ತಿರುವನಂತಪುರ(ಸೆ.28): ದೇಶಾದ್ಯಂತ ಎರಡನೇ ಸುತ್ತಿನಲ್ಲಿ ಕೊರೋನಾ ಸೋಂಕು ವ್ಯಾಪಿಸುತ್ತಿರುವ ವರದಿಗಳ ಬೆನ್ನಲ್ಲೇ, ಜನತೆ ಕೋವಿಡ್‌ ನಿಯಮಗಳನ್ನು ಕಠಿಣವಾಗಿ ಪಾಲಿಸದೇ ಹೋದಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಲಾಕ್ಡೌನ್‌ ಘೋಷಣೆ ಮಾಡಬೇಕಾಗಿ ಬರಬಹುದು ಎಂದು ಕೇರಳದ ಆರೋಗ್ಯ ಸಚಿವೆ ಶೈಲಜಾ ಎಚ್ಚರಿಸಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವದಾದ್ಯಂತ ಎರಡನೇ ಹಂತದಲ್ಲಿ ಕೋವಿಡ್‌ ಹಬ್ಬುತ್ತಿದೆ. ರಾಜ್ಯದಲ್ಲೂ ಜನತೆ ಜವಾಬ್ದಾರಿಯುತ ವರ್ತನೆ ತೋರದೇ ಹೋದಲ್ಲಿ ಎರಡನೇ ಬಾರಿ ಲಾಕ್ಡೌನ್‌ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿ ಬರಲಿದೆ ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಕೋವಿಡ್‌ ಹೆಚ್ಚಲು, ವಿಪಕ್ಷಗಳು ಪದೇ ಪದೇ ನಡೆಸುತ್ತಿರುವ ಪ್ರತಿಭಟನೆಗಳು ಮತ್ತು ಅವರ ವರ್ತನೆಗಳು ಕೂಡಾ ಕಾರಣ ಎಂದು ಕಿಡಿಕಾರಿರುವ ಸಚಿವೆ ಶೈಲಜಾ, ರಾಜ್ಯದಲ್ಲಿ ಪ್ರತಿಭಟನೆಗಳು ಹೆಚ್ಚಿದಂತೆ ಕೋವಿಡ್‌ ಸೋಂಕಿತರ ಪ್ರಮಾಣವೂ ಹೆಚ್ಚುತ್ತಲೇ ಇದೆ.

ಎರಡನೇ ಹಂತದಲ್ಲಿ ಕೋವಿಡ್‌ ಪ್ರಸರಣ ತಡೆಯಲು ಹಲವು ದೇಶಗಳು ಮತ್ತೆ ಲಾಕ್ಡೌನ್‌ ವಿಧಿಸುತ್ತಿವೆ. ನಮ್ಮಲ್ಲಿಯೂ ಜನರ ಸಹಕಾರ ಸಿಗದೇ ಹೋದಲ್ಲಿ, ನಾವೂ ಕೂಡಾ ಅಂಥದ್ದೇ ಕ್ರಮ ಕೈಗೊಳ್ಳದೇ ಬೇರೆ ವಿಧಿಯೇ ಇಲ್ಲ ಎಂದು ಎಚ್ಚರಿಸಿದ್ದಾರೆ.

ದೇಶದಲ್ಲಿ ಮೊದಲ ಸೋಂಕು ಪ್ರಕರಣ ವರದಿಯಾಗಿದ್ದ ಕೇರಳ, ಆರಂಭದ ದಿನಗಳಲ್ಲಿ ಸೋಂಕನ್ನು ಯಶಸ್ವಿಯಾಗಿ ನಿಗ್ರಹಿಸಿದ್ದಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ಪಡೆದುಕೊಂಡಿತ್ತು. ಆದರೆ ವಿದೇಶದಿಂದ ಆಗಮಿಸಿದವರ ಸಂಖ್ಯೆ ಹೆಚ್ಚುತ್ತಲೇ ಹೊಸ ಪ್ರಕರಣ ಬೆಳಕಿಗೆ ಬರುವುದು ಹೆಚ್ಚಾಗಿತ್ತು. ಹಲವು ತಿಂಗಳ ಕಾಲ ದೈನಂದಿನ ಗರಿಷ್ಠ 1000 ಕೇಸು ದಾಖಲಾಗುತ್ತಿದ್ದ ಕೇರಳದಲ್ಲಿ, ಕಳೆದೊಂದು ತಿಂಗಳಿನಿಂದ ನಿತ್ಯ 2000-4000 ಕೇಸು ವರದಿಯಾಗುತ್ತಿದ್ದವು. ಆದರೆ ಭಾನುವಾರ ಈ ಪ್ರಮಾಣ 7445ಕ್ಕೆ ಮುಟ್ಟುವ ಮೂಲಕ ರಾಜ್ಯದಲ್ಲಿ ಭಾರೀ ಆತಂಕ ಹುಟ್ಟುಹಾಕಿತ್ತು. ರಾಜ್ಯದಲ್ಲಿ ಇದುವರೆಗೆ 1.75 ಲಕ್ಷ ಕೇಸು ದಾಖಲಾಗಿದ್ದು, 678 ಜನ ಸಾವನ್ನಪ್ಪಿದ್ದಾರೆ.