Asianet Suvarna News Asianet Suvarna News

New Population Policy: ಜಾರಿಗೊಳಿಸಿದ ದಕ್ಷಿಣದ ರಾಜ್ಯಗಳ ಲೋಕಸಭೆ ಸೀಟಿಗೆ ಕತ್ತರಿ?

ಇವತ್ತಿನ ಕ್ಷೇತ್ರಗಳ ಪ್ರಕಾರ, ಭಾರತದಲ್ಲಿ ಒಬ್ಬ ಸಂಸದ ಅಂದಾಜು 16 ಲಕ್ಷದಿಂದ 23 ಲಕ್ಷ ಜನಸಂಖ್ಯೆಗೆ ಪ್ರತಿನಿಧಿ ಆಗಿರುತ್ತಾನೆ. ಅದೇ ಅಮೆರಿಕದಲ್ಲಿ ಪ್ರತಿ 6 ಲಕ್ಷ ಮಂದಿಗೆ ಒಬ್ಬ ಸಂಸದ ಇದ್ದರೆ, ಬ್ರಿಟನ್‌ನಲ್ಲಿ ಪ್ರತಿ ಒಂದು ಲಕ್ಷ ಮಂದಿಗೆ ಒಬ್ಬ ಸಂಸದನಿರುತ್ತಾನೆ. 

India Gate pro and cons of New Population Policy hls
Author
Bengaluru, First Published Nov 20, 2021, 11:37 AM IST

ಹೊಸ ಸಂಸತ್ತು ಮತ್ತು ಕೇಂದ್ರೀಯ ಇಲಾಖಾ ಕಚೇರಿಗಳ ನಿರ್ಮಾಣದ ಕೆಲಸ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ. ಸುಮಾರು ಹತ್ತು ಸಾವಿರ ಕಾರ್ಮಿಕರು ಪ್ರಧಾನಿ ಮೋದಿ ನಿಗದಿ ಮಾಡಿರುವ ಮಹೂರ್ತಕ್ಕೆ ಕೆಲಸ ಮುಗಿಸಲು ಹಗಲು-ರಾತ್ರಿ ದುಡಿಯುತ್ತಿದ್ದಾರೆ. 2022ರ ಜನವರಿ 26ಕ್ಕೆ ಹೊಸ ಕಟ್ಟಡದ ಎದುರಿನ ರಾಜಮಾರ್ಗದಲ್ಲಿ ಗಣರಾಜ್ಯೋತ್ಸವ ಪರೇಡ್‌ ನಡೆಸಲು ತೀರ್ಮಾನಿಸಲಾಗಿದ್ದರೆ, 2022ರ ಸಂಸತ್ತಿನ ಚಳಿಗಾಲದ ಅಧಿವೇಶನ ಹೊಸ ಕಟ್ಟಡದಲ್ಲಿ ನಡೆಯಬೇಕಿದೆ.

ಸಂಸತ್ತಿನ ಹೊಸ ಕಟ್ಟಡದ ಲೋಕಸಭೆಯಲ್ಲಿ 772 ಸಂಸದರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಬೇರೆ ಬೇರೆ ರಾಜ್ಯಗಳ ಜನಸಂಖ್ಯೆಯ ಪ್ರಮಾಣ ಬದಲಾದರೂ ಕ್ಷೇತ್ರಗಳ ನಕಾಶೆ ಬದಲಾಗುತ್ತಿತ್ತೇ ಹೊರತು ರಾಜ್ಯಗಳ ಒಟ್ಟು ಸ್ಥಾನಗಳ ಸಂಖ್ಯೆ ಬದಲಾಗುತ್ತಿರಲಿಲ್ಲ. ಆದರೆ 2026ರಲ್ಲಿ ಕ್ಷೇತ್ರ ಮರು ವಿಂಗಡಣೆ ಆಯೋಗ ರಚನೆ ಆಗಲಿದ್ದು, ಆಗ ಏನಾದರೂ ರಾಜ್ಯಗಳ ಸ್ಥಾನದ ಮಿತಿಯನ್ನು ತೆಗೆದುಹಾಕಿ ಕ್ಷೇತ್ರಗಳನ್ನು ಮರು ವರ್ಗೀಕರಿಸಿದರೆ ಲೋಕಸಭಾ ಕ್ಷೇತ್ರಗಳು 543ರಿಂದ 772ಕ್ಕೆ ಏರಬಹುದು ಎಂಬ ಅಂದಾಜಿದೆ.

ಹಾಗೇನಾದರೂ 2021ರ ಜನಗಣತಿ ಇಟ್ಟುಕೊಂಡು ಕ್ಷೇತ್ರಗಳ ಜೊತೆಗೆ ರಾಜ್ಯಗಳ ಸ್ಥಾನಗಳು ಮರು ಹಂಚಿಕೆ ಆದರೆ ಜನಸಂಖ್ಯೆ ಜಾಸ್ತಿ ಇರುವ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ದಿಲ್ಲಿ, ಛತ್ತೀಸ್‌ಗಢದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಏರಲಿದ್ದು, ಕುಟುಂಬ ಯೋಜನೆಯನ್ನು ಕರಾರುವಾಕ್ಕಾಗಿ ಜಾರಿಗೊಳಿಸಿರುವ ದಕ್ಷಿಣದ ರಾಜ್ಯಗಳ ಸೀಟುಗಳು ಉತ್ತರಕ್ಕೆ ಹೋಲಿಸಿದರೆ ಇನ್ನೂ ಕಡಿಮೆ ಆಗಲಿವೆ. ಆಗ ಸಹಜವಾಗಿ ಉತ್ತರದ ರಾಜ್ಯಗಳ ರಾಜಕೀಯ ಉಪಯುಕ್ತತೆ ಜಾಸ್ತಿ ಆಗಲಿದ್ದು, ದಕ್ಷಿಣದ ರಾಜ್ಯಗಳು ಬಹುಪಾಲು ರಾಜಕೀಯ ನಿರ್ಲಕ್ಷ್ಯಕ್ಕೆ ಒಳಗಾದರೂ ಆಶ್ಚರ್ಯ ಇಲ್ಲ.

ಸೋಲು- ಗೆಲುವು ಚಲ್ತಾ ಹೈ, ಆದರೆ ನೀವು ಇನ್ನಷ್ಟು ಫಾಸ್ಟ್ ಅಗ್ಬೇಕು: ಬೊಮ್ಮಾಯಿಗೆ ಶಾ ಸಲಹೆ

ಕ್ಷೇತ್ರ ಮರುವಿಂಗಡಣೆ ಹೇಗೆ?

ಸ್ವಾತಂತ್ರ್ಯ ಸಿಕ್ಕ ನಂತರ ನಡೆದ ಮೊದಲ ಚುನಾವಣೆಯಲ್ಲಿ ಸಂವಿಧಾನದಲ್ಲಿ ಹಾಕಿದ ಮಿತಿ ಪ್ರಕಾರ 500 ಲೋಕಸಭಾ ಕ್ಷೇತ್ರಗಳಿದ್ದವು. ನಂತರ ನಡೆದ ಸಂವಿಧಾನ ತಿದ್ದುಪಡಿಗಳ ಮೂಲಕ ಈ ಮಿತಿಯನ್ನು ಮೊದಲು 525ಕ್ಕೆ, ಅನಂತರ 543ಕ್ಕೆ ಏರಿಸಲಾಯಿತು. ಆದರೆ 1976ರಲ್ಲಿ ಮಾಡಿದ ಸಂವಿಧಾನ ತಿದ್ದುಪಡಿಯಲ್ಲಿ ಕ್ಷೇತ್ರದ ನಕಾಶೆ ಮತ್ತು ಮೀಸಲಾತಿ ಬದಲಾಗಬಹುದೇ ಹೊರತು ರಾಜ್ಯಗಳ ಸಂಖ್ಯೆಯಲ್ಲಿ ಬದಲಾವಣೆ ಮಾಡಕೂಡದು ಎಂದು ಕಾನೂನು ತರಲಾಯಿತು.

