Farm Laws Repeal: ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರ ಹಿಂದೆ ಯುಪಿ ಎಲೆಕ್ಷನ್ ಲೆಕ್ಕಾಚಾರ.?
ಕೃಷಿ ಕಾನೂನು ಹಿಂದೆ ತೆಗೆದುಕೊಂಡಿದ್ದರಿಂದ (Farm Laws Repeal) ನಿರ್ದಿಷ್ಟವಾಗಿ ಪಶ್ಚಿಮ ಯುಪಿಯ ಜಾಟರು, ಹರ್ಯಾಣದ ಜಾಟರು ಮತ್ತು ಪಂಜಾಬ್ ಜಾಟ್ ಸಿಖ್ಖರ ಬಿಜೆಪಿ ಮೇಲಿನ ಬೇಸರ ಕಡಿಮೆಯಾಗಿದೆ.
ಯಾವುದೇ ಒಂದು ಪಕ್ಷ ಅಥವಾ ಸರ್ಕಾರವನ್ನು ಭಾರೀ ಬಹುಮತದೊಂದಿಗೆ ಕುರ್ಚಿಯಲ್ಲಿ ತಂದು ಕೂರಿಸಿದಾಗ ಜನಮಾನಸಕ್ಕೆ ಭಾರೀ ಸುಧಾರಣೆಗಳ ನಿರೀಕ್ಷೆ ಇರುತ್ತದೆ. ಒಳಗಿನ ತಾಕಲಾಟಗಳು ಮತ್ತು ಬಾಹ್ಯ ಒತ್ತಡಗಳು ಅನಿವಾರ್ಯತೆಗಳಿಂದ ಆಚೆಗೆ ಬಂದು ಒಂದಿಷ್ಟುವ್ಯವಸ್ಥೆ ಸುಧಾರಿಸುವ ನಿರ್ಣಯ ತೆಗೆದುಕೊಳ್ಳಲಿ ಎಂಬ ಆಶಯ ಇರುವುದು ಸಹಜ.
ಆದರೆ ಕೃಷಿಗೆ ಸಂಬಂಧಪಟ್ಟಂತೆ ಕಠಿಣ ನಿರ್ಣಯ ತೆಗೆದುಕೊಂಡರೂ ಕೊನೆಗೆ ಒಂದು ಭಾಗದ, ಒಂದು ಸಮುದಾಯದ ವೋಟು ಚದುರಿ ಪೂರ್ತಿ ಉತ್ತರ ಪ್ರದೇಶವೇ (Uttar Pradesh) ಕೈಬಿಟ್ಟು ಹೋಗಬಹುದು ಎಂಬ ಆತಂಕಕ್ಕೆ ಒಳಗಾಗಿ ಕೇಂದ್ರ ಸರ್ಕಾರ ಈ ಗೊಡವೆಯೇ ಬೇಡ ಎಂದು ಹತ್ತು ಹೆಜ್ಜೆ ಹಿಂದೆ ಸರಿದಿದೆ. ಅಷ್ಟರಮಟ್ಟಿಗೆ ಸುಧಾರಣೆಗಳನ್ನು ಗಾಡಿಯ ಡಿಕ್ಕಿಯಲ್ಲಿ ಹಾಕಿರುವ ಬಿಜೆಪಿ, ವೋಟ್ ಬ್ಯಾಂಕನ್ನು (Vote Bank) ಪಕ್ಕಕ್ಕೆ ಕೂರಿಸಿಕೊಳ್ಳುವ ಪ್ರಯತ್ನ ಮಾಡಿದೆ. ಈ ನಿರ್ಣಯದಿಂದ ಎರಡು ಅಂಶಗಳು ಸ್ಪಷ್ಟವಾಗಿವೆ.
New Population Policy: ಜಾರಿಗೊಳಿಸಿದ ದಕ್ಷಿಣದ ರಾಜ್ಯಗಳ ಲೋಕಸಭೆ ಸೀಟಿಗೆ ಕತ್ತರಿ..?
1.ಆಡಳಿತ ನಡೆಸುವ ಸರ್ಕಾರ ನೀತಿ ರೂಪಿಸುವಾಗ ತಾನಷ್ಟೇ ಇದು ಭಾರೀ ಚೆನ್ನಾಗಿದೆ ಅಂದುಕೊಂಡರೆ ಸಾಲದು; ಜನಕ್ಕೆ ಮನವರಿಕೆ ಮಾಡಿಕೊಡಬೇಕು. 2.ಭಾರತದಲ್ಲಿ ಆರ್ಥಿಕ ಶಕ್ತಿ ಮಹಾನಗರಗಳ ಬಳಿ ಇದೆ. ಆದರೂ ರಾಜಕೀಯ ಶಕ್ತಿ ಇರುವುದು ಹಳ್ಳಿಗಳ ರೈತರ ಬಳಿಯೇ. ಆದರೆ ರೈತ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಣಯದಿಂದ ಒಂದು ಪ್ರಶ್ನೆಯಂತೂ ಮೂಡುತ್ತಿದೆ. ಪ್ರಚಂಡ ಬಹುಮತ, ಭಾರೀ ಜನಪ್ರಿಯತೆ ಇರುವ ಮೋದಿ (PM Modi) ಸಾಹೇಬರಿಗೇ ಹಿಂದೆ ಹೆಜ್ಜೆ ಹಾಕುವ ಪ್ರಮೇಯ ಉದ್ಭವ ಆದರೆ ಭಾರತದಲ್ಲಿ ಸುಧಾರಣೆಗಳನ್ನು ತರುವುದಾದರೂ ಯಾರು?
ಪಶ್ಚಿಮ ಉತ್ತರ ಪ್ರದೇಶದ ಚಿಂತೆ?
ಉತ್ತರ ಪ್ರದೇಶದ ಚುನಾವಣೆ (Uttar Pradesh Elections) ತಯಾರಿಯಲ್ಲಿರುವ ಬಿಜೆಪಿ ಮಾಡಿಸಿರುವ ಆಂತರಿಕ ಸಮೀಕ್ಷೆಗಳಲ್ಲಿ ಎರಡು ವಿಷಯಗಳು ತಲೆನೋವಾಗಿ ಮಾರ್ಪಾಡಾಗುವ ಸಂಕೇತಗಳು ಸಿಕ್ಕಿದ್ದವು. ಮೊದಲನೆಯದು ತೈಲ ಬೆಲೆ ಏರಿಕೆ, ಎರಡನೆಯದು ಕೃಷಿ ಕಾನೂನುಗಳ ವಿರುದ್ಧ ಇದ್ದ ಆಕ್ರೋಶ. ತೈಲ ಬೆಲೆ ಏರಿಕೆ ವಿರುದ್ಧ ಪೂರ್ತಿ ಯುಪಿಯಲ್ಲಿ ಆಕ್ರೋಶ ಇದ್ದರೆ, ಕೃಷಿ ಕಾನೂನಿನ ವಿರೋಧ ಇದ್ದದ್ದು ಜಾಟ್ ಬಾಹುಳ್ಯದ ಪಶ್ಚಿಮ ಯುಪಿಯಲ್ಲಿ ಮಾತ್ರ. 2017 ಮತ್ತು 2019ರ ಚುನಾವಣೆಗಳಲ್ಲಿ ಪೂರ್ತಿ ಮನೆ ಸೇರಿಕೊಂಡಿದ್ದ ಚೌಧರಿ ಚರಣ ಸಿಂಗ್ ಮೊಮ್ಮಗ ಜಯಂತ ಚೌಧರಿಗೆ ಮರಳಿ ಬೆಂಬಲ ಸಿಗುವುದರ ಜೊತೆಜೊತೆಗೆ ಜಯಂತ ಮತ್ತು ಅಖಿಲೇಶ್ ನಡುವೆ ನಡೆಯುತ್ತಿರುವ ಮೈತ್ರಿ ಮಾತುಕತೆ ಬಿಜೆಪಿಯ ನಿದ್ದೆಗೆಡಿಸಿದೆ.
