ಕಾಸರಗೋಡಿನ ಮುಸ್ಲಿಂ ಮಹಿಳೆ ಇರ್ಫಾನಾ ಇಕ್ಬಾಲ್, ಕುಟುಂಬದಿಂದ ತಿರಸ್ಕೃತನಾದ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದಾರೆ. ಕ್ಯಾನ್ಸರ್‌ನಿಂದ ಮೃತಪಟ್ಟ ನಾರಾಯಣನ್ ಎಂಬುವವರ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ, ಇವರು ತೋರಿದ ಮಾನವೀಯತೆ ಮತ್ತು ಕೋಮು ಸೌಹಾರ್ದತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕಾಸರಗೋಡು: "ಜಾತಿ-ಧರ್ಮ, ರಾಜಕೀಯ ಹಾಗೂ ಸಿದ್ಧಾಂತಗಳ ಎಲ್ಲ ಬೇಲಿಗಳನ್ನು ಮೀರಿ ನಿಲ್ಲುವುದು ಕೇವಲ ಮನುಷ್ಯತ್ವ ಮಾತ್ರ" ಎಂಬುದನ್ನು ಕಾಸರಗೋಡಿನ ಮುಸ್ಲಿಂ ಮಹಿಳೆಯೊಬ್ಬರು ಇಡೀ ಸಮಾಜಕ್ಕೆ ಸಾಬೀತುಪಡಿಸಿದ್ದಾರೆ. ರಕ್ತ ಹಂಚಿಕೊಂಡು ಹುಟ್ಟಿದ ಸ್ವಂತ ಕುಟುಂಬಸ್ಥರೇ ಸತ್ತಾಗ ಹೆಣವನ್ನು ಮುಟ್ಟಲು ನಿರಾಕರಿಸಿದ ಧಾವಂತದ ಜಗತ್ತಿನಲ್ಲಿ, ಮುಸ್ಲಿಂ ಧರ್ಮದ ಮಹಿಳೆಯೊಬ್ಬರು ಹಿಂದೂ ಸಂಪ್ರದಾಯದಂತೆ ವ್ಯಕ್ತಿಯೊಬ್ಬರ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಹೊಸ ಮನ್ವಂತರಕ್ಕೆ ಕಾರಣರಾಗಿದ್ದಾರೆ.
ಕಾಸರಗೋಡು ಜಿಲ್ಲಾ ಪಂಚಾಯತ್‌ನ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿರುವ ಇರ್ಫಾನಾ ಇಕ್ಬಾಲ್ ಅವರ ಈ ಮಾನವೀಯ ಕಳಕಳಿ ಮತ್ತು ಜಾತ್ಯತೀತ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತ ದೇಶಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
ಅಂಗಡಿ ವರಾಂಡದಲ್ಲಿ ಬಿದ್ದಿದ್ದ ಜೀವಕ್ಕೆ ಆಸರೆಯಾದರು
ಮಂಜೇಶ್ವರದ ಚಿಗ್ರುಪದವು ಮೂಲದ 64 ವರ್ಷದ ನಾರಾಯಣನ್ ಎಂಬುವವರು ಕಳೆದ ಕೆಲವು ತಿಂಗಳುಗಳಿಂದ ಭೀಕರ ಮುಖದ ಕ್ಯಾನ್ಸರ್ (Mouth Cancer) ರೋಗದಿಂದ ಬಳಲುತ್ತಿದ್ದರು. ಕೊನೆಯ ಹಂತದ ಕ್ಯಾನ್ಸರ್‌ನಿಂದಾಗಿ ತೀವ್ರ ಅಸ್ವಸ್ಥರಾಗಿದ್ದ ಅವರು, ಸುಮಾರು ಒಂದು ತಿಂಗಳ ಹಿಂದೆ ಇಲ್ಲಿನ ಅಂಗಡಿಯೊಂದರ ವರಾಂಡದಲ್ಲಿ ಹಸಿವು ಮತ್ತು ನೋವಿನಿಂದ ನರಳುತ್ತಾ ಅನಾಥವಾಗಿ ಕುಸಿದು ಬಿದ್ದಿದ್ದರು. ಈ ಹೃದಯವಿದ್ರಾವಕ ದೃಶ್ಯವನ್ನು ಗಮನಿಸಿದ ಸ್ಥಳೀಯ ವಾರ್ಡ್ ಸದಸ್ಯರೊಬ್ಬರು ತಕ್ಷಣವೇ ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಇಕ್ಬಾಲ್ ಅವರ ಗಮನಕ್ಕೆ ತಂದಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಕಿಂಚಿತ್ತೂ ತಡಮಾಡದ ಇರ್ಫಾನಾ, ತಕ್ಷಣವೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಸಮಾಲೋಚನೆ ನಡೆಸಿದರು. ತಾವೇ ಮುಂಚೂಣಿಯಲ್ಲಿ ನಿಂತು, ಚಾರಿಟೇಬಲ್ ಟ್ರಸ್ಟ್‌ನ ಸ್ವಯಂಸೇವಕರ ನೆರವಿನೊಂದಿಗೆ ನಾರಾಯಣನ್ ಅವರಿಗೆ ಪ್ರಾಥಮಿಕ ಚಿಕಿತ್ಸೆಯ ವ್ಯವಸ್ಥೆ ಮಾಡಿದರು.
ಈ ಕುರಿತು ಮಾಹಿತಿ ಹಂಚಿಕೊಂಡ ಇರ್ಫಾನಾ, "ನಾವು ಆರಂಭದಲ್ಲಿ ನಾರಾಯಣನ್ ಅವರನ್ನು ನಮ್ಮ ಟ್ರಸ್ಟ್ ನಡೆಸುತ್ತಿರುವ ವೃದ್ಧಾಶ್ರಮಕ್ಕೆ ಕರೆದೊಯ್ಯಲು ನಿರ್ಧರಿಸಿದ್ದೆವು. ಆದರೆ ವೈದ್ಯಕೀಯ ತಪಾಸಣೆಯ ನಂತರ ಅವರಿಗೆ ನಾಲ್ಕನೇ ಹಂತದ (Stage 4) ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದರಿಂದ ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದೆವು" ಎಂದು ನೆನೆದಿದ್ದಾರೆ.
ಕಣ್ಣು ಮುಚ್ಚಿದಾಗ ಕರಗದ ಸ್ವಂತ ಬಂಧುಗಳು!
ಆಸ್ಪತ್ರೆಯಲ್ಲಿ ಸುಮಾರು ಒಂದು ತಿಂಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ನಾರಾಯಣನ್ ಅವರು, ಚಿಕಿತ್ಸೆ ಫಲಿಸದೆ ಕಳೆದ ಗುರುವಾರ ಕೊನೆಯುಸಿರೆಳೆದರು. ನಾರಾಯಣನ್ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಅವರ ಸ್ವಂತ ಸಂಬಂಧಿಕರನ್ನು ಸಂಪರ್ಕಿಸಿ ಪಾರ್ಥಿವ ಶರೀರವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು. ಆದರೆ ದುರಂತವೆಂದರೆ, ನಾರಾಯಣನ್ ಅವರ ಕುಟುಂಬಸ್ಥರು ಶವವನ್ನು ಸ್ವೀಕರಿಸಲು ತಮಗೇನೂ ಆಸಕ್ತಿಯಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದರು. ಆದರೆ, ಇರ್ಫಾನಾ ಇಕ್ಬಾಲ್ ಅವರೇ ಶವವನ್ನು ಪಡೆದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಲಿಖಿತವಾಗಿ ಸಂಪೂರ್ಣ ಅಧಿಕಾರ (Authorization) ನೀಡಿ ಕೈತೊಳೆದುಕೊಂಡರು.
ಸಂಪ್ರದಾಯದಂತೆ ಚಿತೆಗೆ ಅಗ್ನಿ ನೀಡಿದ ಮುಸ್ಲಿಂ ಮಹಿಳೆ
ಯಾವಾಗ ರಕ್ತದ ಸಂಬಂಧಿಕರೇ ಹೆಣವನ್ನು ಅನಾಥವಾಗಿ ಬಿಟ್ಟುಹೋದರೋ, ಆಗ ಇರ್ಫಾನಾ ಅವರಲ್ಲಿದ್ದ ತಾಯ್ತನ ಹಾಗೂ ಮಾನವೀಯತೆ ಜಾಗೃತವಾಯಿತು. ನಾರಾಯಣನ್ ಅವರ ಮೃತದೇಹವನ್ನು ಗೌರವಯುತವಾಗಿ ಉಪ್ಪಳದಲ್ಲಿರುವ ಹಿಂದೂ ಸಾರ್ವಜನಿಕ ಸ್ಮಶಾನಕ್ಕೆ ತರಲಾಯಿತು. ಸಾಂಪ್ರದಾಯಿಕ ಪರ್ದಾ ಧರಿಸಿದ್ದ ಮುಸ್ಲಿಂ ಮಹಿಳೆ ಇರ್ಫಾನಾ ಇಕ್ಬಾಲ್ ಅವರೇ ಖುದ್ದಾಗಿ ಮುಂದೆ ನಿಂತು, ಹಿಂದೂ ಧರ್ಮದ ಆಚರಣೆ ಮತ್ತು ಪದ್ಧತಿಗಳ ಪ್ರಕಾರವೇ ನಾರಾಯಣನ್ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ಚಿತೆಗೆ ಕೊಳ್ಳಿ ಇಟ್ಟರು.
