ಸಿಎಂಗಳ ಜೊತೆ ಮೋದಿ ವಿಡಿಯೋ ಕಾನ್ಫರೆನ್ಸ್‌ ಸಭೆ  ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಭೆ ಮಹತ್ವದ ಸೂಚನೆ ನೀಡಲಿರುವ ಪ್ರಧಾನಿ ಮೋದಿ  

ನವದೆಹಲಿ(ಏ.24): ದೇಶದ ವಿವಿಧೆಡೆ ಮತ್ತೆ ಕೋವಿಡ್‌ ಏರುಗತಿಯಲ್ಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಸಲಿದ್ದಾರೆ. ಆರೋಗ್ಯ ಅಧಿಕಾರಿಗಳು ಈ ಸಭೆಯಲ್ಲಿ ದೇಶದ ಕೋವಿಡ್‌ ಸ್ಥಿತಿಗತಿಯ ಮಾಹಿತಿ ಒದಗಿಸಲಿದ್ದಾರೆ.

ದಿಲ್ಲಿ: ಸತತ 2ನೇ ವಾರ್‌ ಆರ್‌ ವ್ಯಾಲ್ಯೂ 2.1
ದೆಹಲಿಯಲ್ಲಿ ಸತತ ಎರಡನೇ ವಾರವೂ ಆರ್‌- ವ್ಯಾಲ್ಯೂ (ಒಬ್ಬರಿಂದ ಎಷ್ಟುಜನರಿಗೆ ಕೋವಿಡ್‌ ಸೋಂಕು ಹರಡುತ್ತಿದೆ ಎಂಬುದನ್ನು ತಿಳಿಸಲು ಇರುವ ಮಾನದಂಡ) 2ಕ್ಕಿಂತ ಹೆಚ್ಚು ದಾಖಲಾಗಿದೆ ಎಂದು ಐಐಟಿ ಮದ್ರಾಸ್‌ನ ತಜ್ಞರ ತಂಡ ಹೇಳಿದೆ. ಸದ್ಯ ದೇಶದಲ್ಲೇ ಅತಿ ಹೆಚ್ಚು ಕೇಸು ದಾಖಲಾಗುತ್ತಿರುವ ದೆಹಲಿಯಲ್ಲಿ ಕಳೆದ ವಾರ 2.12ರಷ್ಟುಆರ್‌- ವ್ಯಾಲ್ಯೂ ದಾಖಲಾಗಿತ್ತು. ಇದೀಗ ಏ.18-23 ವಾರದಲ್ಲೂ ಆರ್‌ ವ್ಯಾಲ್ಯೂ 2.1ರಷ್ಟಿದೆ. ಅಂದರೆ ಒಬ್ಬ ಸೋಂಕಿತನಿಂದ 2.1 ಜನರಿಗೆ ಸೋಂಕು ಹಬ್ಬುತ್ತಿದೆ ಎಂದು ತಜ್ಞರ ತಂಡ ಹೇಳಿದೆ.

ಮತ್ತೆ ಕೊರೋನಾ ಅಲರ್ಟ್, 2,527 ಹೊಸ ಕೋವಿಡ್ ಪ್ರಕರಣ ಪತ್ತೆ, 33 ಸಾವು!

ಆರ್‌ ವ್ಯಾಲ್ಯೂ 1ಕ್ಕಿಂತ ಕಡಿಮೆ ಇದ್ದರೆ ಸಾಂಕ್ರಾಮಿಕ ಮುಕ್ತಾಯದ ಹಂತದ ಸಾಗುತ್ತಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ ದೆಹಲಿಯಲ್ಲಿ ಕಳೆದ 3 ತಿಂಗಳಲ್ಲೇ ಮೊದಲ ಬಾರಿಗೆ, ಕಳೆದ ವಾರ ಆರ್‌ ವ್ಯಾಲ್ಯೂ ಶೇ.1ರ ಗಡಿ ದಾಟುವ ಮೂಲಕ ಆತಂಕ ಹುಟ್ಟುಹಾಕಿತ್ತು. ಇದೀಗ ಸತತ 2ನೇ ವಾರ ಕೂಡಾ ಹರಡುವಿಕೆ ಪ್ರಮಾಣ ಹೆಚ್ಚು ಕಡಿಮೆ ಅದೇ ಮಟ್ಟದಲ್ಲಿ ಇರುವ ಕಾರಣ, ಮುಂದಿನ ವಾರಗಳಲ್ಲಿ ಸೋಂಕಿತರ ಪ್ರಮಾಣ ಮತ್ತಷ್ಟುಹೆಚ್ಚುವ ಆತಂಕ ಎದುರಾಗಿದೆ.

"

1 ತಿಂಗಳ ಬಳಿಕ ಶತಕ ದಾಟಿದ ಸೋಂಕಿನ ಸಂಖ್ಯೆ
ಬೆಂಗಳೂರು ನಗರದಲ್ಲಿ ಶನಿವಾರ 132 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ಪಾಸಿಟಿವಿಟಿ ದರ ಶೇ.2.23ಕ್ಕೆ ಏರಿದೆ. 51 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ ಸಾವು ಘಟಿಸಿಲ್ಲ. ಸುಮಾರು ಒಂದು ತಿಂಗಳ ಬಳಿಕ ಮತ್ತೆ ನಗರದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಶತಕ ದಾಟಿದೆ. ರಾಜ್ಯದ ದೈನಂದಿನ ಪ್ರಕರಣದಲ್ಲಿ ಶೇ.90ಕ್ಕಿಂತ ಹೆಚ್ಚು ಬೆಂಗಳೂರಿನಿಂದ ವರದಿ ಆಗುತ್ತಿದೆ.

ನಾಲ್ಕೈದು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಕಂಟೈನ್ಮೆಂಟ್‌ ವಲಯಗಳು ಪತ್ತೆಯಾಗಿಲ್ಲ, ಸದ್ಯ 9 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ವೆಂಟಿಲೇಟರ್‌ ಸಹಿತ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿದ್ದಾರೆ. ಮೂವರು ಆಮ್ಲಜನಕ ಸಹಿತ ಹಾಸಿಗೆ ಮತ್ತು ಐವರು ಜನರಲ್‌ ವಾರ್ಡ್‌ನಲ್ಲಿ ದಾಖಲಾಗಿದ್ದಾರೆ.ನಗರದ ಹೊರ ವಲಯದ ಬೆಳ್ಳಂದೂರು, ಹಗದೂರು, ಕೋರಮಂಗಲ, ವರ್ತೂರು, ಎಚ್‌ಎಸ್‌ಆರ್‌ ಬಡಾವಣೆ, ದೊಡ್ಡನೆಕ್ಕುಂದಿ, ಹೂಡಿ, ಕಾಡುಗೋಡಿ ವಾರ್ಡ್‌ಗಳಲ್ಲಿ ಹೆಚ್ಚು ಪ್ರಕರಣಗಳಿವೆ.

ದೆಹಲಿ, ಪಂಜಾಬ್ ಬಳಿಕ ಮತ್ತೊಂದು ರಾಜ್ಯದಲ್ಲಿ ಕೊರೋನಾ ನಿರ್ಬಂಧ ಜಾರಿ!

ನಗರದಲ್ಲಿ ಲಸಿಕೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 16,071 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 6,228 ಮಂದಿ ಮೊದಲ ಡೋಸ್‌, 4,111 ಮಂದಿ ಎರಡನೇ ಡೋಸ್‌ ಮತ್ತು 5,732 ಮಂದಿ ಮೂರನೇ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ.

ದ.ಕ.ದಲ್ಲಿ ಕೊರೋನಾ ಹೊಸ ಪ್ರಕರಣ ಇಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಯಾರೊಬ್ಬರಿಗೂ ಕೊರೋನಾ ಕಂಡುಬಂದಿಲ್ಲ. ಇಬ್ಬರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 3ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1,35,504. ಅವರಲ್ಲಿ ಈಗಾಗಲೇ 1,33,649 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1850 ಮಂದಿ ಮೃತಪಟ್ಟಿದ್ದಾರೆ.