ಆಂತರಿಕ ಸರ್ವೇಗಳ ಪ್ರಕಾರ, ಪಶ್ಚಿಮ ಉತ್ತರಪ್ರದೇಶದ ಹಳ್ಳಿಗಳಲ್ಲಿ ಅಖಿಲೇಶ್ ಯಾದವ್ (Akhilesh Yadav) ಹೋದಲ್ಲಿ ಪುನರಪಿ ಜನ ಸೇರತೊಡಗಿದ್ದಾರೆ. ಇನ್ನೊಂದು ಕಡೆ ಮೋದಿ, ಅಮಿತ್ ಶಾ (Amit Shah) ಮತ್ತು ಯೋಗಿ ಆದಿತ್ಯನಾಥ ಜಾಟ್ ಬಾಹುಳ್ಯದ ಹಳ್ಳಿಗಳಿಗೆ ಹೋಗುವುದು ಕಷ್ಟಎಂಬ ಸ್ಥಿತಿ ನಿರ್ಮಾಣ ಆಗತೊಡಗಿತ್ತು. ಜಾಟ್‌ರ ವಿರೋಧದಿಂದ ಉಳಿದ ಹಿಂದುಳಿದ ಸಮುದಾಯಗಳಾದ ಸೈನಿ ಮತ್ತು ಗುಜ್ಜರ್‌ಗಳು ಸ್ವಲ್ಪ ಬಿಜೆಪಿ ಕಡೆ ವಾಲುವಂತೆ ಇದ್ದರೂ ಬರೀ ಅಷ್ಟರಿಂದಲೇ ಭಾರೀ ಗೆಲುವು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ಅರಿವಾಗತೊಡಗಿತ್ತು. ಹೀಗಾಗಿ ಜನರ ಸಿಟ್ಟು ಕಡಿಮೆ ಮಾಡಲು ಮೊದಲು ತೈಲ ಬೆಲೆ ಇಳಿಸಿದ ಕೇಂದ್ರ ಸರ್ಕಾರ, ನಂತರ ಏಕಾಏಕಿ ರೈತ ಕಾನೂನು ಹಿಂದೆ ತೆಗೆದುಕೊಳ್ಳುವ ಘೋಷಣೆ ಮಾಡಿದೆ. ಇಲ್ಲಿಯವರೆಗೆ ಮೋದಿ ಹೈ ತೋ ಮುಮ್‌ಕಿನ್ ಹೈ ಅನ್ನುತ್ತಿದ್ದರು. ಇನ್ನುಮುಂದೆ ವೋಟ್ ಬ್ಯಾಂಕ್ ಹೈ ತೋ ಕುಚ್ ಭಿ ಮುಮ್‌ಕಿನ್ ಹೈ ಅನ್ನುವ ಸ್ಥಿತಿ ಬಂದಿದೆ.
