ಮಾಲ್ಡೀವ್ಸ್ ಈಗ ಭರ್ಜರಿ ಸುದ್ದಿಯಲ್ಲಿದೆ. ಬಹುಶಃ ಚೀನಾ ಬೆಂಬಲಿತ ಸರ್ಕಾರ ಬರದೇ ಹೋಗಿದ್ದಲ್ಲಿ ಇಂಥದ್ದೊಂದು ವಿವಾದ ಖಂಡಿತವಾಗಿಯೂ ಸೃಷ್ಟಿಯಾಗುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಭಾರತ ಹಾಗೂ ಚೀನಾ ನಡುವಿನ ಯುದ್ಧಭೂಮಿಯಾಗಿ ಮಾಲ್ಡೀವ್ಸ್ ಬದಲಾಗಿದೆ.
ಬೆಂಗಳೂರು (ಜ.8): ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಾಗಿ ಮುಂದೊಂದು ದಿನ ವಿಶ್ವ ಭೂಪಟದಿಂದಲೇ ಕಾಣೆಯಾಗುವ ಅಪಾಯ ಎದುರಿಸುತ್ತಿರುವ ಮಾಲ್ಡೀವ್ಸ್ ಈಗ ತನ್ನ ನೆರೆಯ ಬೃಹತ್ ದೇಶ ಭಾರತವನ್ನು ಎದುರು ಹಾಕಿಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಹಿಂದು ಮಹಾರಾಷ್ಟ್ರದಲ್ಲಿರುವ ಆಯಕಟ್ಟಿನ ದ್ವೀಪಸಮೂಹ ರಾಷ್ಟ್ರ ಮಾಲ್ಡೀವ್ಸ್. ಭಾರತ ಹಾಗೂ ಚೀನಾ ದೇಶಗಳ ಮಿಲಿಟರಿ ಶಕ್ತಿಯ ನೈಜ ಯುದ್ಧಭೂಮಿ. ಎರಡೂ ದೇಶಗಳೂ ಈ ದೇಶದ ಮೇಲೆ ತನ್ನದೊಂದು ಹಿಡಿತ ಇರರಬೇಕು ಎನ್ನುವ ನಿಟ್ಟಿನಲ್ಲಿ ಮೊದಲಿನಿಂದಲೂ ಪ್ರಯತ್ನ ಮಾಡುತ್ತಿವೆ. ಅದಕ್ಕೆ ಕಾರಣ ಹಿಂದೂ ಮಹಾಸಾಗರ. ಹಿಂದೂ ಮಹಾಸಾಗರದ ಮೇಲೆ ಪ್ರಾಬಲ್ಯ ಸಾಧಿಸುವ ದೇಶ, ಇಡೀ ದಕ್ಷಿಣ ಏಷ್ಯಾವನ್ನು ಹಿಡಿತಕ್ಕೆ ಪಡೆದುಕೊಳ್ಳುತ್ತದೆ. ಆ ಕಾರಣದಿಂದಾಗಿ ಮಾಲ್ಡೀವ್ಸ್‌ನ ಮೇಲೆ ಭಾರತ ಹಾಗೂ ಚೀನಾ ದೊಡ್ಡ ಮಟ್ಟದ ಹೂಡಿಕೆ ಮಾಡಿವೆ.
ಆದರೆ, ಈ ಯತ್ನದಲ್ಲಿ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿದ್ದು ಭಾರತ. ಚೀನಾಕ್ಕಿಂತ ಮಾಲೆಯ ರಾಜಕೀಯದಲ್ಲಿ ಭಾರತ ಆಳವಾದ ಹಿಡಿತ ಹೊಂದಿದೆ. ಆದರೆ, ಮಾಲ್ಡೀವ್ಸ್ ಫರ್ಸ್ಟ್ ಎನ್ನುವ ಧೋರಣೆಯೊಂದಿಗೆ ಇತ್ತೀಚೆಗೆ ಮಾಲ್ಡೀವ್ಸ್‌ನಲ್ಲಿ ಅಧಿಕಾರಕ್ಕೆ ಬಂದಿರುವ ಮೊಹಮದ್ ಮುಝಿಝು ಸರ್ಕಾರ ಮಾತ್ರ, ಭಾರತಕ್ಕಿಂತ ತಮಗೆ ಚೀನಾವೇ ಮುಖ್ಯ ಎಂದು ಹೇಳಿದ್ದಾರೆ. ಅದಕ್ಕೆ ಕಾರಣವೂ ಇದೆ. ಸಹಾಯದ ನೆಪದಲ್ಲಿ ಚೀನಾ ದೇಶ, ಮಾಲ್ಡೀವ್ಸ್‌ಅನ್ನು ತನ್ನ ಬೃಹತ್ 'ಸಾಲದ ಟ್ರ್ಯಾಪ್'ನಲ್ಲಿ ಇರಿಸಿದೆ. ಕೋವಿಡ್ ಕಾಲದಲ್ಲಿ ಭಾರತ ತಾನು ಕಂಡುಹಿಡಿದ ಲಸಿಕೆಯನ್ನು ಮೊಟ್ಟಮೊದಲ ಬಾರಿಗೆ ರಫ್ತು ಮಾಡಿದ ದೇಶ ಮಾಲ್ಡೀವ್ಸ್. ಅದರೊಂದಿಗೆ ಕೋವಿಡ್ ಸಮಯದಲ್ಲಿ ಭಾರತ ನಿರಂತರವಾಗಿ ಮಾಲ್ಡೀವ್ಸ್‌ಗೆ ಸಹಾಯ ಒದಗಿಸಿತ್ತು.
