ದೇಶದ ಮೊಟ್ಟಮೊದಲ ಖಾಸಗಿ ರಾಕೆಟ್ ವಿಕ್ರಮ್ ಎಸ್ ನಭಕ್ಕೆ ಉಡಾವಣೆಯಾಗಿದೆ. ಹೈದರಾಬಾದ್ ಸ್ಪೇಸ್ ಸ್ಟಾರ್ಟ್‌ಅಪ್ ಸ್ಕೈರೂಟ್ ಏರೋಸ್ಪೇಸ್ ಈ ಖಾಸಗಿ ರಾಕೆಟ್‌ಅನ್ನು ನಿರ್ಮಾಣ ಮಾಡಿದೆ. ಶ್ರೀಹರಿಕೋಟಾದ ಇಸ್ರೋದ ಉಡ್ಡಯನ ನೆಲೆಯಿಂದ ಈ ರಾಕೆಟ್ ಉಡಾವಣೆಗೊಂಡಿದೆ.
ಚೆನ್ನೈ (ನ.18): ಹೈದ್ರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ ತಯಾರಿಸಿದ ದೇಶದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-ಎಸ್’ ಅನ್ನು ಶುಕ್ರವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಇಸ್ರೋದ ಉಡ್ಡಯನ ನೆಲೆಯಿಂದ ಯಶಸ್ವಿಯಾಗಿ ನಭಕ್ಕೆ ಉಡಾವಣೆಯಾಗಿದೆ. ಇದು ದೇಶದ ಮೊದಲ ಖಾಸಗಿ ರಾಕೆಟ್ ಎಂಬ ಹಿರಿಮೆ ಜೊತೆಗೆ, ಖಾಸಗಿ ರಾಕೆಟ್ ಒಂದನ್ನು ಇಸ್ರೋ ಉಡ್ಡಯನ ಮಾಡುತ್ತಿರುವ ಮೊದಲ ಉದಾಹರಣೆ ಕೂಡಾ ಇದಾಗಿದೆ. ಭಾರತದ ಬಾಹ್ಯಾಕಾಶ ವಲಯದ ಪಿತಾಮಹ ಎಂಬ ಹಿರಿಮೆ ಹೊಂದಿರುವ ವಿಕ್ರಂ ಸಾರಾಭಾಯ್ ಅವರ ಹೆಸರನ್ನು ಈ ರಾಕೆಟ್ ಇಡಲಾಗಿದೆ. ಈ ಉಡ್ಡಯನ ಪ್ರಕ್ರಿಯೆಗೆ ಪ್ರಾರಂಭ ಎಂದು ಹೆಸರನ್ನು ಇಡಲಾಗಿತ್ಉತ. ಈ ರಾಕೆಟ್ ಎರಡು ದೇಶೀ ಮತ್ತು ಒಂದು ವಿದೇಶಿ ಉಪಗ್ರಹಗಳನ್ನು ಹೊತ್ತೊಯ್ದು ಕೆಳಹಂತದ ಕಕ್ಷೆಯಲ್ಲಿ ಕೂರಿಸಲಾಗಿದೆ. 480 ಕೆಜಿ ತೂಕ ಹೊಂದಿರುವ ವಿಕ್ರಮ್ ರಾಕೆಟ್ ಶುಕ್ರವಾರ ಬೆಳಗ್ಗೆ 11.30ಕ್ಕೆ ನಭಕ್ಕೆ ಉಡಾವಣೆ ಮಾಡಲಾಯಿತು. ಈ ರಾಕೆಟ್ ವಿವಿಧ ಕಕ್ಷೆಗಳಿಗೆ ಉಪಗ್ರಹಗಳನ್ನು ಕಳುಹಿಸಬಲ್ಲ ಸಾಮರ್ಥ್ಯ ಹೊಂದಿದೆ. ಜೊತೆಗೆ ಉಡ್ಡಯನ ಸ್ಥಳದಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ ರಾಕೆಟ್ ಅನ್ನು ಜೋಡಿಸಿ ಅದನ್ನು ಉಡ್ಡಯನ ಮಾಡಬಹುದಾಗಿದೆ ಎಂದು ಸ್ಕೈರೂಟ್ ಸಂಸ್ಥೆ ಹೇಳಿದೆ.
