* ದಿಲ್ಲಿ ಸ್ಟೇಡಿಯಂನಲ್ಲಿ ನಿತ್ಯ ನಾಯಿ ಜತೆ ಐಎಎಸ್‌ ಅಧಿಕಾರಿ ವಾಕಿಂಗ್‌* ಕ್ರೀಡಾಪಟುಗಳನ್ನು ಹೊರಗಟ್ಟಿ ಸ್ಟೇಡಿಯಂನಲ್ಲಿ ವಾಕಿಂಗ್ ಮಾಡಿದ ಅಧಿಕಾರಿ ಲಡಾಖ್‌ಗೆ ವರ್ಗಾವಣೆ* ಅಧಿಕಾರಿಯ ಪತ್ನಿಯೂ ಅರುಣಾಚಲ ಪ್ರದೇಶಕ್ಕೆ

ನವದೆಹಲಿ(ಮೇ.27): ಐಎಎಸ್ ಅಧಿಕಾರಿ ಸಂಜೀವ್ ಖಿರ್ವಾರ್ ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ನಾಯಿಯನ್ನು ವಾಕಿಂಗ್ ಮಾಡಿಸಿ ವಿವಾದಕ್ಕೀಡಾಗಿದ್ದಾರೆ. ಬಹುಶಃ ನಾಯಿಯನ್ನು ವಾಕಿಂಗ್‌ಗೆ ಕರೆದೊಯ್ಯುವಾಗ ಈ ಅಭ್ಯಾಸದಿಂದ ತಾನು ತನ್ನ ಕುಟುಂಬದಿಂದ 3500 ಕಿಲೋಮೀಟರ್ ದೂರ ಹೋಗಬೇಕಾಗುತ್ತದೆ ಎಂದು ಇಂತಹ ಹೆಜ್ಜೆ ಇಟ್ಟ ಕ್ಷಣ ಸಂಜೀವ್ ಖಿರ್ವಾರ್ ಯೋಚಿಸಿರಲಿಲ್ಲವೇನೋ. ವಿವಾದ ಉಲ್ಬಣಗೊಂಡ ನಂತರ, ಐಎಎಸ್ ಸಂಜೀವ್ ಖಿರ್ವಾರ್ ಅವರನ್ನು ಲಡಾಖ್‌ಗೆ ವರ್ಗಾಯಿಸಲಾಗಿದೆ, ಅದೇ ಸಮಯದಲ್ಲಿ ಅವರ ಪತ್ನಿ ರಿಂಕು ಧುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಲಾಗಿದೆ. ಎರಡು ರಾಜ್ಯಗಳ ನಡುವೆ ಸುಮಾರು 3,465 ಕಿಮೀ ಅಂತರವಿದೆ. ಇಬ್ಬರನ್ನೂ ಈ ಹಿಂದೆ ದೆಹಲಿಯಲ್ಲಿ ಪೋಸ್ಟ್ ಮಾಡಲಾಗಿತ್ತು.

ಏನಿದು ಪ್ರಕರಣ?:

ದೆಹಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ಕ್ರೀಡಾಪಟುಗಳು ಈ ಮೊದಲೆಲ್ಲಾ ರಾತ್ರಿ 8ರಿಂದ 8.30ರವರೆಗೆ ಅಭ್ಯಾಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ರಾತ್ರಿ 7 ಗಂಟೆಯ ನಂತರ ಅಭ್ಯಾಸ ಮಾಡಲು ಕ್ರೀಡಾಂಗಣ ಸಿಬ್ಬಂದಿ ಬಿಡುತ್ತಿಲ್ಲ. ಐಎಎಸ್‌ ಅಧಿಕಾರಿ ನಾಯಿ ಜತೆ ವಾಕ್‌ ಮಾಡಲು ಬರುತ್ತಾರೆ ಎಂಬ ಕಾರಣ ಕ್ರೀಡಾಂಗಣದಿಂದ ಬೇಗ ಹೊರಗೆ ಕಳುಹಿಸುತ್ತಿದ್ದಾರೆ. 

