ಗುಡ್ ನ್ಯೂಸ್: ಆಗಸ್ಟ್ 15ಕ್ಕೆ ಕೊರೋನಾಗೆ ಭಾರತೀಯ ಮದ್ದು ಸಿದ್ದ..!
ಕೊರೋನಾಗೆ ಮದ್ದು ಅರೆಯುವಲ್ಲಿ ಭಾರತ ಕೊನೆಗೂ ಯಶಸ್ವಯಾದಂತೆ ತೋರುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ಆಗಸ್ಟ್ 15ರಂದು ದೇಸಿ ಕೊರೋನಾ ಔಷಧ ಬಳಕೆಗೆ ಸಿದ್ದವಾಗಲಿದೆ. ಈ ಕುರಿತಾಧ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಜು.03): ಎಲ್ಲವೂ ಅಂದುಕೊಂಡಂತೆ ಸಾಗಿದರೆ ಬರುವ ಆಗಸ್ಟ್ 15ರ ವೇಳೆಗೆ ಕೊರೋನಾಗೆ ಭಾರತೀಯ ಔಷಧಿ ಸಿದ್ದವಾಗಲಿದೆ. ಹೀಗೊಂದು ಸುಳಿವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬಿಟ್ಟುಕೊಟ್ಟಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ಹಾಗೂ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್(BBIL) ಜಂಟಿ ಸಹಯೋಗದಲ್ಲಿ ದೇಸಿ ಕೊರೋನಾ ಔಷಧ ಅಭಿವೃದ್ದಿ ಪಡಿಸಲಾಗುತ್ತಿದ್ದು, ದೇಶದ ಸ್ವಾತಂತ್ರ್ಯ ದಿನಾಚರಣೆಯಂದೇ ಲೋಕಾರ್ಪಣೆ ಮಾಡುವ ಸಾಧ್ಯತೆಯಿದೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಸಂಸ್ಥೆ ದೇಸಿ ಕೋವಿಡ್ ಔಷಧವಾದ ಕೋವ್ಯಾಕ್ಸಿನ್ ಕ್ಲೀನಿಕಲ್ ಟ್ರಯಲ್‌ಗೆ ಅನುಮತಿ ನೀಡಿದೆ. ಈ ಕುರಿತಂತೆ ICMR ಪತ್ರ ಬರೆದಿದ್ದು, ಕೋವ್ಯಾಕ್ಸಿನ್ ಮೊದಲ ದೇಸಿ ಔಷಧವಾಗಿದ್ದು, ಸರ್ಕಾರದ ಉನ್ನತಮಟ್ಟದಲ್ಲೇ ಆಧ್ಯತೆಯ ಮೇರೆಗೆ ಈ ಔಷಧವನ್ನು ಅಭಿವೃದ್ದಿ ಪಡಿಸಲಾಗುತ್ತಿದೆ ಎಂದಿದೆ. ಒಂದು ಹಾಗೂ ಎರಡನೇ ಹಂತದಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲು ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಜುಲೈನಿಂದಲೇ ಪ್ರಯೋಗ ಆರಂಭಿಸಲಿದ್ದೇವೆ ಎಂದು BBIL ಜೂನ್ 29ರ ಸೋಮವಾರ ಘೋಷಿಸಿತ್ತು.
ಲಾಕ್‌ಡೌನ್ ಹೊರತುಪಡಿಸಿ ಕೋವಿಡ್ ತಡೆಗೆ ಇರುವ ಮಾರ್ಗಗಳೇನು? ವೈದ್ಯರು ಹೇಳೋದೇನು?
ಎಲ್ಲಾ ಹಂತದ ಪ್ರಯೋಗಗಳು ಯಶಸ್ವಿಯಾದರೆ ಆಗಸ್ಟ್ 15ರಂದು ಕೊರೋನಾ ಹೆಮ್ಮಾರಿ ವಿರುದ್ಧ ಭರ್ಜರಿ ದಿಗ್ವಿಜಯ ಸಾಧಿಸಿದಂತಾಗುತ್ತದೆ. ಆ ದಿನ ಆದಷ್ಟು ಬೇಗ ಬರಲಿ, ವೈದ್ಯರು-ವಿಜ್ಞಾನಿಗಳ ಪರಿಶ್ರಮ ಯಶಸ್ವಿಯಾಗಲಿ ಎನ್ನುವುದು ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ.