ಕಾರ್ಪೊರೆಟ್‌ ಕಂಪನಿಗಳ ಉನ್ನತ ಅಧಿಕಾರಿಗಳ ಹೆಸರಿನಲ್ಲಿ ನಡೆಯುತ್ತಿರುವ 'ಬಾಸ್‌ ಸ್ಕ್ಯಾಮ್‌' ಎಂಬ ಹೊಸ ಸೈಬರ್ ವಂಚನೆ ಬಗ್ಗೆ ಭಾರತೀಯ ಸೈಬರ್ ಕ್ರೈಮ್ ಸಂಯೋಜನಾ ಕೇಂದ್ರ (ಐ4ಸಿ) ಎಚ್ಚರಿಕೆ ನೀಡಿದೆ. ವಂಚಕರು ಅಧಿಕಾರಿಗಳ ವಾಟ್ಸಾಪ್ ಹ್ಯಾಕ್ ಮಾಡಿ, ಹಣಕಾಸು ವಿಭಾಗಕ್ಕೆ ಹಣ ವರ್ಗಾಯಿಸಲು ಸಂದೇಶ ಕಳುಹಿ ವಂಚನೆ

ನವದೆಹಲಿ (ಜೂ.23): ಕಾರ್ಪೊರೆಟ್‌ ಕಂಪನಿಗಳ ಸಿಇಒ, ಎಂಡಿ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ‘ಬಾಸ್‌ ಸ್ಕ್ಯಾಮ್‌’ ವಂಚನೆ ಜಾಲದ ಕುರಿತು ಎಚ್ಚರಿಕೆಯಿಂದಿರುವಂತೆ ಭಾರತೀಯ ಸೈಬರ್ ಕ್ರೈಮ್ ಸಂಯೋಜನಾ ಕೇಂದ್ರ (ಐ4ಸಿ) ಎಚ್ಚರಿಕೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಬಾಸ್‌ ಸ್ಕ್ಯಾಮ್‌?:

ಸೈಬರ್‌ ವಂಚಕರು ಕಂಪನಿಯ ಉನ್ನತ ಅಧಿಕಾರಿಗಳನ್ನು ಇಮೇಲ್ ಅಥವಾ ವಾಟ್ಸಾಪ್‌ನಲ್ಲಿ ಸಂಪರ್ಕಿಸುತ್ತಾರೆ. ಆರ್‌ಬಿಐ ಅಧಿಕಾರಿಗಳಂತೆ ನಟಿಸಿ, ಅಧಿಕಾರಿಗಳ ಫೋನ್/ಕಂಪ್ಯೂಟರ್‌ಗೆ ಮಾಲ್‌ವೇರ್ (ವಂಚನೆ ಸಾಫ್ಟ್‌ವೇರ್) ಕಳಿಸುತ್ತಾರೆ. ಅಧಿಕಾರಿ ಫೈಲ್ ತೆರೆದ ತಕ್ಷಣ ಮಾಲ್‌ವೇರ್ ಅವರ ವಾಟ್ಸಾಪ್ ಅನ್ನು ಹ್ಯಾಕ್ ಮಾಡುತ್ತದೆ.

ನಂತರ ಆ ಅಧಿಕಾರಿಯ ನಿಜವಾದ ವಾಟ್ಸಾಪ್‌ನಿಂದಲೇ ಆಕೌಂಟ್ಸ್ / ಫೈನಾನ್ಸ್ ವಿಭಾಗದವರಿಗೆ ಸಂದೇಶ ಕಳಿಸಿ, ನಿರ್ದಿಷ್ಟ ಖಾತೆಗೆ ತುರ್ತಾಗಿ ಹಣ ವರ್ಗಾವಣೆ ಮಾಡುವಂತೆ ಆದೇಶಿಸುತ್ತಾರೆ. ಹೀಗೆ ಆ ಹಣ ವಂಚಕರ ಕೈಸೇರುತ್ತದೆ.

ಐ4ಸಿ ಎಚ್ಚರಿಕೆ:

ವಾಟ್ಸಾಪ್ ಅಥವಾ ಇಮೇಲ್‌ನಲ್ಲಿ ಬಂದ ತುರ್ತು ಹಣ ವರ್ಗಾವಣೆ ಆದೇಶಗಳನ್ನು ನಂಬಬೇಡಿ. ಫೋನ್ ಮಾಡಿ ಅಥವಾ ನೇರವಾಗಿ ಖಚಿತಪಡಿಸಿಕೊಳ್ಳಿ. ಅಪರಿಚಿತ ಫೈಲ್‌ಗಳನ್ನು ತೆರೆಯಬೇಡಿ. ಆರ್‌ಬಿಐ ಎಂದಿಗೂ ವಾಟ್ಸಾಪ್‌ನಲ್ಲಿ ಲಿಂಕ್ ಅಥವಾ ಫೈಲ್ ಕಳುಹಿಸುವುದಿಲ್ಲ. ಕಂಪನಿಗಳು ಈ ಬಗ್ಗೆ ತಮ್ಮ ಉದ್ಯೋಗಿಗಳಿಗೆ ತರಬೇತಿ ನೀಡಬೇಕು. ಕಂಪ್ಯೂಟರ್‌ನಲ್ಲಿ ಅಪರಿಚಿತ ಫೈಲ್‌ಗಳು (ವಿಶೇಷವಾಗಿ .exe ಮತ್ತು .dll) ತಾನಾಗಿಯೇ ತೆರೆಯದಂತೆ ಐಟಿ ತಂಡವು ಬಲವಾದ ನಿಯಮಗಳನ್ನು ತರಬೇಕು. ಇದು ಬಾಸ್ ಸ್ಕ್ಯಾಮ್‌ನಂತಹ ಮೋಸಗಳಿಂದ ರಕ್ಷಣೆ ನೀಡುತ್ತದೆ ಎಂದು ಮನವಿ ಮಾಡಿದೆ.