Asianet Suvarna News Asianet Suvarna News

ಟ್ರಂಪ್‌ ಭೇಟಿ; ಚೀನಾಕ್ಕೆ ಸಡ್ಡು ಹೊಡೆಯಲು ಈ ಭೇಟಿ ಹೆಚ್ಚು ಶಕ್ತಿ?

ಇದೇ ಫೆ. 24 ರಿಂದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಗುಜರಾತ್’ನ ಅಹಮದಾಬಾದ್’ಗೆ ಬರಲಿರುವ ಟ್ರಂಪ್, ‘ಕೇಮ್‌ಛೋ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

How India is preparing for Donald Trump Visit to Ahmadabad
Author
Bengaluru, First Published Feb 22, 2020, 10:30 AM IST

ವಿಶ್ವದ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ ಅಮೆರಿಕದ ಅಧ್ಯಕ್ಷ ದೇಶವೊಂದಕ್ಕೆ ಭೇಟಿ ನೀಡುವ ವಿಷಯ ಸಣ್ಣ ಸಂಗತಿ ಅಲ್ಲ. ಮೇಲಾಗಿ, ಜಗತ್ತಿನ ಬಹುತೇಕ ದೇಶದ ಜನರಿಗೆ ಅಮೆರಿಕಕ್ಕೆ ಹೋಗಿ ನೆಲೆಸುವುದೊಂದು ಕನಸು. ಇಂತಹ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರು ಬೇರೊಂದು ದೇಶಕ್ಕೆ ಭೇಟಿ ನೀಡುವುದಕ್ಕೆ ಅದರದ್ದೇ ಆದ ವಿಶೇಷಗಳಿರುತ್ತವೆ.

ಅಲ್ಲದೆ ಆತಿಥೇಯ ದೇಶಕ್ಕೂ ಮಹತ್ವದ ಒಡಂಬಡಿಕೆ, ವ್ಯಾಪಾರ ಒಪ್ಪಂದಗಳೂ ಸೇರಿದಂತೆ ತನಗೆ ಅನುಕೂಲವಾಗುವಂತೆ ಇನ್ನಿತರ ಸಂಗತಿಗಳನ್ನು ಕುದುರಿಸಿಕೊಳ್ಳುವ ಆಶಯವಿರುತ್ತದೆ. ಹೀಗಾಗಿ ವಿಶ್ವದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾದ ಭಾರತಕ್ಕೆ ಅಮೆರಿಕದ ಅಧ್ಯಕ್ಷರ ಭೇಟಿ ಹಲವು ನಿರೀಕ್ಷೆಗಳನ್ನು ಗರಿಗೆದರಿಸಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ ಭಾರತದ ಆತಿಥ್ಯ ಪಡೆಯಲಿದ್ದಾರೆ. ಅದರ ಬಗ್ಗೆ ಒಂದಿಷ್ಟು ಒಳನೋಟ ಇಲ್ಲಿದೆ.

ಪ್ರವಾಸಕ್ಕೆ ಮುನ್ನ ಭಾರತ ವಿರುದ್ಧ ಟ್ರಂಪ್‌ 'ತೆರಿಗೆ' ತಗಾದೆ!