ತ್ಯಾಗರಾಜ್ ಕ್ರೀಡಾಂಗಣಕ್ಕೆ ಸಂಬಂಧಿಸಿದ ತರಬೇತುದಾರರು ಮತ್ತು ಕ್ರೀಡಾಪಟುಗಳು ತಮ್ಮ ತೊಂದರೆಗಳನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಅವರ ತರಬೇತಿ ಮತ್ತು ಅಭ್ಯಾಸದಲ್ಲಿ ತೊಂದರೆಯಾಗುತ್ತಿದೆ ಎಂದು ಕೋಚ್ ಹೇಳಿದ್ದರು. ಮೊದಲು 8.30 ಅಥವಾ ಕೆಲವೊಮ್ಮೆ 9 ರವರೆಗೆ ಅಭ್ಯಾಸ ಮಾಡುತ್ತಿದ್ದೆ ಎಂದು ಅವರು ಹೇಳಿದ್ದಾರೆ. ನಂತರ ಪ್ರತಿ ಅರ್ಧಗಂಟೆಗೊಮ್ಮೆ ಬಿಡುವು ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಹಾಗೆ ಮಾಡಲು ಸಾಧ್ಯವಿಲ್ಲ. ಇದೇ ವೇಳೆ 3 ಕಿ.ಮೀ ದೂರದ ಜವಾಹರಲಾಲ್ ನೆಹರೂ ಕ್ರೀಡಾಂಗಣಕ್ಕೆ ತೆರಳಲು ಆರಂಭಿಸಿದವರೂ ಇದ್ದಾರೆ.

ಈ ಹಿನ್ನೆಲೆಯಲ್ಲಿ ಆಂಗ್ಲದೈನಿಕವೊಂದರ ವರದಿಗಾರ ಕಳೆದೊಂದು ವಾರದಲ್ಲಿ ಮೂರು ದಿನ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟಿದ್ದರು. ಸಂಜೆ 6.30 ಆಗುತ್ತಿದ್ದಂತೆ ಕ್ರೀಡಾಂಗಣ ಸಿಬ್ಬಂದಿ ವಿಶಲ್‌ ಹೊಡೆಯುತ್ತಾ, ಜಾಗ ಖಾಲಿ ಮಾಡುವಂತೆ ಕ್ರೀಡಾಪಟುಗಳಿಗೆ ಸೂಚಿಸುತ್ತಿರುವುದು ಕಂಡುಬಂತು. ರಾತ್ರಿ 7ರ ವೇಳೆಗೆ ಇಡೀ ಕ್ರೀಡಾಂಗಣ ಖಾಲಿ ಮಾಡಿಸುತ್ತಿರುವುದು ಪತ್ತೆಯಾಯಿತು. ಅದಾದ ಅರ್ಧ ತಾಸಿನಲ್ಲಿ ನಾಯಿ ಜತೆ ಐಎಎಸ್‌ ಅಧಿಕಾರಿ ಖಿರ್ವಾರ್‌ ವಾಕಿಂಗ್‌ ಬರುವುದು ದೃಢಪಟ್ಟಿತು ಎಂದು ಪತ್ರಿಕೆ ವರದಿ ಮಾಡಿದೆ.

ಈ ನಡುವೆ, 1994ನೇ ಬ್ಯಾಚಿನ ಐಎಎಸ್‌ ಅಧಿಕಾರಿಯಾಗಿರುವ ಖಿರ್ವಾರ್‌ ಅವರು ಸ್ಪಷ್ಟನೆ ನೀಡಿದ್ದು, ಕೆಲವೊಮ್ಮೆ ನಾಯಿ ಜತೆ ವಾಕಿಂಗ್‌ಗೆ ಸ್ಟೇಡಿಯಂಗೆ ಹೋಗಿದ್ದು ನಿಜ. ಆದರೆ ಯಾವುದೇ ಕ್ರೀಡಾಳುವಿನ ಅಭ್ಯಾಸಕ್ಕೆ ತೊಂದರೆ ಮಾಡಿಲ್ಲ ಎಂದಿದ್ದಾರೆ.

2010ರ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕಾಗಿ ಈ ಸ್ಟೇಡಿಯಂ ನಿರ್ಮಾಣ ಮಾಡಲಾಗಿದೆ. ರಾಷ್ಟ್ರೀಯ, ರಾಜ್ಯ ಮಟ್ಟದ ಅಥ್ಲಿಟ್‌ಗಳು, ಫುಟ್‌ಬಾಲ್‌ ಆಟಗಾರರು ಇಲ್ಲಿ ಅಭ್ಯಾಸ ಮಾಡುತ್ತಾರೆ.