ಜಾತಿ ಗಣಿತದ ಅನಿವಾರ್ಯತೆ
ಪಶ್ಚಿಮ ಯುಪಿಯ ರಾಜಕೀಯ ನಿಂತಿರುವುದು ಪ್ರಮುಖವಾಗಿ ಮೂರು ಪ್ರಮುಖ ಜಾತಿಗಳ ಮೇಲೆ. ಅಲ್ಲಿನ ಕೆಲ ಜಿಲ್ಲೆಗಳಲ್ಲಿ ಮುಸ್ಲಿಮರು 35ರಿಂದ 40 ಪ್ರತಿಶತದಷ್ಟುಇದ್ದಾರೆ. ಸಹಜವಾಗಿ ಮುಸ್ಲಿಮರ ಮೊದಲ ಆಯ್ಕೆ ಬಿಜೆಪಿಯನ್ನು ಸೋಲಿಸುವ ಪಕ್ಷ. ನಂತರ ಇರುವವರು ಜಾಟರು ಮತ್ತು ದಲಿತ ಜಾಟವರು. ದಲಿತ ಜಾಟವರು ಮಾಯವತಿಯ ಪಕ್ಕಾ ವೋಟ್ ಬ್ಯಾಂಕ್. ಚೌಧರಿ ಚರಣ ಸಿಂಗ್, ಅಜಿತ್ ಸಿಂಗ್ ಕಾಲದಲ್ಲಿ ಮುಸ್ಲಿಮರು ಮತ್ತು ಜಾಟರು ಒಟ್ಟಾಗಿ ಬರುತ್ತಿದ್ದರಿಂದ ಮುಲಾಯಂ ಸಿಂಗ್ ಯಾದವ್ ಮತ್ತು ಅಜಿತ್ ಸಿಂಗ್ ಒಟ್ಟಾಗಿ ಬಂದು ಇಲ್ಲಿ ಸುಲಭವಾಗಿ ಗೆಲ್ಲುತ್ತಿದ್ದರು.
ಸೋಲು- ಗೆಲುವು ಚಲ್ತಾ ಹೈ, ನೀವು ಇನ್ನಷ್ಟು ಫಾಸ್ಟ್ ಆಗ್ಬೇಕು: ಬೊಮ್ಮಾಯಿಗೆ ಶಾ ಸಲಹೆ
ಆದರೆ 2013ರಲ್ಲಿ ನಡೆದ ಜಾಟರು ಮತ್ತು ಮುಸ್ಲಿಮರ ನಡುವಿನ ಜಗಳದಿಂದ ಇಲ್ಲಿ 2014ರಲ್ಲಿ ಬಿಜೆಪಿಗೆ ಭರ್ಜರಿ ಪ್ರವೇಶ ಸಿಕ್ಕಿತ್ತು. ಹುಡುಗರು ಹುಡುಗಿಯನ್ನು ಚುಡಾಯಿಸಿದ ಜಗಳ ಎಷ್ಟುತಾರಕಕ್ಕೆ ಹೋಗಿತ್ತು ಎಂದರೆ ಮುಜಫರ್‌ನಗರ ವಾರಗಟ್ಟಲೆ ಉರಿದುಹೋಗಿತ್ತು. ಅದರ ರಾಜಕೀಯ ನಷ್ಟ ಆಗಿದ್ದು ಮುಸ್ಲಿಮರು ಬೆಂಬಲಿಸುವ ಅಖಿಲೇಶ್ ಜೊತೆಗೆ ಮೈತ್ರಿ ಹೊಂದಿದ್ದ ಚೌಧರಿ ಅಜಿತ್ ಸಿಂಗ್‌ರಿಗೆ. ನೇರ ಲಾಭ ಆಗಿದ್ದು ಬಿಜೆಪಿಗೆ. ಜಾಟರು, ಸೈನಿಗಳು, ಗುಜ್ಜರಗಳು, ಬನಿಯಾಗಳು, ಬ್ರಾಹ್ಮಣರು ಮತ್ತು ದಲಿತರು ಮುಸ್ಲಿಮರ ವಿರುದ್ಧ ಒಟ್ಟಾಗಿ ಬಂದಿದ್ದರಿಂದ ಬಿಜೆಪಿ ಜಾಟ್ ಬಾಹುಳ್ಯದ 71ರಲ್ಲಿ ಇಲ್ಲಿ 52 ಸೀಟು ಗೆದ್ದಿತ್ತು. ಆದರೆ ರೈತ ಕಾನೂನು ತಂದ ಮೇಲೆ ಜಾಟರು ಪೂರ್ತಿ ಮುನಿಸಿಕೊಂಡಿದ್ದರು. ಈ ಸಿಟ್ಟೇನಾದರೂ ಮತ್ತೆ ಜಾಟರು ಮತ್ತು ಮುಸ್ಲಿಮರ ಮೈತ್ರಿಗೆ ಕಾರಣ ಆದರೆ ಯುಪಿಯಲ್ಲಿ ಬಿಜೆಪಿಗೆ ಬಹುಮತ ಬರುವುದು ಕಷ್ಟ. ಹೀಗಾಗಿ ಕೇಂದ್ರ ಸರ್ಕಾರ ಹಿಂದೆ ಸರಿದಿದೆ. ಈಗ ತಮ್ಮ ವಿರುದ್ಧ ಇರುವ ಸಿಟ್ಟು ಕಡಿಮೆ ಮಾಡಿಕೊಂಡರೆ ಸಾಕು, ಅಧಿಕಾರ ಇದ್ದರೆ ಇನ್ನೂ ಅನೇಕ ಕಾನೂನು ತರಬಹುದು ಎಂದು ಬಿಜೆಪಿಗೆ ಅನ್ನಿಸಿದಂತಿದೆ.
