ಟ್ರೈನೀ ಐಎಎಸ್ ಪೂಜಾ ಖೇ ಡ್ಕರ್ ತಾಯಿ ಪಿಸ್ತೂಲು ಹಿಡಿದು ರೈತರನ್ನು ಬೆದರಿಸುತ್ತಿರುವ ಹಳೆಯ ವಿಡಿಯೋ ವೈರಲ್‌ ಆಗಿತ್ತು. ಪೊಲೀಸರು ಬಾನೇರ್‌ ರಸ್ತೆಯಲ್ಲಿರುವ ಮನೋರಮಾ ಮನೆಗೆ ಭಾನುವಾರ ಮತ್ತು ಸೋಮವಾರ ಹೋದರೂ ಪತ್ತೆಯಾಗಿಲ್ಲ. 

ಪುಣೆ: ಭೂಮಿ ವಿವಾದದ ಸಂಬಂಧ ವ್ಯಕ್ತಿಯೊಬ್ಬನಿಗೆ ಪಿಸ್ತೂಲು ತೋರಿಸಿದ್ದ ವಿವಾದಿತ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ನಾಪತ್ತೆಯಾಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.

ಆಕೆ ರೈತನಿಗೆ ಪಿಸ್ತೂಲು ತೋರಿಸಿ ಬೆದರಿಸುತ್ತಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಮನೋರಮಾ, ಪತಿ ದಿಲೀಪ್ ಹಾಗೂ ಇನ್ನೂ ಐವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 323(ಅಪ್ರಾಮಾಣಿಕತೆ ಅಥವಾ ಆಸ್ತಿಯ ಮರೆಮಾಚುವಿಕೆ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ಸಂಬಂಧ ಪುಣೆ ಗ್ರಾಮಾಂತರ ಪೊಲೀಸರು ಬಾನೇರ್‌ ರಸ್ತೆಯಲ್ಲಿರುವ ಮನೋರಮಾ ಮನೆಗೆ ಭಾನುವಾರ ಮತ್ತು ಸೋಮವಾರ ಹೋದರೂ ಪತ್ತೆಯಾಗಿಲ್ಲ. ಆಕೆಯ ಮೊಬೈಲ್ ಸ್ವಿಚ್ಆಫ್‌ ಆಗಿದೆ. ಆಕೆ ಪತ್ತೆಯಾಗುತ್ತಲೇ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ನಕಲಿ ದಾಖಲೆ ನೀಡಿ ನಾಗರಿಕ ಸೇವೆಗಳಿಗೆ ಆಯ್ಕೆ

ಮಾನಸಿಕ ದೌರ್ಬಲ್ಯ ಹಾಗೂ ದೃಷ್ಟಿ ದೋಷದ ನಕಲಿ ದಾಖಲೆ ನೀಡಿ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದ ಐಎಎಸ್‌ ಪೂಜಾ ಖೇಡ್ಕರ್‌ ಅಂಗವೈಕಲ್ಯ ಧೃಡೀಕರಣ ಪತ್ರ ಪಡೆಯಲು ಸಲ್ಲಿಸಿದ್ದ ಮನವಿಯನ್ನು 2022ರಲ್ಲೇ ವೈದ್ಯರು ತಿರಸ್ಕರಿಸಿದ್ದರು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ. 2022ರ ಆಗಸ್ಟ್‌ 23ರಂದು ಅಂಗವೈಕಲ್ಯ ಧೃಡೀಕರಣ ಪತ್ರಕ್ಕಾಗಿ ಪೂಜಾ ಅರ್ಜಿ ಸಲ್ಲಿಸಿದ್ದರು. ಇದನ್ನು ತಿರಸ್ಕರಿಸಿದ ಪುಣೆಯ ಔಂಧ್ ಆಸ್ಪತ್ರೆ, ‘2022ರ ಅಕ್ಟೋಬರ್‌ 11ರಂದು ಲೋಕೋಮೋಟರ್ (ಕೈಕಾಲು ಚಲನೆಗೆ ಅಡ್ಡಿಮಾಡುವ) ತಪಾಸಣೆ ನಡೆಸಲಾಗಿದ್ದು, ನಿಮ್ಮ ಪರವಾಗಿ ಅಂಗವೈಕಲ್ಯ ಧೃಡೀಕರಣ ಪತ್ರ ನೀಡಲು ಸಾಧ್ಯವಿಲ್ಲ ಎಂದು ಹೇಳಲು ವಿಷಾದಿಸುತ್ತೇವೆ’ ಎಂದು ಹೇಳಿತ್ತು. ಈ ಮೂಲಕ ಅಂಗವೈಕಲ್ಯ ಧೃಡೀಕರಣ ಪತ್ರಕ್ಕಾಗಿ ಖೇಡ್ಕರ್ ಸಲ್ಲಿಸಿದ್ದ ಎರಡನೆ ಅರ್ಜಿಯನ್ನು ತಿರಸ್ಕೃತವಾಗಿತ್ತು.

