ನವದೆಹಲಿ(ಆ.22): ವಿಶ್ವದ ಅತ್ಯಾಧುನಿಕ ಸಮರ ವಿಮಾನಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುವ ಹಾಗೂ ಕಳೆದ ತಿಂಗಳಷ್ಟೇ ಭಾರತಕ್ಕೆ ಬಂದಿಳಿದಿರುವ 5 ರಫೇಲ್‌ ಯುದ್ಧ ವಿಮಾನಗಳು ವಾಯುಪಡೆಗೆ ಸೇರುವ ಅಧಿಕೃತ ಕಾರ್ಯಕ್ರಮ ಮಾಸಾಂತ್ಯ ಅಥವಾ ಸೆಪ್ಟೆಂಬರ್‌ ಮೊದಲ ವಾರ ಹರಾರ‍ಯಣದ ಅಂಬಾಲಾ ವಾಯುನೆಲೆಯಲ್ಲಿ ನಡೆಯುವ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್‌ ರಕ್ಷಣಾ ಸಚಿವ ಫ್ಲೋರೆನ್ಸ್‌ ಪಾರ್ಲಿ ಅವರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಇವೆ ಎಂದು ವರದಿಗಳು ತಿಳಿಸಿವೆ.

ಚೀನಾ ಗಡಿಗೆ ಎಚ್‌ಎಎಲ್‌ನ 2 ಲಘು ಕಾಪ್ಟರ್‌ ನಿಯೋಜನೆ!

ಚೀನಾ ಹಾಗೂ ಪಾಕಿಸ್ತಾನ ಜತೆಗಿನ ಸಂಘರ್ಷದ ಸಂದರ್ಭದಲ್ಲೇ ಆ ಎರಡೂ ದೇಶಗಳ ಬಳಿ ಇರುವ ಸಮರ ವಿಮಾನಗಳಿಗಿಂತ ಅಧಿಕ ಸಾಮರ್ಥ್ಯ ಹೊಂದಿರುವ ರಫೇಲ್‌ ಯುದ್ಧ ವಿಮಾನಗಳ ಸೇರ್ಪಡೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ವಾಯುಪಡೆ ಉದ್ದೇಶಿಸಿದೆ. ತನ್ಮೂಲಕ ಚೀನಾ ಹಾಗೂ ಪಾಕಿಸ್ತಾನಕ್ಕೆ ಪ್ರಬಲ ಸಂದೇಶ ರವಾನಿಸಿದಂತಾಗುತ್ತದೆ ಎಂದು ವರದಿಗಳು ತಿಳಿಸಿವೆ.

ಹಬ್ಬ ಆಚರಣೆಗೆ ಮನೆಗೆ ಬಂದಿದ್ದ ಯೋಧ ನಾಪತ್ತೆ; ಉಗ್ರಗಾಮಿಗಳಿಂದ ಕಿಡ್ನಾಪ್?

ಇನ್ನಷ್ಟುವಿಮಾನಗಳಿಗೆ ಆರ್ಡರ್‌ ನೀಡಿದರೆ ‘ಮೇಕ್‌ ಇನ್‌ ಇಂಡಿಯಾ’ದಡಿ ರಫೇಲ್‌ ವಿಮಾನಗಳನ್ನು ಉತ್ಪಾದಿಸಿಕೊಡುವ ಭರವಸೆಯನ್ನು ಅಂಬಾಲಾ ವಾಯುನೆಲೆ ಕಾರ್ಯಕ್ರಮದ ಸಂದರ್ಭದಲ್ಲೇ ಫ್ರಾನ್ಸ್‌ ನೀಡುವ ಸಂಭವ ಇದೆ ಎಂದೂ ಹೇಳಲಾಗುತ್ತಿದೆ.

ಜು.29ರಂದು 5 ರಫೇಲ್‌ ಯುದ್ಧ ವಿಮಾನಗಳು ಅಂಬಾಲಾ ವಾಯುನೆಲೆಯಲ್ಲಿ ಇಳಿದಿದ್ದವು. ಈ ಪೈಕಿ ಮೂರು ವಿಮಾನಗಳು ಸಿಂಗಲ್‌ ಸೀಟ್‌ ಆಗಿದ್ದರೆ, ಎರಡು ವಿಮಾನಗಳಲ್ಲಿ ಎರಡು ಸೀಟುಗಳು ಇದ್ದವು. ಫ್ರಾನ್ಸ್‌ನಿಂದ 59 ಸಾವಿರ ಕೋಟಿ ರು. ವೆಚ್ಚದಲ್ಲಿ 36 ರಫೇಲ್‌ ವಿಮಾನಗಳನ್ನು ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿದೆ. ಉಳಿಕೆ ವಿಮಾನಗಳು ಮುಂದಿನ ವರ್ಷಾಂತ್ಯದೊಳಗೆ ಭಾರತದ ಕೈ ಸೇರಲಿವೆ.