ನವದೆಹಲಿ(ಆ.03): ದೇಶಾದ್ಯಂತ ಆಸ್ಪತ್ರೆಯಲ್ಲಿರುವ ಕೊರೋನಾ ರೋಗಿಗಳ ರಾಷ್ಟ್ರೀಯ ರಿಜಿಸ್ಟ್ರಿಯೊಂದನ್ನು ಆರಂಭಿಸಲು ರಾಷ್ಟ್ರೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮುಂದಾಗಿದೆ. ದೇಶದಲ್ಲಿ ಕೊರೋನಾ ರೋಗಿಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ನಿಖರವಾಗಿ ಪಡೆದು, ಕೊರೋನಾ ಹರಡುತ್ತಿರುವ ಹಾಗೂ ಬೇರೆ ಬೇರೆ ಪ್ರದೇಶ ಮತ್ತು ವರ್ಗದ ಜನರ ಮೇಲೆ ಅದು ಬೀರುತ್ತಿರುವ ಪ್ರಭಾವವನ್ನು ಅಧ್ಯಯನ ಮಾಡುವ ಮೂಲಕ ಚಿಕಿತ್ಸೆಯ ಗುಣಮಟ್ಟಹೆಚ್ಚಿಸಲು ಐಸಿಎಂಆರ್‌ ಈ ದಿಸೆಯಲ್ಲಿ ಹೆಜ್ಜೆಯಿರಿಸಿದೆ.

ಹಾಸನದ ಕಾರ್ಖಾನೆಯ 50 ಕಾರ್ಮಿಕರಿಗೆ ಒಂದೇ ಬಾರಿ ವಕ್ಕರಿಸಿದ ವೈರ​ಸ್‌

ಆರೋಗ್ಯ ಇಲಾಖೆ ಹಾಗೂ ಏಮ್ಸ್‌ನ ಸಹಯೋಗದಲ್ಲಿ ಐಸಿಎಂಆರ್‌ ಈ ಆನ್‌ಲೈನ್‌ ರಿಜಿಸ್ಟ್ರಿ ಸ್ಥಾಪಿಸಲಿದೆ. ಇದಕ್ಕಾಗಿ ದೇಶಾದ್ಯಂತ 15 ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳ ನೆರವು ಪಡೆಯಲಿದ್ದು, ಕರ್ನಾಟಕದಲ್ಲಿ ನಿಮ್ಹಾನ್ಸ್‌ ಮೂಲಕ ಎಲ್ಲಾ ಆಸ್ಪತ್ರೆಗಳಲ್ಲಿರುವ ಕೊರೋನಾ ರೋಗಿಗಳ ಮಾಹಿತಿ ಪಡೆಯಲು ಚಿಂತನೆ ನಡೆಸಿದೆ.

ಚಿಕ್ಕ ವಯಸ್ಸಿನವರಲ್ಲೂ ಹೆಚ್ಚುತ್ತಿದೆ ಮಹಾಮಾರಿಯಿಂದ ಸಾವಿನ ಆತಂಕ

ಇದು ರಿಯಲ್‌ ಟೈಮ್‌ ಆನ್‌ಲೈನ್‌ ರಿಜಿಸ್ಟ್ರಿಯಾಗಿದ್ದು, ಕೊರೋನಾದಿಂದ ಗಂಭೀರ ಸಮಸ್ಯೆ ಎದುರಿಸುತ್ತಿರುವ ರೋಗಿಗಳ ಮಾಹಿತಿ ಸರ್ಕಾರಕ್ಕೆ ತಕ್ಷಣ ಇಲ್ಲಿ ಸಿಗುತ್ತದೆ. ಆಸ್ಪತ್ರೆಗೆ ದಾಖಲಾದ ಕೊರೋನಾ ರೋಗಿಗಳ ಕ್ಲಿನಿಕಲ್‌ ಮತ್ತು ಪ್ರಯೋಗಾಲಯ ಸಂಬಂಧಿ ಮಾಹಿತಿ, ರೋಗಿಗಳ ಮೂಲ, ವಯಸ್ಸು ಅವರಿಗಿರುವ ಇತರ ರೋಗಗಳು, ಚಿಕಿತ್ಸೆಯ ಪರಿಣಾಮ, ಚಿಕಿತ್ಸೆಯಲ್ಲಿ ಉಂಟಾದ ತೊಡಕು ಮುಂತಾದ ಎಲ್ಲ ಮಾಹಿತಿಗಳನ್ನು ರಿಜಿಸ್ಟ್ರಿಯಲ್ಲಿ ದಾಖಲಿಸಲಾಗುತ್ತದೆ. ಅದನ್ನು ಆಧರಿಸಿ ಕೊರೋನಾ ನಿಯಂತ್ರಣದ ವಿಧಾನವನ್ನು ಪರಿಷ್ಕರಿಸುವುದು ಮುಂತಾದ ಕಾರ್ಯಗಳನ್ನು ಮಾಡಬಹುದು ಎಂದು ಐಸಿಎಂಆರ್‌ ಯೋಜಿಸಿದೆ