ವಿವಾದ ಉಲ್ಬಣಗೊಂಡಾಗ, ಕ್ರಮ ಕೈಗೊಳ್ಳಲು ಮುಂದಾದ ಸರ್ಕಾರ

ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ನಂತರ ವಿವಾದ ಮತ್ತಷ್ಟು ಹೆಚ್ಚಾಯಿತು. ಇದಾದ ಬಳಿಕ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಐಎಎಸ್ ಅಧಿಕಾರಿ ಸಂಜೀವ್ ಖಿರ್ವಾರ್ ಅವರನ್ನು ಲಡಾಖ್‌ಗೆ ಮತ್ತು ಅವರ ಪತ್ನಿಯನ್ನು ಅರುಣಾಚಲ ಪ್ರದೇಶಕ್ಕೆ ಸರ್ಕಾರ ವರ್ಗಾವಣೆ ಮಾಡಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿ ಅವರು ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.

3500 ಕಿ.ಮೀ ದೂರ ಆದ ಗಂಡ ಹೆಂಡತಿ

ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೊಧ ವ್ಯಕ್ತವಾಗಿದೆ. ಹೀಗಿರುವಾಗ ಅತ್ತ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ದೆಹಲಿಯಲ್ಲಿ ಪೋಸ್ಟಿಂಗ್‌ನಲ್ಲಿದ್ದ ಸಂಜೀವ್ ಖಿರ್ವಾರ್ ಅವರನ್ನು ಲಡಾಖ್‌ಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಅವರ ಪತ್ನಿಯನ್ನು ಅರುಣಾಚಲ ಪ್ರದೇಶಕ್ಕೆ ಟ್ರಾನ್ಸ್‌ಫರ್ ಮಾಡಲಾಗಿದೆ. ಅಧಿಕಾರಿಯ ಒಂದು ಚಿಕ್ಕ ಎಡವಟ್ಟಿನಿಂದ ಈಗ ಪತಿ, ಪತ್ನಿ ಇಬ್ಬರೂ 3500 ಕಿಲೋಮೀಟರ್ ದೂರ ಹೋಗಬೇಕಿದೆ. 

ಸಂಜೀವ್ ಖಿರ್ವಾರ್ ಯಾರು?

ಸಂಜೀವ್ ಖಿರ್ವಾರ್ 1994 ರ ಬ್ಯಾಚ್ ಐಎಎಸ್ ಅಧಿಕಾರಿ. ಪ್ರಸ್ತುತ ಅವರು ದೆಹಲಿಯ ಕಂದಾಯ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ದೆಹಲಿಯ ಎಲ್ಲಾ ಜಿಲ್ಲಾಧಿಕಾರಿಗಳು ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇದರೊಂದಿಗೆ ದೆಹಲಿಯ ಪರಿಸರ ಇಲಾಖೆಯ ಕಾರ್ಯದರ್ಶಿಯೂ ಆಗಿದ್ದರು. ಇವರು ಕಂಪ್ಯೂಟರ್ ಇಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಮಾಡಿದ್ದಾರೆ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಅವರು ಚಂಡೀಗಢದಲ್ಲಿ SDM ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ದೆಹಲಿಯ ಜೊತೆಗೆ, ಅವರು ಗೋವಾ ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ ಮತ್ತು ಭಾರತ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಖಿರ್ವಾರ್ ಹೇಳಿದ್ದೇನು?

ಮತ್ತೊಂದೆಡೆ, ಖಿರ್ವಾರ್ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು. ತಾನು ಅಪರೂಪಕ್ಕೊಮ್ಮೆ ನಾಯಿಯನ್ನು ವಾಕಿಂಗ್‌ಗೆ ಕರೆದೊಯ್ಯುತ್ತೇನೆ ಎಂದು ಹೆಳಿದ್ದರು, ಆದರೆ ಇದು ಕ್ರೀಡಾಪಟುಗಳ ಅಭ್ಯಾಸಕ್ಕೆ ಅಡ್ಡಿಯುಂಟು ಮಾಡುತ್ತದೆ ಎಂಬ ಮಾತನ್ನು ನಿರಾಕರಿಸಿದ್ದರು. ದೆಹಲಿ ಸರ್ಕಾರದ ನಿಯಂತ್ರಣದಲ್ಲಿರುವ ತ್ಯಾಗರಾಜ್ ಕ್ರೀಡಾಂಗಣವು 2010 ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಿದ್ಧವಾಗಿತ್ತು.