ಚೀನಾ ಗಡಿಯಲ್ಲಿ ಮತ್ತೆ ಯುದ್ಧ ಸ್ಥಿತಿ: ‘ಫೈರಿಂಗ್ ರೇಂಜ್’ನಲ್ಲಿ ಯೋಧರ ಜಮಾವಣೆ!
ಚೀನಾ ಗಡಿಯಲ್ಲಿ ಮತ್ತೆ ಯುದ್ಧ ಸ್ಥಿತಿ| ‘ಫೈರಿಂಗ್ ರೇಂಜ್’ನಲ್ಲಿ ಭಾರತ-ಚೀನಾ ಯೋಧರ ಜಮಾವಣೆ| ಗಡಿಯುದ್ದಕ್ಕೂ ಹೈ ಅಲರ್ಟ್| ಚೀನಾ ದುಸ್ಸಾಹಸಕ್ಕೆ ಇಳಿದರೆ ತಿರುಗೇಟು ನೀಡಿ: ಸೇನೆಗೆ ಸೂಚನೆ| ಫಲ ಕಾಣದ ಕಮಾಂಡರ್‌ಗಳ ಮಾತುಕತೆ| ಅರುಣಾಚಲಕ್ಕೂ ಹೆಚ್ಚಿನ ಯೋಧರನ್ನು ರವಾನಿಸಿದ ಭಾರತ
ಲೇಹ್/ನವದೆಹಲಿ(ಸೆ.03): ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವ ಬಣ್ಣದ ಮಾತುಗಳನ್ನು ಆಡಿ, ಭಾರತದ ಭೂಪ್ರದೇಶಗಳನ್ನು ವಶಪಡಿಸಿಕೊಳ್ಳಲು ಚೀನಾ ಎರಡು ಬಾರಿ ಯತ್ನಿಸಿದ ಬಳಿಕ ಗಡಿಯಲ್ಲಿ ಯುದ್ಧದ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ಹಾಗೂ ಚೀನಾ ಪಡೆಗಳು ‘ಪರಸ್ಪರ ಗುಂಡಿನ ಚಕಮಕಿ ನಡೆಸಬಹುದಾದಷ್ಟುಸಮೀಪದಲ್ಲಿ’ (ಫೈರಿಂಗ್ ರೇಂಜ್‌ನಲ್ಲಿ) ಎದುರು ಬದುರಾಗಿ ಜಮಾವಣೆಗೊಂಡಿವೆ ಎಂದು ವಿಶ್ವಾಸಾರ್ಹ ಮೂಲಗಳು ಹೇಳಿವೆ.
ಅಣ್ವಸ್ತ್ರ ಸಂಖ್ಯೆ ದ್ವಿಗುಣಕ್ಕೆ ಚೀನಾ ಯತ್ನ!
ಇದರ ಬೆನ್ನಲ್ಲೇ ಭಾರತದ ಗೃಹ ಸಚಿವಾಲಯ ಹೈ-ಅಲರ್ಟ್ ಸಾರಿದೆ. ಗಡಿ ಭದ್ರತಾ ಪಡೆಗಳು ಚೀನಾ-ಭಾರತ, ಭಾರತ-ನೇಪಾಳ ಹಾಗೂ ಭಾರತ-ಭೂತಾನ್ ಗಡಿಯಲ್ಲಿ ಎಚ್ಚರಿಕೆಯಿಂದ ಇರಬೇಕು. ಅಲ್ಲದೆ, ಸಶಸ್ತ್ರ ಸೀಮಾ ಬಲ ಹಾಗೂ ಇಂಡೋ-ಟಿಬೆಟ್ ಗಡಿ ಪಡೆಗಳು ತಮ್ಮ ಬಲ ಹೆಚ್ಚಿಸಿಕೊಂಡು ಪಹರೆ ತೀವ್ರಗೊಳಿಸಬೇಕು ಎಂದು ಸೂಚಿಸಿದೆ. ಚೀನಾ ಸೇನೆ ಚಟುವಟಿಕೆ ಹೆಚ್ಚಿರುವ ಅರುಣಾಚಲ ಪ್ರದೇಶ ಗಡಿಯಲ್ಲಿ ಕೂಡ ಹೆಚ್ಚಿನ ಭಾರತದ ಪಡೆಗಳನ್ನು ಜಮಾವಣೆ ಮಾಡಲಾಗಿದೆ. ಅರುಣಾಚಲವನ್ನು ಚೀನಾ ‘ದಕ್ಷಿಣ ಟಿಬೆಟ್’ ಎಂದು ಕರೆಯುತ್ತದೆ. 1962ರ ಭಾರತ-ಚೀನಾ ಯುದ್ಧದಲ್ಲಿ ಅರುಣಾಚಲವೇ ಸಂಘರ್ಷದ ಮೂಲವಾಗಿತ್ತು. ಹೀಗಾಗಿ ಇದು ಮತ್ತೊಮ್ಮೆ ‘ಸಂಘರ್ಷದ ಮೂಲ’ ಆಗಬಹುದಾಗಿದೆ ಎಂದು ರಕ್ಷಣಾ ತಜ್ಞರು ಎಚ್ಚರಿಸಿದ್ದಾರೆ.
