ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಜೀವ ಬಲಿ ಪಡೆದ ಹೆಲಿಕಾಪ್ಟರ್ ದುರಂತದ ಹಿಂದೆ ಮಾನವ ದೋಷ

ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ಜನರನ್ನು ಬಲಿ ತೆಗೆದುಕೊಂಡ ಹೆಲಿಕಾಪ್ಟರ್ ದುರಂತದ ಹಿಂದೆ ಮಾನವ ದೋಷ ಕಾರಣ ಎಂದು ಭಾರತೀಯ ವಾಯುಪಡೆ ದೃಢಪಡಿಸಿದೆ. 2017-2022ರ ಅವಧಿಯಲ್ಲಿ 34 ವಿಮಾನ ಅಪಘಾತಗಳಲ್ಲಿ 16 ಮಾನವ ದೋಷಗಳಿಂದ ಸಂಭವಿಸಿವೆ ಎಂದು ವರದಿಯೊಂದು ತಿಳಿಸಿದೆ.

Human error is behind the helicopter crash that claimed the life of CDS Bipin Rawat

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಹಾಗೂ ಇತರ 11 ಜನರ ಜೀವ ಬಲಿಪಡೆದ ಹೆಲಿಕಾಪ್ಟರ್ ದುರಂತದ ಹಿಂದೆ ಮಾನವ ಲೋಪದೋಷ ಇರುವುದು ಸಾಬೀತಾಗಿದೆ. ಭಾರತೀಯ ವಾಯುಸೇನೆ ಈ ವಿಚಾರವನ್ನು ಖಚಿತಪಡಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಾಯಿ ಸಮಿತಿ ಈ ರಕ್ಷಣಾ ವರದಿಯನ್ನು ಲೋಕಸಭೆಯ ಮುಂದಿಟ್ಟಿದ್ದು, ಈ ವರದಿಯಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪಯಣಿಸುತ್ತಿದ್ದ ಹೆಲಿಕಾಪ್ಟರ್ ಸೇರಿದಂತೆ ಒಟ್ಟು 34 ವಿಮಾನ ದುರಂತಗಳಿಗೆ ಕಾರಣ ತಿಳಿಸಲಾಗಿದೆ. 13ನೇ ರಕ್ಷಣಾ ಯೋಜನೆಯ ಅವಧಿಯಲ್ಲಿ(2017-2022) 34 ಅಪಘಾತಗಳು ದಾಖಲಾಗಿವೆ. ಇದರಲ್ಲಿ 16 ಅಪಘಾತಗಳು ಮಾನವ ದೋಷ ಅಂದರೆ ವಿಮಾನ ಸಿಬ್ಬಂದಿಯ ದೋಷದಿಂದ ಸಂಭವಿಸಿದಂತ ದುರಂತಗಳಾಗಿವೆ ಎಂದು ವರದಿಯಾಗಿದೆ. ಮಿಗ್-17ವಿ5 ಹೆಲಿಕಾಪ್ಟರ್‌ನಲ್ಲಿ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ವೇಳೆ ದುರಂತ ಸಂಭವಿಸಿತ್ತು. 

ಒಟ್ಟು 7 ಪ್ರಕರಣಗಳಲ್ಲಿ ತಾಂತ್ರಿಕ ದೋಷ,  ಹಾಗೆಯೇ ಪ್ರತಿ ಎರಡು ಪ್ರಕರಣಗಳಲ್ಲಿ ಬಾಹ್ಯ ವಸ್ತುಗಳಿಂದ ಹಾನಿ ಮಾನವ ದೋಷ, ಹಕ್ಕಿಗಳು ಅಡ್ಡ ಬಂದಿದ್ದರಿಂದ ಸಂಭವಿಸಿದ ದುರಂತಗಳಾಗಿವೆ.  ಐಎಎಫ್‌ನ ಮಿಗ್-21 ವಿಮಾನವೂ 10 ದಾಖಲಾದ ಅಪಘಾಗಳಲ್ಲಿ ಭಾಗಿಯಾಗಿದೆ. ಈ ಮೂಲಕ ಇದು ಈ ಪಟ್ಟಿಯಲ್ಲಿ ಹೆಚ್ಚು ಸಾಮಾನ್ಯ ಎನಿಸಿದೆ. ಇದರ ನಂತರದ ಸ್ಥಾನದಲ್ಲಿ ಜಾಗ್ವಾರ್ ಹಾಗೂ ಕಿರಣ್ ಏರ್‌ಕ್ರಾಫ್ಟ್‌ಗಳಿವೆ. 

