ಐಐಎಂಟಿ ಕಾಲೇಜಿನ 1.8 ಕೋಟಿ ರೂ. ಪ್ಯಾಕೇಜ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ವ್ಯಕ್ತಿ ವಾಸ್ತವದಲ್ಲಿ ಐಸ್‌ಕ್ರೀಂ ಮಾರಾಟಗಾರ ಎಂದು ಬಯಲಾಗಿದೆ. ಫೋಟೋಗೆ ಹಣ ನೀಡುವುದಾಗಿ ಹೇಳಿ ನಂತರ ನೀಡಿಲ್ಲ ಎಂದು ಯುವಕ ತಿಳಿಸಿದ್ದಾನೆ.
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ (Viral Video) ಆಗಿದ್ದು, IIMT ಕಾಲೇಜಿನ ಜಾಹೀರಾತಿನ ಸುಳ್ಳನ್ನು ಐಸ್‌ಕ್ರೀಂ ಮಾರಾಟಗಾರರೊಬ್ಬರು ರಿವೀಲ್ ಮಾಡಿದ್ದಾರೆ. ಸಾಮಾನ್ಯವಾಗಿ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿ ಓದಿದ ವಿದ್ಯಾರ್ಥಿಗಳ ಸಾಧನೆಯ ಮಾಹಿತಿಯುಳ್ಳ ಜಾಹೀರಾತುಗಳನ್ನು ಪ್ರಕಟಿಸುತ್ತವೆ. ಕಾಲೇಜು, ಕೋಚಿಂಗ್ ಸೇರಿದಂತೆ ಶಿಕ್ಷಣ ಸಂಸ್ಥೆಗಳು ಪ್ರವೇಶಾತಿ ಸಂದರ್ಭದಲ್ಲಿ ಇಂತಹ ಜಾಹೀರಾತುಗಳನ್ನು ಅತ್ಯಧಿಕವಾಗಿ ಪ್ರಕಟಿಸುತ್ತವೆ. ಇಂದು ರಸ್ತೆ ಬದಿಯಲ್ಲಿಯೂ ದೊಡ್ಡ ದೊಡ್ಡ ಫಲಕಗಳನ್ನು (ಎಲ್ಇಡಿ ಸ್ಕ್ರೀನ್) ಅಳಡಿಸುತ್ತಾರೆ. ಈ ಜಾಹೀರಾತುಗಳ (Fake Advertisement) ಮೂಲಕ ತಮ್ಮ ಶಿಕ್ಷಣ ಸಂಸ್ಥೆಗಳ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತವೆ. ಶಿಕ್ಷಣ ಸಂಸ್ಥೆಗಳು ನೀಡುವ ಈ ಜಾಹೀರಾತುಗಳು ಸತ್ಯಕ್ಕೆ ಎಷ್ಟು ಹತ್ತಿರವಾಗಿರುತ್ತವೆ ಎಂಬುದರ ಬಗ್ಗೆ ಅನುಮಾನ ಮೂಡಿಸುತ್ತವೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ IIMT ಕಾಲೇಜಿನ ಸುಳ್ಳಿನ ಜಾಹೀರಾತು ವೈರಲ್ ಆಗಿದೆ. ಈ ಜಾಹೀರಾತಿನಲ್ಲಿ IIMT ಕಾಲೇಜಿನಲ್ಲಿ ಓದಿರುವ ವಿದ್ಯಾರ್ಥಿ ಇಂದು 1.8 ಕೋಟಿ ರೂಪಾಯಿ ಸಂಬಳದ ಪ್ಯಾಕೇಜ್ ಪಡೆಯುತ್ತಿದ್ದಾರೆ ಎಂದು ಪ್ರಕಟಿಸಿದೆ. ಈ ಜಾಹೀರಾತಿನಲ್ಲಿ ವಿದ್ಯಾರ್ಥಿಯ ಫೋಟೋ ಸಹ ಬಳಸಲಾಗಿದೆ. ಇನ್ನುಳಿದಂತೆ ಶಿಕ್ಷಣ ಸಂಸ್ಥೆಯ ಇನ್ನಿತರ ಮಾಹಿತಿಯನ್ನು ಸಹ ಪ್ರಕಟಿಸಲಾಗಿದೆ. ಈ ಜಾಹೀರಾತಿನಲ್ಲಿರುವ ವಿದ್ಯಾರ್ಥಿಯಾಗಿ ಕಾಣಿಸಿಕೊಂಡು ಯುವಕ ಅಸಲಿಯಾಗಿ ಐಸ್‌ಕ್ರೀಂ ಮಾರಾಟ ಮಾಡುವ ವ್ಯಕ್ತಿಯಾಗಿದ್ದಾನೆ.