ಇಸ್ರೋ ಚೇರ್ಮನ್ ಸೋಮನಾಥ್, ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಚೇರ್ಮನ್ ಆಫ್ ಸ್ಪೇಸ್ ಪವನ್ ಗೋಯೆಂಕಾ ಕೂಡ ಈ ವೇಳೆ ಹಾಜರಿದ್ದರು. ಮಾಜಿ ಇಸ್ರೋ ಅಧ್ಯಕ್ಷ ಕಿರಣ್ ಕೂಡ ಕಾರ್ಯಕ್ರಮದಲ್ಲಿದ್ದರು. .' ಮಿಷನ್ ಪ್ರಾರಂಭ್ - ಸ್ಕೈರೂಟ್ ಏರೋಸ್ಪೇಸ್‌ನ ಆರಂಭವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದನ್ನು ಘೋಷಿಸಲು ನನಗೆ ಸಂತೋಷವಾಗಿದೆ'ಎಂದು ಇನ್‌ಸ್ಪೇಸ್ (ಚೇರ್ಮನ್ ಆಫ್ ಸ್ಪೇಸ್) ಅಧ್ಯಕ್ಷ ಪವನ್ ಕುಮಾರ್ ಗೋಯೆಂಕಾ ಯಶಸ್ವಿ ಉಡಾವಣೆಯ ಬಳಿಕ ಹೇಳಿದರು. ಇದು ಸ್ಟಾರ್ಟಪ್ ಸ್ಕೈರೂಟ್ ಏರೋಸ್ಪೇಸ್‌ಗೆ ಒಂದು ಸಣ್ಣ ಹೆಜ್ಜೆ ಮತ್ತು ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಒಂದು ದೈತ್ಯ ಹೆಜ್ಜೆ ಎಂದು ಸಿಇಒ ಮತ್ತು ಸಹ-ಸಂಸ್ಥಾಪಕ ಪವನ್ ಚಂದನ ಯಶಸ್ವು ಉಡಾವಣೆ ಬಗ್ಗೆ ಮಾತನಾಡಿದ್ದಾರೆ.
ಮಿಷನ್ ಪ್ರಾರಂಭ್ (ಆರಂಭ) ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎನಿಸಿದೆ. ಖಾಸಗಿ ಕಂಪನಿಗಳು ಕೂಡ ಇಸ್ರೋದ ವ್ಯವಸ್ಥೆಗಳನ್ನು ಬಳಸಿಕೊಂಡು ತನ್ನ ರಾಕೆಟ್‌ಗಳನ್ನು ಉಡಾವಣೆ ಮಾಡಲು ಸರ್ಕಾರ ಅನುಮತಿ ನೀಡಿದ ಬಳಿಕ ಬಾಹ್ಯಾಕಾಶಕ್ಕೆ ರಾಕೆಟ್ ಹಾರಿಸಿದ ದೇಶದ ಮೊದಲ ಖಾಸಗಿ ಕಂಪನಿ ಎನ್ನುವ ಸಾಧನೆಗೆ ಸ್ಕೈರೂಟ್ ಏರೋಸ್ಪೇಸ್ ಪಾತ್ರವಾಗಿದೆ. ವಿಕ್ರಮ್-ಎಸ್ ಮೂರು ಉಪಗ್ರಹಗಳನ್ನು ಹೊತ್ತೊಯ್ಯುತ್ತದೆ, ಇದರಲ್ಲಿ ಒಂದು ಸ್ಪೇಸ್‌ಕಿಡ್ಜ್ ಇಂಡಿಯಾ ಫನ್‌ಸ್ಯಾಟ್ ಎಂದು ಕರೆಯಲ್ಪಡುತ್ತದೆ, ಅದರ ಭಾಗಗಳನ್ನು ಶಾಲಾ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.
ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ: ಖಾಸಗಿ ರಾಕೆಟ್‌ನಲ್ಲಿ ನಾಸಾದ ಅಂತರಿಕ್ಷಯಾನ!
ವಿಕ್ರಮ್ ರಾಕೆಟ್‌ಗಳು 290 ಕೆಜಿ ಮತ್ತು 560 ಕೆಜಿ ಪೇಲೋಡ್‌ಗಳನ್ನು ಸನ್ ಸಿಂಕ್ರೊನಸ್ ಧ್ರುವೀಯ ಕಕ್ಷೆಗಳಿಗೆ ಸಾಗಿಸಲು ಸಾಧ್ಯವಾಗುತ್ತದೆ. ಉಡಾವಣಾ ವಾಹನದ ಸ್ಪಿನ್ ಸ್ಥಿರತೆಗಾಗಿ 3-ಡಿ ಮುದ್ರಿತ ಘನ ಥ್ರಸ್ಟರ್‌ಗಳನ್ನು ಹೊಂದಿರುವ ವಿಶ್ವದ ಮೊದಲ ಕೆಲವೇ ಕೆಲವು ಎಲ್ಲಾ-ಸಂಯೋಜಿತ ರಾಕೆಟ್‌ಗಳಲ್ಲಿ ರಾಕೆಟ್ ಒಂದಾಗಿದೆ.
Artemis mission: 50 ವರ್ಷ ಬಳಿಕ ಮತ್ತೆ ಚಂದ್ರಯಾನದ ಕನಸಿಗೆ ಅಮೆರಿಕದ ನಾಸಾ ಯಶಸ್ವಿ ಮುನ್ನುಡಿ
ವಿಕ್ರಮ್-ಎಸ್ ರಾಕೆಟ್ ಉಡಾವಣೆಯು ಭಾರತದಲ್ಲಿ ಖಾಸಗಿ ಕಂಪನಿಗಳಿಗೆ ಬಾಹ್ಯಾಕಾಶ ಕ್ಷೇತ್ರವನ್ನು ಪ್ರವೇಶಿಸಲು ದಾರಿ ಮಾಡಿಕೊಟ್ಟಿದೆ.2020ರಲ್ಲಿ ಇದು ಖಾಸಗಿ ವಲಯಕ್ಕೆ ತೆರೆದ ಬಳಿಕ, ಬೆಲ್ಲಟ್ರಿಕ್ಸ್ ಏರೋಸ್ಪೇಸ್, ಅಗ್ನಿಕುಲ್, ಧ್ರುವ, ಆಸ್ಟ್ರೋಗೇಟ್ ಮುಂತಾದ ಅನೇಕ ಕಂಪನಿಗಳು ಈ ಕ್ಷೇತ್ರವನ್ನು ಪ್ರವೇಶಿಸಿವೆ. ಇಲ್ಲಿಯವರೆಗೆ, ದೇಶದ ಎಲ್ಲಾ ಬಾಹ್ಯಾಕಾಶ ಮಿಷನ್‌ಗಳು ಮತ್ತು ರಾಕೆಟ್‌ಗಳನ್ನು ತಯಾರಿಸುವ ಕೆಲಸವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ಸರ್ಕಾರಿ ಸಂಸ್ಥೆಯಾದ ಇಸ್ರೋ ಮಾಡಿದೆ. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಸಹಯೋಗಕ್ಕಾಗಿ ಕೇಂದ್ರವು ಕಳೆದ ವರ್ಷ ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು (ISPA) ಪ್ರಾರಂಭಿಸಿತು. ಖಾಸಗಿ ಕಂಪನಿಗಳ ಪ್ರವೇಶವು ವಿಶ್ವದ $ 400 ಶತಕೋಟಿ ಅಂದರೆ ಸುಮಾರು 32 ಸಾವಿರ ಕೋಟಿ ರೂಪಾಯಿಗಳ ಬಾಹ್ಯಾಕಾಶ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಪಡೆಯಲು ಭಾರತಕ್ಕೆ ಸಹಾಯ ಮಾಡುತ್ತದೆ. 2035 ರ ವೇಳೆಗೆ, ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ಉದ್ಯಮವು 77 ಬಿಲಿಯನ್ ಅಮೆರಿಕನ್ ಡಾಲರ್ ಅಥವಾ ಸುಮಾರು 6,200 ಕೋಟಿ ರೂ.ನಷ್ಟಿದೆ ಎಂದು ಅಂದಾಜಿಸಲಾಗಿದೆ.