ಈಗ ಆ ಕಾನೂನಿನ ಅವಧಿ 2026ಕ್ಕೆ ಮುಗಿಯಲಿದ್ದು, 1971ರ ಜನಗಣತಿ ಪ್ರಕಾರ ನಿಗದಿಪಡಿಸಿರುವ ರಾಜ್ಯಗಳ ಕ್ಷೇತ್ರದ ಸಂಖ್ಯೆಗಳನ್ನು ಜಾಸ್ತಿ ಅಥವಾ ಕಮ್ಮಿ ಮಾಡುವ ಅವಕಾಶ 2026ರ ಕ್ಷೇತ್ರ ವಿಂಗಡಣಾ ಆಯೋಗಕ್ಕೆ ಸಿಗಲಿದೆ. ಅದರ ಪೂರ್ವ ತಯಾರಿಯ ಭಾಗವಾಗಿಯೇ 772 ಸಂಸದರು ಒಟ್ಟಿಗೆ ಕೂರುವ ಸದನ ತಯಾರಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, ಯುಪಿ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ 22 ಸ್ಥಾನ ಜಾಸ್ತಿ ಆಗಲಿದ್ದು, ದಕ್ಷಿಣದ ರಾಜ್ಯಗಳ 17 ಸೀಟುಗಳು ಕಡಿಮೆ ಆಗಲಿವೆ.

ಇದಕ್ಕೆ ಮುಖ್ಯ ಕಾರಣ ಜನಸಂಖ್ಯೆ. ಗಂಗೆಯ ತೀರದಲ್ಲಿರುವ ಉತ್ತರದ ಹೆಣ್ಣುಮಗಳು ಕಳೆದ 50 ವರ್ಷಗಳಲ್ಲಿ ಸರಾಸರಿ 4 ಮಕ್ಕಳಿಗೆ ಜನ್ಮ ನೀಡಿದ್ದರೆ, ಸಾಕ್ಷರತೆ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ದಕ್ಷಿಣದ ಹೆಣ್ಣುಮಗಳು ಸರಾಸರಿ 2 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಒಟ್ಟಾರೆ ಕುಟುಂಬ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಪರಿಣಾಮ ದಕ್ಷಿಣದ ರಾಜ್ಯಗಳಿಗೆ ರಾಜಕೀಯವಾಗಿ ನಷ್ಟಆಗಬಹುದೇನೋ ಎಂಬ ಆತಂಕ ಸ್ಪಷ್ಟವಾಗಿ ಕಾಣುತ್ತಿದೆ.

India Gate | ಹಾನಗಲ್ ಸೋಲು ಬೊಮ್ಮಾಯಿಗೇನು ಕಲಿಸಿತು?

ಎಷ್ಟು ಜನರಿಗೆ ಒಬ್ಬ ಎಂಪಿ?

ಇವತ್ತಿನ ಕ್ಷೇತ್ರಗಳ ಪ್ರಕಾರ, ಭಾರತದಲ್ಲಿ ಒಬ್ಬ ಸಂಸದ ಅಂದಾಜು 16 ಲಕ್ಷದಿಂದ 23 ಲಕ್ಷ ಜನಸಂಖ್ಯೆಗೆ ಪ್ರತಿನಿಧಿ ಆಗಿರುತ್ತಾನೆ. ಅದೇ ಅಮೆರಿಕದಲ್ಲಿ ಪ್ರತಿ 6 ಲಕ್ಷ ಮಂದಿಗೆ ಒಬ್ಬ ಸಂಸದ ಇದ್ದರೆ, ನಮಗೆ ಆಧುನಿಕ ಪ್ರಜಾಪ್ರಭುತ್ವದ ಪಾಠ ಹೇಳಿಕೊಟ್ಟಬ್ರಿಟನ್‌ನಲ್ಲಿ ಪ್ರತಿ ಒಂದು ಲಕ್ಷ ಮಂದಿಗೆ ಒಬ್ಬ ಸಂಸದನಿರುತ್ತಾನೆ.

1976ರ ಸಂವಿಧಾನ ತಿದ್ದುಪಡಿ ಮಸೂದೆ ಪ್ರಕಾರ ಸರಾಸರಿ 5ರಿಂದ 7 ಲಕ್ಷಕ್ಕೆ ಒಬ್ಬ ಲೋಕಸಭಾ ಸದಸ್ಯ ಇರಬೇಕು. 1971ರ ಜನ ಗಣತಿ ಪ್ರಕಾರ ಭಾರತದ ಜನಸಂಖ್ಯೆ ಇದ್ದಿದ್ದು 56 ಕೋಟಿ. ಅದಕ್ಕೆ ಅನುಗುಣವಾಗಿ ಲೋಕಸಭಾ ಕ್ಷೇತ್ರಗಳಿವೆ. ಈಗ 2021ರಲ್ಲಿ ಒಂದು ಅಂದಾಜಿನ ಪ್ರಕಾರ 139 ಕೋಟಿ 39 ಲಕ್ಷ ಜನಸಂಖ್ಯೆ ನಮ್ಮಲ್ಲಿದೆ. ಕಾಲಮಾನಕ್ಕೆ ತಕ್ಕಂತೆ ಸೀಟುಗಳ ಸಂಖ್ಯೆ ಬದಲಾಗಬೇಕು ಎನ್ನುವುದು ಒಪ್ಪುವ ಮಾತು. ಆದರೆ ಸರ್ಕಾರದ ಫ್ಯಾಮಿಲಿ ಪ್ಲಾನಿಂಗ್‌ ನಿಯಮ ಪಾಲಿಸಿದ್ದಕ್ಕೆ ರಾಜಕೀಯ ಮಹತ್ವ ಕಡಿಮೆ ಮಾಡಿಕೊಳ್ಳುವುದು ನಮ್ಮ ಹಿತಾಸಕ್ತಿಗೆ ಕುತ್ತು ತಂದೀತು.

ಇದು ಪ್ರಣಬ್‌ದಾ ಐಡಿಯಾ

ದೇಶದ ವಿದ್ವಾನ್‌ ರಾಷ್ಟ್ರಪತಿ ಆಗಿದ್ದ ಪ್ರಣಬ್‌ ಮುಖರ್ಜಿ ಒಬ್ಬ ಸಂಸದ ಹೆಚ್ಚೆಂದರೆ 6 ಲಕ್ಷ ಜನಕ್ಕೆ ಪ್ರತಿನಿಧಿ ಆಗಬಹುದು; ಅದಕ್ಕೂ 3 ಪಟ್ಟು ಹೆಚ್ಚು ಜನರಿಗೆ ಪ್ರತಿನಿಧಿ ಆದರೆ ವರ್ಷಕ್ಕೆ 90 ದಿನ ದಿಲ್ಲಿಯಲ್ಲಿದ್ದು ಉಳಿದ ಸಮಯದಲ್ಲಿ ಮತದಾರರನ್ನು ಭೇಟಿ ಆಗುವುದು ಹೇಗೆ ಎಂದು ಬಹಿರಂಗವಾಗಿಯೇ ಕೇಳಿದ್ದರು. ಪ್ರಣಬ್‌ ತಮ್ಮ ಪುಸ್ತಕದಲ್ಲಿ ಭಾರತದಂಥ ದೊಡ್ಡ ದೇಶಕ್ಕೆ ಕನಿಷ್ಠ 1000 ಲೋಕಸಭಾ ಸಂಸದರು ಇರಬೇಕು. ಆದರೆ ಕ್ಷೇತ್ರ ಮರು ವಿಂಗಡಣೆ ಜೊತೆಗೆ ರಾಜ್ಯ ಪುನರ್‌ ವಿಂಗಡಣಾ ಆಯೋಗ ಕೂಡ ರಚಿಸಿ ಸಣ್ಣಸಣ್ಣ ರಾಜ್ಯಗಳನ್ನು ರಚಿಸಬೇಕು. ಆಗ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳಿಗೆ ಅನ್ಯಾಯ ಆಗುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದರು.

ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ? ಹೀಗಿದೆ ನೋಡಿ ಕಾಂಗ್ರೆಸ್ ಲೆಕ್ಕಾಚಾರ!

ಯುಪಿಯಲ್ಲಿ ಪರಶುರಾಮ ಮ್ಯಾಜಿಕ್‌

ಯುಪಿಯಲ್ಲಿ ಬಿಜೆಪಿಯನ್ನು ಮಣಿಸಬೇಕೆಂದರೆ 11ರಿಂದ 12 ಪ್ರತಿಶತ ಇರುವ ಬ್ರಾಹ್ಮಣರ ವೋಟು ಸೆಳೆಯುವುದು ಅನಿವಾರ್ಯ ಎಂದು ಮಾಯಾವತಿ, ಅಖಿಲೇಶ್‌ ಯಾದವ್‌ ಮತ್ತು ಪ್ರಿಯಾಂಕಾ ಎಲ್ಲರೂ ಬ್ರಾಹ್ಮಣರ ಬೆನ್ನುಹತ್ತಿದ್ದಾರೆ. ಕಂಡಕಂಡಲ್ಲಿ ಪರಶುರಾಮನ ಹೆಸರಿನಲ್ಲಿ ಸಮ್ಮೇಳನಗಳನ್ನು ಸೆಕ್ಯುಲರ್‌ ಪಕ್ಷಗಳು ನಡೆಸುತ್ತಿವೆ. ಒಂದು ಅಂದಾಜಿನ ಪ್ರಕಾರ, 2014ರಲ್ಲಿ 72 ಪ್ರತಿಶತ ಬ್ರಾಹ್ಮಣರು ಬಿಜೆಪಿಗೆ ವೋಟು ನೀಡಿದ್ದರೆ, 2019ರಲ್ಲಿ 80 ಪ್ರತಿಶತ ವೋಟು ಬಿಜೆಪಿಗೆ ಬಂದಿದ್ದವು. ಇದನ್ನು ಒಡೆಯದ ಹೊರತು ಯೋಗಿಯನ್ನು ಮಣಿಸಲು ಆಗೋದಿಲ್ಲ ಎಂದು ಬ್ರಾಹ್ಮಣರನ್ನು ಕಂಡರೆ ‘ಇನ್‌ ಕೋ ಮಾರೋ ಜೂತೆ ಚಾರ್‌’ ಎನ್ನುತ್ತಾ ಪುರೋಹಿತಶಾಹಿ ವ್ಯವಸ್ಥೆ ವಿರುದ್ಧ ರಾಜಕೀಯ ಮಾಡಿದ ಪಕ್ಷಗಳು ಈಗ ಪುರೋಹಿತರನ್ನು ಅಪ್ಪಿ ಮುದ್ದಾಡುತ್ತಿವೆ.

ಈ ತಂತ್ರಕ್ಕೆ ಮುಖ್ಯ ಕಾರಣ ಯುಪಿಯಲ್ಲಿ ತಲೆತಲಾಂತರದಿಂದ ಬ್ರಾಹ್ಮಣರು ಮತ್ತು ಕ್ಷತ್ರಿಯರ ನಡುವೆ ಇರುವ ಮುನಿಸು. ಹೀಗಾಗಿಯೇ ಕ್ಷತ್ರಿಯರನ್ನು 21 ಬಾರಿ ಜಗತ್ತು ಸಂಚರಿಸಿ ವಧೆ ಮಾಡಿದ ಪರಶುರಾಮರನ್ನು ಮಾಯಾವತಿ, ಅಖಿಲೇಶ್‌ ಮುಂದಿಟ್ಟುಕೊಂಡು ಹೊರಟಿದ್ದಾರೆ. ಈ ವೋಟು ವಿಭಜನೆ ತಡೆಯಲು ಯೋಗಿ ಆದಿತ್ಯನಾಥ ಆಗಾಗ ಅಬ್ಬಾ ಜಾನ್‌ ಚಾಚಾ ಜಾನ್‌ಗಳನ್ನೂ, ಜೊತೆಗೆ ಜಿನ್ನಾರನ್ನೂ ಎಳೆದು ತರುತ್ತಾರೆ. ಯುಪಿ, ಬಿಹಾರದ ಚುನಾವಣೆಗಳು ಎಂದರೆ ಶುದ್ಧ ಜಾತಿಗಳ ಮೇಲಾಟ ಅಷ್ಟೆ. ಕೆಲಸ ಕಾರ್ಯ ಎಲ್ಲ ಬರೀ ಲೇಪಗಳಿಗೆ ಸೀಮಿತ.

