ಸಾಮಾನ್ಯವಾಗಿ ಕಳ್ಳರು ಕದ್ದ ಮಾಲನ್ನು ಮಾರಿ ಐಷಾರಾಮಿ ಜೀವನ ನಡೆಸುತ್ತಾರೆ. ಆದರೆ ಈ ಕಳ್ಳರು ಪಶ್ಚಾತ್ತಾಪ ಪಟ್ಟು ಮಾಲನ್ನು ಮರಳಿಸಿರುವುದು ಈಗ ಕಾಕಿನಾಡ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ಪೊಲೀಸರು ಈ 'ಪಶ್ಚಾತ್ತಾಪ' ಪಟ್ಟ ಕಳ್ಳರು ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿಸಿದ್ದಾರೆ.

ಆಂಧ್ರಪ್ರದೇಶ: ಕಳ್ಳತನ ಮಾಡಿದ ಮೇಲೆ ಕಳ್ಳರು ಸಿಕ್ಕಿಬೀಳಬಾರದೆಂದು ಓಡಿಹೋಗುವುದು ಮಾಮೂಲಿ. ಆದರೆ ಕಳ್ಳತನ ಮಾಡಿದ 15 ದಿನಗಳ ನಂತರ ಪಶ್ಚಾತ್ತಾಪ ಪಟ್ಟು ಕದ್ದ ಮಾಲನ್ನು ವಾಪಸ್ ನೀಡಿ, ಜೊತೆಗೆ 'ಕ್ಷಮಿಸಿ' ಎಂದು ಪತ್ರ ಬರೆದಿರುವ ಅಪರೂಪದ ಘಟನೆಯೊಂದು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.

ಏನಿದು ಘಟನೆ?

ಕಾಕಿನಾಡ ಜಿಲ್ಲೆಯ ಕರಪ ಮಂಡಲದ ರಾಮಕಂಚಿರಾಜು ನಗರದ ನಿವಾಸಿ ನಾಮಲ ಗಣೇಶ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಜುಲೈ 18 ರಂದು ಗಣೇಶ್ ಅವರು ಕುಟುಂಬದ ಸಮೇತ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರು. ಇದನ್ನೇ ಹೊಂಚು ಹಾಕಿದ್ದ ಕಳ್ಳರು, ಮನೆಯ ಬೀಗ ಮುರಿದು ಒಳನುಗ್ಗಿ ಸುಮಾರು 6.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ನಗದನ್ನು ದೋಚಿದ್ದರು. ಮನೆಗೆ ಮರಳಿದ ಗಣೇಶ್ ಕಳ್ಳತನವಾಗಿರುವುದನ್ನು ಕಂಡು ಕರಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

15 ದಿನಗಳ ನಂತರ ಟ್ವಿಸ್ಟ್!

ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಆಗಸ್ಟ್ 2 ರಂದು ಗಣೇಶ್ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಅಂದು ಮುಂಜಾನೆ ಗಣೇಶ್ ಮನೆಯ ಆವರಣದಲ್ಲಿ ಒಂದು ಬ್ಯಾಗ್ ಪತ್ತೆಯಾಗಿತ್ತು. ಆ ಬ್ಯಾಗ್ ತೆರೆದು ನೋಡಿದಾಗ ಕಳುವಾಗಿದ್ದ ಬಹುಪಾಲು ಚಿನ್ನಾಭರಣಗಳು ಹಾಗೂ ನಗದು ಅದರಲ್ಲಿದ್ದವು.

ಕಳ್ಳರ ‘ಸಾರಿ’ ನೋಟ್ ಮತ್ತು ಷರತ್ತು

ಕದ್ದ ಮಾಲನ್ನು ವಾಪಸ್ ನೀಡಿದ ಕಳ್ಳರು ಅದರ ಜೊತೆಗೆ ಒಂದು ಕೈಬರಹದ ಪತ್ರವನ್ನೂ ಬಿಟ್ಟು ಹೋಗಿದ್ದರು. ಆ ಪತ್ರದಲ್ಲಿ ಹೀಗೆ ಬರೆಯಲಾಗಿತ್ತು. ನಾವು ಮಾಡಿದ್ದು ದೊಡ್ಡ ತಪ್ಪು, ದಯವಿಟ್ಟು ನಮ್ಮನ್ನು ಕ್ಷಮಿಸಿ. ಕದ್ದ ಹಣದಲ್ಲಿ ನಾವು ಈಗಾಗಲೇ 22 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಆ ಹಣವನ್ನು ಮಾತ್ರ ನಮಗೆ ಮರಳಿಸಲು ಸಾಧ್ಯವಾಗುತ್ತಿಲ್ಲ. ಉಳಿದ ಎಲ್ಲಾ ಚಿನ್ನಾಭರಣ ಮತ್ತು ಹಣವನ್ನು ವಾಪಸ್ ನೀಡುತ್ತಿದ್ದೇವೆ. ಸಾರಿ.. ಎಂದು ಬರೆದಿದ್ದರು..

ಯಜಮಾನನಿಗಾದ ಆಶ್ಚರ್ಯ

ತಮ್ಮ ಜೀವನದ ಗಳಿಕೆಯಾದ ಚಿನ್ನಾಭರಣಗಳು ವಾಪಸ್ ಸಿಕ್ಕಿದ್ದನ್ನು ಕಂಡು ಮಾಲೀಕ ಗಣೇಶ್ ನಿಟ್ಟುಸಿರು ಬಿಟ್ಟಿದ್ದಾರೆ. 22 ಸಾವಿರ ರೂಪಾಯಿ ಕಳೆದುಕೊಂಡರೂ, ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು ವಾಪಸ್ ಬಂದಿರುವುದು ಅವರಿಗೆ ಅಚ್ಚರಿ ಮೂಡಿಸಿದೆ.

ಸಾಮಾನ್ಯವಾಗಿ ಕಳ್ಳರು ಕದ್ದ ಮಾಲನ್ನು ಮಾರಿ ಐಷಾರಾಮಿ ಜೀವನ ನಡೆಸುತ್ತಾರೆ. ಆದರೆ ಈ ಕಳ್ಳರು ಪಶ್ಚಾತ್ತಾಪ ಪಟ್ಟು ಮಾಲನ್ನು ಮರಳಿಸಿರುವುದು ಈಗ ಕಾಕಿನಾಡ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ಪೊಲೀಸರು ಈ 'ಪಶ್ಚಾತ್ತಾಪ' ಪಟ್ಟ ಕಳ್ಳರು ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿಸಿದ್ದಾರೆ.