ಚೆನಾಬ್ ರೈಲ್ವೆ ಸೇತುವೆ ಯೋಜನೆಯಲ್ಲಿ ತಮ್ಮ ಪಾತ್ರವನ್ನು ಕಡಿಮೆ ಮಾಡಲು ಡಾ. ಜಿ. ಮಾಧವಿ ಲತಾ ಮನವಿ ಮಾಡಿದ್ದಾರೆ. ಸೇತುವೆಯ ನಿರ್ಮಾಣದಲ್ಲಿ ಸಾವಿರಾರು ಜನರ ಕೊಡುಗೆಯನ್ನು ಅವರು ಶ್ಲಾಘಿಸಿದ್ದಾರೆ ಮತ್ತು ತಮ್ಮನ್ನು 'ಹೀರೋ' ಎಂದು ಬಿಂಬಿಸಬಾರದು ಎಂದು ವಿನಂತಿಸಿದ್ದಾರೆ.
ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಾಧ್ಯಾಪಕಿ ಡಾ. ಜಿ. ಮಾಧವಿ ಲತಾ ಅವರು ಚೆನಾಬ್ ರೈಲ್ವೆ ಸೇತುವೆಯ ಅಭಿವೃದ್ಧಿಯಲ್ಲಿ ನನ್ನನ್ನು ಹಿರೋ ಮಾಡಬೇಡಿ. ಈ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ ಪ್ರತಿಯೊಬ್ಬ ಕೆಲಸಗಾರರಿಗೆ ಗೌರವ ಸಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಸೇತುವೆಯ ನಿರ್ಮಾಣ ಸಿವಿಲ್ ಎಂಜಿನಿಯರಿಂಗ್‌ನ ಅದ್ಭುತ ಸಾಧನೆಯೆಂದು ವರ್ಣಿಸಿದ್ದು, ಈ ಐಕಾನಿಕ್ ಸೇತುವೆಯ ನಿರ್ಮಾಣಕ್ಕೆ ತಮ್ಮದೇ ರೀತಿಯಲ್ಲಿ ಮಹತ್ವದ ಕೊಡುಗೆ ನೀಡಿದ ಸಾವಿರಾರು ಜನರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ನನ್ನನ್ನು ಈ ಕಾರ್ಯದಲ್ಲಿ ಅನಗತ್ಯವಾಗಿ ಹೀರೋ ತರ ಬಣ್ಣಿಸಬೇಡಿ, ನಾನೊಬ್ಬಳೇ ಅಲ್ಲ ನನಗಿಂತ ಹೆಚ್ಚು ಸಾವಿರಾರು ಜನರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸೇತುವೆ ಮಿಷನ್‌ನ ಹಿಂದೆ ಮಹಿಳೆ, ಅಸಾಧ್ಯವನ್ನೂ ಸಾಧ್ಯವನ್ನಾಗಿ ಮಾಡಿದಾಕೆ, ಸೇತುವೆ ನಿರ್ಮಾಣದಲ್ಲಿ ಅದ್ಭುತಗಳನ್ನು ಮಾಡಿದಾಕೆ ಎಂಬ ಹೇಳಿಕೆಗಳು ಎಲ್ಲವೂ ಆಧಾರ ರಹಿತವಾಗಿದೆ. ದಯವಿಟ್ಟು ನನ್ನ ಖಾಸಗಿತನವನ್ನು ಗೌರವಿಸಬೇಕೆಂದು ವಿನಂತಿಸುತ್ತೇನೆ ಎಂದು ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ಬರೆದುಕೊಂಡಿದ್ದಾರೆ.
ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ಬರೆದುಕೊಂಡಿದ್ದೇನು?
ಭಾರತದ ಚೆನಾಬ್ ರೈಲ್ವೆ ಸೇತುವೆ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಜಿಯವರಿಗೆ ಹಾರ್ದಿಕ ಅಭಿನಂದನೆಗಳು. ಈ ಸೇತುವೆ ನಾಗರಿಕ ಇಂಜಿನಿಯರಿಂಗ್‍ನ ಅದ್ಭುತ ಸಾಧನೆ. ಈ ಐಕಾನಿಕ್ ಸೇತುವೆಯ ಯೋಜನೆ, ವಿನ್ಯಾಸ ಮತ್ತು ನಿರ್ಮಾಣದ ಸಂಪೂರ್ಣ ಶ್ರೇಯಸ್ಸು ಭಾರತೀಯ ರೈಲ್ವೆ ಮತ್ತು ಎಎಫ್‌ಕಾನ್ಸ್ (AFCONS) ಸಲ್ಲುತ್ತದೆ. ಸಾವಿರಾರು ಜನರು ವಿವಿಧ ರೀತಿಯಲ್ಲಿ ತಮ್ಮ ಅಪಾರವಾದ ಕೊಡುಗೆಯನ್ನು ನೀಡಿರುವುದು ಉಲ್ಲೇಖಿಸಬೇಕಾದ ವಿಷಯ. ಈ ಸೇತುವೆಯ ನಿರ್ಮಾಣದಲ್ಲಿ ಸಾವಿರಾರು ಕಾಣದ ಹೀರೋಗಳಿದ್ದಾರೆ. ನಾನು ಇಂದು ಅವರಿಗೆ ನಮನ ಸಲ್ಲಿಸುತ್ತೇನೆ.
