ತೆಲಂಗಾಣದಲ್ಲಿ ಮರಗಳ ಕಡಿಯುವಿಕೆಗೆ ಸಂಬಂಧಿಸಿದಂತೆ ಎಐ ನಿರ್ಮಿತ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಹಿರಿಯ ಐಎಎಸ್ ಅಧಿಕಾರಿ ಸ್ಮಿತಾ ಸಭರ್ವಾಲ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಹೈದರಾಬಾದ್: ಇಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯದ ಬಳಿಯ 400 ಎಕರೆ ಭೂಮಿಯಲ್ಲಿ ಮರಗಳನ್ನು ಕಡಿದು ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶಕ್ಕೆ ಮುಂದಾಗಿದ್ದ ತೆಲಂಗಾಣ ಕಾಂಗ್ರೆಸ್ ಸರ್ಕಾರ ನಂತರ ಸುಪ್ರೀಂಕೋರ್ಟ್ ಆದೇಶದ ನಂತರ ಈ ಮರಗಳ ಕಡಿಯುವ ಕೆಲಸಕ್ಕೆ ಬ್ರೇಕ್ ಹಾಕಿತ್ತು. ಆದರೆ ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಎಐ ನಿರ್ಮಿತ ಫೋಟೋವನ್ನು ಹಂಚಿಕೊಂಡಿದ್ದ ಹಿರಿಯ ಐಎಎಸ್ ಅಧಿಕಾರಿ ಸ್ಮಿತಾ ಸಭರ್ವಾಲ್ ಅವರಿಗೆ ತೆಲಂಗಾಣ ಸರ್ಕಾರ ವರ್ಗಾವಣೆ ಶಿಕ್ಷೆ ನೀಡಿದೆ. ಒಟ್ಟು 20 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಅದರಲ್ಲಿ ಸ್ಮಿತಾ ಸಭರ್ವಾಲ್ ಅವರು ಸೇರಿದ್ದಾರೆ.
ಈ ರೀತಿ ಫೋಟೋ ಹಂಚಿಕೊಂಡ ಕಾರಣಕ್ಕಾಗಿ ವಾರದ ಹಿಂದೆ ಐಎಎಸ್ ಅಧಿಕಾರಿ ಸ್ಮಿತಾ ಸಭರ್ವಾಲ್ ಅವರನ್ನು ಸೈಬರಾಬಾದ್ ಪೊಲೀಸ್ ಠಾಣೆಗೆ ಕರೆಸಿಕೊಳ್ಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ 200ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯೂ ಆಗಿರುವ ಸ್ಮಿತಾ ಅವರು ಈ ಪೋಸ್ಟನ್ನು 2000 ಸಾವಿರಕ್ಕೂ ಹೆಚ್ಚು ಮಂದಿ ಹಂಚಿಕೊಂಡಿದ್ದು, ತಮ್ಮಂತೆ ಅವರನ್ನು ಟಾರ್ಗೆಟ್ ಮಾಡುವಿರಾ ಎಂದು ಪ್ರಶ್ನಿಸಿದ್ದರು ಎಂದು ವರದಿಯಾಗಿದೆ. ಸ್ಮಿತಾ ಅವರು ಪ್ರಸ್ತುತ ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ, ಯುವಜನ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ (YAT&C)ಇಲಾಖೆ ನಿರ್ದೇಶಕಿ ಮತ್ತು ಪುರಾತತ್ತ್ವ ಇಲಾಖೆ ನಿರ್ದೇಶಕರಾಗಿದ್ದರು. ಅವರನ್ನು ಈಗ ತೆಲಂಗಾಣ ಹಣಕಾಸು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಅಂದರೆ ಕೇವಲ 5 ತಿಂಗಳ ಹಿಂದಷ್ಟೇ ಅವರನ್ನು YAT&C ಗೆ ವರ್ಗಾವಣೆ ಮಾಡಲಾಗಿತ್ತು.
ಇದನ್ನೂ ಓದಿ:ಉಗ್ರರಿಂದ ತಪ್ಪಿಸಿಕೊಂಡು ಮರವೇರಿ ಪೆಹಲ್ಗಾಮ್ ದಾಳಿ ಸಂಪೂರ್ಣ ದೃಶ್ಯ ಸೆರೆ ಹಿಡಿದ ಫೋಟೋಗ್ರಾಫರ್
ಮುಖ್ಯಮಂತ್ರಿಯವರ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಅವರು ಹಿಂದಿನ ಬಿಆರ್‌ಎಸ್ ಸರ್ಕಾರದ ಅಡಿಯಲ್ಲಿ ಪ್ರಭಾವಿ ಅಧಿಕಾರಿಯಾಗಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ಅವರನ್ನು ಮುಖ್ಯಮಂತ್ರಿ ಕಚೇರಿಯಿಂದ (ಸಿಎಂಒ) ವರ್ಗಾಯಿಸಲಾಯಿತು ಮತ್ತು ತೆಲಂಗಾಣ ಹಣಕಾಸು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಹಾಗೆಯೇ ಇನ್ನು ಹಲವು ಅಧಿಕಾರಿಗಳನ್ನು ತೆಲಂಗಾಣ ಸರ್ಕಾರ ವರ್ಗಾವಣೆ ಮಾಡಿದೆ. ಅವರಲ್ಲಿ ಐಟಿಇ ಮತ್ತು ಸಿ ಮತ್ತು ಕ್ರೀಡಾ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿದ್ದ ಜಯೇಶ್ ರಂಜನ್ ಅವರನ್ನು ಸಿಎಂಒ ಮತ್ತು ಸ್ಮಾರ್ಟ್ ಪ್ರೊಆಕ್ಟಿವ್ ಎಫಿಷಿಯೆಂಟ್ ಅಂಡ್ ಎಫೆಕ್ಟಿವ್ ಡೆಲಿವರಿ (SPEED) ನಲ್ಲಿ ಕೈಗಾರಿಕೆ ಮತ್ತು ಹೂಡಿಕೆ ಕೋಶದ ವಿಶೇಷ ಮುಖ್ಯ ಕಾರ್ಯದರ್ಶಿ ಮತ್ತು ಸಿಇಒ ಆಗಿ ನೇಮಿಸಲಾಗಿದೆ. 1992 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ಜಯೇಶ್ ರಂಜನ್ ಅವರಿಗೆ ವೈಎಟಿ ಮತ್ತು ಸಿ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಮತ್ತು ಪುರಾತತ್ವ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ.
ಇದನ್ನೂ ಓದಿ:ಉಗ್ರರ ದಾಳಿ ಬಳಿಕ ದೇಶದ ರಕ್ತ ಕುದಿಯುತ್ತಿದೆ: ಪ್ರಧಾನಿ ಮೋದಿ
ಕಾರ್ಮಿಕ, ಉದ್ಯೋಗ, ತರಬೇತಿ ಮತ್ತು ಕಾರ್ಖಾನೆಗಳು (LET&F) ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಸಂಜಯ್ ಕುಮಾರ್ ಅವರನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಐಟಿಇ ಮತ್ತು ಸಿ ಮತ್ತು ಕ್ರೀಡಾ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಡಾ. ಎಂಸಿಆರ್ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕ ಡಾ. ಶಶಾಂಕ್ ಗೋಯೆಲ್ ಅವರನ್ನು ಸೆಂಟರ್ ಫಾರ್ ಗುಡ್ ಗವರ್ನೆನ್ಸ್‌ನ ಉಪಾಧ್ಯಕ್ಷರನ್ನಾಗಿ ವರ್ಗಾವಣೆ ಮಾಡಲಾಗಿದೆ. ಇಪಿಟಿಆರ್‌ಐ ಮಹಾನಿರ್ದೇಶಕ ಹುದ್ದೆಯ ಪೂರ್ಣ ಹೆಚ್ಚುವರಿ ಹೊಣೆಯನ್ನೂ ಅವರಿಗೆ ವಹಿಸಲಾಗಿದ್ದು, ಅಹ್ಮದ್ ನದೀಮ್ ಅವರನ್ನು ಈ ಪೂರ್ಣ ಹೆಚ್ಚುವರಿ ಹೊಣೆಯಿಂದ ಮುಕ್ತಗೊಳಿಸಲಾಗಿದೆ.
ಈ ಹಿಂದೆ ಪೌರಾಡಳಿತ ಮತ್ತು ನಗರಾಭಿವೃದ್ಧಿ (MA&UD) ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ. ದಾನ ಕಿಶೋರ್ ಅವರನ್ನು ಕಾರ್ಮಿಕ, ಉದ್ಯೋಗ, ತರಬೇತಿ ಮತ್ತು ಕಾರ್ಖಾನೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಅವರಿಗೆ ಕಾರ್ಮಿಕ ಆಯುಕ್ತರು, ವಿಮಾ ವೈದ್ಯಕೀಯ ಸೇವೆಗಳ ನಿರ್ದೇಶಕರು ಮತ್ತು ಉದ್ಯೋಗ ಮತ್ತು ತರಬೇತಿ ನಿರ್ದೇಶಕರ ಪೂರ್ಣ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಲಾಗಿದೆ. ಇದರ ಜೊತೆಗೆ ಅವರು ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಹುದ್ದೆಯ ಪೂರ್ಣ ಹೆಚ್ಚುವರಿ ಉಸ್ತುವಾರಿಯಲ್ಲಿ ಮುಂದುವರಿಯಲಿದ್ದಾರೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಆಯುಕ್ತರಾಗಿದ್ದ ಇಲಂಬರಿತಿ ಕೆ. ಅವರನ್ನು ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರ (HMDA) ಮಿತಿಗಳನ್ನು ಒಳಗೊಂಡಿರುವ ಮಹಾನಗರ ಪ್ರದೇಶ ಮತ್ತು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕ ಆರ್.ವಿ. ಕರ್ಣನ್ ಅವರನ್ನು ಜಿಎಚ್‌ಎಂಸಿಯ ಹೊಸ ಆಯುಕ್ತರಾಗಿ ವರ್ಗಾಯಿಸಲಾಗಿದೆ.
ಪೌರಾಡಳಿತ ಆಯುಕ್ತರು ಮತ್ತು ನಿರ್ದೇಶಕಿ ಟಿ.ಕೆ. ಶ್ರೀದೇವಿ ಅವರನ್ನು ಎಚ್‌ಎಂಡಿಎ ಮಿತಿಯ ಹೊರಗಿನ ಪ್ರದೇಶಗಳ ಪೌರಾಡಳಿತ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಹೊರ ವರ್ತುಲ ರಸ್ತೆ (ಒಆರ್‌ಆರ್) ಪ್ರದೇಶದ ಹೊರಗಿನ ಪುರಸಭೆಗಳು ಮತ್ತು ನಿಗಮಗಳಿಗೆ ಆಯುಕ್ತರು ಮತ್ತು ಪೌರಾಡಳಿತ ನಿರ್ದೇಶಕಿಯಾಗಿ ಅವರು ಪೂರ್ಣ ಹೆಚ್ಚುವರಿ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ.
ಶಾಲಾ ಶಿಕ್ಷಣ ನಿರ್ದೇಶಕ ಇ.ವಿ. ನರಸಿಂಹ ರೆಡ್ಡಿ ಅವರನ್ನು ಕೈಗಾರಿಕೆ ಮತ್ತು ಹೂಡಿಕೆ ಕೋಶ ಮತ್ತು ಸ್ಪೀಡ್‌ನ ಹೆಚ್ಚುವರಿ ಸಿಇಒ ಆಗಿ ನೇಮಿಸಲಾಗಿದೆ. ಅವರನ್ನು ಮುಸಿ ನದಿ ಅಭಿವೃದ್ಧಿ ನಿಗಮ ಲಿಮಿಟೆಡ್ (ಎಂಆರ್‌ಡಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಪೂರ್ಣ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.
