2 ಡೋಸ್ ಲಸಿಕೆ ಪಡೆದ 87 ಸಾವಿರ ಜನರಿಗೆ ಕೊರೋನಾ
- 2 ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿದ ಹೊರತಾಗಿಯೂ ದೇಶದಲ್ಲಿ 87,000 ಮಂದಿಗೆ ಕೊರೋನಾ
- ಶೇ.46ರಷ್ಟುಮಂದಿ ಕೇರಳದವರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ಮಾಹಿತಿ
ನವದೆಹಲಿ (ಆ.20): 2 ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿದ ಹೊರತಾಗಿಯೂ ದೇಶದಲ್ಲಿ 87,000 ಮಂದಿ ಕೊರೋನಾ ಸೋಂಕಿತರಾಗಿದ್ದಾರೆ. ಇವರಲ್ಲಿ ಶೇ.46ರಷ್ಟುಮಂದಿ ಕೇರಳದವರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.
ಕೇರಳದಲ್ಲಿ ಮೊದಲ ಡೋಸ್ ಪಡೆದವರ ಪೈಕಿ 80,000 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದರೆ, 2 ಡೋಸ್ ಪಡೆದ ಸುಮಾರು 40,000 ಮಂದಿಯಲ್ಲಿ ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿವೆ. ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಲಸಿಕೆ ಪಡೆದುಕೊಂಡವರಲ್ಲಿ ಸೋಂಕು ಪತ್ತೆ ಆಗುತ್ತಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಆತಂಕಕ್ಕೆ ಕಾರಣವಾಗಿದೆ.
56.64 ಕೋಟಿ ದಾಟಿತು ಭಾರತದ ಲಸಿಕಾ ಅಭಿಯಾನ; 3 ಅಲೆ ನಿಯಂತ್ರಣಕ್ಕೆ ಕೇಂದ್ರದ ಕ್ರಮ!
ಅದರಲ್ಲೂ ಶೇ.100ರಷ್ಟುಲಸಿಕೆ ನೀಡಿಕೆ ದರವನ್ನು ಹೊಂದಿರುವ ವಯನಾಡ್‌ನಲ್ಲಿಯೂ ಇಂತಹ ಪ್ರಕರಣಗಳು ದಾಖಲಾಗುತ್ತಿವೆ. ಲಸಿಕೆ ಪಡೆದ ಬಳಿಕ ಸೋಂಕು ಕಾಣಿಸಿಕೊಂಡ 200 ಮಾದರಿಗಳನ್ನು ಜಿನೋಮ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕೇರಳದ ಗಡಿ ಜಿಲ್ಲೆಗಳಾದ ಕರ್ನಾಟಕ ಮತ್ತು ತಮಿಳುನಾಡಿನ ಮೇಲೂ ಕೇಂದ್ರ ಸರ್ಕಾರ ತೀವ್ರ ನಿಗಾ ವಹಿಸಿದೆ. ಈ ರಾಜ್ಯಗಳಲ್ಲಿ ಜಿನೋಮ್ ಮಾದರಿ ಪರೀಕ್ಷೆಗೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.