Asianet Suvarna News Asianet Suvarna News

ಚಿಕ್ಕ ವಯಸ್ಸಿನವರಲ್ಲೂ ಹೆಚ್ಚುತ್ತಿದೆ ಮಹಾಮಾರಿಯಿಂದ ಸಾವಿನ ಆತಂಕ

ಮಕ್ಕಳಲ್ಲಿ ಕೊರೋನಾ ಮಹಾಮಾರಿ ಆತಂಕ ಕಡಿಮೆ ಎನ್ನಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳೂ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 

COVID 19 risk hikes in Children
Author
bengaluru, First Published Aug 3, 2020, 10:21 AM IST

ಬೆಂಗಳೂರು (ಆ.03) :  ರಾಜ್ಯದಲ್ಲಿ ಚಿಕ್ಕ ವಯಸ್ಸಿನ ಕೊರೋನಾ ಸೋಂಕಿತರ ಸಾವಿನ ಪ್ರಮಾಣ ತೀವ್ರಗೊಳ್ಳುತ್ತಿದ್ದು, 8 ವರ್ಷದ ಬಾಲಕಿ ಸೇರಿ 40 ವರ್ಷದೊಳಗಿನ 250 ಮಂದಿ ಸೋಂಕಿಗೆ ಬಲಿಯಾಗಿರುವುದು ಆತಂಕ ಮೂಡಿಸಿದೆ.

ಈ ಮೂಲಕ ಹಿರಿಯ ವಯಸ್ಸಿನ ಹಾಗೂ ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರೇ ಸೋಂಕಿನಿಂದ ಸಾವನ್ನಪ್ಪಲಿದ್ದಾರೆ ಎಂಬ ನಂಬಿಕೆ ಹಲವು ಪ್ರಕರಣಗಳಲ್ಲಿ ಸುಳ್ಳಾಗಿದೆ. ಜುಲೈ 20ರಂದು 10 ವರ್ಷದೊಳಗಿನ ಮೊದಲ ಮಗು (8 ವರ್ಷ) ಕೊರೋನಾ ಸೋಂಕಿಗೆ ಬಲಿಯಾಗಿದೆ. ಈ ಮಗುವಿಗೆ ಯಾವುದೇ ದೀರ್ಘಕಾಲೀನ ಸಮಸ್ಯೆ ಇರಲಿಲ್ಲ. ಬದಲಿಗೆ ತೀವ್ರ ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿತ್ತು.

ಇದಲ್ಲದೆ 10ರಿಂದ 20 ವರ್ಷದೊಳಗಿನ 5 ಮಂದಿ ಈಗಾಗಲೇ ರಾಜ್ಯದಲ್ಲಿ ಕೊರೋನಾಗೆ ಮೃತಪಟ್ಟಿದ್ದಾರೆ. ಇವರಲ್ಲೂ ಸಹ ದೀರ್ಘಕಾಲೀನ ಸಮಸ್ಯೆಗಳು ಇರಲಿಲ್ಲ. ಇನ್ನು 21ರಿಂದ 30 ವರ್ಷದೊಳಗಿನ 70, 30ರಿಂದ 40 ವರ್ಷದೊಳಗಿನ 175 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 40 ವರ್ಷದೊಳಗಿನ ಯುವ ವಯಸ್ಕರೇ 250 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಹಲವರಿಗೆ ಯಾವುದೇ ದೀರ್ಘಕಾಲೀನ ಸಮಸ್ಯೆ ಇಲ್ಲದೆಯೂ ಬಲಿಯಾಗಿರುವುದು ಕಳವಳ ಉಂಟುಮಾಡಿದೆ.

ಇನ್ನು ಸಕ್ರಿಯ ಸೋಂಕಿತರಲ್ಲಿ ಹೈರಿಸ್ಕ್‌ನಲ್ಲಿರುವ 13 ಸಾವಿರಕ್ಕೂ ಹೆಚ್ಚು ಮಂದಿ ಹಾಗೂ ಐಸಿಯು ಚಿಕಿತ್ಸೆಯಲ್ಲಿರುವ 638 ಮಂದಿಯಲ್ಲೂ ಹಲವು ಯುವ ವಯಸ್ಕರಿದ್ದಾರೆ. ಹೀಗಾಗಿ ಸೋಂಕು ಯುವಕರನ್ನು ಗಂಭೀರ ಪ್ರಮಾಣದಲ್ಲಿ ಬಾಧಿಸುವುದಿಲ್ಲ ಎಂದು ಎಚ್ಚರ ತಪ್ಪಬಾರದು. ಎಲ್ಲ ಹಂತದಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹಿರಿಯ ವಯಸ್ಕರ ಸಾವು: ಇನ್ನು 41- 50 ವರ್ಷದೊಳಗಿನ 334, 51-60 ವರ್ಷದೊಳಗಿನ 632, 61-70 ವರ್ಷದ 716 ಹಾಗೂ 70 ವರ್ಷ ಮೇಲ್ಪಟ್ಟ564 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಭಾನುವಾರದ ವೇಳೆಗೆ ಸಾವಿನ ಒಟ್ಟು ಸಂಖ್ಯೆ 2496ಕ್ಕೆ ಏರಿಕೆಯಾಗಿದೆ.

ಯುವಕರು ಎಚ್ಚರ ತಪ್ಪದಿರಿ

ಅನ್‌ಲಾಕ್‌ನಿಂದಾಗಿ ಎಲ್ಲಾ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿದ್ದು, ಬಹುತೇಕ ಕಚೇರಿ, ವ್ಯವಹಾರಗಳು, ಉದ್ಯೋಗ ಕಾರ್ಯಗಳು ಶುರುವಾಗಿವೆ. ಇದಕ್ಕಾಗಿ ಯುವಕರು ಹೆಚ್ಚಾಗಿ ಮನೆಯಿಂದ ಹೊರಗೆ ಹೋಗುವುದು ಅಗತ್ಯವಾಗಲಿದೆ. ಆದಷ್ಟುಹಿರಿಯ ವಯಸ್ಸಿನವರನ್ನು ಮನೆಯಲ್ಲೇ ಉಳಿಸಿ ಯುವಕರು ಮನೆಯಿಂದ ಹೊರಗೆ ಹೋಗಿ ಜವಾಬ್ದಾರಿಗಳನ್ನು ಪೂರೈಸಬೇಕು. ಆದರೆ, ಈ ವೇಳೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು.

 ಮಾಸ್ಕ್‌ ಧರಿಸಿಯೇ ಮನೆಯಿಂದ ಹೊರಗೆ ಹೋಗಬೇಕು. ಮಾತನಾಡುವಾಗ, ಉಗುಳು ತಾಗದಂತೆ ಎಚ್ಚರವಹಿಸಬೇಕು. ಬಾಯಿ ಮೂಗು ಮುಟ್ಟಿಕೊಳ್ಳುವ ಮೊದಲು ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಹಬ್ಬ ಹರಿದಿನಗಳಿಗಿಂತ ಆರೋಗ್ಯ ಮುಖ್ಯ. ಹೀಗಾಗಿ ಗುಂಪು ಸೇರಬಾರದು. ಸಾಮಾಜಿಕ ಅತರ ಕಾಯ್ದುಕೊಳ್ಳಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಕ್ರಮ ಅಳವಡಿಸಿಕೊಳ್ಳಬೇಕು. ನಿತ್ಯ ವ್ಯಾಯಾಮ ಹಾಗೂ ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಲಕ್ಷಣ ಕಂಡರೆ ನಿರ್ಲಕ್ಷ್ಯ ಬೇಡ: ಸೋಂಕಿತರ ಸಾವು ಹೆಚ್ಚಳಕ್ಕೆ ಜನರ ನಿರ್ಲಕ್ಷ್ಯವೂ ಕಾರಣ. ಸೋಂಕು ಲಕ್ಷಣ ಕಾಣಿಸಿಕೊಂಡ ನಂತರವೂ ಆಸ್ಪತ್ರೆಗೆ ಬಾರದೆ ಮನೆಯಲ್ಲಿಯೇ ಲಭ್ಯವಿರುವ ಮಾತ್ರೆ ಸೇವಿಸುತ್ತಿದ್ದಾರೆ. ನಾಲ್ಕೈದು ದಿನಗಳ ಬಳಿಕ ತೀವ್ರ ಅನಾರೋಗ್ಯ ಕಾಣಿಸಿಕೊಂಡಾಗ ಆಸ್ಪತ್ರೆಗೆ ಬರುತ್ತಿದ್ದು, ಆ ವೇಳೆ ಶ್ವಾಸಕೋಶಕ್ಕೆ ಸಾಕಷ್ಟುಹಾನಿಯಾಗಿರುತ್ತದೆ. ಇಂತಹ ಮನಃಸ್ಥಿತಿಯಿಂದ ಹೊರಬಂದು ಸೋಂಕು ಲಕ್ಷಣ ಕಂಡ ಕೂಡಲೇ ಆಸ್ಪತ್ರೆಗೆ ಹೋಗಬೇಕು. ಇಲ್ಲದಿದ್ದರೆ ಸ್ಥಳೀಯ ಸಂಸ್ಥೆಗಳ ಸಹಾಯವಾಣಿಗೆ ವರದಿ ಮಾಡಿಕೊಳ್ಳಬೇಕು ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ನಾಗರಾಜ್‌ ಹೇಳುತ್ತಾರೆ.

ವರದಿ : ಶ್ರೀಕಾಂತ ಎನ್‌. ಗೌಡಸಂದ್ರ

Follow Us:
Download App:
  • android
  • ios