ಭಾರತ-ಚೀನಾ ಗಡಿಯಲ್ಲಿ ಮತ್ತೆ ಯುದ್ಧ ಭೀತಿ ಆರಂಭವಾಗಿದೆ. ಪರಿಣಾ ಸೇನಾಮುಖ್ಯಸ್ಥರು ಗಡಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ/ಲೇಹ್(ಸೆ.04)‌: ಭಾರತದ ಭೂಭಾಗವನ್ನು ಕಬಳಿಸಲು ತುದಿಗಾಲಿನಲ್ಲಿ ನಿಂತಿರುವ ಚೀನಾದ ದುರ್ವರ್ತನೆಯಿಂದಾಗಿ ಗಡಿಯಲ್ಲಿ ಯುದ್ಧ ಸದೃಶ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಭೂಸೇನೆ ಹಾಗೂ ವಾಯುಸೇನೆ ಪಡೆಗಳನ್ನು ಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಹೆಚ್ಚಿನ ಸಂಖ್ಯೆಗಳಲ್ಲಿ ಪಡೆಗಳನ್ನು ನಿಯೋಜಿಸಲಾಗಿದೆ. 

ಇದೇ ವೇಳೆ, ಭೂಸೇನೆ ಹಾಗೂ ವಾಯುಪಡೆ ಮುಖ್ಯಸ್ಥರು ಗಡಿಗೆ ಗುರುವಾರ ದೌಡಾಯಿಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. ಭಾರತದ ಭೂಭಾಗದೊಳಕ್ಕೆ ನುಗ್ಗುವ ಚೀನಾ ಪಡೆಗಳ ಯತ್ನವನ್ನು ಭಾರತೀಯ ಯೋಧರು ವಿಫಲಗೊಳಿಸಿದ ಬೆನ್ನಲ್ಲೇ ಸೇನಾ ಮುಖ್ಯಸ್ಥರು ಲಡಾಖ್‌ ಹಾಗೂ ಅರುಣಾಚಲ ಗಡಿಗೆ ಭೇಟಿ ನೀಡಿರುವುದು ಪರಿಸ್ಥಿತಿ ಎಷ್ಟು ತ್ವೇಷಮಯವಾಗಿದೆ ಎಂಬುದರ ದ್ಯೋತಕವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ನಡುವೆ, ಗಡಿಯಲ್ಲಿ ಚೀನಾ ಇತ್ತೀಚಿನ ದಿನಗಳಲ್ಲಿ ಆಕ್ರಮಣಕಾರಿ ವರ್ತನೆ ತೋರುತ್ತಿದೆ. ಆದರೆ ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಸಾಮರ್ಥ್ಯ ಭಾರತೀಯ ಸಶಸ್ತ್ರ ಪಡೆಗಳಿಗೆ ಇದೆ. ಒಂದು ವೇಳೆ ಚೀನಾ ಜತೆಗಿನ ಗಡಿ ವಿವಾದದ ಲಾಭ ಪಡೆದು ಪಾಕಿಸ್ತಾನ ಏನಾದರೂ ದುಸ್ಸಾಹಸಕ್ಕೆ ಇಳಿದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸೇನಾ ಮಹಾದಂಡ ನಾಯಕ ಜನರಲ್‌ ಬಿಪಿನ್‌ ರಾವತ್‌ ಅವರು ಕಾರ್ಯಕ್ರಮವೊಂದರಲ್ಲಿ ಎಚ್ಚರಿಕೆ ನೀಡಿದ್ದಾರೆ.

ಗಡಿಯಲ್ಲಿ ನಾಲ್ಕು ತಿಂಗಳಿನಿಂದ ಉದ್ಭವಿಸಿರುವ ಪರಿಸ್ಥಿತಿಯು ಗಡಿಯಲ್ಲಿನ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸಲು ಚೀನಾ ತೆಗೆದುಕೊಂಡ ಕ್ರಮಗಳ ನೇರ ಫಲಿತಾಂಶ ಎಂದು ಭಾರತದ ವಿದೇಶಾಂಗ ಇಲಾಖೆ ತಿರುಗೇಟು ಕೊಟ್ಟಿದೆ.

ಚೀನಾ ಅಪ್ರಚೋದಿತ ದಾಳಿ ಯತ್ನ ವಿಫಲಗೊಳಿಸಿದ ಭಾರತೀಯ ಸೇನೆ!