2021ರ ಡಿಸೆಂಬರ್‌ 8 ರಂದು ಚೀಫ್ ಆಫ್ ಡಿಫೆನ್ಸ್ ಸ್ಟಾಪ್ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಹಾಗೂ 11 ಜನರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್‌ ಎಂಐ-17 ವಿ5 ತಮಿಳುನಾಡಿನ ಕೂನೂರ್ ಪ್ರದೇಶದಲ್ಲಿ ಪತನಗೊಂಡಿತ್ತು.  ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್‌ ಸ್ಟಾಪ್ ಸರ್ವಿಸ್ ಕಾಲೇಜಿಗೆ ತೆರಳುತ್ತಿದ್ದ ಈ ದುರಂತ ಸಂಭವಿಸಿತ್ತು. ಅಲ್ಲಿ ಬಿಪಿನ್ ರಾವತ್ ಅವರು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಹೀಗಾಗಿ ಅಂದು ಸುಲೂರ್ ಐಎಎಫ್ ವಿಮಾನ ನಿಲ್ದಾಣದಿಂದ ಬೆಳಗ್ಗೆ 11.50ರ ಸುಮಾರಿಗೆ ಟೇಕಾಫ್ ಆದ ಹೆಲಿಕಾಪ್ಟರ್ ಸರಿಸುಮಾರು 12. 20ಕ್ಕೆ ಇನ್ನೇನು ಲ್ಯಾಂಡಿಂಗ್‌ಗೆ ಕೆಲ ನಿಮಿಷಗಳಿರುವಾಗ ಕೇವಲ 10 ಕಿಲೋ ಮೀಟರ್ ದೂರದಲ್ಲಿ ಪತನಗೊಂಡಿತ್ತು. 

ಇದಾದ ನಂತರ ಪ್ರತ್ಯಕ್ಷದರ್ಶಿಗಳು ದಟ್ಟವಾದ ಮಂಜಿನಲ್ಲಿ ಹೆಲಿಕಾಪ್ಟರ್ ಕಡಿಮೆ ಎತ್ತರದಲ್ಲಿ ಸಾಗುತ್ತಿದ್ದಾಗ ಕಣಿವೆಗೆ ಡಿಕ್ಕಿ ಹೊಡೆದು ಮರಗಳ ಮೇಲೆ ಪತನಗೊಂಡಿದೆ ಎಂದು ವರದಿ ಮಾಡಿದ್ದರು. ಇತ್ತ ಪತನಗೊಂಡ ವಿಮಾನ ನೆಲ ತಲುಪುವುದರೊಳಗೆ ಬೆಂಕಿಯುಂಡೆಯಾಗಿತ್ತು. ಇದರಿಂದ ವಿಮಾನದಲ್ಲಿದ್ದ 14 ಜನರಲ್ಲಿ 13 ಜನ ಸಾವನ್ನಪ್ಪಿದ್ದರು. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಅಪಘಾತದಲ್ಲಿ ಬದುಕುಳಿದಿದ್ದರು.  ಈ ಅಪಘಾತ ಸಂಭವಿಸಿದ ವೇಳೆ ಹವಾಮಾನದಲ್ಲಾದ ಹಠಾತ್ ಬದಲಾವಣೆಯಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿತ್ತು ಹಾಗೂ ತಾಂತ್ರಿಕ ದೋಷವನ್ನು ಅಲ್ಲಗಳೆಯಲಾಗಿತ್ತು. 

 

Latest Videos
Follow Us:
Download App:
  • android
  • ios