ಬೆಂಗಳೂರು, (ಏ.15): ಇಡೀ ಪ್ರಪಂಚದಲ್ಲಿಯೇ ಕೊರೋನಾದ್ದೇ ಆರ್ಭಟವಾಗ್ಬಿಟ್ಟಿದೆ. ಈ ಮಾಹಾಮಾರಿಯಿಂದ ಭಾರತದಲ್ಲಿ ಮೇ.3ರ ವರಗೆ ಲಾಕ್‌ಡೌನ್ ಹೇರಲಾಗಿದ್ದು, ಸಂಕಷ್ಟದಲ್ಲಿ ಸಿಲುಕಿರೋ ದೇಶದ ಬೆನ್ನೆಲುಬು ಕಸುಬಿಗೆ ವಿನಾಯಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಕೊಂಚ ಉಸಿರು ಬಿಡುವಂತಾಗಿದೆ. 

ಇದೇ ಸಂದರ್ಭದಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ನೈಋತ್ಯ ಮಾನ್ಸೂನ್‌ನ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ. 

ಕೊರೋನಾ ಕಾಟಕ್ಕೆ ಸುಸ್ತಾದ ಅನ್ನದಾತ: ಇನ್ನೂ ಮುಗಿಯದ ರೈತರ ಗೋಳು!

ಪ್ರತಿ ವರ್ಷ ಏಪ್ರಿಲ್ ಮತ್ತು ಜೂನ್ ಈ ಎರಡು ತಿಂಗಳಲ್ಲಿ ಹವಾಮಾನ ಇಲಾಖೆ ದೇಶಾದ್ಯಂತ ಮಾನ್ಸೂನ್ ಪರಿಸ್ಥಿತಿಗಳ ಕುರಿತು ತನ್ನ ಅಂದಾಜು ವರದಿಯನ್ನು ನೀಡುತ್ತದೆ. ಅದರಂತೆ ಇಂದು (ಬುಧವಾರ) ಭಾರತೀಯ ಹವಾಮಾನ ಇಲಾಖೆ ಮಾನ್ಸೂನ್‌ಗಾಗಿ ತನ್ನ ದೀರ್ಘಾವಧಿಯ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ.

ವರದಿ ಪ್ರಕಾರ ಈ ವರ್ಷ ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿರಲಿದೆ ಎಂದು ಹೇಳಿದ್ದು, ಜೂನ್-ಸೆಪ್ಟೆಂಬರ್ ಮಧ್ಯೆ ಶೇ.100ರಷ್ಟು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. 

ಭಾರತದಲ್ಲಿ ಕಳೆದ 50 ವರ್ಷಗಳ ಸರಾಸರಿ ಮುಂಗಾರು ಮಳೆ ಪ್ರಮಾಣ ಶೇ.96ನಿಂದ ಶೇ.104ರ ನಡುವೆ ಇದೆ. ಈ ವರ್ಷ ಇದರ ಪ್ರಮಾಣ ಶೇ.100ರಷ್ಟು ನಿರೀಕ್ಷಿಸಲಾಗಿದೆ. 4 ತಿಂಗಳ ಅವಧಿಯ ಮುಂಗಾರು ಜೂನ್‌ನಿಂದ ಆರಂಭಗೊಳ್ಳಲಿದೆ ಎಂದು ವರದಿ ತಿಳಿಸಿದೆ.

ಅಲ್ಲದೇ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ಭಾರತ ಏಷ್ಯಾದ ಮೂರನೇ ಅತಿದೊಡ್ಡ ಕೃಷಿ ಉತ್ಪನ್ನ ಆರ್ಥಿಕತೆಯಾಗಿ ಹೊರಹೊಮ್ಮುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದು ದೇಶದ ರೈತರಲ್ಲಿ ಭರವಸೆ ಮೂಡಿಸಿದೆ.