ಮೋದಿ ವರ್ಚಸ್ಸಿಗೆ ಟ್ರಂಪ್‌ ಬೋಲ್ಡ್‌

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಬಲಿಷ್ಠ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು, ಅಮೆರಿಕದ ಅಧ್ಯಕ್ಷರು ಯಾರೇ ಆದರೂ ಅವರು ವಿಶ್ವದ ನಂ.1 ಬಲಿಷ್ಠ ನಾಯಕ ಎಂದು ಸಹಜವಾಗಿಯೇ ಪರಿಗಣಿತವಾಗುತ್ತಾರೆ. ಈಗಾಗಲೇ ಮೋದಿ ತಮ್ಮ ಹಲವು ವಿದೇಶಿ ಭೇಟಿ ವೇಳೆ ಟ್ರಂಪ್‌ ಅವರನ್ನು ಭೇಟಿಯಾಗಿದ್ದಾರೆ. ಸ್ವತಃ ಅಮೆರಿಕದಲ್ಲೂ ಮೋದಿ ಅವರು ಟ್ರಂಪ್‌ರನ್ನು ಭೇಟಿ ಮಾಡಿದ್ದಷ್ಟೇ ಅಲ್ಲ, ತಾವೇ ಅಲ್ಲಿ ಆಯೋಜಿಸಿದ್ದ ಭಾರತೀಯರ ಬೃಹತ್‌ ಸಮಾವೇಶಕ್ಕೆ ಟ್ರಂಪ್‌ರನ್ನೇ ಅತಿಥಿಯಾಗಿ ಕರೆದು ಅವರನ್ನು ನಿಬ್ಬೆರಗಾಗಿಸಿದ್ದಾರೆ.

ಆ ಭೇಟಿಯ ನಂತರ ಮೋದಿ ಹಾಗೂ ಟ್ರಂಪ್‌ ನಡುವೆ ಎರಡು ದೇಶಗಳ ನಾಯಕರ ನಡುವಿನ ರಾಜತಾಂತ್ರಿಕ ಸ್ನೇಹದ ಜೊತೆಗೆ ವೈಯಕ್ತಿಕ ಸ್ನೇಹವೂ ಬೆಳೆದಿದೆ. ಹೀಗೆ ಕುದುರಿದ ಸ್ನೇಹಕ್ಕೆ ದೇಶ, ರಾಜಕೀಯ ಮೀರಿದ ಸಂಬಂಧವಿದೆ. ಇದೇ ಸ್ನೇಹದಲ್ಲೇ ಇಬ್ಬರೂ ವೈಯಕ್ತಿಕವಾಗಿ, ಬಲು ಆತ್ಮೀಯವಾಗಿ ಮಾತನಾಡುತ್ತಾರೆ. ಇದೂ ಕೂಡ ಟ್ರಂಪ್‌ ಅವರನ್ನು ಭಾರತಕ್ಕೆ ಬರಲು ಪ್ರೇರೇಪಿಸಿದೆ ಎಂದರೆ ತಪ್ಪಾಗಲಾರದು.

ಅಲ್ಲದೆ ಈ ಭೇಟಿಯು ಎರಡೂ ದೇಶಗಳ ನಡುವಿನ ಬಾಂಧವ್ಯ, ಸ್ನೇಹ, ಹಿತಾಸಕ್ತಿ ಹಾಗೂ ಜನರನ್ನು ಮತ್ತಷ್ಟುಹತ್ತಿರವಾಗಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮೋದಿ ನಾಯಕತ್ವಕ್ಕೆ ಟ್ರಂಪ್‌ ಮಾರುಹೋಗಿದ್ದು, ಈ ಕುರಿತು ಹಲವಾರು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಭಾರತದ ಸೇನೆಗೆ ಅಮೆರಿಕದ ಅತ್ಯಾಧುನಿಕ ಕಾಪ್ಟರ್‌

ಅಮೆರಿಕದ ಬಳಿ ಇರುವ ಅತ್ಯಂತ ಶಕ್ತಿಶಾಲಿ ಹೆಲಿಕಾಪ್ಟರ್‌ ಎಂಎಚ್‌-60ಆರ್‌ ಹೆಲಿಕಾಪ್ಟರ್‌ಗಳನ್ನು ಭಾರತದ ಸೇನೆಯ ಬತ್ತಳಿಕೆಗೆ ಸೇರಿಸಲು ಭಾರತ ಸರ್ಕಾರವು ಉತ್ಸುಕವಾಗಿದೆ. ಏಕೆಂದರೆ ಈ ಹೆಲಿಕಾಪ್ಟರ್‌ಗಳು ಎರಡು ಟರ್ಬೋಶಾಫ್ಟ್‌ ಎಂಜಿನ್‌ ಹೊಂದಿದ್ದು, ಬಹು ವಿಧದ ಆಯಧಗಳನ್ನು ಹೊತ್ತೊಯ್ಯುವ ಹಾಗೂ ಶತ್ರುವಿನ ನೆಲದ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿವೆ.