'ನಾ ನಿರಪರಾಧಿ, ತನಿಖೆ ವೇಳೆ ಸತ್ಯ ತಿಳಿಯುತ್ತೆ'

ನಕಲಿ ದಾಖಲೆನೀಡಿನೇಮಕ ಹಾಗೂ ಅಧಿಕಾರ ದುರ್ಬಳಕೆ ವಿವಾದದಲ್ಲಿ ಸಿಲುಕಿರುವ ಪುಣೆಯ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್, 'ತನಿಖೆ ಯಲ್ಲಿ ದೋಷಿ ಎಂದು ಸಾಬೀತಾಗುವವರೆಗೆನಾನು ನಿರಪರಾಧಿ, ತನಿಖೆ ಯಲ್ಲಿ ಸತ್ಯ ಗೊತ್ತಾಗುತ್ತೆ' ಎಂದಿದ್ದಾರೆ. ಸೋಮವಾರ ಸುದ್ದಿಗಾರರ ಜತೆ ಅವರು ಮಾತನಾಡಿ, 'ನಾನು ತಜ್ಞರ ಸಮಿತಿಯ ಮುಂದೆ ಸಾಕ್ಷಿ ಹೇಳುತ್ತೇನೆ ಮತ್ತು ಅದರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. 'ಆರೋಪ ಸಾಬೀತುಪಡಿಸುವವರೆಗೂ ನಿರಪರಾಧಿ' ಎಂಬ ತತ್ವವನ್ನು ಎತ್ತಿಹಿಡಿಯುತ್ತದೆ. ಹಾಗಾಗಿ ಮಾಧ್ಯಮ ವಿಚಾರಣೆಯ ಮೂಲಕ ನನ್ನನ್ನು ಅಪರಾಧಿ ಎಂದು ನಿರ್ಣಯಿಸುವುದು ತಪ್ಪು' ಎಂದರು.

ಸಂಕಷ್ಟದಲ್ಲಿ ಖಾಸಗಿ ಆಡಿ ಕಾರಿಗೆ ಕೆಂಪು ಗೂಟದ ದೀಪ ಬಳಸುತ್ತಿದ್ದ ಟ್ರೈನಿ IAS ಅಧಿಕಾರಿ ಪೂಜಾ

ಮತ್ತೊಂದು ಪ್ರಕರಣ ಬೆಳಕಿಗೆ

ನಕಲಿ ದಾಖಲೆ ತೋರಿಸಿ ದೃಷ್ಟಿ ದೋಷದ ನಾಟಕ ಮಾಡಿ ಐಎಎಸ್‌ ಅಧಿಕಾರಿಯಾಗಿ ನೇಮಕ ಆದ ಆರೋಪ ಹೊತ್ತಿರುವ ಟ್ರೈನೀ ಐಎಎಸ್‌ ಪೂಜಾ ಖೇಡ್ಕರ್‌ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 2 ವರ್ಷಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ ನಟನಾಗಲು ಹೊರಟಿದ್ದ 2011ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ ಅಭೀಷೇಕ್ ಸಿಂಗ್ ತನಗೆ ಲೋಕೋಮೋಟರ್ (ಕೈಕಾಲು ಚಲನೆಗೆ ಅಡ್ಡಿಮಾಡುವ) ಅಂಗವೈಕಲ್ಯ ಇದೆಯೆಂದು ಯುಪಿಎಸ್‌ಸಿ ಆಯ್ಕೆಯ ವೇಳೆ ಹೇಳಿಕೊಂಡಿದ್ದ.

ಇತ್ತೀಚೆಗೆ ಅವನ ಜಿಮ್‌ ಹಾಗೂ ನರ್ತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಹೀಗಾಗಿ ಆತನ ನೇಮಕದ ಸಾಚಾತನದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಯುಪಿಎಸ್‌ಸಿ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ನನ್ನ ಮಗಳ ವಿರುದ್ಧ ಪಿತೂರಿ: ಟ್ರೈನಿ ಐಎಎಸ್ ಅಧಿಕಾರಿ ಉದ್ಧಟತನವನ್ನ ಸಮರ್ಥಿಸಿಕೊಂಡ ತಂದೆ

ಇದಕ್ಕೆ ಪ್ರತಿಕ್ರಿಯಿಸಿರುವ ಸಿಂಗ್, ‘ಮೀಸಲಾತಿಯ ಪರವಾಗಿರುವುದರಿಂದ ನನ್ನನ್ನು ಗುರಿ ಮಾಡಲಾಗುತ್ತಿದೆ. ನನ್ನ ಜಾತಿ, ಕೆಲಸದ ಬಗ್ಗೆ ಪ್ರಶ್ನೆಗಳೇಳುತ್ತಿವೆ. ನಾನು ಸಾಧಿಸಿರುವುದೆಲ್ಲ ಧೈರ್ಯ ಹಾಗೂ ಪರಿಶ್ರಮದಿಂದಲೇ ಹೊರತು ಮೀಸಲಾತಿಯಿಂದ ಅಲ್ಲ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾನೆ.