2 ವರ್ಷದ ಹಿಂದೆ ರಾಜಕೀಯ ಪ್ರವೇಶ, ಮಾಜಿ IAS ಅಧಿಕಾರಿಗೆ ಮಹತ್ವದ ಖಾತೆ ಸಿಕ್ಕಿದ್ದು ಹೀಗೆ!
* ಮಾಜಿ ಐಎಎಸ್ ಅಧಿಕಾರಿಗೆ ಮಹತ್ವದ ಖಾತೆ
* ರೈಲ್ವೇ ಖಾತೆ ಪಡೆದ ಅಶ್ವಿನಿ ವೈಷ್ಣವ್ ಬಗ್ಗೆ ಕುತೂಹಲಕಾರಿ ಮಾಹಿತಿ
* ಹಲವಾರು ಸವಾಲುಗಳನ್ನು ಸಮರ್ಪಕವಾಗಿ ಎದುರಿಸಿರುವ ಅಶ್ವಿನಿ ವೈಷ್ಣವ್
ನವದೆಹಲಿ(ಜು.08): ಪ್ರಧಾನ ಮಂತ್ರಿ ಮೋದಿ ಕ್ಯಾಬಿನೆಟ್‌ಗೆ ನೂತನ ಸಚಿವರ ಆಯ್ಕೆ ಆಗಿದ್ದು ಖಾತೆ ಹಂಚಿಕೆಯೂ ನಡೆದಿದೆ. ದೇಶದ ಪ್ರಮುಖ ಸಚಿವಾಲಯಗಳಲ್ಲೊಂದಾಗಿರುವ ರೈಲ್ವೇ ಸಚಿವಾಲಯದ ಜವಾಬ್ದಾರಿ ಮಾಜಿ ಐಎಎಸ್ ಅಧಿಕಾರಿ ಹೆಗಲು ಸೇರಿದೆ. ಅಶ್ವಿನಿ ವೈಷ್ಣವ್ ಅವರಿಗೆ ರೈಲ್ವೇ ಜೊತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೊಣೆಯನ್ನೂ ವಹಿಸಲಾಗಿದೆ. ಮಾಜಿ ನಾಗರಿಕ ಸೇವಾ ಅಧಿಕಾರಿ ಬುಧವಾರ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇನ್ನು ಒಡಿಶಾ ರಾಜ್ಯದಿಂದ ರಾಜ್ಯಸಭಾ ಸದಸ್ಯರಾಗಿರುವ ಅಶ್ವಿನಿ ವೈಷ್ಣವ್ ಅಧಿಕಾರವಹಿಸಿಕೊಂಡ ಬಳಿಕ ಪ್ರತಿಕ್ರಿಯಿಸಿದ್ದು, '67 ವರ್ಷಗಳಲ್ಲಿ ರೈಲ್ವೆ ಸಚಿವಾಲಯದಲ್ಲಿ ಅತ್ಯುತ್ತಮ ಕಾರ್ಯಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಯೋಜನೆಗಳನ್ನು ಪರಿಪೂರ್ಣಗೊಳಿಸಲು ನಾನು ಪ್ರಯತ್ನಿಸುತ್ತೇನೆ‘ ಎಂದಿದ್ದಾರೆ. ಇನ್ನು ಈವರೆಗೆ ಒಂದು ಬಾರಿಯೂ ಸಚಿವರಾಗಿ ಅನುಭವ ಇಲ್ಲದ ವೈಷ್ಣವ್‌ರವರಿಗೆ ಇಷ್ಟೊಂದು ಮಹತ್ವದ ಖಾತೆಗಳನ್ನು ವಹಿಸಿರುವುದು ಅನೇಕರಲ್ಲಿ ಕುತೂಹಲ ಮೂಡಿಸಿದೆ. ಹೀಗಿರುವಾಗ ಅಶ್ವಿನಿ ವೈಷ್ಣವ್ ಕುರಿತಾಗಿ ಕೆಲ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ಅಶ್ವಿನಿ ವೈಷ್ಣವ್(50): ರೈಲ್ವೆ, ಸಂಪರ್ಕ, ಐಟಿ
ರಾಜ್ಯ: ಒಡಿಶಾ
ವಿದ್ಯಾರ್ಹತೆ: ಎಂಬಿಎ, ಎಂಟೆಕ್
ಅನುಭವ:
- 1994ರಿಂದ 15 ವರ್ಷ ಐಎಎಸ್ ಅಧಿಕಾರಿ
- ಮೂಲಸೌಕರ‍್ಯ ಯೋಜನೆಯಲ್ಲಿ ಖಾಸಗಿ ಸಹಭಾಗಿತ್ವದ ರೂವಾರಿ
ಅಷ್ಟಕ್ಕೂ 50 ವರ್ಷದ ಅಶ್ವಿನಿ ವೈಷ್ಣವ್‌ಗೆ ಮೋದಿ ಸರ್ಕಾರ ಇಷ್ಟು ಮಹತ್ವದ ಜವಾಬ್ದಾರಿ ಏಕಾಏಕಿ ನೀಡಿದ್ದಲ್ಲ. ಎರಡು ವರ್ಷದ ಹಿಂದೆಯೇ ಈ ವಿಚಾರವಾಗಿ ಲೆಕ್ಕಾಚಾರ ನಡೆದಿತ್ತು. ಇನ್ನು ಶಿಕ್ಷಣದ ವಿಚಾರದಲ್ಲೂ ಬಹುತೇಕ ಸಚಿವರಿಗಿಂತ ಹೆಚ್ಚು ಶಿಕ್ಷಿತರಾಗಿರುವ ಅಶ್ವಿನಿ ವೈಷ್ಣವ್ ಎಂಜಿನಿಯರಿಂಗ್ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ. ಅಲ್ಲದೇ ಐಐಟಿ ಕಾನ್ಪುರದಿಂದ ಎಂಟೆಕ್ ಪದವಿ ಗಳಿಸಿದ್ದಾರೆ. ಇವೆಲ್ಲಕ್ಕೂ ಮಿಗಿಲಾಗಿ 1994ರಲ್ಲಿ ಅವರು ಐಎಎಸ್ ಮಾಡಿರುವ ಅಶ್ವಿನಿ ವೈಷ್ಣವ್ 27 ಶ್ರೇಣಿಯಲ್ಲಿ ಪಾಸಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಸಮೃದ್ಧ, ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಪಣ; 43 ನೂತನ ಸಚಿವರಿಗೆ ಪ್ರಧಾನಿ ಮೋದಿ ಕಿವಿಮಾತು!
ಐಎಎಸ್ ಪಾಸಾದ ಅಶ್ವಿನಿ ವೈಷ್ಣವ್ ಒಡಿಶಾದ ಬಲಾಸೋರ್ ಮತ್ತು ಕಟಕ್ನಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಬಳಿಕ 1999ರಲ್ಲಿ ಒಡಿಶಾಗೆ ಸೂಪರ್ ಸೈಕ್ಲೋನ್ ಅಪ್ಪಳಿಸಿದ್ದ ವೇಳೆ ಅಶ್ವಿನಿ ವೈಷ್ಣವ್ ಕಾರ್ಯ ವೈಖರಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಅಮೆರಿಕದ ನೇವಿ ವೆಬ್ಸೈಟ್ನಲ್ಲಿ ಚಂಡಮಾರುತವನ್ನು ನಿರಂತರವಾಗಿ ತಾವೇ ಖುದ್ದಾಗಿ ಟ್ರ್ಯಾಕ್ ಮಾಡಿ, ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರತೀ ತಾಸಿಗೊಮ್ಮೆ ಮಾಹಿತಿ ನೀಡುತ್ತಿದ್ದರು. ಇವರು ಕೊಟ್ಟ ಮಾಹಿತಿಯಿಂದ ಒಡಿಶಾ ಸರ್ಕಾರ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಿತ್ತು. ಇವರ ಪ್ರಾಮಾಣಿ ಹಾಗೂ ಕಾರ್ಯ ವೈಖರಿಗೆ ಸ್ವತಃ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಪ್ರಶಂಸೆ ವ್ಯಕ್ತಪಡಿಸಿತ್ತು.
ಬಳಿಕ 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರಾವಧಿಯಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ ಉಪ ಕಾರ್ಯದರ್ಶಿಯಾದರು. ಈ ಅವಧಿಯಲ್ಲಿ ಸರ್ಕಾರ ಮೂಲಭೂತ ಸೌಕರ್ಯ ಯೋಜನೆಗಳಿಗಾಗಿ ರೂಪಿಸಿದ ಪಿಪಿಪಿ ಮಾದರಿ ಪ್ಲಾನ್ ಹಿಂದೆ ಅಶ್ವಿನಿ ವೈಷ್ಣವ್‌ರದ್ದೇ ಎನ್ನಲಾಗಿದೆ. ಬಳಿಕ ವಾಜಪೇಯಿ ಅವರಿಗೆ ಪಿಎ ಆಗಿ ಎರಡು ವರ್ಷ ಆಗಿ ಸೇವೆ ಸಲ್ಲಿಸಿದರು.
ಹರ್ಷವರ್ಧನ್, ಜಾವ್ಡೇಕರ್, ರವಿಶಂಕರ್ ಪ್ರಸಾದ್ ಅಚ್ಚರಿಯ ರಾಜೀನಾಮೆ!
2008ರಲ್ಲಿ ಅಶ್ವಿನಿ ವೈಷ್ಣವ್ ಅಮೆರಿಕಕ್ಕೆ ತೆರಳಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಗಳಿಸಿದರು. ಬಳಿಕ ಭಾರತಕ್ಕೆ ಮರಳಿ ಜಿಇ ಟ್ರಾನ್ಸ್ಪೋರ್ಟೇಶನ್ ಕಂಪನಿಗೆ ಎಂಡಿಯಾಗಿ ಸೇರ್ಪಡೆಯಾದರು. ತದ ನಂತರ ಸೀಮನ್ಸ್‌ನ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. 2012ರಲ್ಲಿ ಕಾರ್ಪೊರೇಟ್ ಸೆಕ್ಟರ್ನಿಂದ ಹೊರಬಂದ ಅವರು ಗುಜರಾತ್ನಲ್ಲಿ ವಾಹನ ಬಿಡಿಭಾಗಗಳ ಉತ್ಪಾದನೆಗಾಗಿ ಮೂರ್ನಾಲ್ಕು ಕಂಪನಿಗಳನ್ನು ಸ್ಥಾಪಿಸಿದರು. ಈ ಅನುಭವ ಅಶ್ವಿನಿ ವೈಷ್ಣವ್ ಅವರಿಗೆ ತಮ್ಮ ರೈಲ್ವೆ ಖಾತೆ ಸಮರ್ಪಕವಾಗಿ ನಿರ್ವಹಿಸಲು ಸಹಾಯವಾಗಲಿದೆ.