ಪಾಳು ಬಿದ್ದ ಮನೆಯ ಫ್ರಿಡ್ಜ್‌ ಬಾಗಿಲು ತೆರೆದ ಪೊಲೀಸರಿಗೆ ಶಾಕ್: ಒಳಗಿದ್ದಿದ್ದೇನು?

ಕೇರಳದ ಕೊಚ್ಚಿಯ ಚೊಟ್ಟನಿಕ್ಕರದಲ್ಲಿ ಪಾಳುಬಿದ್ದ ಮನೆಯೊಂದರ ತಪಾಸಣೆಗೆ ಬಂದ ಪೊಲೀಸರು ಅಲ್ಲಿದ್ದ ಫ್ರಿಡ್ಜ್‌ ಬಾಗಿಲು ತೆರೆದಿದ್ದಾರೆ. ಈ ವೇಳೆ ಒಳಗಿದ್ದುದ್ದನ್ನು ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಹಾಗಿದ್ರೆ ಒಳಗಿದ್ದಿದ್ದೇನು? 

Human skull found in Abandoned House's refrigerator in Kerala

ಕೇರಳ: ದೇವರನಾಡು ಕೇರಳದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪಾಳುಬಿದ್ದ ಮನೆಯೊಂದರಲ್ಲಿ ಇದ್ದ ಫ್ರಿಡ್ಜ್‌ನಲ್ಲಿ ಮಾನವ ತಲೆಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿದೆ. ಕೇರಳದ ಕೊಚ್ಚಿಯ ಚೊಟ್ಟನಿಕ್ಕರದ ಇರುವೆಲ್ಲಿ ಬಳಿಯ ಪ್ಯಾಲೇಸ್ ಸ್ಕ್ವೇರ್‌ ಬಳಿ ಇರುವ ಪಾಳು ಬಿದ್ದ ಮನೆಯಲ್ಲಿ ಈ ಘಟನೆ ಸಂಭವಿಸಿದೆ.  ಈ ಪಾಳುಬಿದ್ದ ಮನೆಯಲ್ಲಿದ್ದ ಫ್ರಿಡ್ಜ್‌ನಲ್ಲಿ ಮಾನವನ ತಲೆಬುರುಡೆ ಹಾಗೂ ಮಾನವ ದೇಹದ ಮೂಳೆಗಳು ಪತ್ತೆಯಾಗಿವೆ ಇಲ್ಲಿ ಸಿಕ್ಕ ಅಸ್ಥಿಪಂಜರದ ಅವಶೇಷಗಳು ಹಲವಾರು ವರ್ಷಗಳಷ್ಟು ಹಳೆಯದಾಗಿರುವಂತೆ ಕಂಡು ಬರುತ್ತಿದ್ದು, ವಿಸ್ತಾರವಾದ ತನಿಖೆಯಿಂದಷ್ಟೇ ಈ ತಲೆಬುರುಡೆ ಯಾರಿಗೆ ಸೇರಿದ್ದು, ಇಲ್ಲಿಗೆ ಹೇಗೆ ಬಂತು ಎಂಬುದು ತಿಳಿದು ಬರಲಿದೆ. 

ಛೊಟ್ಟನಿಕ್ಕರದ ಪೊಲೀಸರು ತಪಾಸಣೆ ನಡೆಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿನ ಸ್ಥಳೀಯ ಪಂಚಾಯತ್ ಆಡಳಿತವೂ ಈ ಪಾಳು ಬಿದ್ದ ಮನೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ಆಗಮಿಸಿ ಶೋಧ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ತಪಾಸಣೆ ವೇಳೆ ಪೊಲೀಸರು ಅಲ್ಲಿದ್ದ ಫ್ರಿಡ್ಜ್‌ನ ಬಾಗಿಲು ತೆರೆದಿದ್ದು, ಈ ವೇಳೆ ಒಳಗಿರುವುದನ್ನು ನೋಡಿ ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಮನೆಯ ಬಳಿ ಶೋಧ ನಡೆಸುತ್ತಿದ್ದ ಪೊಲೀಸರು ಆಕಸ್ಮಿಕವಾಗಿ ಅಲ್ಲಿದ್ದ ಫ್ರಿಡ್ಜ್ ಬಾಗಿಲು ತೆರೆದಾಗ ಅಲ್ಲಿ ಮಾನವ ತಲೆಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿವೆ. ಈ ಫ್ರಿಡ್ಜ್‌ನ್ನು ಆ ಮನೆಯಲ್ಲಿ ಜನರು ವಾಸವಿದ್ದ ವೇಳೆ ಬಳಸುತ್ತಿದ್ದಿರಬಹುದು ಎನ್ನಲಾಗುತ್ತಿದೆ. 

ಮೂಳೆಗಳನ್ನು ಬೇರೆ ಬೇರೆ ಮೂರು ಕವರ್‌ಗಳಲ್ಲಿ ಪ್ಯಾಕ್ ಮಾಡಲಾಗಿತ್ತು. ಇಲ್ಲಿ ಸಿಕ್ಕ ತಲೆಬುರುಡೆಗೆ ಹಲವು ವರ್ಷಗಳಾಗಿರಬಹುದು. ಆದರೆ ಇದಕ್ಕೆ ಎಷ್ಟು ವಯಸ್ಸಾಗಿರಬಹುದು ಎಂಬುದನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ತಪಾಸಣೆ ನಂತರವಷ್ಟೇ ತಿಳಿದು ಬರಲಿದೆ.  ಆದರೆ ಈ ಮನೆಗೆ ಕರೆಂಟ್ ಸಂಪರ್ಕ ಇಲ್ಲದ ಕಾರಣ ಫ್ರಿಡ್ಜ್‌ನಲ್ಲಿ ಕಂಪ್ರೆಸರ್‌ ಇರಲಿಲ್ಲ, ಘಟನೆ ನಡೆದ ಮನೆಯೂ ಇಲ್ಲಿನ ಖ್ಯಾತ ಛೊಟ್ಟನಿಕ್ಕರ ಭಗವತಿ ದೇಗುಲದಿಂದ ಕೇವಲ 4 ಕಿಲೋ ಮೀಟರ್ ದೂರದಲ್ಲಿದೆ. ಈ ಮನೆಯನ್ನು ಯಾರು ಬಳಸುತ್ತಿರಲಿಲ್ಲ, ಹೀಗಾಗಿ ಹಲವು ವರ್ಷಗಳಿಂದ ಇದು ಬೀಗ ಹಾಕಿತ್ತು. 14 ಎಕರೆ ಜಾಗದಲ್ಲಿರುವ ಈ ಮನೆಯು ಎರ್ನಾಕುಲಂ ಮೂಲದವರ ಒಡೆತನದಲ್ಲಿದೆ ಮತ್ತು ಸುಮಾರು 15 ರಿಂದ 20 ವರ್ಷಗಳಿಂದ ಅವರು ಈ ಮನೆಯಲ್ಲಿ  ವಾಸವಿರಲಿಲ್ಲ. ಈಗ ಮನೆ ತಪಾಸಣೆ ನಂತರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. 

Latest Videos
Follow Us:
Download App:
  • android
  • ios