ದೇಶದ ಮೊದಲ ಖಾಸಗಿ ರೈಲಿಗೆ ಚಾಲನೆ, ಬೆಂಗಳೂರಿಗೂ ಬರಲಿದೆ ಈ ವಿಶೇಷ ರೈಲು!
* ಭಾರತ್ ಗೌರವ್ ಯೋಜನೆಯಡಿ ರೈಲು ಸೇವೆ
* ದೇಶದ ಮೊದಲ ಖಾಸಗಿ ರೈಲಿಗೆ ಚಾಲನೆ
* ಕೊಯಮತ್ತೂರಿನಿಂದ ಶಿರಡಿವರೆಗೆ ಪ್ರಯಾಣ
* ಬೆಂಗಳೂರಿಗೂ ಬರಲಿದೆ ಈ ವಿಶೇಷ ರೈಲು
ಕೊಯಮತ್ತೂರು(ಜೂ.16): ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸ್ಥಳಗಳ ನಡುವೆ ಸಂಚರಿಸುವ ಉದ್ದೇಶ ಹೊಂದಿರುವ ದೇಶದ ಮೊದಲ ಖಾಸಗಿ ರೈಲು ಸೇವೆಗೆ ಬುಧವಾರ ಇಲ್ಲಿ ಚಾಲನೆ ನೀಡಲಾಯಿತು. ಭಾರತ್ ಗೌರವ ಯೋಜನೆಯಡಿ ಆಯೋಜನೆಗೊಂಡಿರುವ ಈ ರೈಲು ತನ್ನ ಮೊದಲ ಸಂಚಾರವನ್ನು ತಮಿಳುನಾಡಿನ ಕೊಯಮತ್ತೂರು ಮತ್ತು ಮಹಾರಾಷ್ಟ್ರದ ಶಿರಡಿ ನಡುವೆ ನಡೆಸಿತು.
20 ಬೋಗಿಗಳನ್ನು ಒಳಗೊಂಡ ಈ ರೈಲು ಜೂ.14ರ ಸಾಯಂಕಾಲ 6 ಗಂಟೆಗೆ ಕೊಯಮತ್ತೂರಿನಿಂದ ಹೊರಟ ರೈಲು ಜೂ.16ರ ಮುಂಜಾನೆ 7.25ರ ಸುಮಾರಿಗೆ ಸಾಯಿನಗರ ಶಿರಡಿ ತಲುಪಲಿದೆ. ಈ ರೈಲು ತಿರುಪೂರು, ಈರೋಡು, ಸೇಲಂ, ಯಲಹಂಕ (ಬೆಂಗಳೂರು), ಧರ್ಮಾವರಂ, ಮಂತ್ರಾಲಯ ರಸ್ತೆ ಮತ್ತು ವಾಡಿಯಲ್ಲಿ ನಿಲ್ದಾಣಗಳನ್ನು ಹೊಂದಿದೆ. ಈ ರೈಲು ಪ್ರಯಾಣಿಕರಿಗೆ ಮಂತ್ರಾಲಯದ ದರ್ಶನ ಒದಗಿಸಲು ಮಂತ್ರಾಲಯ ರಸ್ತೆಯಲ್ಲಿ ಸುಮಾರು 5 ಗಂಟೆಗಳ ಕಾಲ ನಿಲ್ಲಲಿದೆ. ಜೂ.7ರ ಮುಂಜಾನೆ 7.25ಕ್ಕೆ ಶಿರಡಿಯಿಂದ ಹೊರಡುವ ರೈಲು ಜೂ.18ರ ಮಧ್ಯಾಹ್ನ 12 ಗಂಟೆಗೆ ಕೊಯಮತ್ತೂರು ತಲುಪಲಿದೆ.
ಹೇಗಿದೆ ರೈಲಿನ ಸಂಯೋಜನೆ
ಈ ಖಾಸಗಿ ರೈಲು 1- ಫಸ್ಟ್ ಎಸಿ ಬೋಗಿ, 3- 2ಟೈರ್ ಎಸಿ ಬೋಗಿ, 8- 3ಟೈರ್ ಎಸಿ ಬೋಗಿ, 5- ಸ್ಲೀಪರ್ ಬೋಗಿಗಳು, 1- ಪ್ಯಾಂಟ್ರಿ ಬೋಗಿ ಮತ್ತು 2- ಸರಕು ಬೋಗಿಗಳು ಸೇರಿದಂತೆ ಒಟ್ಟು 20 ಬೋಗಿಗಳನ್ನು ಹೊಂದಿದೆ.
