1982ರ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಮಳೆ, ಸಫ್ದಾರ್‌ಜಂಗ್‌ನಲ್ಲಿ ಒಂದೇ ದಿನ 15.3 ಸೆಂ.ಮೀ. ಮಳೆ, ಟಿನ್‌ ಶೆಡ್‌, ಶಾಲೆ ಗೋಡೆ ಕುಸಿತ, ವಿದ್ಯುತ್‌ ವ್ಯತ್ಯಯ, ನಾಳೆ ಅಪಾಯಮಟ್ಟ ಮೀರಲಿರುವ ಯಮುನಾ ನದಿ. 

ನವದೆಹಲಿ(ಜು.10): ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು, ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಒಂದೇ ದಿನದಲ್ಲಿ ಸುಮಾರು 15 ಸೆಂ.ಮೀ.ಗಿಂತ ಅಧಿಕ ಮಳೆ ಸುರಿದ ಪರಿಣಾಮ ಜನಜೀವನ ಅಕ್ಷಶಃ ಅಸ್ತವ್ಯಸ್ತವಾಗಿದೆ. ಹಲವು ಪ್ರದೇಶಗಳಲ್ಲಿ ವಿದ್ಯುತ್‌ ಹಾಗೂ ಇಂಟರ್ನೆಟ್‌ ಸಂಪರ್ಕಗಳು ಕಡಿತಗೊಂಡಿವೆ.

ಸಫ್ದಾರ್‌ಜಂಗ್‌ ಪ್ರದೇಶದಲ್ಲಿ ಭಾನುವಾರ ಮುಂಜಾನೆ 8.30ಕ್ಕೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 15.3 ಸೆಂ.ಮೀ. ಮಳೆಯಾಗಿದೆ. ಇದು ಕಳೆದ 41 ವರ್ಷಗಳಲ್ಲೇ ಅಧಿಕ ಮಳೆಯಾಗಿದ್ದು, 1982ರಲ್ಲಿ 16.3 ಸೆಂ.ಮೀ. ಮಳೆಯಾಗಿತ್ತು. ಸೋಮವಾರವೂ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಭಾನುವಾರ ದೆಹಲಿಗೆ ಯಲ್ಲೋ ಅಲರ್ಚ್‌ ಘೋಷಿಸಲಾಗಿತ್ತು. ಭಾರಿ ಮಳೆಯ ಕಾರಣದಿಂದ ನಿರ್ವಹಣೆಗಾಗಿ ಭಾನುವಾರ ಸರ್ಕಾರಿ ಅಧಿಕಾರಿಗಳ ರಜೆಯನ್ನು ರದ್ದು ಮಾಡಲಾಗಿದ್ದು, ಕಚೇರಿಗೆ ಬರುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೂಚಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ವರುಣನ ಆರ್ಭಟಕ್ಕೆ ಮಂಗಳೂರಲ್ಲಿ ಮೊದಲ ಬಲಿ

ಹೊಸ ಶಾಲೆ ಕಟ್ಟಡ ಕುಸಿತ: ಭಾರಿ ಮಳೆಯಿಂದಾಗಿ ಇಲ್ಲಿನ ಶ್ರೀನಿವಾಸಪುರಿಯಲ್ಲಿ 4 ತಿಂಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಸರ್ಕಾರಿ ಶಾಲಾ ಕಟ್ಟವೊಂದು ಕುಸಿತಗೊಂಡಿದೆ. ಇದು ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದು, ಉತ್ತಮ ಶಿಕ್ಷಣದ ಜೊತೆ ಉತ್ತಮ ಕಟ್ಟಡ ನಿರ್ಮಾಣಕ್ಕೂ ಒತ್ತು ನೀಡಬೇಕು. ಶಾಲಾ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಅಲ್ಲದೇ ಟಿನ್‌ ಶೆಡ್‌ ಕುಸಿತಗೊಂಡು ಅದರಡಿ ಸಿಲುಕಿಕೊಂಡಿದ್ದ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಸುಮಾರು 15 ಕಟ್ಟಡ ಕುಸಿತ ಪ್ರಕರಗಳು ದಾಖಲಾಗಿವೆ.

ಭಾರಿ ಮಳೆಯಿಂದಾಗಿ ಯಮುನಾ ನದಿಯ ಮಟ್ಟಹೆಚ್ಚಳಗೊಂಡಿದ್ದು, ಇದು ಮಂಗಳವಾರದ ಹೊತ್ತಿಗೆ ಅಪಾಯದ ಮಟ್ಟಮೀರಿ ಹರಿಯಲಿದೆ ಎಂದು ಕೇಂದ್ರೀಯ ಜಲ ಆಯೋಗ ಹೇಳಿದೆ. ಹಳೆ ರೈಲು ಸೇತುವೆ ಬಳಿ ಯಮುನಾ ನದಿಯ ಮಟ್ಟ203.18 ಮೀ.ನಷ್ಟಿದ್ದು, 204.5 ಮೀ. ಅಪಾಯದ ಮಟ್ಟವಾಗಿದೆ.