ಮತ್ತೊಂದೆಡೆ, ಭಾರತೀಯ ಸೇನೆಯು ಲಡಾಖ್‌ನ ಪ್ಯಾಂಗಾಂಗ್‌ ಸರೋವರದ ದಕ್ಷಿಣ ಹಾಗೂ ಉತ್ತರ ದಿಕ್ಕಿನಲ್ಲಿರುವ ದಂಡೆಯ ಬೆಟ್ಟಗಳ ಮೇಲೆ ಹಿಡಿತ ಹೊಂದಿದ್ದರೂ, ಚೀನಾ ಸೇನೆ ‘ಫಿಂಗರ್‌-4’ ಹೆಸರಿನ ಸ್ಥಳದಲ್ಲಿ ಇನ್ನೂ ನಿಯಂತ್ರಣ ಹೊಂದಿದೆ. ಆದರೆ ಭಾರತದ ಸೇನೆ, ಉಳಿದ ಎತ್ತರದ ಬೆಟ್ಟಗಳಿಗೆ ಲಗ್ಗೆ ಇರಿಸಿ ಚೀನಾ ಪಡೆಗಳ ಮೇಲೆ ಒತ್ತಡ ಹೇರಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿ ಫಿಂಗರ್‌-4ನಿಂದ ಹಿಂದೆ ಸರಿಯಲು ಈವರೆಗೆ ಒಪ್ಪದೇ ಇದ್ದ ಚೀನಾ ಸೇನೆ, ಈ ಒತ್ತಡದಿಂದ ಹಿಂದೆ ಸರಿಯಬಹುದು ಎನ್ನಲಾಗಿದೆ. ಇನ್ನೊಂದೆಡೆ ಪ್ಯಾಂಗಾಂಗ್‌ ಸರೋವರವಷ್ಟೇ ಅಲ್ಲ, ಪೂರ್ವ ಲಡಾಖ್‌ನ ವಾಸ್ತವ ಗಡಿ ರೇಖೆಯಲ್ಲೂ ಭಾರತವು ಸೇನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಳಿಸಿದೆ.

ತ್ವೇಷ ಸ್ಥಿತಿ ತಣಿಸಲು ಭಾರತ-ಚೀನಾ ಬ್ರಿಗೇಡ್‌ ಕಮಾಂಡರ್‌ ಮಟ್ಟದ ಮಾತುಕತೆಗಳು ಬುಧವಾರ 7 ತಾಸು ನಡೆದರೂ ವಿಫಲಗೊಂಡವು. ಗುರುವಾರವೂ ಮಾತುಕತೆ ನಡೆಯಿತು ಎಂದು ಮೂಲಗಳು ಹೇಳಿವೆ.

ಈ ಮಧ್ಯೆ ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ದೇಶಗಳ ಕೂಟ ‘ಬ್ರಿಕ್ಸ್‌’ನ ವರ್ಚುವಲ್‌ ಸಭೆ ಶುಕ್ರವಾರ ನಡೆಯಲಿದೆ. ಅದರಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಪಾಲ್ಗೊಳ್ಳಲಿದ್ದು, ಗಡಿ ವಿವಾದ ಪ್ರಸ್ತಾಪವಾಗಲಿದೆಯೇ ಎಂಬ ಕುತೂಹಲ ಮೂಡಿದೆ.

ಸೇನಾ ಮುಖ್ಯಸ್ಥರು ದೌಡು: ಭೂಸೇನಾ ಮುಖ್ಯಸ್ಥ ಜ ಮನೋಜ್‌ ನರವಣೆ ಅವರು ಗುರುವಾರ ಲೇಹ್‌ಗೆ 2 ದಿನಗಳ ಭೇಟಿಗೆ ಆಗಮಿಸಿದರು. ‘ಲಡಾಖ್‌ ವಲಯದಲ್ಲಿ ಸೇನೆ ನಡೆಸಿರುವ ಸಿದ್ಧತೆಗಳನ್ನು ಅವರು ಪರಿಶೀಲಿಸುತ್ತಿದ್ದಾರೆ. ಉನ್ನತ ಸೇನಾ ಕಮಾಂಡರ್‌ಗಳು ಸಿದ್ಧತೆಯ ವಿವರಗಳನ್ನು ಅವರಿಗೆ ನೀಡಿದರು. ಶುಕ್ರವಾರ ಕೂಡ ಜ. ನರವಣೆ ಪರಿಶೀಲನೆ ಮುಂದುವರಿಸಲಿದ್ದಾರೆ’ ಎಂದು ಸೇನಾ ಮೂಲಗಳು ಹೇಳಿವೆ.

ಇನ್ನು ವಾಯುಸೇನಾ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ ಅವರು ದೇಶದ ಪೂರ್ವ ಭಾಗದ ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ಗಡಿಭಾಗಗಳಿಗೆ ತೆರಳಿ ಸಿದ್ಧತೆಗಳನ್ನು ಪರಿಶೀಲಿಸಿದರು. ಅಲ್ಲಿನ ಮುಂಚೂಣಿ ವಾಯುನೆಲೆಗಳಿಗೆ ಅವರು ಭೇಟಿ ನೀಡಿದರು. ‘ಈ ವೇಳೆ ವಾಯುಸೇನಾ ಯೋಧರೊಂದಿಗೆ ಸಂವಾದ ನಡೆಸಿ, ಅವರ ಕರ್ತವ್ಯಪರತೆಯನ್ನು ಪ್ರಶಂಶಿಸಿದರು’ ಎಂದು ವಾಯುಸೇನಾ ವಕ್ತಾರರು ಹೇಳಿದ್ದಾರೆ.

ಚೀನಾ ಇತ್ತೀಚಿನ ದಿನಗಳಲ್ಲಿಆಕ್ರಮಣಕಾರಿ ವರ್ತನೆ ತೋರುತ್ತಿದೆ. ಆದರೆ ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಸಾಮರ್ಥ್ಯ ಭಾರತೀಯ ಸಶಸ್ತ್ರ ಪಡೆಗಳಿಗೆ ಇದೆ. -ಜ. ಬಿಪಿನ್‌ ರಾವತ್‌, ಸೇನಾ ಮಹಾದಂಡ ನಾಯಕ ಜನರಲ್‌