India Gate: ಸಿದ್ದರಾಮಯ್ಯರನ್ನು ಕಟ್ಟಿಹಾಕಲು ಮೋದಿ, ಶಾ ಜೊತೆ ಸೇರಿ ರಣತಂತ್ರ ರೂಪಿಸಿದರಾ ದೇವೇಗೌಡ?
ಮೋದಿ ಜೊತೆಗಿನ ಸಭೆಯಲ್ಲಿ ಗೌಡರು, ಬೆಂ.ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಮತ ಜೆಡಿಎಸ್‌ಗೆ ಹಾಕಿಸುವಂತೆ ಮತ್ತು ಉಳಿದ 18 ಕಡೆ ತಮ್ಮ ಮತ ಬಿಜೆಪಿಗೆ ಹಾಕಿಸುವ ಪ್ರಸ್ತಾಪ ಇಟ್ಟಿದ್ದಾರೆ.
2006ರಿಂದ ಆರಂಭವಾಗಿದ್ದ ಜೆಡಿಎಸ್‌ನ ಬಿಜೆಪಿ ಜೊತೆಗಿನ ಪ್ರೀತಿ-ಪ್ರೇಮ-ಪ್ರಣಯಕ್ಕೆ ಕೊನೆಗೂ ದೇವೇಗೌಡರು ಅಧಿಕೃತ ಒಪ್ಪಿಗೆ ಕೊಟ್ಟಿದ್ದು, ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ನಿಶ್ಚಿತಾರ್ಥದ ಮಾತುಕತೆ ಮುಗಿಸಿದ್ದಾರೆ. ಹೊರಗಡೆ ಐಐಟಿ ಹಾಸನದ ಕಾಗದ ತೋರಿಸಿದರೂ ಒಳಗಡೆ ಪ್ರಧಾನಿ ಮೋದಿ ಎದುರು ಮಾತ್ರ ‘ಇನ್ನು ನಾವು ನೀವು ಜೊತೆಜೊತೆ ಇರೋಣ’ ಎಂದು ಹೇಳಿ ಬಂದಿದ್ದಾರೆ.
45 ನಿಮಿಷ ಮೋದಿ, ಅರ್ಧ ಗಂಟೆ ಅಮಿತ್ ಶಾರನ್ನು ಭೇಟಿಯಾಗಿ ವಿಧಾನಪರಿಷತ್ ಚುನಾವಣೆ, ಮುಂದಿನ ವಿಧಾನಸಭಾ ಚುನಾವಣೆ ಬಗ್ಗೆ ಎಲ್ಲಾ ಮಾತಾಡಿ ಬಂದಿರುವ ದೇವೇಗೌಡ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರ ಜೊತೆ ಕೂಡ ದೂರವಾಣಿ ಮೂಲಕ 20 ನಿಮಿಷ ಚರ್ಚೆ ಮಾಡಿದ್ದಾರೆ. ದೇವೇಗೌಡರ ಆಪ್ತ ಮೂಲಗಳ ಪ್ರಕಾರ, ತಮ್ಮ ಒಂದು ಕಾಲದ ಶಿಷ್ಯ ಸಿದ್ದರಾಮಯ್ಯ ಹಳೆ ಮೈಸೂರು ಭಾಗದಲ್ಲಿ ನೀಡುತ್ತಿರುವ ಏಟು ತಾಳಲಾರದೆ ದೇವೇಗೌಡ ಹಾಗೂ ಕುಮಾರಸ್ವಾಮಿ ನೇರವಾಗಿ ಬಿಜೆಪಿ ಜೊತೆಯೇ ಮಾತನಾಡುವ ತೀರ್ಮಾನ ಮಾಡಿದ್ದಾರೆ.
