Asianet Suvarna News Asianet Suvarna News

ನಾನ್‌ ವೆಜ್‌ ತಿಂದರೆ ಕೆಟ್ಟ ಕೆಲಸ ಮಾಡುತ್ತೀರ: RSS ಮುಖ್ಯಸ್ಥ ಮೋಹನ್‌ ಭಗವತ್‌ ವಿವಾದ

RSS Chief Mohan Bhagwat: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಗವತ್‌ ಮಾಂಸಾಹಾರಿಗಳ ಕುರಿತು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ತಾಮಸಿ ಆಹಾರ ಸೇವನೆ ತಪ್ಪು ಹಾದಿ ಹಿಡಿಯುವಂತೆ ಮಾಡುತ್ತದೆ. ಮಾಂಸಾಹಾರ ಸೇವನೆ ಹಿಂಸಾತ್ಮಕ ಕೃತ್ಯಕ್ಕೆ ಪ್ರೇರೇಪಿಸುತ್ತದೆ ಎಂದು ಅವರು ಹೇಳಿದ್ದಾರೆ. 

if you eat wrong food you will end up doing wrong RSS chief Mohan Bhagwat's remark on non veg eaters
Author
First Published Sep 30, 2022, 11:13 AM IST

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಗವತ್‌ (RSS Chief Mohan Bhagwat) ಗುರುವಾರ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಯಾರೂ ತಪ್ಪು ಆಹಾರವನ್ನು ಸೇವಿಸಬಾರದು, ತಪ್ಪು ಆಹಾರ ಸೇವನೆ ಹಿಂಸೆಗೆ ಪ್ರಚೋದನೆ ನೀಡುತ್ತದೆ ಎಂದು ಅವರು ಪರೋಕ್ಷವಾಗಿ ನಾನ್‌ ವೆಜ್‌ ತಿನ್ನಬೇಡಿ ಎಂಬ ಕರೆ ಕೊಟ್ಟಿದ್ದಾರೆ. ಭಾರತ್‌ ವಿಕಾಸ್‌ ಮಂಚ್‌ (Bharat Vikas Manch) ಎಂಬ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮೋಹನ್‌ ಭಗವತ್‌ ಈ ಹೇಳಿಕೆಯನ್ನು ನೀಡಿದ್ದಾರೆ. ವ್ಯಕ್ತಿತ್ವ ವಿಕಸನ ಕುರಿತು ಮಾತನಾಡುವಾಗ ತಿನ್ನುವ ಆಹಾರ ವ್ಯಕ್ತಿಯ ಹಿಂಸಾತ್ಮಕ ಕೃತ್ಯಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ. 

ಪಿಟಿಐ ವರದಿಯ ಪ್ರಕಾರ, "ನೀವು ತಪ್ಪು ಆಹಾರ ಪದಾರ್ಥ ಸೇವಿಸಿದರೆ, ಅದು ನಿಮ್ಮನ್ನು ತಪ್ಪು ಹಾದಿಯಲ್ಲಿ ಹೋಗುವಂತೆ ಮಾಡುತ್ತದೆ. ತಾಮಸಿ ಗುಣಗಳಿರುವ ಆಹಾರವನ್ನು ಯಾರೂ ಸೇವಿಸಬಾರದು. ಹಿಂಸೆ ತುಂಬಿರುವ ಆಹಾರ ಯಾರೂ ಸೇವಿಸಬಾರದು," ಎಂದು ಮೋಹನ್‌ ಭಗವತ್‌ ಹೇಳಿದ್ದಾರೆ. ತಾಮಸಿ ಆಹಾರವೆಂದರೆ ಮಾಂಸಾಹಾರ. ಪಾಶ್ಚಿಮಾತ್ಯ ದೇಶಗಳಲ್ಲಿ ಮಾಂಸಾಹಾರ ಸೇವಿಸುವವರು ಮತ್ತು ಭಾರತದಲ್ಲಿ ಮಾಂಸಾಹಾರ ಸೇವಿಸುವವರ ಬಗ್ಗೆಯೂ ಮೋಹನ್‌ ಭಗವತ್‌ ಹೋಲಿಕೆ ಮಾಡಿದ್ದಾರೆ. 

"ಪಾಶ್ಚಿಮಾತ್ಯ ದೇಶಗಳಲ್ಲಿ ಮಾಂಸಾಹಾರ ತಿನ್ನುವಂತೆ ನಮ್ಮ ದೇಶದಲ್ಲೂ ಮಾಂಸಾಹಾರ ಸೇವಿಸುತ್ತಾರೆ. ಎರಡಕ್ಕೂ ಹೋಲಿಸಿದರೆ ಭಾರತದಲ್ಲಿ ಮಾಂಸಾಹಾರ ಸೇವನೆ ಮಾಡುವವರು ಕೆಲವು ಕಟ್ಟುಪಾಡುಗಳನ್ನಾದರೂ ಪಾಲಿಸುತ್ತಾರೆ," ಎಂದು ಭಗವತ್‌ ಅಭಿಪ್ರಾಯ ಪಟ್ಟಿದ್ದಾರೆ. 

ಇದನ್ನೂ ಓದಿ: ಆರೆಸ್ಸೆಸ್‌ ಚೀಫ್‌ ಮೋಹನ್‌ ಭಾಗವತ್‌, ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿ: ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ!

"ಭಾರತದಲ್ಲಿ ಮಾಂಸಾಹಾರ ಸೇವನೆ ಮಾಡುವ ಜನ ಶ್ರಾವಣ ಮಾಸದಲ್ಲಿ ಸೇವಿಸುವುದಿಲ್ಲ. ಸೋಮವಾರ, ಮಂಗಳವಾರ, ಗುರುವಾರ ಅಥವಾ ಶನಿವಾರ ಸೇವಿಸುವುದಿಲ್ಲ. ಅವರೇ ಅವರ ಆಹಾರ ಪದ್ಧತಿಯ ಮೇಲೆ ನಿಯಮ ಮಾಡಿಕೊಂಡು ಹಿಡಿತ ಸಾಧಿಸಿದ್ದಾರೆ," ಎಂದು ಭಗವತ್‌ ಹೇಳಿದ್ದಾರೆ. ಇಡೀ ದೇಶ ಸದ್ಯ ನವರಾತ್ರಿ ಹಬ್ಬವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಮಾಂಸಾಹಾರವನ್ನು ಬಹುತೇಕ ಜನ ತಿನ್ನುವುದಿಲ್ಲ. ದಸರಾ ಸಂದರ್ಭದಲ್ಲಿ ಮಾಂಸಾಹಾರ ಸೇವನೆಯಿಂದ ದೂರ ಇರುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. 

ಶ್ರೀಲಂಕಾ - ಮಾಲ್ಡೀವ್ಸ್‌ಗೆ ಭಾರತದಿಂದ ಸಹಾಯ:
ಭಾರತದ ಅಸ್ಮಿತೆಯೇ ಆಧ್ಯಾತ್ಮ ಎಂದ ಮೋಹನ್‌ ಭಗವತ್‌, "ಶ್ರೀ ಲಂಕಾ ಮತ್ತು ಮಾಲ್ಡೀವ್ಸ್‌ ಸಮಸ್ಯೆಯಲ್ಲಿದ್ದಾಗ ಸಹಾಯಕ್ಕೆ ಮುಂದಾಗಿದ್ದು ಭಾರತ ದೇಶ ಮಾತ್ರ. ಮಿಕ್ಕ ದೇಶಗಳು ಉದ್ದಿಮೆಯ ಅವಕಾಶಕ್ಕಾಗಿ ಹಪಹಪಿಸುತ್ತಿದ್ದವು," ಎಂದಿದ್ದಾರೆ. "ಆದ್ಯಾತ್ಮ ಭಾರತದ ಅಸ್ಮಿತೆ. ಭಾರತ ಮಿಕ್ಕ ದೇಶಗಳಿಗೆ ಏನು ಹೇಳಿಕೊಡಬೇಕೆಂದರೆ ಅದು ಆಧ್ಯಾತ್ಮ ಮತ್ತು ಹೇಗೆ ಬದುಕಬೇಕು ಎಂಬುದು. ಆಧ್ಯಾತ್ಮವನ್ನು ನಮ್ಮ ದೇಶದ ಜನರ ಜೀವನಶೈಲಿಯ ಉದಾರಣೆಯ ಮೂಲಕವೇ ವಿವರಿಸಬೇಕು," ಎನ್ನುತ್ತಾರೆ ಮೋಹನ್‌ ಭಗವತ್‌. ಮುಂದುವರೆದ ಅವರು, "ಅಹಂಕಾರವಿಲ್ಲದೇ ಬದುಕುವುದೇ ನಮ್ಮ ಆತ್ಮ," ಎಂದರು.

ಇದನ್ನೂ ಓದಿ: ದೆಹಲಿ ಮಸೀದಿಯ ಮುಖ್ಯ ಇಮಾಮ್‌ ಭೇಟಿ ಮಾಡಿದ ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌!

ಚೀನಾ, ಅಮೆರಿಕಾ ಮತ್ತು ಪಾಕಿಸ್ತಾನದಂತ ದೇಶಗಳು ಶ್ರೀಲಂಕಾ ಕಡೆ ತಿರುಗಿ ನೋಡಿದ್ದು ಅಲ್ಲಿ ಉದ್ಯಮಕ್ಕೆ ಅವಕಾಶವಿದೆ ಎಂಬ ಕಾರಣಕ್ಕೆ ಎಂದು ಭಗವತ್‌ ಹೇಳಿದರು. 

Follow Us:
Download App:
  • android
  • ios