ಹೈದರಾಬಾದ್ ಮೂಲದ ಕಂಪನಿಯೊಂದು ಉದ್ಯೋಗಿಗಳ ಸಂತೋಷಕ್ಕಾಗಿ 'ಚೀಫ್ ಹ್ಯಾಪಿನೆಸ್ ಆಫೀಸರ್' ಆಗಿ ನಾಯಿಯನ್ನು ನೇಮಿಸಿಕೊಂಡಿದೆ. ಡೆನ್ವರ್ ಎಂಬ ಗೋಲ್ಡನ್ ರಿಟ್ರೈವರ್ ತನ್ನ ಮುದ್ದಾದ ನೋಟದಿಂದ ಹೃದಯಗಳನ್ನು ಕದಿಯುತ್ತಿದೆ ಮತ್ತು ಕಂಪನಿಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಿದೆ.

ಹೈದರಾಬಾದ್‌ (ಮೇ.28): ಸಾಮಾನ್ಯವಾಗಿ ಕಂಪನಿಗಳು ಚೀಫ್‌ ಹ್ಯಾಪಿನೆಸ್‌ ಆಫೀಸರ್‌ಅನ್ನು ನೇಮಕ ಮಾಡಿಕೊರ್ಳಳುವುದು ಕಡ್ಡಾಯ ಮಾಡಿದರೆ, ಆಫೀಸ್‌ಗೆ ಬರುವುದು ಹೆಚ್ಚಿನವರಿಗೆ ನಿಜಕ್ಕೂ ಸಂಭ್ರಮದ ಸಂಗತಿ ಆಗೋದರಲ್ಲಿ ಅನುಮಾನವಿಲ್ಲ. ಏನಿದು ಚೀಫ್‌ ಹ್ಯಾಪಿನೆಸ್‌ ಆಫೀಸರ್‌ ಅಂತಾ ನೀವು ಗೊಂದಲಕ್ಕೆ ಈಡಾಗಿರಬಹುದು. ಹೈದರಾಬಾದ್‌ ಮೂಲದ ಕಂಪನಿಯೊಂದು ತನ್ನ ಕಚೇರಿಯಲ್ಲಿ ಉದ್ಯೋಗಿಗಳ ಶಕ್ತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜವಾಬ್ದಾರಿಯುತ 'ನೌಕರ'ನನ್ನು ನೇಮಿಸಿಕೊಳ್ಳುವ ಮೂಲಕ ಮೆಚ್ಚುಗೆ ಗಳಿಸಿದೆ.

ಸೋಶಿಯಲ್‌ ಮೀಡಿಯಾದಲ್ಲಿ ರಾಹುಲ್‌ ಅರೆಪಾಕ ಎನ್ನುವ ಉದ್ಯಮಿಯೊಬ್ಬರು ಕಂಪನಿಯಲ್ಲಿ ಹೊಸದಾಗಿ ನೇಮಕಗೊಂಡ ಉದ್ಯೋಗಿಯೊಬ್ಬರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 'ಈ ಉದ್ಯೋಗಿ ಕೋಡ್‌ ಮಾಡೋದಿಲ್ಲ, ಕಾಳಜಿ ವಹಿಸುವುದಿಲ್ಲ. ಕೇವಲ ನಮ್ಮ ನಡುವೆ ಕಾಣಿಸಿಕೊಳ್ಳುತ್ತಾರೆ ಹಾಗೂ ನಮ್ಮ ಹೃದಯಗಳನ್ನು ಕದಿಯುತ್ತಾರೆ' ಇದು ಡೆನ್ವರ್‌ ಹೆಸರಿನ ಮುದ್ದಾದ ಗೋಲ್ಡನ್‌ ರಿಟ್ರೈವರ್‌ ಶ್ವಾನ ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್‌ನ ಪ್ರಕಾರ, ಡೆನ್ವರ್‌ನನ್ನು ಕಂಪನಿಗೆ 'ಚೀಫ್ ಹ್ಯಾಪಿನೆಸ್ ಆಫೀಸರ್' ಆಗಿ ನೇಮಿಸಲಾಗಿದೆ. ಸಂಸ್ಥೆಯಲ್ಲಿ 'ಉತ್ತಮ ಸವಲತ್ತುಗಳನ್ನು' ಕೂಡ ಪಡೆದುಕೊಂಡಿದ್ದಾರೆ. ಇದನ್ನು ರಾಹುಲ್‌ ಆನ್‌ಲೈನ್‌ನಲ್ಲಿ ಹಂಚಿಕೊಂಡ ಬೆನ್ನಲ್ಲೇ, ತಕ್ಷಣದಲ್ಲಿಯೇ ವೈರಲ್‌ ಆಯಿತು. ಹೆಚ್ಚಿನವರು ನಿಮ್ಮ ಹೊಸ ನೇಮಕ ನಮಗೂ ಇಷ್ಟವಾಗಿದೆ ಎಂದರೆ, ಕೆಲವರು ಈ ಕ್ರಮವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಕೆಲವು ನೆಟ್ಟಿಗರು ಇಂತಹ ನೇಮಕಾತಿಗಳು ಕಂಪನಿಯ ಪ್ರಾಡಕ್ಟಿವಿಟಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿಕೊಂಡಿದ್ದಾರೆ. ಎಲ್ಲರನ್ನೂ 'ಸಂತೋಷಪಡಿಸಿದ' ನಂತರ ನಾಯಿ 'ದಣಿದಂತೆ' ಕಾಣುತ್ತಿದೆ ಎಂದು ಹಲವರು ತಮಾಷೆ ಮಾಡಿದ್ದಾರೆ. ಪೋಸ್ಟ್‌ನ ನಿಖರವಾದ ಸ್ಥಳ ಮತ್ತು ಸತ್ಯಾಸತ್ಯತೆಯನ್ನು ಏಷ್ಯಾನೆಟ್‌ ನ್ಯೂಸ್‌ ಖಚಿತಪಡಿಸಲು ಸಾಧ್ಯವಾಗಲಿಲ್ಲ.

