ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿದ ಪ್ರಧಾನಿ, ಕೇಂದ್ರ/ರಾಜ್ಯ ಸಚಿವರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳನ್ನು 30 ದಿನಗಳಲ್ಲಿ ವಜಾಗೊಳಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ನವದೆಹಲಿ (ಆ.20): ಯಾವುದೇ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ, ಕೇಂದ್ರ ಸಚಿವರು, ರಾಜ್ಯಗಳ ಸಚಿವರನ್ನು ತನಿಖಾ ಸಂಸ್ಥೆಗಳು ವಶಕ್ಕೆ ಪಡೆದರೆ ಅಥವಾ ಬಂಧಿಸಿದರೆ, 30 ದಿನಗಳ ಒಳಗೆ ಅವರನ್ನು ಅವರನ್ನು ಹುದ್ದೆಯಿಂದ ತೆಗೆದು ಹಾಕುವ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕರಡು ಮಸೂದೆಗೆ ಅನುಮೋದನೆ ನೀಡಿದೆ.

1963ರ ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆ ಅನ್ವಯ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿ, ಸಚಿವರ ವಜಾಕ್ಕೆ ಯಾವುದೇ ಅವಕಾಶ ಇಲ್ಲ. ಅದೇ ರೀತಿ ಪ್ರಧಾನಿ, ಕೇಂದ್ರ ಸಚಿವರ ವಜಾಕ್ಕೂ ಕಾಯ್ದೆಯಲ್ಲಿ ಅವಕಾಶ ಇರದ ಕಾರಣ ಈ ಹಿನ್ನೆಲೆಯಲ್ಲಿ ಹೊಸ ತಿದ್ದುಪಡಿ ಕಾಯ್ದೆ ಮೂಲಕ ಅವಕಾಶವನ್ನು ಕಲ್ಪಿಸಲಾಗುತ್ತಿದೆ. 5 ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಅವಕಾಶ ಕಲಿಸುವ ಕ್ರಿಮಿನಲ್ ಅಪರಾಧ ಪ್ರಕರಣಗಳಿಗೆ ಈ ನಿಯಮ ಅನ್ವಯವಾಗಲಿದೆ.

ಹಾಲಿ ಇರುವ ನಿಯಮಗಳ ಅನ್ವಯ, ಯಾವುದೇ ಜನಪ್ರತಿನಿಧಿ ಕ್ರಿಮಿನಲ್ ಪ್ರಕರಣಗಳಲ್ಲಿ 2 ವರ್ಷ ಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾದರೆ ಮಾತ್ರವೇ ತಮ್ಮ ಜನಪ್ರತಿನಿಧಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ. ಜೊತೆಗೆ ಶಿಕ್ಷೆ ಮುಗಿದ ಬಳಿಕ ಮತ್ತೆ 5 ವರ್ಷ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಇಲ್ಲ.

ಇದರೊಂದಿಗೆ ಇತರ ಎರಡು ಮಸೂದೆಗಳಳಾದ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ 2025, ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ 2025, ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ 2025 - ಇವುಗಳನ್ನು ಸಂಸದೀಯ ಸಮಿತಿಗೆ ಕಳುಹಿಸಬಹುದು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಲಿದ್ದಾರೆ.

ಇಲ್ಲಿಯವರೆಗೆ, ಸಂವಿಧಾನದಡಿಯಲ್ಲಿ, ಶಿಕ್ಷೆಗೊಳಗಾದ ಸಾರ್ವಜನಿಕ ಪ್ರತಿನಿಧಿಗಳನ್ನು ಮಾತ್ರ ಅಧಿಕಾರದಿಂದ ತೆಗೆದುಹಾಕಬಹುದು. ಆದ್ದರಿಂದ, ಪ್ರಮುಖ ಮಸೂದೆಗಳು ಸಾಂವಿಧಾನಿಕ ತಿದ್ದುಪಡಿ ಮಸೂದೆಗಳಾಗಿವೆ. ಒಳಗೊಂಡಿರುವ ಆರ್ಟಿಕಲ್‌ಗಳೆಂದರೆ, ಆರ್ಟಿಕಲ್‌ 75, 164 ಮತ್ತು 239AA.

ಆದರೆ ಪ್ರಸ್ತಾವಿತ ಕಾನೂನು ಹೇಳುವಂತೆ ಪ್ರಧಾನಿ, ಯಾವುದೇ ಕೇಂದ್ರ ಸಚಿವರು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳನ್ನು ಬಂಧಿಸಿ ಸತತ 30 ದಿನಗಳವರೆಗೆ ಬಂಧನದಲ್ಲಿದ್ದರೆ, ಅವರು 31ನೇ ದಿನ ರಾಜೀನಾಮೆ ನೀಡಬೇಕು. ಇಲ್ಲದೇ ಇದಲ್ಲಿ ಅವರನ್ನು ಸ್ವಯಂಚಾಲಿತವಾಗಿ ತೆಗೆದುಹಾಕುವ ತಿದ್ದುಪಡಿ ಮಾಡಲಾಗಿದೆ.

ಈಗಿರುವ ನಿಯಮವೇನು?: ಮಂಗಳವಾರ ನಡೆದ ಸಂಪುಟ ಸಭೇಲಿ ಕರಡು ಮಸೂದೆಗೆ ಅನುಮೋದನೆ ನೀಡಲಾಗಿದೆ. ಕೇಂದ್ರ, ರಾಜ್ಯ ಸರ್ಕಾರದ ಸಚಿವರಿಗೂ ಹೊಸ ಕಾನೂನು ಅನ್ವಯವಾಗಲಿದೆ. ಹಿಂದಿನ ಕಾನೂನಲ್ಲಿ ಪಿಎಂ, ಕೇಂದ್ರ ಸಚಿವರ ವಜಾ ಮಾಡಲು ಅವಕಾಶ ಇದ್ದಿರಲಿಲ್ಲ. ಹಾಲಿ ನಿಯಮ ಪ್ರಕಾರ 2 ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರಷ್ಟೇ ವಜಾ ಮಾಡಲಾಗುತ್ತದೆ. ಈ ವಿಷಯದ ಬಗ್ಗೆ ವಿರೋಧ ಪಕ್ಷಗಳು ಇನ್ನೂ ಪ್ರತಿಕ್ರಿಯಿಸಿಲ್ಲ, ಆದರೆ ಈ ವಿಷಯದ ಬಗ್ಗೆ ಚರ್ಚಿಸಲು ಬುಧವಾರ ಬೆಳಿಗ್ಗೆ ಸಭೆ ಕರೆದಿದ್ದಾರೆ.

ಸರ್ಕಾರದ ಸುಗಮ ಕಾರ್ಯನಿರ್ವಹಣೆಗಾಗಿ ಪ್ರಸ್ತುತ ಆರೋಪಿ ಸಚಿವರು ಬಂಧನಕ್ಕೆ ಮುಂಚಿತವಾಗಿ ರಾಜೀನಾಮೆ ನೀಡುತ್ತಾರೆ. ಆದರೆ, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಕಳೆದ ವರ್ಷ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಸುಮಾರು ಆರು ತಿಂಗಳ ಕಾಲ ಜೈಲಿನಿಂದಲೇ ದೆಹಲಿ ಸರ್ಕಾರವನ್ನು ನಡೆಸಿದ್ದರು.