Asianet Suvarna News Asianet Suvarna News

ತಮಿಳುನಾಡನಲ್ಲಿ ಮ್ಯಾಂಡಸ್‌ ಅಬ್ಬರ: 400 ಮರಗಳು ಧರೆಗೆ, 4 ಸಾವು

ಮ್ಯಾಂಡಸ್‌ ಚಂಡಮಾರುತ ತಮಿಳುನಾಡು ಕಡಲ ತೀರಕ್ಕೆ ಅಪ್ಪಳಿಸಿದ್ದು, ಭಾರಿ ಅನಾಹುತ ಸೃಷ್ಟಿಸಿದೆ. 70 ಕಿ.ಮೀ. ವೇಗದಲ್ಲಿ ಚಲಿಸುತ್ತಿರುವ ಗಾಳಿಯಿಂದಾಗಿ ಭಾರಿ ಮಳೆ ಸುರಿದಿದ್ದು, ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. 

Heavy Rain in Tamil Nadu Due to Cyclone Mandous grg
Author
First Published Dec 11, 2022, 3:30 AM IST

ಚೆನ್ನೈ/ಅಮರಾವತಿ(ಡಿ.11):  ಬಂಗಾಳಕೊಲ್ಲಿ ಸೃಷ್ಟಿಯಾಗಿರುವ ಮ್ಯಾಂಡಸ್‌ ಚಂಡಮಾರುತ ತಮಿಳುನಾಡು ಕಡಲ ತೀರಕ್ಕೆ ಅಪ್ಪಳಿಸಿದ್ದು, ಭಾರಿ ಅನಾಹುತ ಸೃಷ್ಟಿಸಿದೆ. 70 ಕಿ.ಮೀ. ವೇಗದಲ್ಲಿ ಚಲಿಸುತ್ತಿರುವ ಗಾಳಿಯಿಂದಾಗಿ ಭಾರಿ ಮಳೆ ಸುರಿದಿದ್ದು, ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಂಡಮಾರುತ ಆಂಧ್ರಪ್ರದೇಶದತ್ತ ಚಲಿಸಿದ್ದು, ಅಲ್ಲೂ ಸಹ ಮಳೆಯಾಗುತ್ತಿದೆ. ಆದರೆ, ಅಪ್ಪಳಿಸಿದ ಬಳಿಕ ಚಂಡಮಾರುತವು ವಾಯುಭಾರ ಕುಸಿತವಾಗಿ ಮಾರ್ಪಾಟಾಗಿದ್ದು, ಮೊದಲಿನ ತೀವ್ರತೆ ಕಳೆದುಕೊಂಡಿದೆ. ಹೀಗಾಗಿ ಇನ್ನು ಮಳೆ ಕ್ಷೀಣಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಚೆನ್ನೈನಲ್ಲಿ 400 ಮರ ಧರೆಗೆ:

ಚೆನ್ನೈ ನಗರದಲ್ಲಿ ಸುಮಾರು 400ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಮಳೆಯಿಂದ ಉಂಟಾದ ಅನಾಹುತದಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ತಮಿಳುನಾಡು ವಿಪತ್ತು ನಿರ್ವಹಣಾ ದಳ ಬಿದ್ದ ಮರಗಳನ್ನು ತೆರವುಗೊಳಿಸುತ್ತಿದೆ. ವಿದ್ಯುತ್‌ ಕಂಬಗಳು ಮುರಿದು ಬಿದ್ದಿರುವುರಂದ 600ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ಭಾರಿ ಮಳೆಯಿಂದ ಉಂಟಾಗಿರುವ ಹಾನಿಯನ್ನು ಸರಿಪಡಿಸಲು 25 ಸಾವಿರ ಕೆಲಸಗಾರರು ಶ್ರಮವಹಿಸುತ್ತಿದ್ದಾರೆ. ಸುಮಾರು 22 ಸಬ್‌ವೇಗಳಲ್ಲಿ ನೀರನ್ನು ತೆರವು ಮಾಡಲಾಗಿದ್ದು, ಸಂಚಾರ ಸುಗಮಗೊಂಡಿದೆ. ಸುಮಾರು 9 ಸಾವಿರ ಜನರನ್ನು 205 ಪರಿಹಾರ ಕೇಂದ್ರಗಳಿಗೆ ಸುರಕ್ಷಿತವಾಗಿ ವರ್ಗಾವಣೆ ಮಾಡಲಾಗಿದೆ ಎಂದು ತಮಿಳುನಾಡು ಆಡಳಿತ ತಿಳಿಸಿದೆ.

Bengaluru Rain: ಮಾಂಡೌಸ್ ಚಂಡಮಾರುತ ಎಫೆಕ್ಟ್: ಬೆಂಗಳೂರಿನಲ್ಲಿ ಮೂರು ದಿನ ಜಿಟಿ-ಜಿಟಿ ಮಳೆ

ಆಂಧ್ರದಲ್ಲೂ ಭಾರಿ ಮಳೆ:

ಮ್ಯಾಂಡಸ್‌ ಚಂಡಮಾರುತ ಉತ್ತರದತ್ತ ಚಲಿಸಲು ಆರಂಭಿಸಿದ್ದು, ತಮಿಳುನಾಡು ನೆರೆಯ ರಾಜ್ಯವಾದ ಆಂಧ್ರಪ್ರದೇಶದಲ್ಲೂ ಭಾರಿ ಮಳೆಯಾಗಿದೆ. ತಿರುಪತಿ ಜಿಲ್ಲೆಯಲ್ಲಿರುವ ನಾಯ್ಡುಪೆಟ್ಟಾದಲ್ಲಿ ಶನಿವಾರ 28 ಸೆಂ.ಮೀ. ಮಳೆಯಾಗಿದೆ. ಅಲ್ಲದೇ ನೆಲ್ಲೂರು, ಚಿತ್ತೂರು ಮತ್ತು ಅನ್ನಾಮಯ್ಯಾ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡಿ ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. 190 ಜನರನ್ನು 28 ಪರಿಹಾರ ಶಿಬಿರಗಳಿಗೆ ವರ್ಗಾಯಿಸಲಾಗಿದೆ. ರಾಜ್ಯದಲ್ಲಿ ತುರ್ತು ಸೇವೆಗಾಗಿ 150 ಎಸ್‌ಡಿಆರ್‌ಎಫ್‌ ಮತ್ತು 95 ಎನ್‌ಡಿಆರ್‌ಎಫ್‌ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
 

Follow Us:
Download App:
  • android
  • ios