ತೀರಾ ಇತ್ತೀಚಿನವರೆಗೂ ಮಾಲ್ಡೀವ್ಸ್ ಭಾರತದೊಂದಿಗೆ ಉತ್ತಮ ಸಂಬಂಧವನ್ನೇ ಹೊಂದಿತ್ತು. ಇದನ್ನು ಕಂಡು ಹೊಟ್ಟೆ ಉರಿದುಕೊಳ್ಳುತ್ತಿದ್ದ ಚೀನಾ, ಶ್ರೀಲಂಕಾ ಮೂಲಕ ಹಿಂದೂ ಮಹಾಸಾಗರದ ಮೇಲೆ ಪ್ರಾಬಲ್ಯ ಸಾಧಿಸುವ ಪ್ರಯತ್ನ ಮಾಡಿತ್ತು. ಆದರೆ, ಚೀನಾದ ಉದ್ದೇಶ ಶ್ರೀಲಂಕಾಕ್ಕೆ ಅರ್ಥವಾಗುತ್ತಿದ್ದಂತೆ ಅದರಿಂದ ದೂರ ಉಳಿಯಲು ತೀರ್ಮಾನ ಮಾಡಿದೆ. ಹಾಗಾಗಿ ಈ ಪ್ರದೇಶದಲ್ಲಿ ಹಿಡಿತ ಕಾಯ್ದುಕೊಳ್ಳಲು ಮಾಲ್ಡೀವ್ಸ್ ಮೇಲೆ ಹಿಡಿತ ಸಾಧಿಸುವುದು ಚೀನಾಗೆ ಅಗತ್ಯವಾಗಿತ್ತು. ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳಿಗೆ ಹೋಲಿಸಿದರೆ, ಮಾಲ್ಡೀವ್ಸ್ ತೀರಾ ಪುಟ್ಟ ರಾಷ್ಟ್ರ. ಬಾಂಗ್ಲಾದೇಶದ ಪ್ರಧಾನ ಮಂತ್ರಿಯ ವಿದೇಶಾಂಗ ನೀತಿ ಸಲಹೆಗಾರರಾದ ಗೌಹರ್ ರಿಜ್ವಿ ಅವರು ಕೆಲವು ವರ್ಷಗಳ ಹಿಂದೆ "ನಾವು ಚೀನಾದ ಬಿಆರ್‌ಐ ಭಾಗವಾಗಿದ್ದೇವೆ" ಆದರೆ "ನಮ್ಮ ಪ್ರಮುಖ ಪಾಲುದಾರ ಭಾರತ ಎನ್ನುವುದು ನಮಗೆ ಗೊತ್ತಿದೆ" ಎಂದಿದ್ದರು. ಈ ಹೇಳಿಕೆಯು ಭಾರತ ಮತ್ತು ಚೀನಾ ನಡುವಿನ ವ್ಯೂಹಾತ್ಮಕ ಹಗ್ಗ-ಜಗ್ಗಾಟದ ವಿಷಯವಾಗಿರುವ ಮಾಲ್ಡೀವ್ಸ್‌ಗೂ ಅನ್ವಯಿಸುತ್ತದೆ.