ಯಡಿಯೂರಪ್ಪರನ್ನು ಬದಲಿಸಿ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿರುವ ಬಿಜೆಪಿಗೂ ಈಗ ಮಿತ್ರರ ಅವಶ್ಯಕತೆ ಜಾಸ್ತಿಯಿದೆ. ಅದಕ್ಕೆ ನೋಡಿ ಹಿಂದಿನ ದಿನವಷ್ಟೇ ಸಂಸತ್ತಿನಲ್ಲಿ ಫ್ಯಾಮಿಲಿ ಪಾಲಿಟಿಕ್ಸ್ ವಿರುದ್ಧ ಮೋದಿ ಕಿಡಿಕಾರಿದ್ದರೂ ಮರುದಿನ ತಮ್ಮ ಕುಟುಂಬದ 6 ಕುಡಿಗಳನ್ನು ರಾಜಕೀಯಕ್ಕೆ ತಂದಿರುವ ದೇವೇಗೌಡರನ್ನು ಅಪ್ಪಿಕೊಂಡು ಸ್ವಾಗತಿಸಿದ್ದಾರೆ.
ಮೋದಿ ಸಭೆಯಲ್ಲಿ ಆಗಿದ್ದು ಏನು?
ಮೋದಿ ಜೊತೆಗಿನ ಸಭೆಯಲ್ಲಿ ಗೌಡರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಮತ ಜೆಡಿಎಸ್‌ಗೆ ಹಾಕಿಸುವಂತೆ ಮತ್ತು ಉಳಿದ 18 ಕಡೆ ತಮ್ಮ ಮತ ಬಿಜೆಪಿಗೆ ಹಾಕಿಸುವ ಪ್ರಸ್ತಾಪ ಇಟ್ಟಿದ್ದಾರೆ. ಇದನ್ನು ಮೋದಿಯವರು ಜೆ.ಪಿ.ನಡ್ಡಾ ಮತ್ತು ಪ್ರಹ್ಲಾದ್ ಜೋಶಿ ಅವರಿಗೆ ಕರೆದು ಹೇಳಿದ್ದು, ಗೌಡರ ಜೊತೆ ಮಾತುಕತೆ ನಡೆಸಿ, ಸ್ಥಳೀಯವಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೂ ಹೇಳಲಾಗಿದೆ.
ಬಿಜೆಪಿ ಮೂಲಗಳು ಹೇಳುವ ಪ್ರಕಾರ, ವಿಧಾನ ಪರಿಷತ್ ಮೈತ್ರಿ ಬಗ್ಗೆ ಮೋದಿ ಮತ್ತು ಶಾಗೆ ಯಾವುದೇ ಅಭ್ಯಂತರ ಇಲ್ಲ. ಆದರೆ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿಗೆ ದೇವೇಗೌಡರೇ ಬೊಮ್ಮಾಯಿ ಬಳಿ ದುಂಬಾಲು ಬಿದ್ದಿದ್ದರು. ಅದನ್ನು ಸಿಎಂ ದಿಲ್ಲಿಗೆ ತಿಳಿಸಿದರು. ನಂತರ ಮೋದಿ ಜೊತೆಗಿನ ಭೇಟಿ ಬೊಮ್ಮಾಯಿ ಮತ್ತು ಪ್ರಹ್ಲಾದ್ ಜೋಶಿ ಮೂಲಕ ನಿಗದಿ ಆಯಿತು ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.
Farm Law Repeal: ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರೆ ಹಿಂದೆ ಯುಪಿ ಎಲೆಕ್ಷನ್ ಲೆಕ್ಕಾಚಾರ.?
ಗೌಡರ ಬದಲಾದ ವರಸೆಗಳು
ಜನತಾದಳದಿಂದ ಸಿಡಿದು ಕಟ್ಟಿದ ತಮ್ಮ ಪಕ್ಷಕ್ಕೆ ಜಾತ್ಯತೀತ ಎನ್ನುವ ಹೆಸರೇ ಇಟ್ಟದೇವೇಗೌಡರು ಒಂದು ಕಾಲದಲ್ಲಿ ಬಿಜೆಪಿ ಹೆಸರು ಕೇಳಿದರೆ ಉರಿದು ಬೀಳುತ್ತಿದ್ದರು. 2004ರಲ್ಲೇ ಅರುಣ್ ಜೇಟ್ಲಿ ಕರ್ನಾಟಕದಲ್ಲಿ ಬಿಜೆಪಿ ಜೊತೆ ಬರುವಂತೆ ಕೇಳಿಕೊಂಡಿದ್ದರು. ಆದರೆ ಬೇಡ ಎಂದಿದ್ದ ದೇವೇಗೌಡ ತಾವೇ ಸೋನಿಯಾ ಮನೆ ಬಾಗಿಲಿಗೆ ಹೋಗಿ ಧರ್ಮಸಿಂಗ್‌ರನ್ನು ಕುರ್ಚಿ ಮೇಲೆ ಕೂರಿಸಿದ್ದರು. ಆದರೆ ಮಗ ಕುಮಾರಸ್ವಾಮಿ ಬಿಜೆಪಿ ಜೊತೆ ರಾತ್ರೋರಾತ್ರಿ ಗೋವಾಕ್ಕೆ ಹೋದಾಗ ಹೊರಗಡೆ ಮಗನ ಮೇಲೆ ಮುನಿಸಿಕೊಂಡಿದ್ದರೂ, ಆಡಳಿತದ ವಿಷಯದಲ್ಲಿ ಮಾತ್ರ ಮಧ್ಯಪ್ರವೇಶ ಮಾಡುತ್ತಿದ್ದರಂತೆ. ಆದರೆ ಕುಮಾರಸ್ವಾಮಿ-ಬಿಜೆಪಿ ಮೈತ್ರಿ ಮುರಿದು ಬಿದ್ದ ಮೇಲೆ ಯಮುನೆಯ ತಟದಲ್ಲಿ ಪಶ್ಚಾತ್ತಾಪದ ಉಪವಾಸ ಕುಳಿತಿದ್ದರು.
2018 ರಲ್ಲಿ ಕೂಡ ಪಿಯೂಷ್ ಗೋಯಲ್, ಅಮಿತ್ ಶಾ ಫೋನ್ ಮಾಡಿದರೂ ಕೇಳದೆ, ಮರಳಿ ಸೋನಿಯಾ ಗಾಂಧಿ ಫೋನ್ ಮಾಡಿದ ಕೂಡಲೇ ಹೋಗಿ ಮಗನನ್ನೇ ಪುನರಪಿ ಮುಖ್ಯಮಂತ್ರಿ ಮಾಡಿದರು. ಆದರೆ ಈಗ ದೇವೇಗೌಡರಿಗೆ ಅಧಿಕೃತವಾಗಿಯೇ ಬಿಜೆಪಿ ಜೊತೆಗೆ ಹೋಗೋಣ ಅನ್ನಿಸತೊಡಗಿದೆಯಂತೆ. ಇಲ್ಲವಾದರೆ ಕಾಂಗ್ರೆಸ್ ಏಕಾಂಗಿ ಆಗಿ ಅಧಿಕಾರಕ್ಕೆ ಬಂದೀತು ಎಂಬ ಹೆದರಿಕೆಯೂ ಮನಃಪರಿವರ್ತನೆಗೆ ಕಾರಣ ಇರಬಹುದು. ದೇವೇಗೌಡರು ಹಿಂದೊಮ್ಮೆ ಮನಮೋಹನ ಸಿಂಗ್ ಮತ್ತು ಸೋನಿಯಾ ಇಬ್ಬರನ್ನೂ ಒಪ್ಪಿಸಿ ಕುಮಾರಸ್ವಾಮಿಯನ್ನು ಕೇಂದ್ರದಲ್ಲಿ ಮಂತ್ರಿ ಮಾಡಲು ಪ್ರಯತ್ನ ಮಾಡಿದ್ದರು.
ಈಗಿನ ಭೇಟಿ ನೋಡಿದರೆ ಬರೀ ವಿಧಾನ ಪರಿಷತ್ ಚುನಾವಣೆ ಉದ್ದೇಶ ಇರಲಿಕ್ಕಿಲ್ಲ. ಕುಟುಂಬದ ಮತ್ತು ಪಕ್ಷದ ಆಸ್ತಿತ್ವ ಉಳಿಸಲು ಗೌಡರಿಗೆ ದಿಲ್ಲಿಯಲ್ಲಿ ಒಬ್ಬ ಮಿತ್ರ ಈಗ ಬೇಕೇ ಬೇಕು. ಕಾಂಗ್ರೆಸ್ಸನ್ನು ತಡೆಯಲು ಬಿಜೆಪಿಗೂ ಒಬ್ಬ ಸ್ಥಳೀಯ ಮಿತ್ರ ಬೇಕು. ಇಬ್ಬರ ಸಮಾನ ಶತ್ರು ಕಾಂಗ್ರೆಸ್ ಮತ್ತು ಸಿದ್ದು. ಶತ್ರುವಿನ ಶತ್ರು ಶಾಶ್ವತ ಅಲ್ಲದಿದ್ದರೂ ತಾತ್ಕಾಲಿಕ ಮಿತ್ರನಂತೂ ಹೌದು ಅಲ್ಲವೇ.
New Population Policy: ಜಾರಿಗೊಳಿಸಿದ ದಕ್ಷಿಣದ ರಾಜ್ಯಗಳ ಲೋಕಸಭೆ ಸೀಟಿಗೆ ಕತ್ತರಿ.?
ದೇವೇಗೌಡರು ಹೇಗೆಂದರೆ..
ಇಸವಿ 2007, ದಿಲ್ಲಿಯಲ್ಲಿ ಡಿಸೆಂಬರ್‌ನ ಚಳಿಯ ದಿನಗಳು. ಆಗಷ್ಟೇ ಕುಮಾರಸ್ವಾಮಿ-ಯಡಿಯೂರಪ್ಪ ಗೆಳೆತನ ಮುರಿದು ಬಿದ್ದು ಮೈತ್ರಿ ಸರ್ಕಾರದ ಭವಿಷ್ಯ ತೂಗುಯ್ಯಾಲೆಯಲ್ಲಿತ್ತು. ಆಗ ಏಕಾಏಕಿ ಬೆಳಿಗ್ಗೆ ಒಬ್ಬ ಉದ್ಯಮಿಯ ಮನೆಯಲ್ಲಿ ದೇವೇಗೌಡ ಮತ್ತು ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಭೇಟಿ ಆದರು. ಮುದ್ರಣ ಮಾಧ್ಯಮಗಳಿಗೆ ತಾವೇ ಕುಳಿತು ಭೇಟಿಯ ಹಿನ್ನೆಲೆ-ಮುನ್ನೆಲೆ ಹೇಳಿದ ಗೌಡರು, ಅದನ್ನೇ ಟೀವಿ ಮಾಧ್ಯಮಗಳಿಗೆ ಹೇಳಿ ಎಂದು ಕ್ಯಾಮೆರಾ ಶುರುಮಾಡಿದ ಕೂಡಲೇ ಸಿಟ್ಟಿನಿಂದ ನೋಡುತ್ತಾ ‘ಗೆಟ್ ಔಟ್’ ಎಂದು ಒಳಗೆ ಹೋದರು.
ಇಲ್ಲಿಯವರೆಗೂ ಗೌಡರು, ‘ನಾನೇ ಸ್ವತಃ ಬಿಜೆಪಿ ಜೊತೆ ಮೈತ್ರಿ ಮಾತುಕತೆ ಮಾಡಿದೆ. ಹೀಗ್ಹೀಗೆ ಆಯಿತು’ ಎಂದು ಯಾವತ್ತಿಗೂ ಹೇಳಿಲ್ಲ, ಹೇಳುವುದೂ ಇಲ್ಲ. ಅವರ ಆಪ್ತರ ಪ್ರಕಾರ ಅದು ಅವರ ಸೆಕ್ಯುಲರ್ ಇಮೇಜ್‌ಗೆ ಸರಿ ಹೊಂದುವುದಿಲ್ಲವಂತೆ. ಈಗಲೂ ನೋಡಿ ಗೌಡರು ಸಂಸತ್ ಭವನದ ಹೊರಗೆ ಕಾಯುತ್ತಿದ್ದ ಪತ್ರಕರ್ತರಿಗೆ ಐಐಟಿ ಹಾಸನದ ಕಾಗದ ತೆಗೆದು ತೋರಿಸಿದರೇ ಹೊರತು ಮೈತ್ರಿ ಮಾತುಕತೆ ಬಗ್ಗೆ ತುಟಿಪಿಟಕ್ ಅನ್ನಲಿಲ್ಲ.
2018ರಲ್ಲಿ ಏನಾಗಿತ್ತು?
ಬಿಜೆಪಿ ದಿಲ್ಲಿ ಮೂಲಗಳು ಹೇಳುವ ಪ್ರಕಾರ, 2018ರ ಚುನಾವಣೆಗೆ ಮೊದಲು ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಂದು ಅನೌಪಚಾರಿಕ ಒಪ್ಪಂದ ಆಗಿತ್ತು. ಪಿಯೂಷ್ ಗೋಯಲ್ ಅವರು, ದೇವೇಗೌಡ ಮತ್ತು ಕುಮಾರಸ್ವಾಮಿ ಜೊತೆ ಸತತ ಸಂಪರ್ಕದಲ್ಲೂ ಇದ್ದರು. ಬಿಜೆಪಿ ಹೇಳುವ ಪ್ರಕಾರ ಕೆಲವೊಂದು ಕಡೆ ಇಬ್ಬರು ಮಾತಾಡಿಕೊಂಡು ತಮಗೆ ಬೇಕಾದ ಅಭ್ಯರ್ಥಿ ಕೂಡ ಹಾಕಿಕೊಂಡಿದ್ದರು. ಆದರೆ ಫಲಿತಾಂಶ ಬರುತ್ತಿದ್ದಂತೇ ಗೌಡರ ಸೆಕ್ಯುಲರ್ ಆಲಾಪ ಶುರುವಾಗಿ ಕಾಂಗ್ರೆಸ್ ಜೊತೆ ಮೈತ್ರಿ ಆಗಿತ್ತು. ಇದು ಮೋದಿ ಮತ್ತು ಶಾ ಇಬ್ಬರಿಗೂ ಬೇಸರ ತರಿಸಿತ್ತು. ಆದರೆ ರಾಜಕೀಯದಲ್ಲಿ ಮೈತ್ರಿ ಭಾವನೆಗಳ ಮೇಲೆ ಆಗುವುದಿಲ್ಲ; ಒಬ್ಬರಿಗೊಬ್ಬರ ಅವಶ್ಯಕತೆ ಮೇಲೆ ನಿರ್ಧಾರ ಆಗುತ್ತದೆ.
ಶಾ-ಯೋಗಿ ಮಧ್ಯೆ ಹೊಸಬಾಳೆ ಸಂಧಾನ
ಹಾಗೆ ನೋಡಿದರೆ ಮೋದಿ ಕಾಲದಲ್ಲಿ ಪ್ರತಿಯೊಂದು ಚುನಾವಣೆಯ ಫಲಿತಾಂಶವೂ ನಿರ್ಣಾಯಕ. ಆದರೆ ಯುಪಿ ಚುನಾವಣೆಯ ಮಹತ್ವ ಏನು ಎಂದು ಕೃಷಿ ಕಾನೂನು ರದ್ದತಿ ಮತ್ತು ತೈಲ ಬೆಲೆ ಮೇಲಿನ ತೆರಿಗೆ ಕಡಿತದ ನಿರ್ಧಾರಗಳು ಸ್ಪಷ್ಟಪಡಿಸಿವೆ. ಆದರೆ ಮೋದಿ ಸಾಹೇಬರಿಗೆ ಸಮಾಧಾನ ಇದ್ದಂತಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವಿನ ಬಿರುಕಿಗೆ ಆರ್‌ಎಸ್‌ಎಸ್ ಮೂಲಕ ತೇಪೆಹಚ್ಚುವ ಪ್ರಯತ್ನ ಮಾಡಿದ್ದಾರೆ. ಸಂಘ ಪರಿವಾರ ಮತ್ತು ಮೋದಿ ಯಾವುದೇ ಕಾರಣಕ್ಕೂ ಯುಪಿ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ.
ಸೋಲು- ಗೆಲುವು ಚಲ್ತಾ ಹೈ, ಆದರೆ ನೀವು ಇನ್ನಷ್ಟು ಫಾಸ್ಟ್ ಆಗ್ಬೇಕು: ಬೊಮ್ಮಾಯಿಗೆ ಶಾ ಸಲಹೆ
ಅದಕ್ಕೆಂದೇ ಆರ್‌ಎಸ್‌ಎಸ್ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಾವೇ ಸ್ವತಃ ಯೋಗಿ ಮತ್ತು ಶಾ ನಡುವೆ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿದ್ದು, ಹದೆಗೆಟ್ಟು ಹೋಗಿದ್ದ ಯೋಗಿ ಮತ್ತು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸುನಿಲ್ ಬನ್ಸಲ… ನಡುವಿನ ಸಂಬಂಧಗಳಿಗೆ ಕೂಡ ಸಂಘದ ಹಿರಿಯರಿಂದ ತೇಪೆ ಹಚ್ಚಿಸಲಾಗಿದೆ. ಬಿಜೆಪಿ ಆಂತರಿಕ ಸಮೀಕ್ಷೆಗಳ ಪ್ರಕಾರ, ಯೋಗಿ ಆದಿತ್ಯನಾಥರ ಹೆಸರಿಗೆ ಅಷ್ಟೊಂದು ಆಡಳಿತ ವಿರೋಧಿ ಮನಸ್ಥಿತಿ ಇಲ್ಲ. ಕಾನೂನು ಸುವ್ಯವಸ್ಥೆ ತಕ್ಕಮಟ್ಟಿಗೆ ಸುಧಾರಣೆ ಆಗಿದೆ.
ಆದರೆ ಹಾಲಿ ಶಾಸಕರ ವಿರುದ್ಧ ಕೆಲವು ಜಿಲ್ಲೆಗಳಲ್ಲಿ ಭಯಂಕರ ವಿರೋಧಿ ಅಲೆ ಇದ್ದು, ಮೋದಿ ಮತ್ತು ಯೋಗಿ 40ರಿಂದ 50 ಶಾಸಕರಿಗೆ ಟಿಕೆಟ್ ತಪ್ಪಿಸಿ ಹೊಸಬರಿಗೆ ನೀಡುವ ಸುಳಿವುಗಳಿವೆ. ಕಳೆದ ಬಾರಿ 300 ಸೀಟು ಪಾರು ಮಾಡಿದ್ದ ಬಿಜೆಪಿ ಈಗಿನ ಪ್ರಕಾರ 260ರ ಆಸುಪಾಸು ತಲುಪಬಹುದು ಎಂಬ ಅಂದಾಜಿದೆ.
ಮುಸ್ಲಿಮರು, ಯಾದವರು ಮತ್ತು ಜಾಟವ ದಲಿತ ಸಮುದಾಯ ಬಿಜೆಪಿಯನ್ನು ಸೋಲಿಸಲು ಚುನಾವಣೆ ಹತ್ತಿರ ಬಂದಂತೆ ಇನ್ನಷ್ಟುಆಕ್ರಮಣಕಾರಿ ಆಗುತ್ತಿವೆ. ಆದರೆ ಬಿಜೆಪಿಗೆ ಮತ ನೀಡುವ ಬ್ರಾಹ್ಮಣರು, ಬನಿಯಾಗಳು, ಮೌರ್ಯ, ಲೋಧ್ ನಿಷಾದ್‌ಗಳು ಸೇರಿದಂತೆ ಇತರ ಹಿಂದುಳಿದ ಜಾತಿಗಳು ಎಷ್ಟುಒಗ್ಗಟ್ಟಾಗಿ ಬಂದು ಮತ ನೀಡುತ್ತವೆ ಎಂಬುದರ ಮೇಲೆ ಬಿಜೆಪಿ ಭವಿಷ್ಯ ನಿಂತಿದೆ. ಆದರೆ ಒಂದು ಮಾತಂತೂ ನಿಜ. ಕವಲುದಾರಿಯಲ್ಲಿ ನಿಂತಿರುವ ಬಿಜೆಪಿ, ಮೋದಿ ನಂತರವೂ ಉಚ್ಛ್ರಾಯದಲ್ಲಿ ಇರಬೇಕಾದರೆ ಯುಪಿಯಲ್ಲಿ ಯೋಗಿಯನ್ನು ಗೆಲ್ಲಿಸುವುದು ಅನಿವಾರ್ಯ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