ಆರ್‌ಎಸ್‌ಎಸ್ ಅನ್ನು ಹಿಂದೂ ಧರ್ಮಕ್ಕೆ ಹೋಲಿಸಿದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ತೀವ್ರವಾಗಿ ಖಂಡಿಸಿದ್ದಾರೆ. ಹಿಂದೂ ಧರ್ಮವು ಯಾವುದೇ ಸಂಘಟನೆಯ ಸ್ವತ್ತಲ್ಲ ಮತ್ತು ಈ ಹೋಲಿಕೆಯು ಕೋಟ್ಯಂತರ ಹಿಂದೂಗಳ ಭಾವನೆಗೆ ಮಾಡಿದ ಅವಮಾನ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಆರ್‌ಎಸ್ಎಸ್ ಸಂಘಟನೆಯನ್ನು ಹಿಂದೂ ಧರ್ಮಕ್ಕೆ ಹೋಲಿಕೆ ಮಾಡಿರುವ RSS ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಖಂಡಿಸಿದ್ದಾರೆ. ಹಿಂದೂ ಧರ್ಮವು ಯಾವುದೇ ಒಂದು ಸಂಘಟನೆಯ ಸ್ವತ್ತಲ್ಲ ಎಂದು ವಾಗ್ದಾಳಿ ನಡೆದಿರುವ ಬಿ.ಕೆ ಹರಿಪ್ರಸಾದ್ ಆರ್‌ಎಸ್‌ಎಸ್ ಅನ್ನು ಹಿಂದೂ ಧರ್ಮಕ್ಕೆ ಹೋಲಿಕೆ ಮಾಡಿರುವುದು ಅತ್ಯಂತ ಖಂಡನೀಯ ಎಂದಿದ್ದಾರೆ.
ಹಿಂದೂ ಧರ್ಮ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ತತ್ವಶಾಸ್ತ್ರ ಮತ್ತು ವೈವಿಧ್ಯತೆಯನ್ನು ಹೊಂದಿದೆ. ಇಂತಹ ಪವಿತ್ರ ಧರ್ಮವನ್ನು ಒಂದು ನಿರ್ದಿಷ್ಟ ಸಂಘಟನೆಯ ಮಟ್ಟಕ್ಕೆ ಇಳಿಸಿ ನೋಡುವುದು ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಅವಮಾನ ಮಾಡಿದಂತೆ. ಹಿಂದೂ ಧರ್ಮವು ಯಾವುದೇ ಒಂದು ಸಂಘಟನೆಯ ಸ್ವತ್ತಲ್ಲ. ಅದು ಆರ್‌ಎಸ್‌ಎಸ್‌ಗಿಂತಲೂ ದೊಡ್ಡದು, ವಿಶಾಲವಾದುದು ಮತ್ತು ಎಲ್ಲರನ್ನು ಒಳಗೊಳ್ಳುವ ನಾಗರಿಕತೆಯ ಪರಂಪರೆ ಹೊಂದಿದೆ. ವಿವಾದಾತ್ಮಕ ಹಿನ್ನೆಲೆ ಹೊಂದಿರುವ ಒಂದು ಸಂಘಟನೆಯನ್ನು ಸಂಪೂರ್ಣ ಹಿಂದೂ ಸಮಾಜದ ಪ್ರತಿನಿಧಿಯಂತೆ ಬಿಂಬಿಸುವುದು ಸರಿಯೇ?
ಹಿಂದೂತ್ವದ ಬಗ್ಗೆ ದಿನವೂ ದೊಡ್ಡ ದೊಡ್ಡ ಭಾಷಣ ಮಾಡುವ ಬಿಜೆಪಿಯ ನಾಯಕರು ಮತ್ತು ಸ್ವಯಂ ಘೋಷಿತ ‘ಹಿಂದೂ ರಕ್ಷಕರು’ ಈಗ ಏನು ಹೇಳುತ್ತಾರೆ? ಹಿಂದೂ ಧರ್ಮ ಮತ್ತು ಆರ್‌ಎಸ್‌ಎಸ್ ಒಂದೇ ಎಂದು ಹೇಳುವುದನ್ನು ಅವರು ಒಪ್ಪುತ್ತಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಘಟನೆ ಹಿನ್ನೆಲೆ
ಆರ್‌ಎಸ್‌ಎಸ್ ನೋಂದಣಿಗೆ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿ ಜೂ.13ರಂದು ಭಾಗ್ವತ್‌ಗೆ ಪತ್ರ ಬರೆದಿದ್ದ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ನ ಆದಾಯದ ಮೂಲ, ತೆರಿಗೆ, ಕಚೇರಿ ನಿರ್ವಹಣೆ ಹಾಗೂ ಸಂಘಟನೆಯ ಸ್ವರೂಪವನ್ನು ಬಹಿರಂಗಪಡಿಸುವಂತೆ ಕೋರಿದ್ದರು. ಜತೆಗೆ, ಸಂಘಟನೆ ನೋಂದಣಿ ಮಾಡಿಕೊಂಡಿಲ್ಲ ಎಂದು ಆಕ್ಷೇಪಿಸಿದ್ದರು.
ಇದಕ್ಕೆ ತ್ರಿಶ್ಶೂರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿರುಗೇಟು ನೀಡಿದ ಭಾಗ್ವತ್, ‘ನೋಂದಣಿಯಾಗದ ಹಲವು ಸಂಗತಿಗಳಿವೆ. ಹಿಂದೂ ಧರ್ಮ ಕೂಡ ನೋಂದಣಿಯಾಗಿಲ್ಲ. ಸರ್ಕಾರಿ ಅನುದಾನ ಪಡೆಯಲು ಬಯಸುವವರಿಗೆ ನೋಂದಣಿ ಬೇಕಾಗುತ್ತದೆ. ನಾವು ತೆರೆದ ಮೈದಾನದಲ್ಲಿ ಕೆಲಸ ಮಾಡುತ್ತೇವೆ. ನಮ್ಮ ಸ್ವಯಂಸೇವಕರು ಜನರ ನಡುವೆ ವಾಸಿಸುತ್ತಾರೆ. ನಮ್ಮ ಕಾರ್ಯಕ್ರಮಗಳು ಎಲ್ಲರಿಗೂ ಗೋಚರಿಸುತ್ತವೆ. ನಾವು ರಹಸ್ಯವಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಆರ್‌ಎಸ್‌ಎಸ್ 1950ರ ದಶಕದಲ್ಲಿ ತನ್ನ ಲಿಖಿತ ಸಂವಿಧಾನವನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆಗ ಯಾರೂ ಸಂಘದ ನೋಂದಣಿಯನ್ನು ಒತ್ತಾಯಿಸಿಲ್ಲ. ನೋಂದಣಿ ಅಗತ್ಯವಿದ್ದರೆ, ಸರ್ಕಾರ ಆಗಲೇ ಕೇಳುತ್ತಿತ್ತು’ ಎಂದು ಸೋಮವಾರ ತಿರುಗೇಟು ನೀಡಿದರು. ಆದರೆ ಮೋಹನ್ ಭಾಗವತ್ ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂಬುದು ಈಗ ವಿವಾದಕ್ಕೆ ಕಾರಣವಾಗಿದೆ.


