟ ಬಳಿಕ ಅವರು ದೆಹಲಿಯ ಏಮ್‌ಸ್ ಆಸ್ಪತ್ರೆಗೆ ದಾಖಲಾಗಿದ್ದರು.