ಫೋಟೋಗೆ ಯಾವುದೇ ಹಣ ನೀಡಿಲ್ಲ ಎಂದ ಯುವಕ
ಜಾಹೀರಾತಿನ ಮುಂದೆ ಐಸ್‌ಕ್ರೀಂ ಮಾರಾಟಗಾರನನ್ನು ನಿಲ್ಲಿಸಿ ವಿಡಿಯೋ ಮಾಡಲಾಗಿದೆ. ಈ ವಿಡಿಯೋದಲ್ಲಿ ಜನರೇ ಇಲ್ನೋಡಿ, IIMT ಕಾಲೇಜಿನ ಸುಳ್ಳು ಎಂದು ವ್ಯಕ್ತಿಯೊಬ್ಬ ಹೇಳುತ್ತಾನೆ. ಹಾಗೆ ಜಾಹೀರಾತಿನಲ್ಲಿರುವ ವಿದ್ಯಾರ್ಥಿ ತೋರಿಸಿ, ಫೋಟೋದಲ್ಲಿರುವ ಅಸಲಿ ಯುವಕನನ್ನು ತೋರಿಸುತ್ತಾನೆ. ಇದೇ ವ್ಯಕ್ತಿಗೆ 1.8 ಕೋಟಿ ರೂಪಾಯಿ ಪ್ಯಾಕೇಜ್ ಸಿಕ್ಕಿದೆ. ಅಸಲಿಗೆ ಈ ವ್ಯಕ್ತಿ ಮಾಡ್ತಿರೋ ಕೆಲಸ ಏನು ಎಂದು ಆತನ ಐಸ್‌ಕ್ರೀಂ ಮಾರಾಟದ ವೆಹಿಕಲ್ ತೋರಿಸುತ್ತಾನೆ. ಈ ಫೋಟೋ ಬಳಸಿಕೊಳ್ಳಲು ನಿಮಗೆ IIMT ಕಾಲೇಜು ಎಷ್ಟು ಹಣ ನೀಡಿದೆ ಎಂದು ಪ್ರಶ್ನೆ ಮಾಡಲಾಗುತ್ತದೆ. ಫೋಟೋ ತೆಗೆದುಕೊಳ್ಳಲು ಹಣ ನೀಡೋದಾಗಿ ಹೇಳಿದ್ದರು. ನಂತರ ಏನು ನೀಡಲಿಲ್ಲ ಎಂದು ಐಸ್‌ಕ್ರೀಂ ಮಾರಾಟ ಮಾಡುವ ಯುವಕ ಹೇಳುತ್ತಾನೆ.
ಜಾಹೀರಾತು ನಂಬೋದು ಕಷ್ಟ?
ಇಂತಹ ಜಾಹೀರಾತುಗಳನ್ನು ತೋರಿಸಿ ಶಿಕ್ಷಣ ಸಂಸ್ಥೆಗಳು ದುಬಾರಿ ಶುಲ್ಕವನ್ನು ತೆಗೆದುಕೊಳ್ಳುತ್ತವೆ. ಈ ರೀತಿಯ ಸುಳ್ಳು ಜಾಹೀರಾತು ಪ್ರಕಟಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಖಾಸಗಿ ಶಾಲೆ, ಕಾಲೇಜುಗಳು ನಂಬಿಕೆಗೆ ಎಷ್ಟು ಅರ್ಹ ಎಂಬ ಪ್ರಶ್ನೆಯನ್ನು ಸಹ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಒಬ್ಬ ವಿದ್ಯಾರ್ಥಿ, ಹಲವು ಶಿಕ್ಷಣ ಸಂಸ್ಥೆ!
ಈ ಹಿಂದೆ ಮೊದಲ ಶ್ರೇಣಿ ಪಡೆದುಕೊಂಡ ವಿದ್ಯಾರ್ಥಿಯ ಫೋಟೋವನ್ನು ಹಲವು ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಯೆಂದು ಹೇಳಿಕೊಂಡು ಜಾಹೀರಾತು ಪ್ರಕಟಿಸಿದ್ದವು. ವಿವಿಧ ಆಂಗ್ಲ ದಿನಪತ್ರಿಕೆಗಳ ಮೊದಲ ಪುಟದಲ್ಲಿಯೇ ಈ ಜಾಹೀರಾತ ಪ್ರಕಟಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಅಂತಹವುದೇ ಮತ್ತೊಂದು ಸುಳ್ಳಿನ ಜಾಹೀರಾತು ಮುನ್ನಲೆಗೆ ಬಂದಿದೆ.