ಭಾರತಕ್ಕೆ ಟ್ರಂಪ್ ಭೇಟಿ; ಸ್ಲಂ ಕಾಣದಂತೆ 6 ಕೋಟಿ ವೆಚ್ಚದಲ್ಲಿ ತಡೆಗೋಡೆ

ಆ್ಯಂಟಿ ಸಬ್‌ಮೆರೀನ್‌ಗಳನ್ನು ಹೊಡೆದು ಹಾಕಲು ಈ ಹೆಲಿಕಾಪ್ಟರ್‌ಗಳು ಹೆಚ್ಚು ಸೂಕ್ತ. ಇವುಗಳ ಬೆಲೆ 2.6 ಬಿಲಿಯನ್‌ ಡಾಲರ್‌ (ಸುಮಾರು 18720 ಕೋಟಿ ರು.) ಗಳಾಗಿದ್ದು, 24 ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಸಂಬಂಧ ಎರಡೂ ದೇಶಗಳ ಅಧಿಕಾರಿಗಳು ಪೂರ್ವತಯಾರಿ ನಡೆಸುತ್ತಿದ್ದಾರೆ.

2007 ರ ನಂತರ ಭಾರತವು ಅಮೆರಿಕದಿಂದ 17 ಬಿಲಿಯನ್‌ ಡಾಲರ್‌ (ಸುಮಾರು 1.2 ಲಕ್ಷ ಕೋಟಿ ರು.) ಮೌಲ್ಯದ ರಕ್ಷಣಾ ಉಪಕರಣಗಳನ್ನು ಖರೀದಿಸಿತ್ತು. ತದನಂತರ ಇಂತಹ ಒಪ್ಪಂದಗಳು ಆಗಿಲ್ಲ. ಕಳೆದ ವಾರವಷ್ಟೇ ಅಮೆರಿಕವು ಸಮಗ್ರ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆ (ಐಎಡಿಡಬ್ಲ್ಯುಎಸ್‌)ಯನ್ನು ಭಾರತಕ್ಕೆ ಪೂರೈಸಲು ಒಪ್ಪಿದೆ.

ಎನ್‌ಆರ್‌ಐಗಳ ‘ಟ್ರಂಪ್‌’ಕಾರ್ಡ್‌!

ಟ್ರಂಪ್‌ ಅವರ ಬಗ್ಗೆ ಹಲವು ಭಿನ್ನ ಅಭಿಪ್ರಾಯಗಳಿದ್ದರೂ ಅವರ ಜನಪ್ರಿಯತೆ ಅಮೆರಿಕದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿಯೇ ಇದೆ. ಇತ್ತೀಚೆಗಿನ ಸಮೀಕ್ಷೆಯಲ್ಲಿ ಅವರ ಜನಪ್ರಿಯತೆ ಶೇ.49 ರಷ್ಟಿದೆ. ಇದಕ್ಕೆ ಕಾರಣ ಅವರ ಅಧ್ಯಕ್ಷತೆಯಲ್ಲಿ ಅಮೆರಿಕದ ಆರ್ಥಿಕತೆ ಮತ್ತಷ್ಟುವಿಸ್ತಾರಗೊಂಡಿದೆ. ಇದರ ಲಾಭ ಪಡೆಯಲು ಟ್ರಂಪ್‌ ಪ್ರತಿನಿಧಿಸುವ ರಿಪಬ್ಲಿಕನ್‌ ಪಕ್ಷವು ಉತ್ಸುಕವಾಗಿದೆ. ಇನ್ನು, ಭಾರತದಿಂದ ವಲಸೆ ಹೋಗಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಸಂಖ್ಯೆ ಬಹಳಷ್ಟುದೊಡ್ಡಮಟ್ಟದಲ್ಲಿಯೇ ಇದೆ.