ಈ ನಡುವೆ, ಪ್ಯಾಂಗಾಂಗ್‌ನಲ್ಲಿ ಚೀನಾ ನಡೆಸಿದ ಕಿತಾಪತಿಗೆ ಸಂಬಂಧಿಸಿದಂತೆ ಸತತ ಮೂರನೇ ದಿನವಾದ ಬುಧವಾರವೂ ಎರಡೂ ದೇಶಗಳ ಉನ್ನತ ಸೇನಾ ಕಮಾಂಡರ್‌ಗಳ ಮಾತುಕತೆ ನಡೆದಿದೆ. ಮಾತುಕತೆಯಿಂದ ಹೆಚ್ಚು ಫಲ ಸಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.
ಪರಸ್ಪರ ಹತ್ತಿರವಾದ ಪಡೆಗಳು:
ಪೂರ್ವ ಲಡಾಖ್‌ನಲ್ಲಿ ಭಾರತ ಹಾಗೂ ಚೀನಾ ಪಡೆಗಳು ಪರಸ್ಪರ ಗಡಿಯಲ್ಲಿ ಹತ್ತಿರ ಹತ್ತಿರಕ್ಕೆ ಬಂದಿವೆ. ಕೆಲವೇ ನೂರು ಮೀಟರ್‌ಗಳ ಅಂತರದಲ್ಲಿ ಉಭಯ ಪಡೆಗಳು ಜಮಾವಣೆಗೊಂಡಿವೆ. ಜತೆಗೆ, ಯುದ್ಧ ಟ್ಯಾಂಕ್‌ಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ ವಾಹನಗಳನ್ನು ಜಮಾವಣೆಗೊಳಿಸಿವೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಇದು ಪರಿಸ್ಥಿತಿ ಎಷ್ಟುಪ್ರಕ್ಷುಬ್ಧವಾಗಿದೆ ಎಂಬುದರ ದ್ಯೋತಕವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಚೀನಾಕ್ಕೆ ಮತ್ತೊಂದು ಮರ್ಮಾಘಾತ; ಪಬ್‌ಜಿ ಸೇರಿ 118 ಅಪ್ಲಿಕೇಶನ್ ಬ್ಯಾನ್
ಮಂಗಳವಾರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು, ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಶಸ್ತ್ರ ಪಡೆಗಳ ಮುಖ್ಯಸ್ಥ ಜ| ಬಿಪಿನ್ ರಾವತ್ ಹಾಗೂ ಮೂರೂ ಸೇನಾ ಮುಖ್ಯಸ್ಥರನ್ನು ಒಳಗೊಂಡ ಉನ್ನತ ಮಟ್ಟದ ಸಭೆ ನಡೆಸಿದರು. ಅದರಲ್ಲಿ ಚೀನಾ ದುಸ್ಸಾಹಸಕ್ಕೆ ಗಡಿಯಲ್ಲಿ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಸೇನೆಗೆ ಸೂಚಿಸಲಾಗಿದೆ. ವಾಯುಪಡೆಗೆ ಗಡಿಯಲ್ಲಿ ಹದ್ದಿನ ಕಣ್ಣು ಇಡಬೇಕು ಎಂದು ತಿಳಿಸಲಾಗಿದೆ ಎಂದೂ ಮೂಲಗಳು ಹೇಳಿವೆ.
ಅರುಣಾಚಲ ಗಡಿಯಲ್ಲೂ ಅಲರ್ಟ್:
ಪ್ಯಾಂಗಾಂಗ್ ಸಂಘರ್ಷದ ಬೆನ್ನಲ್ಲೇ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡ ಚೀನಾ ಗಡಿಯಲ್ಲಿ ಭಾರತ ಕಟ್ಟೆಚ್ಚರ ಸಾರಿದೆ. ಹೆಚ್ಚಿನ ಪಡೆಗಳನ್ನು ಅರುಣಾಚಲ ಗಡಿಗೆ ರವಾನಿಸಲಾಗಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ಯಾಂಗಾಂಗ್ ಲೇಕ್ ಬಳಿ ಚೀನಾ ಖ್ಯಾತೆ; ಹಿರಿಯ ಅಧಿಕಾರಿಗಳ ಜೊತೆ ಅಜಿತ್ ದೋವಲ್ ಸಭೆ!
ಅರುಣಾಚಲ ಗಡಿಯಲ್ಲೂ ಚೀನಾ ಪಡೆಗಳ ಚಲನವಲನ ನಡೆದಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪಡೆಗಳನ್ನು ಜಮಾಯಿಸಲಾಗಿದೆ. ಆದರೆ ಈ ಗಡಿಯಲ್ಲಿ ಚೀನಾ ಸೇನೆ ಒಳನುಸುಳಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ.