*    8 ವರ್ಷದಲ್ಲಿ ಒಮ್ಮೆಯೂ ನಾನು ಪ್ರಧಾನಿ ಅಂದುಕೊಂಡಿಲ್ಲ: ಮೋದಿ*   2014ಕ್ಕೂ ಮುನ್ನ ಭ್ರಷ್ಟಾಚಾರ ಸರ್ಕಾರದ ಅಂಗವಾಗಿತ್ತು*   ಈಗ ಜನರು ಬರೀ ಅಭಿವೃದ್ಧಿಯ ಬಗ್ಗೆ ಮಾತಾಡುತ್ತಾರೆ 

ಶಿಮ್ಲಾ(ಜೂ.01):  ‘ಕಳೆದ 8 ವರ್ಷಗಳಲ್ಲಿ ಒಮ್ಮೆಯೂ ನಾನು ನನ್ನನ್ನು ಪ್ರಧಾನಿ ಎಂದುಕೊಂಡಿಲ್ಲ. ಕಡತಗಳಿಗೆ ಸಹಿ ಹಾಕುವಾಗ ಮಾತ್ರ ಪ್ರಧಾನಿಯಾಗಿರುತ್ತೇನೆ. ಇನ್ನೆಲ್ಲಾ ಸಮಯದಲ್ಲೂ 130 ಕೋಟಿ ಜನರ ಪ್ರಧಾನ ಸೇವಕನಾಗಿರುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಲ್ಲದೆ, ‘2014ಕ್ಕೂ ಮುನ್ನ ಭ್ರಷ್ಟಾಚಾರವು ಸರ್ಕಾರದ ಅವಿಭಾಜ್ಯ ಅಂಗವಾಗಿತ್ತು. ಜನರು ಬರೀ ಹಗರಣಗಳ ಬಗ್ಗೆ ಮಾತನಾಡುತ್ತಿದ್ದರು. ಆದರೆ ಬಿಜೆಪಿ ಸರ್ಕಾರ ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ ನೀತಿ ಅಳವಡಿಸಿಕೊಂಡಿರುವುದರಿಂದ ಈಗ ದೇಶದಲ್ಲಿ ಜನರು ಬರೀ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.

ಇಂಡಿಯಾ ಗೇಟ್‌ನಲ್ಲಿ ಸುಭಾಷ್ ಚಂದ್ರ ಬೋಸರ 30 ಅಡಿ ಪ್ರತಿಮೆ: ಮೈಸೂರಿನ ಅರುಣ್ ಯೋಗಿರಾಜ್ ಕೆತ್ತನೆ

ತಮ್ಮ ನೇತೃತ್ವದ ಸರ್ಕಾರಕ್ಕೆ 8 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಆಯೋಜಿಸಿದ್ದ ಗರೀಬ್‌ ಕಲ್ಯಾಣ್‌ ರಾರ‍ಯಲಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಲ್ಲಿ ಭಾರತವು ಅಗಾಧವಾದ ಬದಲಾವಣೆ ಕಂಡಿದೆ. ಈಗ ನಮ್ಮ ದೇಶದ ಗಡಿಗಳು ಭದ್ರವಾಗಿವೆ. ಭ್ರಷ್ಟಾಚಾರ ನಿಂತಿದೆ. ನಮ್ಮ ಸರ್ಕಾರ ಬೇರೆ ಬೇರೆ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿದ್ದ ಒಂಭತ್ತು ಕೋಟಿ ನಕಲಿ ಹೆಸರುಗಳನ್ನು ತೆಗೆದುಹಾಕಿ ನೇರ ಹಣ ವರ್ಗಾವಣೆ ಮೂಲಕ 22 ಲಕ್ಷ ಕೋಟಿ ರು.ಗಳನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದೆ ಎಂದು ಹೇಳಿದರು.

‘ಕಳೆದ ಎಂಟು ವರ್ಷಗಳಲ್ಲಿ ಒಮ್ಮೆಯೂ ನನಗೆ ನಾನು ಪ್ರಧಾನಿ ಅನ್ನಿಸಿಲ್ಲ. ಕಡತಗಳಿಗೆ ಸಹಿ ಹಾಕುವಾಗ ಮಾತ್ರ ನಾನು ಪ್ರಧಾನಿ ಎಂಬುದು ನೆನಪಾಗುತ್ತಿತ್ತು. ಇನ್ನುಳಿದ ಎಲ್ಲಾ ಸಮಯದಲ್ಲೂ ನಾನು ಭಾರತದ 130 ಕೋಟಿ ಜನರ ಪ್ರಧಾನ ಸೇವಕನಾಗಿರುತ್ತೇನೆ. ಜನರ ಸೇವೆಯೇ ನನ್ನ ಏಕೈಕ ಗುರಿ. ಜನರ ಸೇವೆಗೇ ಈ ಜೀವ ಅರ್ಪಿತ’ ಎಂದು ತಿಳಿಸಿದರು. ರಾರ‍ಯಲಿಯಲ್ಲಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಂ ಠಾಕೂರ್‌ ಮುಂತಾದವರಿದ್ದರು.

21 ಸಾವಿರ ಕೋಟಿ ರು. ಬಿಡುಗಡೆ:

ಗರೀಬ್‌ ಕಲ್ಯಾಣ್‌ ರಾರ‍ಯಲಿಯಲ್ಲಿ ಆನ್‌ಲೈನ್‌ ಮೂಲಕ ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಅಲ್ಲದೆ, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯ 11ನೇ ಕಂತಿನ 21,000 ಕೋಟಿ ರು.ಗಳನ್ನು ದೇಶದ 10 ಕೋಟಿ ರೈತರ ಬ್ಯಾಂಕ್‌ ಖಾತೆಗೆ ತಲಾ 2 ಸಾವಿರ ರು.ಗಳಂತೆ ಜಮೆ ಮಾಡಿದರು.

ಕಲಬುರಗಿ ಮಹಿಳೆಯ ಮಾತಿಗೆ ಮೋದಿ ಬೋಲ್ಡ್‌!

ಶಿಮ್ಲಾ: ಗರೀಬ್‌ ಕಲ್ಯಾಣ್‌ ರಾರ‍ಯಲಿಯಲ್ಲಿ ದೇಶದ ಬೇರೆ ಬೇರೆ ರಾಜ್ಯಗಳ ಜನರ ಜೊತೆ ಮೋದಿ ವರ್ಚುವಲ್‌ ಸಂವಾದ ನಡೆಸಿದರು. ಈ ವೇಳೆ ಕಲಬುರಗಿಯಿಂದ ಸಂವಾದದಲ್ಲಿ ಪಾಲ್ಗೊಂಡಿದ್ದ ಆಯುಷ್ಮಾನ್‌ ಭಾರತ ಫಲಾನುಭವಿ ಸಂತೋಷಿ ಎಂಬ ಮಹಿಳೆ ಪ್ರಧಾನಿ ಜೊತೆ ಮಾತನಾಡಿದರು. ಆಕೆಯ ಮಾತಿಗೆ ವಿಸ್ಮಿತರಾದ ಪ್ರಧಾನಿ, ‘ನೀವು ನಿಮ್ಮ ಅಭಿಪ್ರಾಯ ಹಂಚಿಕೊಂಡ ರೀತಿ ನನಗೆ ತುಂಬಾ ಇಷ್ಟವಾಯಿತು. ನೀವೇನಾದರೂ ಬಿಜೆಪಿಯ ಕಾರ್ಯಕರ್ತರಾಗಿದ್ದರೆ ಚುನಾವಣೆಗೆ ಸ್ಪರ್ಧಿಸಿ ಎಂದು ಕೇಳಿಕೊಳ್ಳುತ್ತಿದ್ದೆ’ ಎಂದು ಹೇಳಿದರು.

ಸಂವಾದದಲ್ಲಿ ಮೊದಲು ಮೋದಿ ಅವರು, ‘ಸಂತೋಷಿ ಅವರೇ ನಿಮಗೆ ಯಾವ ಸವಲತ್ತಿನಿಂದ ಸಂತೋಷವಾಗಿದೆ?’ ಎಂದು ಕೇಳಿದರು.

India GDP ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ!

ಇದಕ್ಕೆ ಉತ್ತರಿಸಿದ ಸಂತೋಷಿ, ‘ನಮ್ಮ ಗ್ರಾಮದಲ್ಲಿ ಮೊದಲು ಆಸ್ಪತ್ರೆಗಳು ಇರಲಿಲ್ಲ. ಆಗ ಜನರು ಆರೋಗ್ಯ ಸೇವೆ ಪಡೆಯಲು ಪರದಾಡುತ್ತಿದ್ದರು. ಆದರೆ ಈಗ ಆಯುಷ್ಮಾನ್‌ ಆರೋಗ್ಯ ಕೇಂದ್ರ ಸ್ಥಾಪನೆಯಾಗಿದೆ. ಇದರಿಂದ ಜನರಿಗೆ ತ್ವರಿತ ಚಿಕಿತ್ಸೆ ಲಭ್ಯವಾಗಿದೆ. ಗ್ರಾಮದ ಜನರು ಆರೋಗ್ಯದಿಂದ ಇದ್ದಾರೆ. ಮೋದಿ ಅವರಿಗೆ ಇದಕ್ಕಾಗಿ ಧನ್ಯವಾದಗಳು’ ಎಂದರು.

ಅದಕ್ಕೆ ಉತ್ತರಿಸಿದ ಮೋದಿ, ‘ಸಂತೋಷಿ ಅವರೇ ನೀವು ಕನ್ನಡದಲ್ಲಿ ಮಾತನಾಡಿದ್ದೀರಿ. ಕನ್ನಡ ನನಗೆ ಅರ್ಥ ಆಗದಿರಬಹುದು. ಆದರೆ ನಿಮ್ಮ ಭಾವನೆಗಳು ನನಗೆ ಅರ್ಥವಾಗಿವೆ. ಆಯುಷ್ಮಾನ್‌ ಯೋಜನೆಯ ಲಾಭವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ನೀವು ನಿಮ್ಮ ಅಭಿಪ್ರಾಯ ಹಂಚಿಕೊಂಡ ರೀತಿ ನನಗೆ ತುಂಬಾ ಇಷ್ಟವಾಯಿತು. ನೀವೇನಾದರೂ ಬಿಜೆಪಿಯ ಕಾರ್ಯಕರ್ತರಾಗಿದ್ದರೆ ಚುನಾವಣೆಗೆ ಸ್ಪರ್ಧಿಸಿ ಎಂದು ಕೇಳಿಕೊಳ್ಳುತ್ತಿದ್ದೆ. ಆದರೂ ನಿಮಗೆ ಗ್ರಾಮದ ಮುಖಂಡಳಾಗುವ ಎಲ್ಲ ಅವಕಾಶಗಳಿವೆ’ ಎಂದು ಚಟಾಕಿ ಹಾರಿಸಿದರು.