ಅಮೆರಿಕದ ಚುನಾವಣೆಯಲ್ಲಿ ಅನಿವಾಸಿ ಭಾರತೀಯ ಮತದಾರರ ಮತಗಳು ನಿರ್ಣಾಯಕವಲ್ಲ. ಆದರೆ ಕೆಲವು ರಾಜ್ಯಗಳಲ್ಲಿ ಟ್ರಂಪ್‌ ಗೆಲ್ಲಲು ಭಾರತೀಯರ ಮತಗಳು ಅನಿವಾರ್ಯ. ಹಾಗಾಗಿ ಭಾರತೀಯರ ಮತಗಳ ಮೇಲೆ ಟ್ರಂಪ್‌ ಕಣ್ಣಿಟ್ಟಿದ್ದಾರೆ. ಇದೇ ವೇಳೆ, ಭಾರತದಲ್ಲಿ ಪ್ರಧಾನಿ ಮೋದಿ ಅವರ ಜನಪ್ರಿಯತೆ, ಹವಾ ಎಷ್ಟಿದೆಯೋ, ವಿದೇಶದಲ್ಲಿರುವ ಭಾರತೀಯರ ಮೇಲೂ ಮೋದಿ ಪ್ರಭಾವ ಬೀರಿದ್ದಾರೆ. ಅಲ್ಲದೆ ತಮ್ಮ ವಿದೇಶಿ ಭೇಟಿ ವೇಳೆ ಅನಿವಾಸಿ ಭಾರತೀಯರನ್ನು ಒಂದೆಡೆ ಸೇರಿಸಿ ಮೋದಿ ಮಾಡುವ ಭಾಷಣವನ್ನು ನೋಡಿ ಟ್ರಂಪ್‌ ಬೆರಗಾಗಿದ್ದಾರೆ.

ಈ ಕಲೆಯನ್ನು ಸೂಕ್ತವಾಗಿ ಬಳಸಿಕೊಂಡು ಅಮೆರಿಕದ ಅಧ್ಯಕ್ಷರ ಚುನಾವಣೆಯಲ್ಲಿ ಗೆಲುವನ್ನು ಸುಗಮವಾಗಿಸಿಕೊಳ್ಳುವುದು ಟ್ರಂಪ್‌ ಅವರ ಆಲೋಚನೆ. ಇದಕ್ಕೆ ಮುನ್ನುಡಿ ಎಂಬಂತೆ ‘ಹೌಡಿ ಮೋದಿ’ ಕಾರ‍್ಯಕ್ರಮದಲ್ಲಿ 50 ಸಾವಿರ ಭಾರತೀಯರನ್ನು ಉದ್ದೇಶಿಸಿ ಟ್ರಂಪ್‌ ಸಮ್ಮುಖದಲ್ಲೇ ಮೋದಿ ಭಾಷಣ ಮಾಡಿದ್ದರು. ಇದರ ಮುಂದುವರಿದ ಭಾಗವಾಗಿ ಗುಜರಾತ್‌ನಲ್ಲಿ ಮೋದಿ ಅವರು ‘ನಮಸ್ತೆ ಟ್ರಂಪ್‌’ ಕಾರ‍್ಯಕ್ರಮ ಆಯೋಜಿಸಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆಯುವ ಕಾರ‍್ಯಕ್ರಮದಲ್ಲಿ ಟ್ರಂಪ್‌ ಭಾಷಣ ಮಾಡಲಿದ್ದಾರೆ. ಟ್ರಂಪ್‌ಗೆ ಭಾರತೀಯರಿಂದ ಆಗುವ ಈ ಲಾಭದಿಂದ ಭಾರತಕ್ಕೂ ಪ್ರಯೋಜನವಿದೆ. ಏಕೆಂದರೆ ಭಾರತದ ಅಭಿವೃದ್ಧಿಯಲ್ಲಿ ಎನ್‌ಆರ್‌ಐಗಳ ಪಾತ್ರ ದೊಡ್ಡದಿದೆ. ಎನ್‌ಆರ್‌ಐಗಳು ತಮ್ಮನ್ನು ಬೆಂಬಲಿಸಿದರೆ ಭಾರತದ ಬಗ್ಗೆ ಟ್ರಂಪ್‌ ಇನ್ನಷ್ಟುಔದಾರ್ಯ ತೋರುತ್ತಾರೆ. ಅದರಿಂದ ಭಾರತಕ್ಕೇ ಅನುಕೂಲ.

ಊಟದ ಬಳಿಕ ಟ್ರಂಪ್ ಜಗೀತಾರೆ ಎಲೆ ಅಡಿಕೆ; ಅವರಿಗೆ ಪಾನ್ ಸಪ್ಲೈ ಮಾಡೋದು ಇವ್ರೇ!

ಒಬಾಮಾ ತಡೆದಿದ್ದ ಒಪ್ಪಂದಕ್ಕೆ ಟ್ರಂಪ್‌ ಗ್ರೀನ್‌ ಸಿಗ್ನಲ್‌?

ಈ ಹಿಂದಿನ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ ಅವರ ಅವಧಿಯಲ್ಲಿ ಭಾರತಕ್ಕೆ ಕೆಲವು ಯುದ್ಧ ಉಪಕರಣಗಳನ್ನು ಮಾರಾಟ ಮಾಡುವುದನ್ನು ಅಮೆರಿಕ ತಡೆಹಿಡಿದಿತ್ತು. ಅಂತಹ ಸೂಕ್ಷ್ಮ ಯುದ್ಧ ಉಪಕರಣಗಳನ್ನು ಟ್ರಂಪ್‌ ಭಾರತಕ್ಕೆ ನೀಡಲು ಮುಂದಾಗಿದ್ದಾರೆ. ಇದರಲ್ಲಿ ಸೇನಾ ಡ್ರೋನ್‌ಗಳು, ಸಮಗ್ರ ವಾಯು ಮತ್ತು ಮಿಸೈಲ್‌ ರಕ್ಷಣಾ ತಂತ್ರಜ್ಞಾನಗಳು ಸೇರಿವೆ.

ಇದಕ್ಕಾಗಿ ಈಗಾಗಲೇ ಅಮೆರಿಕವು ಭಾರತಕ್ಕೆ ಸ್ಟ್ರಾಟೆಜಿಕ್‌ ಟ್ರೇಡ್‌ ಅಥರೈಸೇಷನ್‌ 1 ಸ್ಥಾನಮಾನ ನೀಡಿದೆ. ಇದರಿಂದ ಭಾರತವು ಸೂಕ್ಷ್ಮ ಯುದ್ಧೋಪಕರಣಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗಲಿದೆ. ಇದರ ಮುಂದುವರಿದ ಭಾಗವಾಗಿ ಟ್ರಂಪ್‌ ತಮ್ಮ ಭಾರತದ ಭೇಟಿ ವೇಳೆ ಒಪ್ಪಂದಕ್ಕೆ ಸಹಿ ಮಾಡುವ ಸಾಧ್ಯತೆಗಳಿವೆ.

ಚೀನಾಕ್ಕೆ ಮೂಗುದಾರ ಹಾಕಲು ಪರಸ್ಪರ ಸಹಕಾರ?