ಟಿಕೆಟ್ ಬೆಲೆ:
ಈ ರೈಲಿನಲ್ಲಿ ಟಿಕೆಟ್ ಮತ್ತು ಪ್ಯಾಕೇಜ್ ಎಂಬ 2 ವಿಭಾಗಗಳಲ್ಲಿ ದರವನ್ನು ನಿಗದಿ ಮಾಡಲಾಗಿದೆ. ಸ್ಲೀಪರ್ ಬೋಗಿಗೆ 2,500 ರು., ಮೂರನೇ ದರ್ಜೆಯ ಎಸಿ ಬೋಗಿಗೆ 5,000 ರು., ಎರಡನೇ ದರ್ಜೆ ಎಸಿ ಬೋಗಿಗೆ 7,000 ರು. ಮತ್ತು ಪ್ರಥಮ ದರ್ಜೆಯ ಎಸಿ ಬೋಗಿಗೆ 10,000 ರು. ದರ ನಿಗದಿ ಮಾಡಲಾಗಿದೆ. ಇದೇ ಕ್ರಮದಲ್ಲಿ 4,999 ರು., 7,999 ರು., 9,999ರು., ಮತ್ತು 12,999 ರು. ಪ್ಯಾಕೇಜ್‌ಗಳನ್ನು ನಿಗದಿ ಮಾಡಲಾಗಿದೆ. ಇದನ್ನು ಖರೀದಿಸಿದರೆ ಕೊಮಮತ್ತೂರಿನಿಂದ ಶಿರಡಿಗೆ ಮತ್ತು ಶಿರಡಿಯಿಂದ ಕೊಯಮತ್ತೂರಿಗೆ ಪ್ರಯಾಣಿಸಬಹುದು. ಜೊತೆಗೆ ವಿಐಪಿ ದರ್ಶನ ಟಿಕೆಟ್, 3 ಜನರಿಗೆ ಎಸಿ ಬಸ್, ಟೂರಿಸ್ಟ್ ಗೈಡ್ ಮತ್ತು ಪ್ರಯಾಣ ವಿಮೆಯನ್ನು ಒದಗಿಸಲಾಗುತ್ತದೆ.
ರೈಲಿನ ವಿಶೇಷತೆಗಳು:
- ಈ ರೈಲಿನಲ್ಲಿ ತುರ್ತು ಸಮಯದಲ್ಲಿ ಸಹಾಯ ಒದಗಿಸಲು ವೈದ್ಯರು ಲಭ್ಯರಿರುತ್ತಾರೆ.
- ರೈಲ್ವೇ ಪೊಲೀಸ್‌ನ ಜೊತೆಗೆ ಖಾಸಗಿ ಸೆಕ್ಯುರಿಟಿಗಳೂ ಸಹ ರಕ್ಷಣೆಗೆ ಸಿದ್ಧರಿರುತ್ತಾರೆ.
- ಈ ರೈಲಿನಲ್ಲಿ ಎಸಿ ಮೆಕ್ಯಾನಿಕ್, ಎಲೆಕ್ಟ್ರಷಿಯನ್ ಮತ್ತು ಅಗ್ನಿ ಶಾಮಕ ದಳದ ಅಧಿಕಾರಿಗಳು ಇರುತ್ತಾರೆ.
- ಸಾಂಪ್ರದಾಯಿಕ ಸಸ್ಯಹಾರದ ಜೊತೆಗೆ, ರೈಲನ್ನು ಸದಾ ಸ್ವಚ್ಚವಾಗಿಡಲು ಸಿಬ್ಬಂದಿಗಳಿರುತ್ತಾರೆ.
- ಪ್ರಯಾಣದ ಬೇಸರವನ್ನು ಹೋಗಲಾಡಿಸಲು ಎಲ್ಲಾ ಬೋಗಿಯಲ್ಲೂ ಸ್ಪೀಕರ್ ಅಳವಡಿಸಲಾಗಿದೆ.
- ಈ ಸ್ಪೀಕರ್‌ಗಳ ಮೂಲಕ ಭಕ್ತಿಗೀತೆಗಳು, ಧಾರ್ಮಿಕ ಕಥೆಗಳು ಮತ್ತು ಸಂದರ್ಶನಗಳನ್ನು ಪ್ರಸಾರ ಮಾಡಲಾಗುತ್ತದೆ.
ಏನಿದು ಭಾರತ್ ಗೌರವ್ ರೈಲು:
ಭಾರತೀಯ ರೈಲ್ವೇಯಲ್ಲಿ ಖಾಸಗಿಯವರಿಗೆ ಅವಕಾಶ ನೀಡಲು 2021ರಲ್ಲಿ ಸರ್ಕಾರ ಈ ರೈಲು ಯೋಜನೆಗೆ ಚಾಲನೆ ನೀಡಿತು. ಭಾರತ ಮತ್ತು ವಿದೇಶದ ಪ್ರವಾಸಿಗರಿಗೆ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಸ್ಥಳಗಳನ್ನು ತೋರಿಸುವ ದೃಷ್ಟಿಯಿಂದ ಈ ಖಾಸಗಿ ರೈಲಿಗೆ ಅವಕಾಶ ನೀಡಲಾಗಿದೆ.