ನಾನು ಎಎಫ್‌ಕಾನ್‌ಸ್‌ಗೆ ಜಿಯೋ ಟೆಕ್ನಿಕಲ್ ಸಲಹೆಗಾರರಾಗಿ Slope stabilization (ಇಳಿಜಾರು ಸ್ಥಿರೀಕರಣ- ಅಂದರೆ ಬೆಟ್ಟ ಗುಡ್ಡದಲ್ಲಿ ಭೂಕುಸಿತವನ್ನು ತಡೆಯುವುದು) ಮತ್ತು Inclined Foundations (ಇಳಿಜಾರಿಗೆ ಗಟ್ಟಿ ಅಡಿಪಾಯ) ವಿನ್ಯಾಸದಲ್ಲಿ ಸಹಾಯ ಮಾಡಿದೆ. ಈ ಯೋಜನೆಯ ಹಿಂದಿರುವ ಮಹಿಳೆ, ಅಸಾಧ್ಯವನ್ನು ಸಾಧ್ಯ ಮಾಡಿದ್ದು, ಆಶ್ಚರ್ಯ ಸೃಷ್ಟಿಸಿದೆ ಎಂಬ ಮಾಧ್ಯಮ ಹೇಳಿಕೆಗಳು ಆಧಾರ ರಹಿತವಾಗಿವೆ.
ಹೆಚ್ಚಿನ ಹೆಣ್ಣು ಮಕ್ಕಳ ತಂದೆಯವರು ನನಗೆ ಪತ್ರ ಬರೆದು ತಮ್ಮ ಮಗಳು ನನ್ನಂತೆ ಆಗಬೇಕು ಎಂದು ಬರೆದಿದ್ದಾರೆ. ಹಲವಾರು ಮಕ್ಕಳೂ ನನಗೆ ಸಂದೇಶ ಕಳಿಸಿ, ಈಗ ಅವರು ಸಿವಿಲ್ ಇಂಜಿನಿಯರಿಂಗ್‌ನ್ನು ತಮ್ಮ ವೃತ್ತಿಯಾಗಿ ಆರಿಸಬೇಕು ಎಂಬ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಕೇಳಿ ನನಗೆ ಬಹಳ ಸಂತೋಷವಾಗಿದೆ. ಚೆನಾಬ್ ಸೇತುವೆ ನಿರ್ಮಾಣದಲ್ಲಿ ನಾನೂ ಸಹ ಅಭಿನಂದನೆಗೆ ಪಾತ್ರನಾಗಿರುವ ಸಾವಿರ ಕೆಲಸಗಾರಲ್ಲಿ ಒಬ್ಬಳು ಮಾತ್ರ. ದಯವಿಟ್ಟು ನನ್ನನ್ನು ಅನಾವಶ್ಯಕವಾಗಿ ಪ್ರಸಿದ್ಧಿಯಾಗಿಸಬೇಡಿ. ನಾನು ಈಗ ಸ್ಪೇನ್‌ನಲ್ಲಿ ಒಂದು ಸಮ್ಮೇಳನಕ್ಕೆ ಹಾಜರಾಗಿರುವೆ. ದಯವಿಟ್ಟು ನನ್ನ ಖಾಸಗಿತನವನ್ನು ಕಾಪಾಡಿ. ಈ ಸಾಧನೆಯ ಎಲ್ಲಾ ಶ್ರೇಯಸ್ಸು ಭಾರತೀಯ ರೈಲ್ವೆಗೆ ಸಲ್ಲುತ್ತದೆ ಎಂದು ಬರೆದುಕೊಂಡಿದ್ದಾರೆ.
ಈ ಮಹತ್ತರ ಯೋಜನೆಯಲ್ಲಿನ ಡಾ. ಲತಾ ಅವರ ಪಾತ್ರ ಸುಲಭವಿರಲಿಲ್ಲ. ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಅವರು ಕಠಿಣ ಹವಾಮಾನ, ಸವಾಲಿನಿಂದ ಕೂಡಿದ ಭೌಗೋಳಿಕ ಪ್ರದೇಶ ಹಾಗೂ ಪರ್ವತದ ಕಠಿಣ ಪರಿಸ್ಥಿತಿಗಳನ್ನು ಧೈರ್ಯವಾಗಿ ಎದುರಿಸಿದರು. ಐಫೆಲ್ ಟವರ್‌ಗಿಂತಲೂ ಎತ್ತರದಲ್ಲಿರುವ ಈ ಸೇತುವೆಗೆ ಬಲವರ್ಧಿತ ಸುರಕ್ಷತೆ ಮತ್ತು ದೀರ್ಘಕಾಲಿಕ ಬಾಳಿಕೆ ನೀಡಲು ಅತ್ಯಂತ ನಿಖರವಾದ ತಾಂತ್ರಿಕ ಯೋಜನೆ ಹಾಗೂ ಎಂಜಿನಿಯರಿಂಗ್ ಅಗತ್ಯವಿತ್ತು. ಡಾ. ಲತಾ ಅವರು ಪ್ರಸ್ತುತ ಐಐಎಸ್ಸಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು, ಅಲ್ಲಿಯ ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಅಧ್ಯಕ್ಷೆಯಾಗಿ ಸಹ ಸೇವೆ ಸಲ್ಲಿಸುತ್ತಿದ್ದಾರೆ.
