Asianet Suvarna News Asianet Suvarna News

ಕಾಂಗ್ರೆಸ್‌ ಸಂಸದ ಸಾಹು ಮನೇಲಿ 350 ಕೋಟಿ ರೂ., 3 ಕೆಜಿ ಚಿನ್ನ ವಶ, ಹಣ ಎಣಿಸಲು 200 ಜನ!

ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಅವರ ಕಂಪನಿ ಹಾಗೂ ಆಸ್ತಿಪಾಸ್ತಿಗಳಿಂದ 350 ಕೋಟಿ ರು.ಗೂ ಹೆಚ್ಚು ಹಣ ವಶಕ್ಕೆ. 6 ದಿನಗಳ ಬಳಿಕ ಪರಿಶೀಲನೆ ಮುಕ್ತಾಯ.  156 ಚೀಲಗಳಲ್ಲಿ ಸಿಕ್ಕಿದ್ದ ಹಣವನ್ನು ಎಣಿಸಲು 200 ಜನ ಹಾಗೂ 40 ನೋಟು ಎಣಿಕೆ ಯಂತ್ರ ಬಳಕೆ.

Income Tax raid  Odisha  Congress MP Dhiraj Sahu unearths Rs 350 crore seized gow
Author
First Published Dec 13, 2023, 9:52 AM IST

ಭುವನೇಶ್ವರ: ತೆರಿಗೆ ವಂಚನೆ ಆರೋಪದಡಿ ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದ ಹಾಗೂ ಮದ್ಯ ಉದ್ಯಮಿ ಧೀರಜ್‌ ಸಾಹುಗೆ ಸೇರಿದ್ದ ಒಡಿಶಾದ ಹಲವಾರು ಸಂಸ್ಥೆ ಮತ್ತು ಇತರ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯು ಈವರೆಗೆ ಒಟ್ಟು ಬರೋಬ್ಬರಿ 350 ಕೋಟಿ ರು.ಗೂ ಅಧಿಕ ಹಣ ಮತ್ತು 3 ಕೇಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.

ಈ ಮೂಲಕ ತನ್ನ 6 ದಿನಗಳ ನಿರಂತರ ಕಾರ್ಯಾಚರಣೆ ಹಾಗೂ ನೋಟುಗಳ ಎಣಿಕೆ ಕಾರ್ಯವನ್ನು ಪೂರ್ತಿಗೊಳಿಸಿದೆ. ಇದು ದೇಶದಲ್ಲೇ ಈವರೆಗೆ ತನಿಖಾ ಸಂಸ್ಥೆಯೊಂದು ವಶಪಡಿಸಿಕೊಂಡ ಬೃಹತ್‌ ಪ್ರಮಾಣದ ಹಣವಾಗಿದೆ.

30 ಕಪಾಟುಗಳು ಹಾಗೂ 156 ಚೀಲಗಳಲ್ಲಿ ಸಿಕ್ಕಿದ್ದ ಹಣವನ್ನು ಎಣಿಸಲು 200 ಜನ ಎಲ್ಲಾ ರೀತಿಯ ಸಿಬ್ಬಂದಿ ಹಾಗೂ 40 ನೋಟು ಎಣಿಕೆ ಯಂತ್ರಗಳನ್ನು ಬಳಸಿಕೊಳ್ಳಲಾಗಿತ್ತು.

ಧೀರಜ್ ಸಾಹು ಐಟಿ ದಾಳಿ ಕೇಸ್‌; ಇಂಡಿ ಒಕ್ಕೂಟ ಮೌನಕ್ಕೆ ಶರಣಾಗಿದೆ: ಅಮಿತ್‌ ಶಾ

 ಸಾಹು ಹಣ ಜಪ್ತಿಯನ್ನು ದರೋಡೆಗೆ ಹೋಲಿಸಿದ ಮೋದಿ : ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಅವರ ಕಂಪನಿ ಹಾಗೂ ಆಸ್ತಿಪಾಸ್ತಿಗಳಿಂದ 350 ಕೋಟಿ ರು.ಗೂ ಹೆಚ್ಚು ಹಣವನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ವಾಕ್‌ ಪ್ರಹಾರ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅನ್ನು ಜನಪ್ರಿಯ ಅಪರಾಧ ಧಾರಾವಾಹಿ ‘ಮನಿ ಹೀಸ್ಟ್‌’ಗೆ ಹೋಲಿಸಿದ್ದಾರೆ.

ಈ ಅಪರಾಧ ಸರಣಿಯು ಡಕಾಯಿತರ ಗುಂಪು ಭಾರಿ ಪ್ರಮಾಣದ ದರೋಡೆಗಳನ್ನು ನಡೆಸುವುದನ್ನು ಚಿತ್ರಿಸುತ್ತದೆ. ಈ ಬಗ್ಗೆ ಟ್ವೀಟ್‌ ಮಾಡಿದ್ದ ಬಿಜೆಪಿ, ‘ಕಾಂಗ್ರೆಸ್ ಪ್ರೆಸೆಂಟ್ಸ್ ದಿ ಮನಿ ಹೀಸ್ಟ್!’ ಎಂಬ ವಿಡಿಯೋವನ್ನು ಹಾಕಿಕೊಂಡಿತ್ತು. ಇದನ್ನು ರೀಪೋಸ್ಟ್‌ ಮಾಡಿ ಟ್ವೀಟರ್‌ನಲ್ಲಿ ಕಮೆಂಟ್‌ ಹಾಕಿರುವ ಮೋದಿ, ‘ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಿಂದ ದರೋಡೆ ನಡೆಸುತ್ತಿದೆ. ದರೋಡೆಯಲ್ಲಿ ಇವರು ದಂತಕತೆ ಕೂಡ ಆಗಿ ಹೋಗಿದ್ದಾರೆ. ಕಾಂಗ್ರೆಸ್‌ ಪಕ್ಷವು ಭಾರತದಲ್ಲಿ ಇರುವಾಗ ‘ಮನಿ ಹೀಸ್ಟ್‌’ನಂಥ ಕಾಲ್ಪನಿಕ ಧಾರಾವಾಹಿಯ ಅಗತ್ಯ ಇದೆಯೇ?’ ಎಂದು ವ್ಯಂಗ್ಯವಾಡಿದ್ದಾರೆ.

ಕೈ ಸಂಸದ ಸಾಹು ಬಳಿ 350 ಕೋಟಿ ಪತ್ತೆ: ಜನ ಹೇಗೆ ಕಪ್ಪುಹಣ ಸಂಗ್ರಹಿಸ್ತಾರೋ ಅರ್ಥ ಆಗಲ್ಲ ಎಂದಿದ್ದ ಹಳೆ ಟ್ವೀಟ್‌ ವೈರಲ್‌

ವಿಡಿಯೋದಲ್ಲೇನಿದೆ?: ‘ಕಾಂಗ್ರೆಸ್ ಪ್ರೆಸೆಂಟ್ಸ್ ದಿ ಮನಿ ಹೀಸ್ಟ್!’ ಎಂದು ಬಿಜೆಪಿ ಹಾಕಿಕೊಂಡಿರುವ ವಿಡಿಯೋದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ ಜತೆಗಿನ ಸಾಹು ಅವರ ಚಿತ್ರಗಳು ಮತ್ತು ಆದಾಯ ತೆರಿಗೆ ದಾಳಿಯ ಸಮಯದಲ್ಲಿ ವಶಪಡಿಸಿಕೊಂಡ ಹಣದ ರಾಶಿಯನ್ನು ತೋರಿಸುವ ದೃಶ್ಯಗಳಿವೆ. ಇದರಲ್ಲಿ ಮನಿ ಹೀಸ್ಟ್‌ ಜನಪ್ರಿಯ ಶೀರ್ಷಿಕೆ ಗೀತೆ ಹಿನ್ನೆಲೆಯಲ್ಲಿ ಪ್ಲೇ ಆಗುತ್ತದೆ.

ಕಾಂಗ್ರೆಸ್‌ ತಿರುಗೇಟು: ಮೋದಿ ಟ್ವೀಟ್‌ಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಪಕ್ಷ, ‘1947ರ ನಂತರ ಆಸ್ತಿ ಅತಿ ಹೆಚ್ಚಳ ಆಗಿದ್ದು, ಅದಾನಿ ಸಮೂಹದ್ದು. ಇದು ಸ್ವಾತಂತ್ರ್ಯಾನಂತರದ ಅತಿ ದೊಡ್ಡ ದರೋಡೆ. ಇದು ಹೇಗೆ ನಡೆಯಿತು ಎಂಬ ಬಗ್ಗೆ ಮೋದಿ ವಿವರಣೆ ನೀಡಬೇಕು’ ಎಂದು ಆಗ್ರಹಿಸಿದೆ.

Follow Us:
Download App:
  • android
  • ios