ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ೩೪ ವರ್ಷಗಳ ಸೇವೆಯಲ್ಲಿ ೫೭ ಬಾರಿ ವರ್ಗಾವಣೆಗೊಂಡು ನಿವೃತ್ತರಾದರು. ರಾಬರ್ಟ್ ವಾದ್ರಾ ಭೂಮಿ ವ್ಯವಹಾರದಲ್ಲಿ ಕ್ರಮ ಕೈಗೊಂಡಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಐಐಟಿ ಪದವೀಧರರಾದ ಖೇಮ್ಕಾ, ಭ್ರಷ್ಟಾಚಾರ ನಿಗ್ರಹಕ್ಕೆ ವಿಜಿಲೆನ್ಸ್ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದರು.

ಚಂಡೀಗಢ: ಕರ್ತವ್ಯದ ದಕ್ಷತೆಯ ಕಾರಣಕ್ಕಾಗಿ ತಮ್ಮ 34 ವರ್ಷಗಳ ವೃತ್ತಿ ಜೀವನದಲ್ಲಿ ವಿವಿಧ ಸರ್ಕಾರಗಳಿಂದ 57 ಬಾರಿ ವರ್ಗಾವಣೆಯ ಶಿಕ್ಷೆಗೆ ಗುರಿಯಾಗಿದ್ದ ಹಿರಿಯ ಐಎಎಸ್‌ ಅಧಿಕಾರಿ ಅಶೋಕ್‌ ಖೇಮ್ಕಾ ಬುಧವಾರ ನಿವೃತ್ತರಾಗಲಿದ್ದಾರೆ. 1991ನೇ ಬ್ಯಾಚ್‌ನ ಹರ್ಯಾಣ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದ ಖೇಮ್ಕಾ, 2012ರಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್‌ ವಾದ್ರಾಗೆ ಸೇರಿದ ಭೂಮಿಯ ಮ್ಯುಟೇಷನ್‌ ರದ್ದುಪಡಿಸುವ ಮೂಲಕ ಭಾರೀ ಸುದ್ದಿಯಾಗಿದ್ದರು. ನಂತರದ ವರ್ಷಗಳಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ಕಠಿಣ ಕ್ರಮ ಕೈಗೊಂಡ ಕಾರಣಕ್ಕಾಗಿ ಭಾರೀ ಪ್ರಮಾಣದಲ್ಲಿ ವರ್ಗಾವಣೆಗೆ ಒಳಗಾಗಿ ಸುದ್ದಿಯಾಗಿದ್ದರು. 2024ರಲ್ಲಿ ಸಾರಿಗೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಡೆಯ ಬಾರಿಗೆ ವರ್ಗ ಆಗಿದ್ದ ಖೇಮ್ಕಾ ಇದೀಗ ಅದೇ ಹುದ್ದೆಯಲ್ಲಿ ನಿವೃತ್ತಿಯಾಗುತ್ತಿದ್ದಾರೆ.

ಬಿಟೆಕ್ ಸೇರಿದಂತೆ ಹಲವು ಪದವಿ!
ಏಪ್ರಿಲ್ 30, 1965 ರಂದು ಕೋಲ್ಕತ್ತಾದಲ್ಲಿ ಜನಿಸಿರುವ ಅಶೋಕ್‌ ಖೇಮ್ಕಾ, 1988ರಲ್ಲಿ ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ (ಐಐಟಿ) ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ (ಬಿ.ಟೆಕ್) ಪದವಿ ಪಡೆದರು. ನಂತರ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್‌ಆರ್) ನಿಂದ ಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಮತ್ತು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಫೈನಾನ್ಸ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಲೇ ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ (ಎಲ್‌ಎಲ್‌ಬಿ) ಪಡೆದುಕೊಂಡಿದ್ದಾರೆ. 

ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯುವ ಪ್ರಸ್ತಾಪ
ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಾರಿಗೆ ಇಲಾಖೆಗೆ ಅಶೋಕ್ ಖೇಮ್ಕಾ ಹಿಂದಿರುಗಿದ್ದರು. ಸದ್ಯ ಹರಿಯಾಣ ಸಾರಿಗೆ ಸಚಿವಾಲಯದಲ್ಲಿ ಅಶೋಕ್ ಖೇಮ್ಕಾ ಸೇವೆ ಸಲ್ಲಿತ್ತಿದ್ದಾರೆ. ಈ ಹಿಂದೆ ಹರಿಯಾಣದ ಮನೋಹರ್ ಲಾಲ್ ಖಟ್ಟರ್ ಸರ್ಕಾರದ ಮೊದಲ ಅವಧಿ ವೇಳೆ ಸಾರಿಗೆ ವಿಭಾಗದ ಆಯುಕ್ತರಾಗಿದ್ದರು. ಆದರೆ ಖಟ್ಟರ್ ಸರ್ಕಾರ, ಅಶೋಕ್ ಖೇಮ್ಕಾ ಅವರನ್ನು ಸಾರಿಗೆ ಇಲಾಖೆಯಿಂದ ವರ್ಗಾವಣೆಗೊಳಿಸಿತ್ತು. 10 ವರ್ಷದ ಬಳಿಕ ಮತ್ತೆ ಸಾರಿಗೆ ಇಲಾಖೆಗೆ ಅಶೋಕ್ ಖೇಮ್ಕಾ ಹಿಂದಿರುಗಿದ್ದರು. ಮನೋಹರ್ ಲಾಲ್ ಖಟ್ಟರ್ ಸರ್ಕಾರದಲ್ಲಿ ಕೇವಲ ನಾಲ್ಕು ತಿಂಗಳು ಮಾತ್ರ ಸಾರಿಗೆ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

2023ರಲ್ಲಿ ಹರಿಯಾಣ ಸರ್ಕಾರಕ್ಕೆ ಪತ್ರ ಬರೆದಿದ್ದ ಅಶೋಕ್ ಖೇಮ್ಕಾ, Vigilance Departmentನಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕು.ತಾವು ಇಲ್ಲಿಯು "ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯುವ" ಪ್ರಸ್ತಾಪವನ್ನು ಮುಂದಿಟ್ಟಿದ್ದರು. ನನ್ನ ಸೇವೆಯ ಕೊನೆಯ ಹಂತದಲ್ಲಿ, ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯಲು ವಿಜಿಲೆನ್ಸ್ ಇಲಾಖೆಯ ಮುಖ್ಯಸ್ಥನಾಗಿ ನನ್ನ ಸೇವೆಯನ್ನು ನೀಡುತ್ತೇನೆ" ಎಂದು ಪತ್ರದಲ್ಲಿ ಬರೆದಿದ್ದರು. 

ಇದನ್ನೂ ಓದಿ: ಯುಪಿಎಸ್‌ಸಿ ಫಲಿತಾಂಶ: 12 ಅಂಕದಿಂದ ವಂಚಿತಳಾಗಿದ್ದ 'ಶಕ್ತಿ ದುಬೆ' ಈಗ ದೇಶಕ್ಕೆ ಟಾಪರ್!

ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉದ್ದೇಶದಿಂದ ನನ್ನ ವೃತ್ತಿಜೀವನವನ್ನು ತ್ಯಾಗ ಮಾಡಿದೆ ಎಂದು ಹೇಳಿದ್ದರು. ಈ ಸಮಯದಲ್ಲಿ ಪತ್ರಗಾರ ಇಲಾಖೆಯಲ್ಲಿ ನಿಯೋಜನೆ ಮಾಡಲಾಗಿತ್ತು. ಈ ಇಲಾಖೆಯಲ್ಲಿ ಹೆಚ್ಚು ಕೆಲಸವಿಲ್ಲದ ಕಾರಣ ಬೇಸರ ವ್ಯಕ್ತಪಡಿಸಿದ್ದರು. 

ಪ್ರತಿ 6 ತಿಂಗಳಿಗೊಮ್ಮೆ ವರ್ಗಾವಣೆ
12 ವರ್ಷಗಳಿಗೂ ಹೆಚ್ಚು ಕಾಲ, ಖೇಮ್ಕಾ ಅವರನ್ನು 'ಕೆಳ ಪ್ರೊಫೈಲ್' ಎಂದು ಪರಿಗಣಿಸಲಾದ ಇಲಾಖೆಗಳಲ್ಲಿ ನೇಮಿಸಲಾಗುತ್ತಿತ್ತು. ಅಶೋಕ್ ಖೇಮ್ಕಾ ಅವರನ್ನು ಪ್ರತಿ ಆರು ತಿಂಗಳಿಗೊಮ್ಮೆ ವರ್ಗಾವಣೆ ಮಾಡಲಾಗುತ್ತಿತ್ತು. ನಾಲ್ಕು ಬಾರಿ ರ್ಕೈವ್ಸ್ ಇಲಾಖೆಗೆ ಇವರನ್ನು ವರ್ಗಾಯಿಸಲಾಗಿತ್ತು. ನಾಲ್ಕರಲ್ಲಿ ಮೂರು ಬಾರಿ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ವರ್ಗಾವಣೆಗೊಂಡಿದ್ದರು. ಈ ಮೊದಲು ಅವರು ಆರ್ಕೈವ್ಸ್ ಇಲಾಖೆಯ ಮಹಾನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು, ನಂತರ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 2013 ರಲ್ಲಿ ಅವರನ್ನು ಮೊದಲು ಆರ್ಕೈವ್ಸ್ ಇಲಾಖೆಗೆ ವರ್ಗಾಯಿಸಲಾಯಿತು. 

ಇದನ್ನೂ ಓದಿ: ಎಐ ಫೋಟೋ ಶೇರ್ ಮಾಡಿದ ಐಎಎಸ್ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ನೀಡಿದ ಸರ್ಕಾರ