ಪರ್ದಾ ಧರಿಸಿದ ಮುಸ್ಲಿಂ ಜನಪ್ರತಿನಿಧಿಯೊಬ್ಬರು ಸನಾತನ ಧರ್ಮದ ವಿಧಿವಿಧಾನಗಳ ಪ್ರಕಾರ ಚಿತೆಯ ಮುಂದೆ ನಿಂತು ಅಂತಿಮ ನಮನ ಸಲ್ಲಿಸುತ್ತಿರುವ ಭಾವನಾತ್ಮಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಕೋಮು ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆಯಾಗಿ ಮಾರ್ಪಟ್ಟಿದೆ.
ಮಗಳಾಗಿ ಅಂತಿಮ ವಿದಾಯ ಹೇಳಿದೆ: ಇರ್ಫಾನಾ ಭಾವುಕ ನುಡಿ
ಅಂತ್ಯಸಂಸ್ಕಾರದ ಬಳಿಕ ಭಾವುಕರಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಇರ್ಫಾನಾ ಇಕ್ಬಾಲ್, "ನಾರಾಯಣನ್ ಅವರ ಕೊನೆಯ ಕ್ಷಣದಲ್ಲಿ ಅವರ ಯಾವೊಬ್ಬ ಹತ್ತಿರದ ಸಂಬಂಧಿಯೂ ಬರಲಿಲ್ಲ. ಅದಕ್ಕೆ ನಾನೇ ಅವರ ಮಗಳಾಗಿ ನಿಂತು ನನ್ನ 'ನಾರಾಯಣೆಟ್ಟನ್' (ನಾರಾಯಣ ಅಣ್ಣ) ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದೇನೆ. ನನಗನ್ನಿಸುವ ಮಟ್ಟಿಗೆ ಮನುಷ್ಯತ್ವ ಎಂಬುದು ಯಾವಾಗಲೂ ಧರ್ಮ ಮತ್ತು ರಾಜಕೀಯಕ್ಕಿಂತ ತುಂಬಾ ಮಿಗಿಲಾದುದು" ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲೂ ಇಂತಹ ಅನಾಥ ವೃದ್ಧರಿಗೆ ತಮ್ಮ ಸೇವೆ ಮುಂದುವರಿಯಲಿದೆ ಎಂದಿದ್ದಾರೆ. ಜೊತೆಗೆ, ತಮ್ಮ ದತ್ತಿ ಪ್ರತಿಷ್ಠಾನವು ಎಲ್ಲ ಧರ್ಮದ ಅನಾಥರ ಅಂತ್ಯಸಂಸ್ಕಾರವನ್ನು ಅವರವರ ಧಾರ್ಮಿಕ ನಂಬಿಕೆಗಳಂತೆಯೇ ನಡೆಸುತ್ತಾ ಬಂದಿರುವುದರಿಂದ ತಮ್ಮ ಸಮುದಾಯದಿಂದ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ: ಸಂಸದ ಉನ್ನಿತಾನ್ ಶ್ಲಾಘನೆ
ಇರ್ಫಾನಾ ಅವರ ಈ ಅದ್ಭುತ ಕಾರ್ಯವನ್ನು ಶ್ಲಾಘಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕಾಸರಗೋಡು ಲೋಕಸಭಾ ಸಂಸದ ರಾಜ್‌ಮೋಹನ್ ಉನ್ನಿತಾನ್ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಸುದೀರ್ಘ ಪೋಸ್ಟ್ ಬರೆದಿದ್ದಾರೆ. ಇರ್ಫಾನಾ ಅವರನ್ನು "ಸಾರ್ವಜನಿಕ ಸೇವೆಯ ಹೊಸ ಯುಗದ ಸಂಕೇತ ಮತ್ತು ಭರವಸೆಯ ಮೂಲ" ಎಂದು ಬಣ್ಣಿಸಿರುವ ಅವರು, "ಇವತ್ತಿನ ಸಮಾಜದಲ್ಲಿ ಹರಡುತ್ತಿರುವ ದ್ವೇಷದ ಮಾರುಕಟ್ಟೆಯ ನಡುವೆ ಇರ್ಫಾನಾ ಪ್ರೀತಿಯ ದೊಡ್ಡ ಅಂಗಡಿಯೊಂದನ್ನು ತೆರೆದಿದ್ದಾರೆ" ಎಂದು ಮುಕ್ತಕಂಠದಿಂದ ಪ್ರಶಂಸಿದ್ದಾರೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಶಕ್ತಿಗಳ ನಡುವೆ, ಕಾಸರಗೋಡಿನ ಈ ಘಟನೆ ಮನುಕುಲದ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಯಾಗಿಸಿದೆ.


