ಅಯೋಧ್ಯೆ(ಮೇ.11): ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ ಅಂದ್ರೆ ಅದು ಭಾರತ. ಇದೇ ಗುಣ ಭಾರತವನ್ನು ಉಳಿದೆಲ್ಲಾ ರಾಷ್ಟ್ರಗಳಿಂದ ಭಿನ್ನವಾಗಿಸುತ್ತದೆ. ಹೀಗಿದ್ದರೂ ಇತ್ತೇಚೆಗೆ ಕೋಮು ಗಲಭೆಗಳು ಹೆಚ್ಚಾಗಿ ಕಂಡು ಬರುತ್ತವೆ. ಇನ್ನು ಕೋಮು ಗಲಭೆ ಎಂದಾಗ ಅಯೋಧ್ಯೆ ಹಾಗೂ ಬಾಬ್ರಿ ಮಸೀದಿ ವಿಚಾರದಲ್ಲಿ ನಡೆದ ಹಿಂಸಾಚಾರ ಎಲ್ಲರ ಮನದಲ್ಲೊಮ್ಮೆ ಸದ್ದು ಮಾಡಿ ಸರಿಯುತ್ತದೆ. ಆದರೀಗ ಅದೇ ರಾಮ ಜನ್ಮಭೂಮಿ ಅಯೋಧ್ಯೆಯ ಗ್ರಾಮವೊಂದರಲ್ಲಿ ನಡೆದ ಘಟನೆ ಕೋಮು ಸಾಮರಸ್ಯ ಇಲ್ಲಿನ ಮಣ್ಣಿನ ಗುಣ ಎಂಬುವುದನ್ನು ಮತ್ತೆ ಸಾಬೀತು ಮಾಡಿದೆ. ಹಿಂದೂ ಪ್ರಾಬಲ್ಯವುಳ್ಳ ಗ್ರಾಮವೊಂದು ಮುಸ್ಲಿಂ ಅಭ್ಯರ್ಥಿಯನ್ನು ತಮ್ಮ ಹಳ್ಳಿಯ ನಾಯಕನನ್ನಾಗಿ ಆಯ್ಕೆ ಮಾಡಿದೆ.

ಜಾತ್ಯಾತೀತತೆ ಎಂದರೇನು?: ಉದ್ಧವ್ ಠಾಕ್ರೆ ಹೇಳಿದ್ದು ಕೇಳಿದಿರೇನು?

ಹೌದು ಅಯೋಧ್ಯೆಯ ಹಿಂದೂ ಪ್ರಾಬಲ್ಯವುಳ್ಳ ಗ್ರಾಮ ರಾಜಾಪುರದ ಜನತೆ ಹಳ್ಳಿಯ ಏಕೈಕ ಮುಸ್ಲಿಂ ಕುಟುಂಬದ ಸದಸ್ಯನಾಗಿರುವ ಹಫೀಜ್ ಅಜೀಮುದ್ದೀನ್‌ರನ್ನು ಗ್ರಾಮ ಪ್ರಧಾನ್‌ರನ್ನಾಗಿ ಆಯ್ಕೆ ಮಾಡಿದ್ದಾರೆ. ಒಟ್ಟು 600 ಮತಗಳಲ್ಲಿ 200 ಮತಗಳನ್ನು ಗಳಿಸಿರುವ ಹಫೀಜ್ ಕಣದಲ್ಲಿದ್ದ ಇನ್ನೂ ಆರು ಮಂದಿ ಹಿಂದೂ ಅಭ್ಯರ್ಥಿಗಳನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಹಫೀಜ್‌ ಅಜೀಮುದ್ದೀನ್ ಈ ತನ್ನ ಗೆಲುವು ಈದ್‌ನ ಬಹುಮಾನ ಎಂದಿರುವ ಹಫೀಜ್, ತನ್ನ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ ಹಿಂದೂ ಬಾಂಧವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಚುನಾವಣೆ ಬಹಳ ಚಿಕ್ಕ ಮಟ್ಟದ್ದಾಗಿದ್ದರೂ, ಹಿಂದುತ್ವದ ಬುನಾದಿ ಎನ್ನಲಾಗುವ ಅಯೋಧ್ಯೆಯ ಹಿಂದೂ ಮುಸ್ಲಿಂ ವೋಟ್‌ ಬ್ಯಾಂಕ್‌ ಪಾಲಿಟಿಕ್ಸ್‌ ಎಂಬ ಕಾನ್ಸೆಪ್ಟ್‌ನ್ನು ಅಳಿಸಿ ಹಾಕಿದೆ.

ವೃತ್ತಿಯಲ್ಲಿ ರೈತನಾಗಿರುವ ಹಫೀಜ್ ಇಸ್ಲಾಮಿಕ್‌ ಮದ್ರಸಾದಿಂದ ಪದವಿ ಪಡೆದಿದ್ದಾರೆ. ಬರೋಬ್ಬರಿ ಹತ್ತು ವರ್ಷ ಮದ್ರಸಾದಲ್ಲಿ ಶಿಕ್ಷಕರಾಗಿದ್ದ ಹಫೀಜ್ ಬಳಿಕ ತನ್ನ ಊರಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಧಾನ್ಯ, ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುತ್ತಾರೆ. 

ಅಂತರ್ಜಾತಿ ವಿವಾಹಕ್ಕೆ RSS ಬೆಂಬಲ: ದತ್ತಾತ್ರೇಯ ಹೊಸಬಾಳೆ

ಇದು ನಮ್ಮ ಸಮಾಜದಲ್ಲಿರುವ ಧಾರ್ಮಿಕ ಸಾಮರಸ್ಯಕ್ಕೆ ಉದಾಹರಣೆ. ಈ ಗುಣವನ್ನು ನಮ್ಮಿಂದ ದೂರ ಮಾಡಲು ಸಾಧ್ಯವಿಲ್ಲ. ನಾವು ಜಾತಿ ಆಧಾರದಲ್ಲಿ ಮತ ಚಲಾಯಿಸದೆ, ನಮಗೇನು ಒಳ್ಳೆಯದೆಂದು ಯೋಚಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ. ನಾವು ಹಿಂದೂಗಳು ಆದರೆ ಜಾತ್ಯಾತೀತತೆಯನ್ನು ನಾವೆಷ್ಟು ಪಾಲಿಸುತ್ತೇವೆ ಎಂಬುವುದಕ್ಕೆ ಗ್ರಾಮದ ಮುಖ್ಯಸ್ಥನಾಗಿ ಮುಸ್ಲಿಂ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೇವೆ ಎಂಬುವುದು ಈ ಗ್ರಾಮದ ಹಿಂದೂ ಸಹೋದರನ ಮಾತಾಗಿದೆ. 

ನಾನು ಪಡೆದ 200 ಮತಗಳಲ್ಲಿ ಕೇವಲ 27 ಮುಸಲ್ಮಾನರದ್ದಾಗಿರಬಹುದು. ಈ ಗ್ರಾಮದ ಮುಸ್ಲಿಂ ಜನಸಂಖ್ಯೆಯೇ ಇಷ್ಟು. ಉಳಿದೆಲ್ಲಾ ಮತಗಳು ಹಿಂದೂ ಬಾಂಧವರ ನನಗೆ ಕೊಟ್ಟ ಬೆಂಬಲ ಎಂದಿದ್ದಾರೆ ಹಫೀಜ್.