ಏಕೆ ಯುಪಿ ಬೇಕೇ ಬೇಕು?
2014ರಲ್ಲಿ ಭಾರೀ ಬಹುಮತದೊಂದಿಗೆ ಗೆದ್ದಿದ್ದ ಬಿಜೆಪಿಗೆ 2015ರ ದಿಲ್ಲಿ ಮತ್ತು ಬಿಹಾರದ ಸೋಲು ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಆದರೆ 2017ರಲ್ಲಿ ಯುಪಿ ಗೆದ್ದ ಮೇಲೆಯೇ ಬಿಜೆಪಿಗೆ 2019ರ ಹಾದಿ ಸುಲಭ ಆಗಿತ್ತು. ಈಗಷ್ಟೇ 2021ರಲ್ಲಿ ಎಲ್ಲ ಸಾಮ ದಾನ ದಂಡ ಭೇದ ಪ್ರಯೋಗಿಸಿಯೂ ಪಶ್ಚಿಮ ಬಂಗಾಳ ಸೋತಿರುವ ಬಿಜೆಪಿಗೆ ಯುಪಿ ಗೆಲ್ಲೋದು ಅನಿವಾರ್ಯ. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಬಹುಮತಕ್ಕೆ ಸ್ವಲ್ಪ ಕೊರತೆ ಆದರೂ ವಿಪಕ್ಷಗಳು ಇನ್ನಷ್ಟುಆಕ್ರಮಣಕಾರಿ ಆಗುತ್ತವೆ.
ಅಷ್ಟೇ ಅಲ್ಲ ಮುಂದಿನ ವರ್ಷದ ಗುಜರಾತ್ ಚುನಾವಣೆ ಕಠಿಣವಾಗುತ್ತಾ ಹೋಗುತ್ತದೆ. ಹಾಗೇನಾದರೂ ಆದರೆ 2024 ಇನ್ನಷ್ಟುಸಮಸ್ಯೆ ಆಗುತ್ತದೆ. ವಿಚಿತ್ರ ನೋಡಿ, ಪಂಜಾಬ್, ಹರಾರಯಣ ಮತ್ತು ಪಶ್ಚಿಮ ಯುಪಿ ಬಿಟ್ಟರೆ ಎಲ್ಲಿಯೂ ಪ್ರತಿಭಟನೆಗಳು ತೀವ್ರತೆ ಪಡೆದುಕೊಂಡಿಲ್ಲ. ಆದರೆ ಅಲ್ಲೇ ಗೆಲ್ಲಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ.
ಮಧ್ಯಮ ವರ್ಗದ ಬೇಸರ
ಕೃಷಿ ಕಾನೂನು ಹಿಂದೆ ತೆಗೆದುಕೊಂಡಿದ್ದರಿಂದ ನಿರ್ದಿಷ್ಟವಾಗಿ ಪಶ್ಚಿಮ ಯುಪಿಯ ಜಾಟರು, ಹರ್ಯಾಣದ ಜಾಟರು ಮತ್ತು ಪಂಜಾಬ್ ಜಾಟ್ ಸಿಖ್ಖರ ಬಿಜೆಪಿ ಮೇಲಿನ ಬೇಸರ ಕಡಿಮೆಯಾಗಿದೆ, ಹೌದು. ಆದರೆ 2014ರಿಂದ ಬಿಜೆಪಿಗೆ ಪಕ್ಕಾ ವೋಟ್ ನೀಡುತ್ತಿರುವ ಮಧ್ಯಮ ವರ್ಗವನ್ನು ಇದು ಅಸಮಾಧಾನಗೊಳಿಸಿದೆ.
ಮೋದಿ ಇಟ್ಟಹೆಜ್ಜೆ ಹಿಂದೆ ಇಡುವವರಲ್ಲ ಅಂದುಕೊಂಡಿದ್ದ ಪಕ್ಕಾ ಸಮರ್ಥಕರಿಗೆ ಬೇಸರವಾಗಿದೆ. ಆದರೆ ಬಿಜೆಪಿಯ ಲೆಕ್ಕಾಚಾರದ ಪ್ರಕಾರ ಇವರೆಲ್ಲ ಹಿಂದುತ್ವದ ಸಮರ್ಥಕರು. ಹೀಗಾಗಿ ಬೇಸರಗೊಂಡು ದೂರ ಹೋಗುವವರಲ್ಲ. ಬಿಜೆಪಿಯ ತರ್ಕ ಏನು ಅಂದರೆ ರೈತ ಕಾನೂನಿನ ಕಾರಣದಿಂದಲೇ ಪರವಾಗಿ ವೋಟು ಹಾಕುವ ಗುಂಪು ಸಮೂಹ ಇರಲಿಲ್ಲ. ಆದರೆ ಕಾನೂನು ಜಾರಿಯಿಂದ ಪಕ್ಕಾ ವಿರುದ್ಧ ಮತ ಹಾಕುವ ಸಮೂಹ ಜಾಸ್ತಿ ಇತ್ತು. ಹೀಗಾಗಿ ಕಾನೂನು ಹಿಂದೆ ತೆಗೆದುಕೊಳ್ಳದೇ ಬೇರೆ ದಾರಿ ಇರಲಿಲ್ಲ.
India Gate | ಹಾನಗಲ್ ಸೋಲು ಬೊಮ್ಮಾಯಿಗೇನು ಕಲಿಸಿತು?
ದೊಡ್ಡ ಜಾತಿಗಳ ಓಲೈಕೆ
2014ರಲ್ಲಿ ಅಧಿಕಾರಕ್ಕೆ ಬಂದಾಗ ದೊಡ್ಡ ಜಮೀನುದಾರ ಜಾತಿಗಳ ಬೆನ್ನು ಹತ್ತದೇ ಸಣ್ಣ ಸಣ್ಣ ಜಾತಿಗಳಿಗೆ ಮಣೆ ಹಾಕುತ್ತಿದ್ದ ಬಿಜೆಪಿ, ಈಗ ನಿಧಾನವಾಗಿ ದೊಡ್ಡ ಭೂಮಿ ಒಡೆತನದ ಜಾತಿಗಳಿಗೂ ಮಣೆ ಹಾಕುತ್ತಿದೆ. ಕರ್ನಾಟಕದಲ್ಲಿ ಲಿಂಗಾಯತರು ಮುನಿಸಿಕೊಳ್ಳಬಾರದು ಎಂದು ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದ ಬಿಜೆಪಿ, ಮಹಾರಾಷ್ಟ್ರದಲ್ಲಿ ತಾನೇ ಬದಿಗೆ ಕೂರಿಸಿದ್ದ ವಿನೋದ್ ಥಾವಡೆಯನ್ನು ಏಕಾಏಕಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಡಿ ನಾರಾಯಣ ರಾಣೆಗೆ ಕ್ಯಾಬಿನೆಟ್ ಸ್ಥಾನ ಕೊಟ್ಟಿದೆ.
ಗುಜರಾತಲ್ಲಿ ಎಲ್ಲಿ ಪಟೇಲರು ದೂರ ಹೋಗುತ್ತಾರೋ ಎಂದು ವಿಜಯ ರೂಪಾಣಿಯನ್ನು ತೆಗೆದು ಹೊಚ್ಚಹೊಸ ಪಟೇಲ…ರನ್ನು ಮುಖ್ಯಮಂತ್ರಿ ಮಾಡಿದ ಮೋದಿ, ಮನ್ಸುಖ್ ಮಾಂಡವೀಯ ಮತ್ತು ಪುರುಷೋತ್ತಮ ರೂಪಾಲಾ ಎಂಬ ಇಬ್ಬರು ಪಟೇಲ…ರನ್ನು ಕೇಂದ್ರೀಯ ಕ್ಯಾಬಿನೆಟ್‌ಗೆ ಸೇರಿಸಿಕೊಂಡಿದ್ದಾರೆ. ಈಗ ಜಾಟ್‌ರನ್ನು ಓಲೈಸಲು ಕೃಷಿ ಕಾನೂನು ರದ್ದು ಮಾಡಿರುವ ಕೇಂದ್ರ, ಬ್ರಾಹ್ಮಣರ ಓಲೈಕೆಗೆ ಹರಸಾಹಸಪಡುತ್ತಿದೆ. ಇವೆಲ್ಲ ನಿರ್ಧಾರಗಳು ಬಂಗಾಳದ ಸೋಲಿನ ನಂತರ ಕಳೆದ 4 ತಿಂಗಳಲ್ಲಿ ತೆಗೆದುಕೊಂಡಿದ್ದು ಎಂಬುದು ಗಮನಿಸಲೇಬೇಕಾದ ವಿಷಯ.
ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ!
ಉತ್ತರ ಪ್ರದೇಶದಲ್ಲಿ ಎಲ್ಲಾ 403 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಪ್ರಿಯಾಂಕಾ ಗಾಂಧಿಯೇನೋ ಹೇಳಿಬಿಟ್ಟಿದ್ದಾರೆ. ಆದರೆ ಮುಸ್ಲಿಂ ಬಾಹುಳ್ಯ ಮತ್ತು ನಗರ ಪ್ರದೇಶ ಬಿಟ್ಟರೆ ಉಳಿದ ಕಡೆ ಕಾಂಗ್ರೆಸ್‌ಗೆ ಸಂಘಟನೆಯೇ ಇಲ್ಲ. 50ರಿಂದ 60 ಕ್ಷೇತ್ರ ಬಿಟ್ಟರೆ ಉಳಿದ ಕಡೆ ಕಾಂಗ್ರೆಸ್‌ಗೆ ಠೇವಣಿ ಉಳಿಯೋದು ಕಷ್ಟವಿದೆ. ಹೀಗಾಗಿ ಪ್ರಿಯಾಂಕಾ ಓಡಾಡಿದರೂ 403 ಕ್ಷೇತ್ರಕ್ಕೆ ಹಾಕಲು ಸರಿಯಾದ ಅಭ್ಯರ್ಥಿಗಳು ಸಿಗುತ್ತಿಲ್ಲ. ಕೃಷಿ ಕಾನೂನು ರದ್ದತಿ ನಂತರ ದಿಲ್ಲಿ ಗಡಿಯಲ್ಲಿ ನಿಂತು ಕಾಂಗ್ರೆಸ್ ನಾಯಕರು ಸಿಹಿ ಹಂಚಿದ್ದೇ ಬಂತು, ಇದರಿಂದ ಯುಪಿಯಲ್ಲಿ ಕಾಂಗ್ರೆಸ್‌ಗೇನೂ ಲಾಭವಾಗುವಂತೆ ಕಾಣುತ್ತಿಲ್ಲ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