Ex-Air Force Officer Donates ₹1.6 Cr Land for Football Ground ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ, 86 ವರ್ಷದ ಮಾಜಿ ವಾಯುಪಡೆ ಅಧಿಕಾರಿಯೊಬ್ಬರು ತಮ್ಮ ದಿವಂಗತ ಮಗನ ನೆನಪಿಗಾಗಿ 1.6 ಕೋಟಿ ರೂ. ಮೌಲ್ಯದ ಜಮೀನನ್ನು ಕ್ರೀಡಾಂಗಣ ನಿರ್ಮಿಸಲು ಪಂಚಾಯತ್‌ಗೆ ದಾನ ಮಾಡಿದ್ದಾರೆ.
ಬೆಂಗಳೂರು (ಅ.11): ಒಂದು ತುಂಡು ಜಾಗಕ್ಕಾಗಿ ಅಣ್ಣ-ತಮ್ಮನೇ ಕತ್ತಿ ಕೊಡಲಿ ಹಿಡಿದುಕೊಳ್ಳುವ ಸಮಯದಲ್ಲಿ ತನ್ನ ಮಗನ ನೆನಪಿಗಾಗಿ ವ್ಯಕ್ತಿಯೊಬ್ಬರು 1.6 ಕೋಟಿ ಮೌಲ್ಯದ ಜಾಗವನ್ನು ಸ್ಪೋರ್ಟ್ಸ್ ಗ್ರೌಂಡ್‌ಗಾಗಿ ದಾನ ಮಾಡಿದ್ದಾರೆ. ಕೇರಳದಲ್ಲಿ ಈ ಘಟನೆ ನಡೆದಿದ್ದು ಕೊಟ್ಟಾಯಂ ಜಿಲ್ಲೆಯ ಕನಕರಿ ಗ್ರಾಮದಲ್ಲಿ ಸರಿಯಾದ ಕ್ರೀಡಾಂಗಣವಿಲ್ಲದೆ ದಶಕಗಳೇ ಕಳೆದಿದ್ದತ್ತು. ಆದರೆ, 86 ವರ್ಷದ ಏರ್‌ಫೋರ್ಸ್ ಮಾಜಿ ಅಧಿಕಾರಿ, ಜಿಮ್ಮಿ ಎಂದು ಸ್ಥಳೀಯರಿಂದ ಪ್ರೀತಿಯಿಂದ ಕರೆಯಲ್ಪಟ್ಟಿರುವ ಜೇಮ್ಸ್ ಕೊಲವೆಲಿಲ್, ತಮ್ಮ 80 ಸೆಂಟ್ ಜಮೀನನ್ನು ಕ್ರೀಡಾಂಗಣ ಮಾಡುವ ಉದ್ದೇಶದಿಂದಲೇ ಪಂಚಾಯತ್‌ಗೆ ದಾನ ಮಾಡಿದ್ದಾರೆ. ಈ ಮೈದಾನದಲ್ಲಿ ಮಕ್ಕಳು ಹಾಗೂ ಯುವಕರು ಫುಟ್‌ಬಾಲ್ ಆಡಲು ನೋಡಬೇಕು ಅನ್ನೋದಷ್ಟೇ ತಮ್ಮ ಏಕೈಕ ಉದ್ದೇಶ ಎಂದಿದ್ದಾರೆ.
ಕುರುಮಲ್ಲೂರಿನಲ್ಲಿರುವ ಮತ್ತು 1.6 ಕೋಟಿಗೂ ಹೆಚ್ಚು ಮೌಲ್ಯದ ಈ ಭೂಮಿಯನ್ನು ಈಗ ಫುಟ್ಬಾಲ್ ಮೈದಾನವಾಗಿ ಪರಿವರ್ತಿಸಲಾಗುತ್ತದೆ. ಜೇಮ್ಸ್ ಅವರ ಪಾಲಿಗೆ ಈ ನಿರ್ಧಾರ ಮಾಡೋದು ಬಹಳ ಸರಳವಾಗಿತ್ತು. ನನ್ನಲ್ಲಿ ಎಂಟರಿಂದ ಹತ್ತು ಇತರ ನಿವೇಶನಗಳಿವೆ. ಇನ್ನು ನಾನ ಬಳಸುತ್ತಿರಲಿಲ್ಲ. ಇಲ್ಲಿನ ಸ್ಥಳೀಯ ಯುವಕರು ವರ್ಷಗಳ ಹಿಂದೆ ಸ್ಪೋರ್ಟ್ಸ್ ಗ್ರೌಂಡ್‌ಗಾಗಿ ಭೂಮಿಯನ್ನು ಖರೀದಿ ಮಾಡುವ ವಿಚಾರದಲ್ಲಿ ನನ್ನ ಬಳಿ ಕೇಳಿ ಬಂದಿದ್ದರು. ಆಗ, ನಾನು ಈ ಜಾಗವನ್ನು ಅವರಿಗೆ ಯಾಕೆ ನೀಡಬಾರದು ಎಂದು ಯೋಚಿಸಿದ್ದೆ ಎಂದಿದ್ದಾರೆ.
ಇನ್ನು ಜಾಗವನ್ನು ದಾನ ನೀಡಿದ್ದಲ್ಲಿ ಅವರ ವೈಯಕ್ತಿಕ ಹಿತಾಸಕ್ತಿಯೂ ಇದೆ. ಅದೇನೆಂದರೆ ತಮ್ಮ ಮಗನ ನೆನಪು. ಜೇಮ್ಸ್ ಅವರ ಪುತ್ರ ಫಿಲಿಪ್ ಜೇಮ್ಸ್ 2017ರಲ್ಲಿ ತಮ್ಮ 42ನೇ ವಯಸ್ಸಿನಲ್ಲಿ ನಿಧನರಾದರು. ಆತನ ಹೆಸರಲ್ಲಿ ಸ್ಮಾರಕ ಮಾಡಬೇಕು ಎಂದು ಬಯಸಿದ್ದೆ. ಈ ಮೈದಾನ ಆತನ ನೆನಪನ್ನು ಜೀವಂತವಾಗಿರುತ್ತದೆ. ಆದರೆ, ಕನಕರಿಯ ಯುವಕರಿಗೆ ಸಂತೋಷ ಹಾಗೂ ಅವಕಾಶ ನೀಡುತ್ತದೆ. ಈ ಮೈದಾನದಲ್ಲಿ ಮಕ್ಕಳು ಫುಟ್‌ಬಾಲ್ ಆಡುವುದನ್ನು ನೋಡುವಾಗ ನನ್ನ ಮಗ ಜೀವಂತವಿದ್ದಾನೆ ಎಂದು ಅನಿಸುತ್ತದೆ ಎಂದು ಜೇಮ್ಸ್ ಭಾವುಕವಾಗಿ ಹೇಳಿದ್ದಾರೆ.
ವಾಯುಪಡೆಯ ಮಾಜಿ ಅಧಿಕಾರಿಯಾಗಿದ್ದರೂ, ಜೇಮ್ಸ್ ಅವರ ಜೀವನ ಸುಲಭವಾಗಿರಲಿಲ್ಲ. 2016ರಲ್ಲಿ ಪತ್ನಿ ತೀರಿ ಹೋಗಿದ್ದರೆ, ಇನ್ನಿಬ್ಬರು ಮಕ್ಕಳು ವಿದೇಶದಲ್ಲಿ ನೆಲಸಿದ್ದಾರೆ. ಏಕಾಂಗಿಯಾಗಿ ವಾಸವಿರುವ ಅವರನ್ನು ಕೇರ್‌ಟೇಕರ್‌ಗಳೇ ನೋಡಿಕೊಳ್ಳುತ್ತಿದ್ದಾರೆ. ಆದರೆ, ಸಮುದಾಯದ ಬಗ್ಗೆ ಅವರ ಬದ್ಧತೆ ಅಚಲವಾಗಿದೆ. 'ನನ್ನ ಇತರ ಮಕ್ಕಳಿಗೆ ಭೀಮಿಯ ಅಗತ್ಯವಿಲ್ಲ.ಆ ಕಾರಣದಿಂದ ಈ ಭೂಮಿ ಅದರ ಉದ್ದೇಶವನ್ನು ಪೂರೈಸಬೇಕು. ಅದು ನನಗೆ ಖುಷಿ ನೀಡುತ್ತದೆ' ಎಂದಿದ್ದಾರೆ.
ಭಾರತೀಯ ವಾಯುಸೇನೆಯಲ್ಲಿ 15 ವರ್ಷ ಕೆಲಸ ಮಾಡಿದ್ದ ಜೇಮ್ಸ್, ನಿವೃತ್ತಿಯ ಬಳಿಕ ಪತ್ನಿಯ ಜೊತೆ ಕುವೈತ್‌ನಲ್ಲಿ ವಾಸವಿದ್ದರು. ಕೊನೆಗೆ ತಮ್ಮೂರು ಕೇರಳಕ್ಕೆ ಮರಳಿದ್ದರು.
ಫುಟ್‌ಬಾಲ್ ಮೈದಾನ ನಿರ್ಮಾಣ ಕಾರ್ಯ ಆರಂಭ
ಗುರುವಾರ ಕೊಟ್ಟಾಯಂ ಜಿಲ್ಲಾಧಿಕಾರಿ ಚೇತನ್ ಕುಮಾರ್ ಮೀನಾ ಅವರು ಉದ್ಘಾಟಿಸುವ ಮೂಲಕ ಫುಟ್ಬಾಲ್ ಮೈದಾನ ಯೋಜನೆ ಅಧಿಕೃತವಾಗಿ ಆರಂಭವಾಯಿತು. ವರ್ಷಗಳಿಂದ ಕೈಬಿಡಲಾದ ಜೌಗು ಪ್ರದೇಶವಾದ ಈ ಭೂಮಿಯನ್ನು ಮೊದಲು ಎತ್ತರಿಸಿ ಸಮತಟ್ಟು ಮಾಡಲಾಗುತ್ತದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (NREGS) ಅಡಿಯಲ್ಲಿ ನೌಕರರನ್ನು ಈ ಕೆಲಸಕ್ಕಾಗಿ ಬಳಸಿಕೊಳ್ಳಲಾಗುವುದು, ಆದರೆ ಕನಕರಿ ಪಂಚಾಯತ್ ನೇಮಿಸಿದ ಎಂಜಿನಿಯರ್‌ಗಳು ಮೈದಾನದ ನಿರ್ಮಾಣವನ್ನು ನೋಡಿಕೊಳ್ಳುತ್ತಾರೆ.
ಯೋಜನೆಯ ಅಂದಾಜು ಬಜೆಟ್ 50 ಲಕ್ಷ ಎಂದು ಪಂಚಾಯತ್ ಅಧ್ಯಕ್ಷೆ ಅಂಬಿಕಾ ಸುಕುಮಾರನ್ ಹೇಳಿದ್ದಾರೆ/ "ಪಂಚಾಯತ್ 15 ಲಕ್ಷ ರೂ.ಗಳನ್ನು ಹಂಚಿಕೆ ಮಾಡಿದೆ, ಮತ್ತು NREGS ನಿಂದ ಸುಮಾರು 20 ಲಕ್ಷ ರೂ.ಗಳು ಬರಲಿವೆ. ಭೂಮಿಯನ್ನು ಸಮತಟ್ಟು ಮಾಡಲು ಸುಮಾರು 10 ಲಕ್ಷ ರೂ.ಗಳು, ಮಾರ್ಗಗಳಿಗೆ ಇನ್ನೂ 10 ಲಕ್ಷ ರೂ.ಗಳು ಮತ್ತು ಇಂಟರ್‌ಲಾಕಿಂಗ್ ಮತ್ತು ಕಾಂಪೌಂಡ್ ಗೋಡೆಗಳಿಗೆ ಸುಮಾರು 15 ಲಕ್ಷ ರೂ.ಗಳನ್ನು ಬಳಸಲಾಗುವುದು." ಎಂದು ಮಾಹಿತಿ ನೀಡಿದ್ದಾರೆ.
ಈ ಉಪಕ್ರಮವು ಗ್ರಾಮದ ಸಾಮೂಹಿಕ ಪ್ರಯತ್ನವನ್ನು ಸಹ ಪ್ರತಿಬಿಂಬಿಸಿದೆ. ಆರಂಭದಲ್ಲಿ ಮೂವತ್ಮೂರು ಸ್ಥಳೀಯ ಯುವಕರು ಮೈದಾನಕ್ಕಾಗಿ ಪ್ರಚಾರ ಮಾಡಿದ್ದರು, ಅವರಲ್ಲಿ ಹಲವರು ಈಗ ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರು ಮಾರ್ಗಗಳು ಮತ್ತು ಭೂ ಪರಿವರ್ತನೆ ಶುಲ್ಕಕ್ಕಾಗಿ ಸುಮಾರು 8 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು, ಕನಸಿನತ್ತ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು. ಪಂಚಾಯತ್ ಉಪಾಧ್ಯಕ್ಷ ಬಿಜು ಪಝಾಯಪುರಕ್ಕಲ್ ಯುವಕರನ್ನು ಶ್ಲಾಘಿಸಿದ್ದು, "ಈ ಯೋಜನೆಯು ಇಡೀ ಸಮುದಾಯಕ್ಕೆ ಸೇರಿದೆ ಎಂದು ಅವರ ಕೊಡುಗೆ ತೋರಿಸುತ್ತದೆ" ಎಂದು ಹೇಳಿದರು.
ವಾರ್ಡ್ ಸದಸ್ಯೆ ವಿನೀತಾ ರಾಗೇಶ್ ಜೇಮ್ಸ್ ಅವರ ಸರಳತೆ ಮತ್ತು ಔದಾರ್ಯವನ್ನು ನೆನಪಿಸಿಕೊಂಡರು. "ಅವರು ತಮ್ಮ ಮಗನ ನೆನಪಿಗಾಗಿ ಈ ಭೂಮಿಯನ್ನು ದಾನ ಮಾಡಲು ಬಯಸುವುದಾಗಿ ಪಂಚಾಯತ್‌ಗೆ ತಿಳಿಸಿದರು. ಅವರಿಗೆ ಬೇರೆ ಯಾವುದೇ ಬೇಡಿಕೆಗಳು ಅಥವಾ ಷರತ್ತುಗಳು ಇರಲಿಲ್ಲ." ಎಂದಿದ್ದಾರೆ
ಕನಕರಿಯ ಮಕ್ಕಳಿಗೆ, ಹೊಸ ಫುಟ್ಬಾಲ್ ಮೈದಾನವು ಆಟವಾಡಲು ಕೇವಲ ಒಂದು ಸ್ಥಳವಷ್ಟೇ ಅಲ್ಲ. ಇದು ಭರವಸೆ, ಅವಕಾಶ ಮತ್ತು ದಾನದ ನಿರಂತರ ಮನೋಭಾವವನ್ನು ಸಂಕೇತಿಸುತ್ತದೆ. ಜೇಮ್ಸ್ ಕೊಲವೆಲಿಲ್‌ಗೆ, ಇದು ತನ್ನ ಮಗನನ್ನು ಗೌರವಿಸಲು, ತನ್ನ ಸಮುದಾಯಕ್ಕೆ ಕೊಡುಗೆ ನೀಡಲು ಮತ್ತು ಬಳಕೆಯಾಗದ ಭೂಮಿಯನ್ನು ಮುಂದಿನ ಪೀಳಿಗೆಗೆ ಮುಟ್ಟುವ ಉದ್ದೇಶವನ್ನು ನೀಡಲು ಒಂದು ಅವಕಾಶವಾಗಿದೆ. ಪಂಚಾಯತ್‌ಗಳಲ್ಲಿ ಆಟದ ಮೈದಾನಗಳನ್ನು ಹೊಂದುವ ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ.
