Asianet Suvarna News Asianet Suvarna News

ತಮಿಳುನಾಡಿನಲ್ಲಿ ಎಲ್ಲಾ ದಿವ್ಯಾಂಗರಿಗೆ ಶೀಘ್ರದಲ್ಲೇ ವರ್ಕ್‌ ಫ್ರಂ ಹೋಮ್‌!

ತಮಿಳುನಾಡು ರಾಜ್ಯದಲ್ಲಿ ಶೀಘ್ರದಲ್ಲಿಯೇ ಎಲ್ಲಾ ದಿವ್ಯಾಂಗರಿಗೆ ವರ್ಕ್‌ ಫ್ರಂ ಹೋಮ್‌ ಅವಕಾಶವನ್ನು ಸರ್ಕಾರ ಕಲ್ಪಿಸಲಿದೆ. ಸಶಕ್ತ ವಾತಾವರಣವನ್ನು ಸೃಷ್ಟಿಸಲು ರಾಜ್ಯ ಪ್ರಯತ್ನಿಸುತ್ತಿದೆ ಎಂದು ಸಿಎಂ ಸ್ಟ್ಯಾಲಿನ್‌ ಹೇಳಿದ್ದು, ಅಂಗವಿಕಲರಿಗೆ ಮಾಸಿಕ ಪಿಂಚಣಿ 1,500 ಕ್ಕೆ ಏರಿಕೆ ಮಾಡಿದ್ದಾರೆ.
 

In tamil Nadu All disabled may get to work from home soon san
Author
First Published Dec 5, 2022, 11:00 AM IST

ಚೆನ್ನೈ(ಡಿ.5): ಖಾಸಗಿ ಹಾಗೂ ಸರ್ಕಾರಿ ವಲಯದಲ್ಲಿ ಕೆಲಸ ಮಾಡುತ್ತಿರುವ ಪರ್ಸನ್‌ ವಿತ್‌ ಡಿಸೆಬೆಲಿಟೀಸ್‌ ಅಂದರೆ ದಿವ್ಯಾಂಗರಿಗೆ ಶೀಘ್ರದಲ್ಲಿಯೇ ವರ್ಕ್‌ ಫ್ರಂ ಹೋಮ್‌ ಅವಕಾಶವನ್ನು ಜಾರಿ ಮಾಡುವ ನಿಟ್ಟಿನಲ್ಲಿ ಚಿಂತನೆ ಮಾಡುತ್ತಿರುವುದಾಗಿ ತಮಿಳುನಾಡು ಸರ್ಕಾರ ಹೇಳಿದೆ. ಸಶಕ್ತ ವಾತಾವರಣವನ್ನು ನಿರ್ಮಾಣ ಮಾಡಲು ರಾಜ್ಯ ದೊಡ್ಟ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ದಿವ್ಯಾಂಗರಿಗೆ ಪ್ರತಿದಿನ ಕಚೇರಿಗೆ ಬಂದು ಕೆಲಸ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ಅವರಿಗೆ ಕೆಲಸ ಮಾಡಲು ಉತ್ತಮ ವಾತಾವರಣ ನಿರ್ಮಾಣ ಮಾಡುವ ದೃಷ್ಟಿಯಿಂದ ಶಾಶ್ವತವಾಗಿ ವರ್ಕ್‌ ಫ್ರಂ ಹೋಮ್‌ ಅವಕಾಶ ನೀಡುವ ಯೋಚನೆಯಲ್ಲಿರುವುದಾಗಿ ತಿಳಿಸಿದೆ. ಇದರ ಪೂರ್ವಭಾವಿಯಾಗಿ, ತಮಿಳುನಾಡು ಕೌಶಲ್ಯ ಅಭಿವೃದ್ಧಿ ನಿಗಮವು ವಿಕಲಚೇತನರಿಗೆ ನಾನ್ ಮುಧಲ್ವನ್ ಯೋಜನೆಯಡಿ ಸಾಫ್ಟ್‌ವೇರ್‌ನೊಂದಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುವ ಮೂಲಕ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶನಿವಾರ ಚೆನ್ನೈನಲ್ಲಿರುವ ವಿಕಲಾಂಗ ವ್ಯಕ್ತಿಗಳ ಅಂತಾರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು. 

ಅಂಗವಿಕಲರಿಗೆ ಸೂಕ್ತವಾದ ಉದ್ಯೋಗಾವಕಾಶಗಳನ್ನು ಗುರುತಿಸಲು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ತಜ್ಞರ ಸಮಿತಿಗಳು ಮತ್ತು ಉನ್ನತ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ಅಂಗವಿಕಲರು ತಮ್ಮ ಕೆಲಸದ ಸ್ಥಳದಲ್ಲಿ ಇತರರನ್ನು ಅವಲಂಬಿಸದೆ ಕೆಲಸ ಮಾಡುವ ಉದ್ಯೋಗಗಳನ್ನು ಒದಗಿಸಲು ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡುತ್ತವೆ ಎಂದು ಸ್ಟಾಲಿನ್ ಹೇಳಿದರು.

ದೃಷ್ಟಿ ವಿಕಲಚೇತನರು ಸೇರಿದಂತೆ 4,39,315 ಅಂಗವಿಕಲರಿಗೆ ಮಾಸಿಕ 1,000 ರೂಪಾಯಿ ಪಿಂಚಣಿ ನೀಡಲಾಗುತ್ತಿದ್ದು, 2023 ರ ಜನವರಿ 1 ರಿಂದ ಇದನ್ನು 1,500 ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಸಿಎಂ ಸನ್ಮಾನಿಸಿದರು.

"ಸಾಮಾಜಿಕ ನ್ಯಾಯವನ್ನು ತನ್ನ ತಳಹದಿಯಾಗಿ ಹೊಂದಿರುವ ಈ ಸರ್ಕಾರವು ಸಮಾಜದ ಎಲ್ಲಾ ವರ್ಗಗಳಿಗೆ, ವಿಶೇಷವಾಗಿ ಅಂಚಿನಲ್ಲಿರುವ ವರ್ಗದವರ ಸರ್ಕಾರವಾಗಿ ಮುಂದುವರಿಯುತ್ತದೆ ಮತ್ತು ಅವರಿಗಾಗಿ ಯೋಜನೆ ರೂಪಿಸಲಿದೆ' ಎಂದು ಸ್ಟಾಲಿನ್ ಹೇಳಿದರು. ವಿಕಲಚೇತನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಅಮರ ಸೇವಾ ಸಂಗಮದ ಸಂಸ್ಥಾಪಕ ರಾಮಕೃಷ್ಣನ್ ಹಾಗೂ ಇತರರ ಸೇವೆಯನ್ನು ಸ್ಮರಿಸಿದ ಸಿಎಂ, ಮರಿಯಪ್ಪನ್ ಮತ್ತು ಜೆರ್ಲಿನ್ ಅನಿಕಾ ಅವರು ತಮ್ಮ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಅಂಗವಿಕಲರು, 80 ದಾಟಿದ ವೃದ್ಧರಿಗೆ ಅಂಚೆ ಮತ ಅವಕಾಶ

ಮೈಲಾಡುತುರೈ ಜಿಲ್ಲೆಯ ಸಮಾಜ ಸೇವಕಿ ಜಯಂತಿ ಉದಯಕುಮಾರ್, ತಿರುಚ್ಚಿಯ ಇಂಟಿಗ್ರೇಟೆಡ್ ಆಕ್ಷನ್ ಟ್ರಸ್ಟ್ (ಇಂಟ್ಯಾಕ್ಟ್), ಲೂಸಿ ಕ್ರೆಸೆಂಟಿಯಾ ವಿಶೇಷ ಶಾಲೆ ಮತ್ತು ಕೈಗಾರಿಕಾ ತರಬೇತಿ ಕೇಂದ್ರದ ಶಿಕ್ಷಕಿ ಎಂ ಕವಿತಾ, ಮೈಲಾಪುರದ ಸಿಎಸ್‌ಐ ಕಿವುಡರ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕ ವಿ ಜೇಮ್ಸ್ ಆಲ್ಬರ್ಟ್ ಹಾಗೂ ಸಿರುಮಲರ್ ಹೈಯರ್ ಸೆಕೆಂಡರಿ ದೃಷ್ಟಿ ವಿಕಲಚೇತನರ ಶಾಲೆಯ ಶಿಕ್ಷಕಿ ಜಿ ಮಾರ್ಗರೆಟ್ ಅವರಿಗೆ  ಅಂಗವಿಕಲರ ಕಲ್ಯಾಣಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಸಿಎಂ ಇದೇ ವೇಳೆ ಪ್ರಶಸ್ತಿ ಪ್ರದಾನ ಮಾಡಿದರು. ತೆಂಕಶಿ ಜಿಲ್ಲೆಯ ಅಮರ್ ಸೇವಾ ಸಂಗಮ್‌ನ ಸುಲೋಚನಾ ಗಾರ್ಡನ್ಸ್ ಮತ್ತು ತಿರುಚ್ಚಿಯ ಸ್ಪಾಸ್ಟಿಕ್ಸ್ ಸೊಸೈಟಿಯು ಅಂಗವಿಕಲರಿಗೆ ತಮ್ಮ ಅಮೋಘ ಸೇವೆಗಾಗಿ ಪ್ರಶಸ್ತಿ ಪಡೆದ ಸಂಸ್ಥೆಗಳಲ್ಲಿ ಸೇರಿವೆ. ಪ್ರಶಸ್ತಿ ಪಡೆದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

Covid Threat: ಕೇಂದ್ರ ಸರ್ಕಾರದ ಸಿಬ್ಬಂದಿಗೆ ವಿನಾಯ್ತಿ!

ಸಮಿತಿ ರಚನೆ: ಅಂಗವಿಕಲರಿಗೆ ಸೂಕ್ತ ಉದ್ಯೋಗಾವಕಾಶಗಳನ್ನು ಗುರುತಿಸಲು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ತಜ್ಞರ ಸಮಿತಿಗಳು ಮತ್ತು ಉನ್ನತ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದರು.

Follow Us:
Download App:
  • android
  • ios