Asianet Suvarna News Asianet Suvarna News

ಅಂತರ್ಜಾತಿ ವಿವಾಹಕ್ಕೆ RSS ಬೆಂಬಲ: ದತ್ತಾತ್ರೇಯ ಹೊಸಬಾಳೆ

ಪೇಜಾವರ ಶ್ರೀಗಳು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ| ಹಿಂದೂ ಸಮಾಜದಲ್ಲಿ ಮೇಲು-ಕೀಳು, ಅಸ್ಪೃಶ್ಯತೆ ಇರಬಾರದು| ಹಿಂದೂ ಸಮಾಜ ಒಂದು ಎಂಬುದು ಆರ್‌ಎಸ್‌ಎಸ್‌ನ ಸ್ಪಷ್ಟನಿಲುವು| ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಪ್ರತಿಪಾದನೆ| 

RSS Support Inter Caste Marriage Says Dattatreya Hosabale grg
Author
Bengaluru, First Published Mar 21, 2021, 8:15 AM IST

ಬೆಂಗಳೂರು(ಮಾ.21):  ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿಯಾಧಾರಿತ ಮೇಲು-ಕೀಳು ಹಾಗೂ ವಿಷಮತೆಯನ್ನು ಯಾರೂ ಪಾಲಿಸಬಾರದು. ಅಂತರ್ಜಾತಿ ವಿವಾಹಕ್ಕೆ ಆರ್‌ಎಸ್‌ಎಸ್‌ ಸಹಮತ ಇದೆ ಎಂದು ಆರ್‌ಎಸ್‌ಎಸ್‌ನ ನೂತನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ನಗರದ ಹೊರವಲಯದಲ್ಲಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಸಮಾಜ ಒಂದು’ ಎಂದು ಆರ್‌ಎಸ್‌ಎಸ್‌ ಪ್ರತಿಪಾದನೆ ಮಾಡುತ್ತದೆ. ಅಸ್ಪೃಶ್ಯತೆ ಆಚರಣೆ ದೂರವಾಗಬೇಕು ಎಂಬುದು ಆರ್‌ಎಸ್‌ಎಸ್‌ನ ಸ್ಪಷ್ಟನಿಲುವು. ಸಮಾಜವನ್ನು ಸರಿಪಡಿಸುವಂತಹ ಕೆಲಸವನ್ನು ಎಲ್ಲ ಕಾಲದಲ್ಲಿಯೂ ನಾವು ಮಾಡುತ್ತಿದ್ದೇವೆ. ಇತ್ತೀಚೆಗೆ ಪೇಜಾವರ ಮಠದ ಸ್ವಾಮೀಜಿಗಳು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಹಿಂದಿನ ವಿಶ್ವೇಶ ತೀರ್ಥರು ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ್ದು, ಅವರು ನಮಗೆ ಪ್ರೇರಣೆ ಎಂದು ಹೇಳಿದರು.

RSS ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ!

ಲವ್‌ ಜಿಹಾದ್‌ ಎಂಬ ಪದವನ್ನು ನಾವು ಬಳಕೆ ಮಾಡಿದ್ದಲ್ಲ. ಕೇರಳ ಸೇರಿದಂತೆ ಕೆಲ ರಾಜ್ಯಗಳ ನ್ಯಾಯಾಲಯಗಳು ಬಳಕೆ ಮಾಡಿರುವ ಪದವಾಗಿದೆ. ಮದುವೆ ಮತ್ತು ಮತಾಂತರಕ್ಕಾಗಿ ಯುವತಿಯರಿಗೆ ಆಮಿಷವೊಡ್ಡಲು ಮೋಸದ ವಿಧಾನಗಳನ್ನು ಬಳಕೆ ಮಾಡುವುದನ್ನು ತಡೆಯಲು ಸೂಕ್ತವಾದ ಕಾನೂನು ಮತ್ತು ನಿಬಂಧನೆ ತರಬೇಕಾಗಿದೆ. ಆರ್‌ಎಸ್‌ಎಸ್‌ ಅಂತಹ ಕಾನೂನುಗಳನ್ನು ಬೆಂಬಲಿಸುತ್ತದೆ ಎಂದು ತಿಳಿಸಿದರು.

ಮುಂದಿನ ವರ್ಷಗಳಲ್ಲಿ ಸಾಮಾಜಿಕ ಸಾಮರಸ್ಯ, ಪರಿಸರ, ನೀರಿನ ಸಂರಕ್ಷಣೆ, ಕುಟುಂಬ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಂಘ ಕಾರ್ಯೋನ್ಮುಖವಾಗಲಿದೆ. ಗ್ರಾಮೀಣ ಪ್ರದೇಶಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಗ್ರಾಮ ವಿಕಾಸದತ್ತವೂ ಕೆಲಸ ಮಾಡಲಿದೆ. ಮಣ್ಣಿನ ಗುಣಮಟ್ಟವನ್ನು ಸುಧಾರಿಸಲು ಮಣ್ಣಿನ ತಜ್ಞರ ಜತೆ ಕೈ ಜೋಡಿಸಿ ಕಾರ್ಯಗಳನ್ನು ನಿರ್ವಹಿಸಲಾಗುವುದು. ಏ.13ರಂದು ಆರ್‌ಎಸ್‌ಎಸ್‌ ಇದನ್ನು ಪ್ರಾಯೋಗಿಕ ಯೋಜನೆಗಳೊಂದಿಗೆ ದೊಡ್ಡ ಅಭಿಯಾನವಾಗಿ ತೆಗೆದುಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

ರಾಮಮಂದಿರ ನಿರ್ಮಾಣ ಆರ್‌ಎಸ್‌ಎಸ್‌ ನಿರ್ಧಾರವಲ್ಲ. ಸುಪ್ರೀಂಕೋರ್ಟ್‌ ಆದೇಶವನ್ನು ಪಾಲನೆ ಮಾಡಲಾಗುತ್ತಿದೆ ಅಷ್ಟೆ. ಕೇವಲ ರಾಜಕೀಯ ಉದ್ದೇಶದಿಂದ ಇದನ್ನು ವಿರೋಧ ಮಾಡಲಾಗುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

RSS ಅತ್ಯುನ್ನತ ಹುದ್ದೆಗೇರಿದ ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ನಡೆದು ಬಂದ ಹಾದಿ

3 ವರ್ಷದಲ್ಲಿ ಪ್ರತಿ ಮಂಡಲದಲ್ಲಿ ಶಾಖೆ

ಆರ್‌ಎಸ್‌ಎಸ್‌ಗೆ 2025ರಲ್ಲಿ 100ನೇ ವರ್ಷ ತುಂಬುತ್ತಿದ್ದು, ದೇಶದಾದ್ಯಂತ ಸಂಘದ ಕಾರ್ಯವನ್ನು ಪ್ರತಿ ಮಂಡಲದವರೆಗೆ ತಲುಪಿಸಬೇಕಾಗಿದೆ. ಪರಿವಾರ ಪ್ರಬೋಧನ, ಗೋಸೇವಾ, ಪರಿಸರ ಸಂರಕ್ಷಣೆ, ಜಲರಕ್ಷಣೆ, ಸಮಾಜ ಸಮರಸತೆ, ಗ್ರಾಮ ವಿಕಾಸ ಇತ್ಯಾದಿ ಸಮಾಜಹಿತ ಕಾರ್ಯಗಳಲ್ಲಿ ಆರ್‌ಎಸ್‌ಎಸ್‌ ತೊಡಗಿಸಿಕೊಳ್ಳಲಿದೆ. ಮುಂದಿನ ಮೂರು ವರ್ಷದಲ್ಲಿ ಹಲವು ಅಭಿಯಾನಗಳನ್ನು ನಡೆಸಲಾಗುವುದು ಎಂದು ದತ್ತಾತ್ತೇಯ ಹೊಸಬಾಳೆ ಹೇಳಿದರು.

ಪ್ರಸ್ತುತ ದೇಶದಲ್ಲಿ 34,569 ಶಾಖೆಗಳಿವೆ. 18,500 ಸಾಪ್ತಾಹಿಕ ಸಭೆಗಳು ನಡೆಯುತ್ತಿವೆ. ಕೊರೋನಾದಿಂದಾಗಿ ಸ್ಥಗಿತವಾಗಿದ್ದ ಶಾಖೆಗಳು ಶೇ.90ರಷ್ಟುಪುನಃ ಆರಂಭಗೊಂಡಿವೆ. ಪರಿಸ್ಥಿತಿ ಸಾಮಾನ್ಯವಾದ ಬಳಿಕ ಎಲ್ಲಾ ಶಾಖೆಗಳನ್ನು ಪುನರಾರಂಭಿಸುತ್ತೇವೆ. ಮುಂದಿನ ಮೂರು ವರ್ಷದಲ್ಲಿ ಎಲ್ಲ ಮಂಡಲಗಳಲ್ಲಿ ಶಾಖೆಗಳನ್ನು ಹೊಂದುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
 

Follow Us:
Download App:
  • android
  • ios