ಪೋಸ್ಟ್‌ನಲ್ಲಿ ಏನಿದೆ?

"ನಮ್ಮ ಹೊಸ ನೇಮಕಗೊಂಡ ಡೆನ್ವರ್ - ಚೀಫ್ ಹ್ಯಾಪಿನೆಸ್ ಆಫೀಸರ್ ಅವರನ್ನು ಭೇಟಿ ಮಾಡಿ. ಅವರು ಕೋಡ್ ಮಾಡುವುದಿಲ್ಲ. ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಬರುತ್ತಾರೆ, ಹೃದಯಗಳನ್ನು ಕದಿಯುತ್ತಾರೆ ಮತ್ತು ಶಕ್ತಿಯನ್ನು ಉಳಿಸುತ್ತಾರೆ. ಅಲ್ಲದೆ, ನಾವು ಈಗ ಅಧಿಕೃತವಾಗಿ ಸಾಕುಪ್ರಾಣಿ ಸ್ನೇಹಿಯಾಗಿದ್ದೇವೆ. ಇದು ನಮ್ಮ ಅತ್ಯುತ್ತಮ ನಿರ್ಧಾರ. BTW: ಅವರು ಕಂಪನಿಯಲ್ಲಿ ಅತ್ಯುತ್ತಮ ಸವಲತ್ತುಗಳನ್ನು ಹೊಂದಿದ್ದಾರೆ," ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಈ ಪೋಸ್ಟ್ ಅನ್ನು ಲಿಂಕ್ಡ್‌ಇನ್‌ನಲ್ಲಿ ‘ರಾಹುಲ್ ಅರೆಪಾಕ’ ಹ್ಯಾಂಡಲ್ ಹಂಚಿಕೊಂಡಿದೆ. ಈ ಪೋಸ್ಟ್ ಅನ್ನು ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ಜನರಿಂದ 8 ಸಾವಿರ ಲೈಕ್‌ಗಳು ಬಂದಿವೆ.

"ಎಲ್ಲರನ್ನೂ ಸಂತೋಷಪಡಿಸುವ ಜವಾಬ್ದಾರಿಯಿಂದ CHO ದಣಿದಿರುವ ರೀತಿ ಕಾಣುತ್ತಿದೆ" ಎಂದು ಒಬ್ಬ ಯೂಸರ್‌ ಒಬ್ಬರು ಬರೆದಿದ್ದಾರೆ. "ಚೆನ್ನಾಗಿ ಮಾಡಿದ್ದೀರಿ! ರಾಹುಲ್, ಇದು ಶೀಘ್ರದಲ್ಲೇ ನಿಮ್ಮ ಕಂಪನಿಯ ಪ್ರಾಡಕ್ಟಿವಿಟಿ ಮತ್ತು ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲಿದೆ!" ಎಂದು ಮತ್ತೊಬ್ಬರು ಬರೆದಿದ್ದಾರೆ.

"ವಾವ್!! ಎಂತಹ ನಡೆ!! ಡೆನ್ವರ್‌ನಲ್ಲಿ ಆ ಮುದ್ದಾದ ನೋಟ ತುಂಬಾ ಇಷ್ಟವಾಯಿತು!!" ಎಂದು ಮತ್ತೊಬ್ಬ ಯೂಸರ್‌ ಬರೆದಿದ್ದಾರೆ. "ಹೇಗಾದರೂ ನಿಮಗೆ ಬೇರೆ ಯಾವುದೇ ಅವಕಾಶಗಳು ಸಿಕ್ಕರೆ ನನ್ನ ಪಿಕ್ಸೆಲ್ ನಾಯಿ ಕೂಡ ನಾಲಿಗೆ ಹೊರಳಿಸಿ 2 ಲೆಗ್ ಸ್ಟ್ಯಾಂಡ್‌ಗಾಗಿ ಕಾಯುತ್ತಿದೆ, ಅದು ತನ್ನನ್ನು ನೇಮಿಸಿಕೊಂಡ ಮೊದಲ ಕಂಪನಿಯನ್ನು ಸಹ ಮರೆಯುವುದಿಲ್ಲ" ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.

"ಇಲ್ಲಿನ ಅತ್ಯಂತ ಸುಂದರ CHO! ಆದರೆ ಅವರ ಮುಖದಲ್ಲಿ ಅರ್ಧ ದಿನದ ರಜೆ ಅನುಮೋದನೆಯಾಗಿಲ್ಲ ಎಂದು ಹೇಳುತ್ತದೆ" ಎಂದು ಮತ್ತೊಬ್ಬೆಉ ಬರೆದಿದ್ದಾರೆ "ಅವರ ಆರೋಗ್ಯ ವಿಮೆಯನ್ನು ಕಂಪನಿಯೇ ನೋಡಿಕೊಳ್ಳುತ್ತದೆ ಎಂದು ನನಗೆ ಖಚಿತವಾಗಿದೆ?" ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.