ಹುಬ್ಬಳ್ಳಿ[ಡಿ.18]: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ರೈಲ್ವೆ ಇಲಾಖೆಯ ಆಸ್ತಿ ಪಾಸ್ತಿಗಳಿಗೆ ಧಕ್ಕೆಯುಂಟು ಮಾಡಿದರಿಗೆ ಕಂಡಲ್ಲಿ ಗುಂಡಿಕ್ಕಬೇಕು ‘ಶೂಟ್‌ ಅಟ್‌ ಸೈಟ್‌’ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡುತ್ತೇನೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.

ರೈಲ್ವೆ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಗ್ಲಾಸು ಪುಡಿಪುಡಿ ಮಾಡಿದ್ದಾರೆ. ಇವರೆಲ್ಲ ಸಮಾಜಘಾತುಕ ಶಕ್ತಿಗಳು. ಇವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

ಟ್ರೈನ್‌ ಸುಡಿ ಎನ್ನಬೇಕಾ?:

‘ರೈಲ್ವೆ ಪ್ರಾಪರ್ಟಿ ಯಾರಾದರೂ ಹಾಳು ಮಾಡಿದರೆ ಅವರನ್ನು ಏನು ಮಾಡಬೇಕು? ಅವ್ರು ಸಮಾಜ ಘಾತುಕ ಶಕ್ತಿಗಳು. ನಮ್ಮ ಆಸ್ತಿಗಳನ್ನು ಹಾಳು ಮಾಡುವವರು ನಮ್ಮ ಸಿಟಿಜನ್ಸೇ ಅಲ್ಲ. ಕಲ್ಲು ಒಗಿಯುವುದನ್ನು ನೋಡ್ಕೊಂತ ನಿಂದ್ರಬೇಕಾ? ಕಲ್ಲು ಒಗಿರಿ, ನಮ್ಮ ಟ್ರೈನ್‌ ಸುಡ್ರಿ ಹೇಳ್ಕೊಂತ ನಿಂದ್ರಬೇಕಾ? ವೆಸ್ಟ್‌ ಬೆಂಗಾಲದಲ್ಲಿ ಏನೇನ್‌ ಆಗೈತಿ ನೋಡಿದ್ದೀರಿ? ಆವಾಗ ನಾವೇನು ಸುಮ್ಮನೆ ನಿಂದ್ರಬೇಕಾ?’ ಎಂದು ಪ್ರಶ್ನಿಸಿದರು.

‘ನಾನ್‌ ಜವಾಬ್ದಾರಿ ಸ್ಥಾನದಲ್ಲಿದ್ದು ಹೇಳ್ತಾ ಇದ್ದೇನೆ. ಯಾರಾದರೂ ಈ ರೈಲ್ವೆ ಪ್ರಾಪರ್ಟಿ, ರೈಲ್ವೆ ಗಾಡಿ ಹಾಳ ಮಾಡಿದರೆ ಶೂಟ್‌ ಅಟ್‌ ಸೈಟ್‌ ಅಂತಾ ಹೇಳ್ತೇನಿ. ಏಕೆಂದರೆ ಅದು ಜನರ ಟ್ಯಾಕ್ಸ್‌, ನ್ಯಾಷನಲ್‌ ಪ್ರಾಪರ್ಟಿ. ಡೇ ಆ್ಯಂಡ್‌ ನೈಟ್‌ ನಾವು ರೈಲ್ವೆದವರನ್ನು ಬೈತೀವಿ ಪಾಪ. ಅವರಿಗೆಷ್ಟುಫೀಲ್‌ ಆಗ್ತಿರಬಹುದು. ಆ ಒಂದು ಗ್ಲಾಸ್‌ ಒಡೆಯುವುದನ್ನು ನೋಡಿದ್ವಿ. ಬಡಿಗೆಲೇ ಗ್ಲಾಸ್‌ ಒಡಿತಾನ ಅಂವಾ. ಗ್ಲಾಸ್‌ ಒಡ್ದರು. ಬೆಂಕಿ ಹಚ್ಚಿದರು ವೆಸ್ಟ್‌ ಬಂಗಾಲದಲ್ಲಿ. ಅದನ್ನೆಲ್ಲ ತೋರಿಸಿ ನನ್ನ ಎಂಪ್ಲಾಯ್‌ಗಳೆಲ್ಲ ಕಣ್ಣೀರು ತೆಗೆದರು. ಅದನ್ನು ತೋರಿಸಿ ಕಣ್ಣೀರು ತೆಗೆದರು ಸಿನಿಯರ್‌ ಆಫೀಸ​ರ್‍ಸ್. ನಾ ಹೇಳಿದೇನ್ರಿ ಅಲ್ಲಿದ್ದ ಸರ್ಕಾರ ಮಾಡಬೇಕು. ಲಾ ಆ್ಯಂಡ್‌ ಆರ್ಡರ್‌ ಇಸ್‌ ಸ್ಟೇಟ್‌ ಸಬ್ಜೆಟ್‌. ಕರ್ನಾಟಕದಲ್ಲಿ ಏನಾದರೂ ಆದರೆ ಯಡಿಯೂರಪ್ಪ ಮಾಡಬೇಕು, ಬೊಮ್ಮಾಯಿ ಮಾಡಬೇಕು ಗೃಹಮಂತ್ರಿ. ಸಪೋರ್ಟ್‌ಗೆ ನಾವು ಇರುತ್ತೇವೆ’ ಎಂದರು.

‘ಹೌದು ಇದರಿಂದ (ಪೌರತ್ವ ಕಾಯ್ದೆ) ನಮ್ಮವರಿಗೆ ತ್ರಾಸ್‌ ಆಗಿಲ್ಲ. ನಮ್ಮವರ್‌ ಯಾರಾದ್ರೂ ಇದ್ದರೆ ಕಳುಹಿಸಿಕೊಡಿ ಎಂದು ಬಾಂಗ್ಲಾ ದೇಶದವರು ಹೇಳಿದಾರ. ಹಂಗ ಬೇರೆ ದೇಶದವರು ಇದ್ದರೆ ಹೋಗಬೇಕು ಇವ್ರು, ಯಾರ ಬ್ಯಾಡಂದವರು. ಇದರಲ್ಲಿ ಅಪೋಜಿಶನ್‌ ಎಲ್ಲರೂ ಇನ್‌ವಾಲ್‌್ವ ಆಗ್ಯಾರ. ಅದನ್ನು ಮಾಡಬಾರದಿತ್ತು. ಅಟಲ್‌ ಬಿಹಾರಿ ವಾಜಪೇಯಿ ಅವರು ಬಾಂಗ್ಲಾ ದೇಶ ಆಗುವಾಗ ಇಂದಿರಾಗಾಂಧಿ ಅವರನ್ನು ಹೊಗಳಿದರು. ಅವತ್ತಿನ ಅಪೋಜಿಶನ್‌, ಇವತ್ತಿನ ಅಪೋಜಿಶನ್‌...!’ ಎಂದು ಹೇಳಿದರು.

‘ರಾಜ್ಯಗಳಿಗೆ ಏನಾದರೂ ಪತ್ರ ಬರಿತಿರೇನ್‌?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾವು ಯಾರಿಗೂ ಪತ್ರ ಬರೆಯಲ್ಲ. ಪ್ರಧಾನಮಂತ್ರಿಗಳು ಈಗಾಗಲೇ ಹೇಳಿದಾರ ನೀವು ಲಾ ಆ್ಯಂಡ್‌ ಆರ್ಡರ್‌ ಮೇನ್‌ಟೇನ್‌ ಮಾಡ್ರಿ. ಕೇರ್‌ ತೊಗೊಳ್ಳರ್ರಿ ಅಂತ್ಹೇಳಿದಾರ. ನಮ್ಮ ಪ್ರಾಪರ್ಟಿಗೇನಾದರೂ ಹಾಳು ಮಾಡಿದ್ರ ನಮ್ಮವರಿಗೆ ನಾನ್‌ ಹೇಳಿದ್ದೀನಿ’ ಎಂದರು.

‘ಆರ್‌ಪಿಎಫ್‌ಗೆ ಹೇಳಿದ್ದಾರಾ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮವರಾರ‍ಯರು ಫೈರಿಂಗ್‌ ಮಾಡಲ್ಲ. ಸ್ಟೇಟ್‌ನವರೇ ಮಾಡಬೇಕು ಇದನ್ನು. ಸ್ಟ್ರಿಂಜೆಂಟ್‌ ಆ್ಯಕ್ಷನ್‌ ತೆಗೊಬೇಕು ಅಂತ್ಹೇಳಿದ್ದೇನೆ. ‘ಇವನ್‌ ಗೋ ಟು ದಿ ಫೈರಿಂಗ್‌ ಇಫ್‌ ಎನಿಬಡಿ ಡೆಸ್ಟ್ರಾಯ್‌ ದಿ ಪ್ರಾಪರ್ಟಿ. ಶೂಟ್‌ ಅಟ್‌ ಸೈಟ್‌...’ ಎಂದು ಹೇಳಿದರು.