10 ಬುಲೆಟ್ಸ್ ಜೇಬನಲ್ಲಿ ಇಟ್ಕೊಂಡು ಪ್ರಿಯಕರನ ಭೇಟಿಗಾಗಿ ಜೈಲಿಗೆ ಬಂದ ಅಪ್ರಾಪ್ತೆ.. ಅನುಮಾನಗೊಂಡ ಪೊಲೀಸರು ಆಕೆಯನ್ನ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಕಾರಣ ನೀಡಿದ್ದಾಳೆ. ಅದನ್ನು ತಿಳಿದು ಪೊಲೀಸರು ಶಾಕ್ ಆಗಿದ್ದಾರೆ.. ಸ್ಟೋರಿಯ ವಿವರ ಇಲ್ಲಿದೆ.

ಗೊಂಡಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಜೈಲಿನಲ್ಲಿ ಪೊಲೀಸರನ್ನೇ ಬೆಚ್ಚಿಬೀಳಿಸಿದ ಘಟನೆ ನಡೆದಿದೆ. ತನ್ನ ಪ್ರಿಯಕರನನ್ನು ಭೇಟಿಯಾಗಲು ಜೈಲಿಗೆ ಬಂದಿದ್ದ ಶಾಲಾ ವಿದ್ಯಾರ್ಥಿನಿಯೊಬ್ಬಳ ಜೇಬಿನಲ್ಲಿ ಬರೋಬ್ಬರಿ 10 ಸಜೀವ ಗುಂಡುಗಳು (Live Cartridges) ಪತ್ತೆಯಾಗಿವೆ. ಸದ್ಯ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಡೆದಿದ್ದೇನು?

ಗೊಂಡಾದ ವಿಭಾಗೀಯ ಜೈಲಿನಲ್ಲಿ ಹರ್ಷು ಕಶ್ಯಪ್ ಎಂಬ ಕೈದಿಯನ್ನು ಭೇಟಿಯಾಗಲು ಅಪ್ರಾಪ್ತ ಬಾಲಕಿ ಮತ್ತು ಇನ್ನೊಬ್ಬ ವ್ಯಕ್ತಿ ಬಂದಿದ್ದರು. ಜೈಲಿನ ಮುಖ್ಯ ದ್ವಾರದಲ್ಲಿ ಕಡ್ಡಾಯ ಭದ್ರತಾ ತಪಾಸಣೆ ನಡೆಸುವಾಗ ಬಾಲಕಿಯ ನಡವಳಿಕೆ ಅನುಮಾನ ಮೂಡಿಸಿದೆ. ಆಕೆ ನೀಡಿದ ಹೆಸರು ಮತ್ತು ಅವಳ ಬಳಿ ಇದ್ದ ಆಧಾರ್ ಕಾರ್ಡ್‌ನಲ್ಲಿದ್ದ ಹೆಸರು ತಾಳೆಯಾಗಲಿಲ್ಲ. ಇದು ಜೈಲು ಸಿಬ್ಬಂದಿಯನ್ನು ಎಚ್ಚರಿಸಿತು.

ಅನುಮಾನಗೊಂಡ ಮಹಿಳಾ ಸಿಬ್ಬಂದಿ ಬಾಲಕಿಯನ್ನು ತಪಾಸಣೆ ನಡೆಸಿದಾಗ, ಅವಳ ಜೇಬಿನಲ್ಲಿ 10 ಸಜೀವ ಗುಂಡುಗಳು ಪತ್ತೆಯಾಗಿವೆ. ಇದರ ಜೊತೆಗೆ ನಕಲಿ ಆಧಾರ್ ಕಾರ್ಡ್ ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತಕ್ಷಣವೇ ಜೈಲರ್ ಅಫ್ತಾಬ್ ಆಲಂ ಅನ್ಸಾರಿ ಅವರು ಪೊಲೀಸರಿಗೆ ಮಾಹಿತಿ ನೀಡಿ ಬಾಲಕಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಬಾಲಕಿ ತನ್ನ ಅಸಲಿ ಗುರುತನ್ನು ಬಿಚ್ಚಿಟ್ಟಿದ್ದಾಳೆ. ಗುಂಡುಗಳ ಬಗ್ಗೆ ಕೇಳಿದಾಗ ಆಕೆ ನೀಡಿದ ಕಾರಣ ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಈ ಗುಂಡುಗಳು ನನ್ನ ತಂದೆಯ ಪರವಾನಗಿ ಹೊಂದಿದ ಪಿಸ್ತೂಲ್‌ನದ್ದು. ನನ್ನ ತಂದೆಗೆ ಸಿಟ್ಟು ಜಾಸ್ತಿ. ನಾನು ಜೈಲಿನಲ್ಲಿರುವ ಪ್ರಿಯಕರನನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎಂದು ಅವರಿಗೆ ತಿಳಿದರೆ, ಅವರು ಸಿಟ್ಟಿನಲ್ಲಿ ನನ್ನನ್ನು ಅಥವಾ ಯಾರನ್ನಾದರೂ ಶೂಟ್ ಮಾಡಬಹುದು ಎಂದು ಭಯವಿತ್ತು. ಹಾಗಾಗಿ ಅವರು ಅನಾಹುತ ಮಾಡಬಾರದು ಎಂಬ ಉದ್ದೇಶದಿಂದ ಪಿಸ್ತೂಲ್‌ನಲ್ಲಿದ್ದ ಗುಂಡುಗಳನ್ನು ತೆಗೆದು ನನ್ನ ಜೇಬಿನಲ್ಲಿಟ್ಟುಕೊಂಡು ಬಂದೆ ಎಂದು ಆಕೆ ಸಮರ್ಥಿಸಿಕೊಂಡಿದ್ದಾಳೆ.

ಸದ್ಯ ಪೊಲೀಸರು ಬಾಲಕಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು ನಕಲಿ ಆಧಾರ್ ಕಾರ್ಡ್ ಬಳಕೆ ಮತ್ತು ಸಜೀವ ಗುಂಡುಗಳನ್ನು ಅಕ್ರಮವಾಗಿ ಸಾಗಿಸಿದ ಆರೋಪದ ಮೇಲೆ ತನಿಖೆ ಮುಂದುವರಿಸಿದ್ದಾರೆ. ಜೈಲಿನಂತಹ ಅತೀ ಹೆಚ್ಚು ಭದ್ರತೆ ಇರುವ ಜಾಗಕ್ಕೆ ಗುಂಡುಗಳನ್ನು ತಂದಿರುವುದು ದೊಡ್ಡ ಸುರಕ್ಷತಾ ಲೋಪ ಎಂದೂ ಪರಿಗಣಿಸಲಾಗಿದೆ.