1965ರಲ್ಲಿ ಬ್ರಿಟಿಷರಿಂದ ಮಾಲ್ಡೀವ್ಸ್ ಸ್ವಾತಂತ್ರ್ಯ ಪಡಡೆದುಕೊಂಡ ಬಳಿಕ, ಈ ದೇಶದೊಂದಿಗೆ ರಾಜತಾಂತ್ರಿಕ ಸಂಬಂಧ ಬೆಳೆಸಿದ ಮೊದಲ ದೇಶ ಭಾರತ. 1978ರಿಂದ 2008ರವರೆಗೂ ಈ ದೇಶವನ್ನು ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಆಳ್ವಿಕೆ ನಡೆಸಿದ್ದರು. ಇವರಿಗೆ ಭಾರತ ದೊಡ್ಡ ಮಟ್ಟದ ಬೆಂಬಲ ನೀಡಿತು. 1988ರಲ್ಲಿ ಗಯೂಮ್ ವಿರುದ್ಧ ಎದ್ದ ದೊಡ್ಡ ದಂಗೆಯನ್ನೂ ಭಾರತವೇ ಮುಂದೆ ನಿಂತು ಹತ್ತಿಕ್ಕಿತ್ತು. ಅದರೊಂದಿಗೆ ವ್ಯಾಪಾರ ಸಹಕಾರ ಹಾಗೂ ನೈಸರ್ಗಿಕ ವಿಕೋಪದಂತ ಪರಿಸ್ಥಿತಿ ಬಂದಾಗಲೂ ಮಾಲ್ಡೀವ್ಸ್‌ಗೆ ಭಾರತವೇ ಮೊದಲ ದೇಶವಾಗಿ ಸಹಾಯಕ್ಕೆ ಹೋಗಿತ್ತು. 2008ರಲ್ಲಿ ಮಾಲ್ಡೀವ್ಸ್‌ನಲ್ಲಿ ಸರ್ವಾಧಿಕಾರದ ಅಧಿಕಾರ ಮುಗಿದು ಪ್ರಜಾಪ್ರಭುತ್ವಕ್ಕೆ ಪರಿವರ್ತನೆಯಾದಾಗ ಗಯೂಮ್ ಅವರ ಉತ್ತರಾಧಿಕಾರಿ ಮೊಹಮದ್ ನಶೀದ್‌ಗೆ ಬೆಂಬಲ ನೀಡಿತ್ತು.
ಆದರೆ, 2013ರಲ್ಲಿ ಮಾಲ್ಡೀವ್ಸ್ ಜೊತೆಗಿನ ಭಾರತದ ಸಂಬಂಧ ಹದಗೆಡಲು ಆರಂಭಿಸಿತು. ರಾಜಕೀಯ ದಂಗೆಯ ಕಾರಣದಿಂದಾಗಿ ಅಬ್ದುಲ್ಲಾ ಯಮೀನ್ ಅಧಿಕಾರ ಹಿಡಿದರು. ಸರ್ವಾಧಿಕಾರಿಯಾಗಿದ್ದ ಯಮೀನ್‌ಗೆ ಬೀಜಿಂಗ್‌ನ ಬೆಂಬಲವಿತ್ತು. ಇದೇ ಸಮಯದಲ್ಲಿ ಚೀನಾ ತನ್ನ ಬಹುಮುಖ್ಯ ಬಿಆರ್‌ಐ ಯೋಜನೆಯನ್ನು ಘೋಷಣೆ ಮಾಡಿತು. ಮಾಲ್ಡೀವ್ಸ್ ದೇಶಕ್ಕೂ ಹೊಸ ಹೊಸ ಮೂಲಸೌಕರ್ಯ ಯೋಜನೆ ಘೋಷಣೆ ಮಾಡಿತು. ಚೀನಾ ಹಾಗೂ ಮಾಲ್ಡೀವ್ಸ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೂ ಸಹಿ ಹಾಕಲಾಯಿತು. ಅದರ ಬೆನ್ನಲ್ಲಿಯೇ ಬಿಆರ್‌ಐಗೆ ಮಾಲೆ ಕೂಡ ಸೇರಿಕೊಂಡಿತು. 2018ರ ವೇಳೆಗೆ ಮಾಲ್ಡೀವ್ಸ್‌ನ ಪ್ರಧಾನ ಏರ್ಪೋರ್ಟ್‌ನಲ್ಲಿ 3400 ಮೀಟರ್ ಉದ್ದದ ರನ್‌ವೇಅನ್ನು ಪೂರ್ಣ ಮಾಡಿಕೊಟ್ಟಿತು. ಮಾಲೆ ಹಾಗೂ ಹುಲ್‌ಹಮಾಲೆ ದ್ವೀಪಕ್ಕೆ ಸಂಪರ್ಕಿಸುವ ಹೊಸ ಸೇತುವೆ ಯೋಜನೆಗೂ ಹಣ ಹಾಕಿತು. ಮಾಲ್ಡೀವ್ಸ್‌ನ ಆದಾಯಕ್ಕಿಂತ ಚೀನಾದ ಸಾಲದ ಹೊರೆ ಹೆಚ್ಚಾಗತೊಡಗಿತು.
ಇಂದು ಮಾಲ್ಡೀವ್ಸ್, ಚೀನಾ ದೇಶವೊಂದರಿಂದಲೇ 1.5 ಬಿಲಿಯನ್ ಯುಎಸ್ ಡಾಲರ್ ಸಾಲದ ಹೊರೆ ಹೊತ್ತುಕೊಂಡಿದೆ. ಇಡೀ ದೇಶದ ಜಿಡಿಪಿಯೇ 9 ಬಿಲಿಯನ್ ಡಾಲರ್‌ಗಿಂತ ಕಡಿಮೆ ಇರುವ ಮಾಲ್ಡೀವ್ಸ್‌ಗೆ ಇದು ಇನ್ನಷ್ಟು ಕಂಟಕವಾಗಿದೆ.
ಭಾರತದ ಜೊತೆ ಕ್ಯಾತೆ ನಡುವೆಯೇ ಮಾಲ್ಡೀವ್ಸ್ ಅಧ್ಯಕ್ಷರಿಂದ ಚೀನಾ ಭೇಟಿ
2018ರಲ್ಲಿ ಭಾರತ ಬೆಂಬಲಿತ ಮೊಹಮದ್ ಇಬ್ರಾಹಿಂ ಸೋಲಿಹ್ ಅಧಿಕಾರಕ್ಕೇರಿದ ಬಳಿಕ ಭಾರತ-ಮಾಲ್ಡೀವ್ಸ್ ಸಂಬಂಧ ಇನ್ನಷ್ಟು ವೃದ್ಧಿಯಾಯಿತು. ಇಂಡಿಯಾ ಫರ್ಸ್ಟ್ ಎನ್ನುವ ನೀತಿಯನ್ನು ಸೋಲಿಹ್ ಹೊಂದಿದ್ದರು. ಚೀನಾದ ಜೊತೆಗಿತ ಮುಕ್ತ ವ್ಯಾಪಾರ ಒಪ್ಪಂದದಿಂದ ಹೊರಬಂದರು. ಅದರೊಂದಿಗೆ ಮಾಲ್ಡೀವ್ಸ್‌ಗೆ 1.4 ಬಿಲಿಯನ್ ಯುಎಸ್ ಡಾಲರ್ ಸಾಲ ನೀಡಿದ ಭಾರತ, ದೇಶದ ಸಾಕಷ್ಟು ಅಭಿವೃದ್ಧಿ ಯೋಜನೆಗಳಿಗೆ ಹಣ ಹೂಡಿರತು. ಪ್ರಸ್ತುತ ಭಾರತ ದೇಶ ಮಾಲ್ಡೀವ್ಸ್‌ನಲ್ಲಿ ಕ್ಯಾನ್ಸರ್ ಆಸ್ಪತ್ರೆ, ಹೊಸ ಕ್ರಿಕೆಟ್ ಸ್ಟೇಡಿಯಂ, ಸರ್ವಋತುವಿನ ಬಂದರು ಹಾಗೂ ಏರ್ಪೋರ್ಟ್ ಮೇಲ್ದರ್ಜೆಗೆ ಏರಿಸುವ ಕಾರ್ಯವನ್ನು ಮಾಡಿದೆ.
Photos: ನೀವೆಷ್ಟೇ ಲಕ್ಷ ಖರ್ಚು ಮಾಡಿದ್ರೂ, ಲಕ್ಷದ್ವೀಪದ ಸೌಂದರ್ಯ ನಿಮಗೆಲ್ಲೂ ಸಿಗದು..
ಇದೆಲ್ಲಕ್ಕಿಂತ ಮುಖ್ಯವಾಗಿ ಮಾಲ್ಡೀವ್ಸ್ ದೇಶದ ದೊಡ್ಡ ಆದಾಯ ಅಲ್ಲಿನ ಪ್ರವಾಸೋದ್ಯಮ. ಮಾಲ್ಡೀವ್ಸ್‌ಗೆ ಪ್ರವಾಸೋದ್ಯಮದಿಂದ ಬರುವ ಆದಾಯದಲ್ಲಿ ಶೇ. 11ರಷ್ಟು ಬರುವುದು ಭಾರತದಿಂದ. ಅದರೊಂದಿಗೆ ರಷ್ಯಾ ಕೂಡ ಪ್ರವಾಸೋದ್ಯಮಕ್ಕೆ ಬೆಂಬಲ ನೀಡಿದೆ. ಭಾರತದೊಂದಿಗಿನ ಈ ಗುದ್ದಾಟ ಮುಂದಿನ ದಿನಗಳಲ್ಲಿ ಮಾಲ್ಡೀವ್ಸ್‌ನ ಆದಾಯದಕ್ಕೆ ಬಹುದೊಡ್ಡ ಹೊಡೆತ ನೀಡುವುದು ಮಾತ್ರವಲ್ಲ, ಚೀನಾದ ಸಾಲದ ಟ್ರ್ಯಾಪ್ ಈ ದೇಶದ ಮೇಲೆ ಇನ್ನಷ್ಟು ಬಿಗಿಯಾಗಲಿದೆ.
