ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ| ಸ್ಪೇಸ್‌ಗೆ ಸ್ಪೇಸ್‌ ಎಕ್ಸ್‌| ಖಾಸಗಿ ರಾಕೆಟ್‌ನಲ್ಲಿ ನಾಸಾದ ಬಾಹ್ಯಾಕಾಶ ಯಾನ

ಕೇಪ್‌ ಕೆನವೆರಲ್‌(ಮೇ.31): ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸವೊಂದು ಸೃಷ್ಟಿಯಾಗಿದೆ. ಖಾಸಗಿ ಕಂಪನಿ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ಇಬ್ಬರು ಗಗನಯಾತ್ರಿಗಳು ಶನಿವಾರ ತಡರಾತ್ರಿ (ಭಾರತೀಯ ಕಾಲಮಾನ) ಬಾಹ್ಯಾಕಾಶಕ್ಕೆ ಯಾನ ಕೈಗೊಂಡಿದ್ದಾರೆ. ಬಾಹ್ಯಾಕಾಶ ಯಾತ್ರೆಗೆ ಖಾಸಗಿ ರಾಕೆಟ್‌ ಬಳಕೆಯಾಗುತ್ತಿರುವುದು ಇದೇ ಮೊದಲು.

ನಾಸಾದ ಗಗನ ಯಾತ್ರಿಗಳಾದ ಡೌಗ್‌ ಹರ್ಲಿ ಮತ್ತು ಬಾಬ್‌ ಬೆಹ್ನಕನ್‌ ಅವರನ್ನು ಹೊತ್ತು ಸ್ಪೇಸ್‌ ಎಕ್ಸ್‌ನ ಫಾಲ್ಕನ್‌- 9 ರಾಕೆಟ್‌ ಭಾರತೀಯ ಕಾಲಮಾನ ಶನಿವಾರ ತಡರಾತ್ರಿ 12.53ಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಈ ಮೂಲಕ ಉದ್ಯಮಿ ಎಲೋನ್‌ ಮಸ್ಕ್‌ ಅವರು ಹೊಸ ಚರಿತ್ರೆಗೆ ನಾಂದಿ ಹಾಡಿದ್ದಾರೆ. ಈ ಕ್ಷಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಾಕ್ಷಿಯಾಗಿದ್ದಾರೆ.

ಮನೆಯಲ್ಲಿದ್ದು ಸಂಪಾದಿಸಲು NASA ಆಫರ್, ಒಂದು ಡಿಮ್ಯಾಂಡ್ ಪೂರೈಸಿ 25 ಲಕ್ಷ ಸಂಪಾದಿಸಿ

ರಾಕೆಟ್‌ ಬುಧವಾರವೇ ಉಡಾವಣೆಯಾಗಬೇಕಿತ್ತು. ಪ್ರತಿಕೂಲ ಹವಾಮಾನದಿಂದ ಮುಂದೂಡಿಕೆಯಾಗಿತ್ತು. 2011ರ ನಂತರ ಅಮೆರಿಕ ನೆಲದಿಂದ ಬಾಹ್ಯಾಕಾಶ ಯಾತ್ರೆ ಕೈಗೊಂಡಿರಲಿಲ್ಲ. 9 ವರ್ಷಗಳ ಬಳಿಕ ಇದು ಮೊದಲ ಯಾನವಾಗಿರುವ ಕಾರಣಕ್ಕೆ ವಿಶ್ವದ ಗಮನ ಸೆಳೆದಿದೆ. 19 ತಾಸುಗಳ ಪ್ರಯಾಣದ ಬಳಿಕ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಲಿದ್ದಾರೆ.

ಕಳೆದ 9 ವರ್ಷಗಳಿಂದ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ರಷ್ಯಾ ಮೇಲೆ ಅಮೆರಿಕ ಅವಲಂಬನೆಯಾಗಿತ್ತು. ಪ್ರತಿ ಯಾನಕ್ಕೆ ರಷ್ಯಾ 650 ಕೋಟಿ ರು. ಶುಲ್ಕ ವಿಧಿಸುತ್ತಿತ್ತು. ಆದರೆ ಸ್ಪೇಸ್‌ ಎಕ್ಸ್‌ 415 ಕೋಟಿ ರು.ಗೆ ಗಗನಯಾತ್ರಿಗಳನ್ನು ಕಳುಹಿಸುತ್ತಿದ್ದು, ಅಮೆರಿಕಕ್ಕೆ ಉಳಿತಾಯವಾಗಲಿದೆ.