ಚೀನಾ ದೇಶದ ಸಾಮಾಜ್ಯ ವಿಸ್ತರಣೆ ಆಲೋಚನೆ ಭಾರತಕ್ಕೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಚೀನಾವನ್ನು ಹದ್ದುಬಸ್ತಿನಲ್ಲಿ ಇಡಲು ಭಾರತವು ಹೆಚ್ಚಾಗಿ ರಷ್ಯಾವನ್ನು ಅಲಂಬಿಸಿದೆ. ಆದರೆ ಎರಡೂ ಕಮ್ಯುನಿಸ್ಟ್‌ ದೇಶಗಳಾಗಿರುವುದರಿಂದ ರಷ್ಯಾ ಭಾರತದ ಮಿತ್ರ ರಾಷ್ಟ್ರವಾದರೂ ಚೀನಾ ವಿಷಯದಲ್ಲಿ ಮೃದು ತೋರಣೆ ತಳೆದಿದೆ. ಇದು ಭಾರತಕ್ಕೆ ನುಂಗುಲಾಗದ ತುತ್ತಾಗಿದೆ.

ಇನ್ನು ಅಮೆರಿಕಕ್ಕೂ ಚೀನಾ ಸಡ್ಡು ಹೊಡೆಯುತ್ತಿದೆ. ಇತ್ತೀಚೆಗೆ ಅಮೆರಿಕ ಮತ್ತು ಚೀನಾ ನಡುವೆ ಟ್ರೇಡ್‌ ವಾರ್‌ ತಾರಕಕ್ಕೇರಿದ್ದು, ಉಭಯ ದೇಶಗಳು ಪರಸ್ಪರರನ್ನು ಮೊದಲಿಗಿಂತ ತೀಕ್ಷ್ಣ ಶತ್ರುಗಳಂತೆ ನೋಡುತ್ತಿವೆ. ಹಾಗಾಗಿ ಅಮೆರಿಕದ ‘ಶತ್ರುವಿನ ಶತ್ರು ನನ್ನ ಮಿತ್ರ’ ಪಾಲಿಸಿ ಇಲ್ಲಿ ಕೆಲಸಕ್ಕೆ ಬರುತ್ತಿದೆ. ಏಷ್ಯಾದಲ್ಲಿ ಚೀನಾ ದೇಶಕ್ಕೆ ಸಡ್ಡು ಹೊಡೆಯಬಲ್ಲ ರಾಷ್ಟ್ರವೊಂದರ ಸ್ನೇಹ ಅಮೆರಿಕಕ್ಕೆ ಬೇಕಿದೆ. ಭಾರತಕ್ಕೂ ಚೀನಾಕ್ಕೆ ಟಾಂಗ್‌ ನೀಡಬಲ್ಲ ಪ್ರಬಲ ದೇಶದ ಬೆಂಬಲ ಬೇಕಿದೆ. ಹಾಗಾಗಿ ಭಾರತ-ಅಮೆರಿಕ ಒಂದುಗೂಡಿದರೆ ಚೀನಾದ ಉಪಟಳವನ್ನು ತಡೆಯಲು ಸಾಧ್ಯ ಎನ್ನುವುದು ಲೆಕ್ಕಾಚಾರ.

ಪೆಸಿಫಿಕ್‌ ವಲಯದಲ್ಲಿ ಬ್ಲೂ ಡಾಟ್‌ ನೆಟ್‌ವರ್ಕ್

ಚೀನಾ ದೇಶ ತನ್ನೆಲ್ಲ ಸುತ್ತಲಿನ ದೇಶಗಳೊಂದಿಗೆ ತಕರಾರು ಹೊಂದಿದೆ. ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಚೀನಾ ತನ್ನ ಪ್ರಭಾವಳಿ ಹೆಚ್ಚಿಸಿಕೊಳ್ಳಲು ರಸ್ತೆ ನಿರ್ಮಿಸುತ್ತಿದೆ. ಅಲ್ಲದೆ ಚೀನಾ ಸರ್ಕಾರವು ಸಮುದ್ರ ಹಾಗೂ ಪೆಸಿಫಿಕ್‌ ವಲಯದ ನಡುವೆ ತನ್ನ ನೌಕಾ ಜಾಲವನ್ನು ಹೆಣೆಯುತ್ತಿದೆ. ಇದರಲ್ಲಿ ಚೀನಾ ಯಶಸ್ವಿ ಆದರೆ ಭಾರತಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಏಕೆಂದರೆ ಆ ಬೆಲ್ಟ್‌ ಒಳಗೆ ಭಾರತವೂ ಸೇರುತ್ತದೆ.

ಇದನ್ನು ತಡೆಯಲು ಅಮೆರಿಕವು ಬ್ಲೂ ಡಾಟ್‌ ನೆಟ್‌ವರ್ಕ್ ಯೋಜನೆಯೊಂದನ್ನು ಅನುಷ್ಠಾನಗೊಳಿಸುತ್ತಿದೆ. ಇದರ ಅಂಗವಾಗಿ ಅಮೆರಿಕ, ಜಪಾನ್‌, ಭಾರತ, ಆಸ್ಪ್ರೇಲಿಯಾ ದೇಶಗಳನ್ನು ಒಳಗೊಂಡ ನೆಟ್‌ವರ್ಕ್ ಹೆಣೆದು ಚೀನಾದ ಪ್ರಭಾವಳಿ ತಡೆಯುವ ಉದ್ದೇಶವಿದೆ. ಇದು ಭಾರತಕ್ಕೂ ಹೆಚ್ಚು ಅನುಕೂಲವಾಗುತ್ತದೆ. ಟ್ರಂಪ್‌ ಭೇಟಿ ವೇಳೆ ಈ ವಿಷಯವೂ ಪ್ರಮುಖವಾಗಿ ಚರ್ಚೆಗೆ ಬರಲಿದೆ.

ಭಾರತಕ್ಕೆ ಟ್ರಂಪ್‌ ಮೊದಲ ಭೇಟಿ

ಡೊನಾಲ್ಡ್‌ ಟ್ರಂಪ್‌ ಅಮೆರಿಕಕ್ಕೆ ಅಧ್ಯಕ್ಷರಾಗಿ ನಾಲ್ಕು ವರ್ಷ ಸಮೀಪಿಸುತ್ತಿದ್ದರೂ ಇನ್ನೂ ಭಾರತಕ್ಕೆ ಭೇಟಿ ನೀಡಿರಲಿಲ್ಲ. ಅಮೆರಿಕದ ಈ ಹಿಂದಿನ ಮೂರು ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ಭಾರತವು ಅಮೆರಿಕದ ವ್ಯೂಹಾತ್ಮಕ ಪಾಲುದಾರ ಎಂಬಂತೆ ಅಂತಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿದ್ದರು. ಅಮೆರಿಕದೊಂದಿಗಿನ ಸಾಮೀಪ್ಯವು ಯಾವುದೇ ದೇಶಕ್ಕೆ ಜಾಗತಿಕ ವೇದಿಕೆಯಲ್ಲಿ ನಾನಾ ರೀತಿಯ ಅನುಕೂಲಗಳನ್ನು ಮಾಡಿಕೊಡುತ್ತದೆ.

ಈಗ ಟ್ರಂಪ್‌ ಭಾರತಕ್ಕೆ ಭೇಟಿ ನೀಡುವುದರೊಂದಿಗೆ ಸತತ ನಾಲ್ಕು ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದಂತಾಗುತ್ತದೆ. ಇದರಿಂದಾಗಿ ಭಾರತ-ಅಮೆರಿಕದ ನಡುವಿನ ಬಾಂಧವ್ಯ ಇನ್ನಷ್ಟುಹೆಚ್ಚುವುದರ ಜೊತೆಗೆ ಜಾಗತಿಕ ವೇದಿಕೆಯಲ್ಲಿ ಉಭಯ ದೇಶಗಳ ಸ್ನೇಹವನ್ನು ಇನ್ನಿತರ ದೇಶಗಳು ಗುರುತಿಸುವ ರೀತಿಯು ಇನ್ನಷ್ಟು ದೃಢವಾಗಲಿದೆ.

- ಪ್ರಶಾಂತ್ ಕೆ ಪಿ 

Follow Us:
Download App:
  • android
  • ios