ಲಾಡ್‌ ಮತ್ತು ಜಮೀರ್‌ ಜೋಡಿ

ವಿಧಾನ ಪರಿಷತ್‌ ಚುನಾವಣೆಗೆ ಧಾರವಾಡದಿಂದ ಅರವಿಂದ ಬೆಲ್ಲದ ಎದುರು ನಿಂತು ಸೋತಿದ್ದ ಇಸ್ಮಾಯಿಲ್  ತಮಾತಗಾರಗೆ ಟಿಕೆಟ್‌ ಕೊಡುವಂತೆ ಸಂತೋಷ್‌ ಲಾಡ್‌ ದಿಲ್ಲಿಗೆ ಬಂದು ಕುಳಿತಿದ್ದಾರೆ. ಒಬ್ಬರೇ ಬಂದಿಲ್ಲ, ಜೊತೆಗೆ ಜಮೀರ್‌ ಭಾಯಿನೂ ಕರೆದುಕೊಂಡು ಬಂದಿದ್ದಾರೆ. ಇಸ್ಮಾಯಿಲ್‌ಗೆ ವಿಧಾನ ಪರಿಷತ್‌ ಟಿಕೆಟ್‌ ಕೊಟ್ಟರೆ ಮರಾಠರು ಜಾಸ್ತಿ ಇರುವ, ಹಿಂದೆ ಎಸ್‌ಆರ್‌ ಮೊರೆ ಸ್ಪರ್ಧಿಸುತ್ತಿದ್ದ ಧಾರವಾಡದಲ್ಲಿ ಬೆಲ್ಲದ ವಿರುದ್ಧ ತಾವು ಸ್ಪರ್ಧಿಸಬೇಕು. ಆಗ ತಮಾತಗಾರ ಓಡಾಡಿ ಮುಸ್ಲಿಂ ವೋಟು ಹಾಕಿಸುತ್ತಾರೆ ಎಂಬುದು ಸಂತೋಷ್‌ ಲಾಡ್‌ ಲೆಕ್ಕಾಚಾರ. ದಿಲ್ಲಿ ಜೊತೆಗೆ ಚೆನ್ನಾಗಿರುವ ಸಲೀಂ ಅಹ್ಮದ್‌ಗೆ ಟಿಕೆಟ್‌ ಸಿಕ್ಕರೆ ನಾಳೆ ತಾನು ಮಂತ್ರಿಯಾಗಲು ಅಡ್ಡಿಯಾಗುತ್ತಾರೆ ಎಂಬುದು ಜಮೀರ್‌ ಲೆಕ್ಕಾಚಾರ. ಹೀಗಾಗಿ ತಮಗೆ ಸಂಬಂಧವೇ ಇಲ್ಲದ ಧಾರವಾಡದ ಟಿಕೆಟ್‌ಗಾಗಿ ದಿಲ್ಲಿಗೆ ಬಂದು ಕುಳಿತಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್‌ ಅವರು ಸಲೀಂ ಅಹ್ಮದ್‌ಗೆ ಟಿಕೆಟ್‌ ಕೊಡಿಸುವ ಸಾಧ್ಯತೆ ಜಾಸ್ತಿ ಇದ್ದ ಹಾಗಿದೆ.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

Follow Us:
Download App:
  • android
  • ios