ಕಟ್ಟಡದಿಂದ ಬೀಳುತ್ತಿದ್ದ ಕಾರ್ಮಿಕನನ್ನು ಮೇಸ್ತಿಯೊಬ್ಬರು ಕ್ಯಾಚ್ ಹಿಡಿದು ರಕ್ಷಿಸಿದ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಕೊಲ್ಲಂ: ಕಟ್ಟಡ ನಿರ್ಮಾಣ ಕಾರ್ಯದ ವೇಳೆ ಕೆಲವೊಮ್ಮೆ ಅವಘಡಗಳು ಸಂಭವಿಸಿ ಜೀವವೇ ಹೋಗಿ ಬಿಡುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದ ಮೇಸ್ತಿಯೊಬ್ಬರು ಕೆಳಗೆ ಬೀಳುತ್ತಿದ್ದ ಕಾರ್ಮಿಕರೊಬ್ಬರನ್ನು ಕ್ಯಾಚ್ ಹಿಡಿದು ರಕ್ಷಿಸಿದ ಅಚ್ಚರಿಯ ಘಟನೆ ಕೇರಳದಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದ ವೇಳೆ ಮೊದಲ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಅಚಾನಕ್ ಆಗಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಕೆಳಗೆ ಇದ್ದ ಮೇಸ್ತಿ ಆತನನ್ನು ಕ್ಯಾಚ್ ಹಿಡಿಯುವ ಮೂಲಕ ಇಬ್ಬರು ಒಟ್ಟಿಗೆ ಪಕ್ಕಕ್ಕೆ ಬಿದ್ದಿದ್ದಾರೆ. ಈ ಮೂಲಕ ಆಗುತ್ತಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಮೇ.27ರಂದು ಈ ಘಟನೆ ನಡೆದಿದೆ. ಅಂದು ಬೆಳಗ್ಗೆ ಶಂಕರ್ ಎಂಬ ಕಾರ್ಮಿಕ ಇತರ ನಾಲ್ವರೊಂದಿಗೆ ಕಾಂಕ್ರೀಟ್ ಕಿಟಕಿಯ ಮೇಲ್ಛಾವಣಿಯ ಮೇಲೆ ಕೆಲಸ ಮಾಡುತ್ತಿದ್ದಾಗ ಅಲ್ಲಿಂದ ಜಾರಿಬಿದ್ದಿದ್ದಾರೆ. ಈ ವೇಳೆ ಗುತ್ತಿಗೆದಾರ ಗಣೇಶ್ ನೆಲದ ಮೇಲೆ ಇದ್ದು ಕೆಲಸಗಾರರ ಕೆಲಸ ಗಮನಿಸುತ್ತಿದ್ದರು. ಶಂಕರ್ ಬೀಳುತ್ತಿರುವುದನ್ನು ಗಮನಿಸಿ ಅವರನ್ನು ಹಿಡಿದಿದ್ದಾರೆ. ನಂತರ ಇಬ್ಬರೂ ನಿರ್ಮಾಣ ಸಾಮಗ್ರಿಗಳ ಮೇಲೆ ಬಿದ್ದಿದ್ದಾರೆ.
ಈ ಕ್ಯಾಚ್ ಹಿಡಿಯಲು ಹೋಗಿ ಮೊದಲೇ ಬೆನ್ನು ನೋವಿನಿಂದ ಬಳಲುತ್ತಿದ್ದ ಗಣೇಶ್ ಅವರಿಗೆ ಬಲಗಾಲಿನಲ್ಲಿ ಸಣ್ಣ ಸ್ನಾಯು ಸೆಳೆತ ಉಂಟಾಗಿದೆ ಎಂದು ವರದಿಯಾಗಿದೆ. ಗಣೇಶ್ ಅವರು ಬೆನ್ನುನೋವಿನ ಕಾರಣಕ್ಕೆ ಬೆನ್ನಿಗೆ ಸಪೋರ್ಟ್ ಬೆಲ್ಟ್ ಹಾಕಿಕೊಂಡು ಕೆಲಸ ಮಾಡುತ್ತಿದ್ದರು. ಆದರೂ ತನ್ನ ಜೊತೆ ಕೆಲಸ ಮಾಡುತ್ತಿದ್ದ ಶಂಕರ್ ಬೀಳುವುದು ನೋಡುತ್ತಿದ್ದಂತೆ ಆತನ ರಕ್ಷಣೆಗೆ ಮುಂದಾಗಿದ್ದಾರೆ. ಈ ಘಟನೆಯಲ್ಲಿ ಶಂಕರ್ ಅವರು ಯಾವುದೇ ಹಾನಿಗೊಳಗಾಗದೇ ಪಾರಾಗಿದ್ದು, ಕೆಲಸ ಮುಂದುವರೆಸಿದ್ದಾರೆ.
ಮೇಸ್ತಿ ಗಣೇಶ್ ಅವರು ಕಳೆದ 25 ವರ್ಷಗಳಿಗೂ ಹೆಚ್ಚು ಕಾಲ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಶಂಕರ್ ಅವರ ಜೊತೆ ಕಳೆದ 24 ವರ್ಷಗಳಿಂದ ಸಹೋದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಘಟನೆಯ ನಂತರ ಮಾತನಾಡಿದ ಗಣೇಶ್, ಶಂಕರ್ ಕೆಳಗೆ ಬೀಳುವುದನ್ನು ನೋಡಿ ತಾನು ತಕ್ಷಣವೇ ಅವರ ಸಹಾಯಕ್ಕೆ ಬಂದೆ ಹಾಗೂ ನಾವಿಬ್ಬರೂ ಗಂಭೀರ ಹಾನಿಯಿಂದ ಪಾರಾಗಿದ್ದಕ್ಕಾಗಿ ದೇವರಿಗೆ ಕೃತಜ್ಞನಾಗಿದ್ದಾಗಿ ಹೇಳಿದರು.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತನ್ನ ಸಹಕಾರ್ಮಿಕನ ರಕ್ಷಣೆಗೆ ಧಾವಿಸಿದ ಮೇಸ್ತಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
