ಬಾಲಿವುಡ್ ಗಾಯಕಿಯೊಬ್ಬರಿಗೆ ಕೊರೋನಾ ಸೋಂಕಿನ ಶಂಕೆ ಇದ್ದು, ರಾಷ್ಟ್ರಪತಿ ಸೇರಿ ಹಲವು ಎಂಪಿ, ಗಣ್ಯರು ಆತಂಕಗೊಂಡಿದ್ದು ಹಳೇ ಕಥೆ. ಇದೀಗ ಗುಜರಾತ್ ಸಿಎಂ ಸಹ ಮನೆಯೊಳಗೆ ಬಂಧಿಯಾಗಿದ್ದಾರೆ. ಅಷ್ಟಕ್ಕೂ ಪಶ್ಚಿಮ ಬಂಗಾಳದ ದೀದಿಗ್ಯಾವ ಭಯ? ಮನೆಯಲ್ಲೇ ಕೂತು ಕೆಲಸ ಮಾಡುತ್ತಿರುವುದೇಕೆ?

ಲಾಕ್‌ಡೌನ್‌ ಶುರು ಆದಾಗಿನಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಿನವಿಡೀ ಕೊಲ್ಕತ್ತಾದ ಬೀದಿ ಬೀದಿ ಓಡಾಡುತ್ತಿದ್ದರು. ಸ್ವತಃ ಜನರಿಗೆ ಸಾಮಾಜಿಕ ಅಂತರದ ಬಗ್ಗೆ ಹೇಳುವುದು, ಊಟದ ವ್ಯವಸ್ಥೆ ಮಾಡಿಸುವುದು ಹೀಗೆ ಬೀದಿಯಲ್ಲಿ ನಿಂತುಕೊಂಡೇ ರಾಬಿನ್‌ ಹುಡ್‌ ರೀತಿಯಲ್ಲಿ ಮಮತಾ ಕೆಲಸ ಮಾಡುತ್ತಿದ್ದರು. ಸಹಜವಾಗಿ ಜನಸಾಮಾನ್ಯರು ಮಮತಾರನ್ನು ಸೆಲ್ಫಿಗಾಗಿ, ಕೈಕುಲುಕಲು ಮುಗಿಬೀಳುತ್ತಿದ್ದರು. 

ಆದರೆ ಈಗ ಇವೆಲ್ಲಾ ಮಾಡದಂತೆ ಹಿರಿಯ ಮಂತ್ರಿಗಳು ಮತ್ತು ಡಾಕ್ಟರ್‌ಗಳು ಮಮತಾ ಮನವೊಲಿಸಿದ್ದಾರೆ. ಸ್ವತಃ ದೀದಿಗೆ ಸೋಂಕು ತಗುಲಿದರೆ ಎಂಬ ಭಯ ಮಮತಾರ ಡಾಕ್ಟರ್‌ಗಳಿಗಿದ್ದು, ಹೇಗೋ ಏನೋ ಡಾಕ್ಟರ್‌ಗಳ ಮಾತು ಕೇಳಿ ಮಮತಾ ಮನೆಯಲ್ಲಿ ಕುಳಿತು ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ವೈರಸ್‌ಗೇನು ಗೊತ್ತಿರುತ್ತದೆಯೇ ಇವರು ಮಮತಾ ಎಂದು? ಎದುರು ಬಂದವರ ಶ್ವಾಸಕೋಶಕ್ಕೆ ನುಗ್ಗುವುದೇ ಅದರ ಕೆಲಸ.

ಜನರಿಗೆ ತೊಂದರೆಯಾದರೂ ಮೋದಿ ಲಾಕ್‌ಡೌನ್‌ಗೆ ಮುಂದಾಕಿದ್ದೇಕೆ?

ಮಂತ್ರಿಗಳಿಗೆ ಮೋದಿ ‘ಸ್ಕ್ರೀನಿಂಗ್‌’
ಪ್ರಧಾನಿ ನೀಡಿದ ನಿರ್ದೇಶನದ ನಂತರ ಕಳೆದ ಸೋಮವಾರದಿಂದ ಕೇಂದ್ರೀಯ ಮಂತ್ರಿಗಳು ಮತ್ತು ಜಂಟಿ ಕಾರ್ಯದರ್ಶಿಗಿಂತ ಮೇಲಿನ ಅಧಿಕಾರಿಗಳು ದಿನವೂ ಕಚೇರಿಗೆ ಬರಲು ಆರಂಭಿಸಿದ್ದಾರೆ. ಎಲ್ಲ ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ಕಚೇರಿ ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ ಮಾಡಿದ್ದು, ವಾಹನಗಳ ಮೇಲೆ ಔಷಧ ಸಿಂಪಡಣೆ ಮಾಡಲಾಗುತ್ತಿದೆ. 

ಮಂತ್ರಿಗಳು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಇದ್ದು ಕೆಲಸ ಮಾಡುವಂತೆ ಪ್ರಧಾನಿ ಹೇಳಿದ್ದು, ಅವರವರ ಇಲಾಖೆಯಲ್ಲಿ ಏನೇನು ಕೆಲಸ ನಡೆಯುತ್ತಿದೆ ಎಂದು ಪ್ರಧಾನಿ ಕಾರ್ಯಾಲಯ ದಿನಂಪ್ರತಿ ವರದಿ ತರಿಸಿಕೊಳ್ಳುತ್ತಿದೆ.

- ಪ್ರಶಾಂತ್ ನಾಥು, ದೆಹಲಿ ಪ್ರತಿನಿಧಿ, ಸುವರ್ಣ ನ್ಯೂಸ್
ಕನ್ನಡಪ್ರಭದಲ್ಲಿ ಪ್ರಕಟವಾದ ದೆಹಲಿಯಿಂದ ಕಂಡ ರಾಜಕಾರಣ ಅಂಕಣದಿಂದ