ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಕೊಡಗು, ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದೆ. ಮಂಗಳೂರು ಹೊರವಲಯದ ಪಿಲಾರು ಎಂಬಲ್ಲಿ ಕಾಲು ಸಂಕ ದಾಟುವ ವೇಳೆ ಆಯತಪ್ಪಿ ನೀರಿಗೆ ಬಿದ್ದು ಸುರೇಶ್‌ ಗಟ್ಟಿ (52) ಎಂಬುವರು ಮೃತಪಟ್ಟಿದ್ದಾರೆ.

ಮಂಗಳೂರು (ಜು.05): ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಕೊಡಗು, ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದೆ. ಮಂಗಳೂರು ಹೊರವಲಯದ ಪಿಲಾರು ಎಂಬಲ್ಲಿ ಕಾಲು ಸಂಕ ದಾಟುವ ವೇಳೆ ಆಯತಪ್ಪಿ ನೀರಿಗೆ ಬಿದ್ದು ಸುರೇಶ್‌ ಗಟ್ಟಿ (52) ಎಂಬುವರು ಮೃತಪಟ್ಟಿದ್ದಾರೆ. ಪೈಂಟಿಂಗ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಸುರೇಶ್ ಗಟ್ಟಿ, ಮನೆ ಸಂಪರ್ಕದ ಕಾಲು ಸಂಕ ದಾಟುವ ವೇಳೆ ನೀರಿಗೆ ಬಿದ್ದಿದ್ದು, ಉಸಿರು ಗಟ್ಟಿ ಸಾವನಪ್ಪಿದ್ದಾರೆ. ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬುಧವಾರ ದ.ಕ ಮತ್ತು ಉಡುಪಿ ಜಿಲ್ಲೆಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಭಟ್ಕಳ, ಹೊನ್ನಾವರ ಹಾಗೂ ಕುಮಟಾ ತಾಲೂಕುಗಳಿಗೆ ರಜೆ ಘೋಷಿಸಲಾಗಿದೆ. 

ಇದೇ ವೇಳೆ, ಚಿಕ್ಕಮಗಳೂರು, ವಿಜಯನಗರ, ವಿಜಯಪುರ, ಬೆಂಗಳೂರು, ದಾವಣಗೆರೆ, ಧಾರವಾಡ, ಶಿವಮೊಗ್ಗ ಸೇರಿ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದೆ. ಮಳೆಯಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ನದಿಗಳಲ್ಲಿ ನೀರಿನ ಮಟ್ಟಏರಿಕೆಯಾಗುತ್ತಿದೆ. ಮಂಗಳೂರಿಗೆ ನೀರು ಪೂರೈಸುವ ತುಂಬೆ ಡ್ಯಾಂನ ನೀರಿನ ಮಟ್ಟ4 ಮೀ.ಗೆ ಏರಿದ್ದು, ಅಣೆಕಟ್ಟಿನ 4 ಗೇಟ್‌ಗಳನ್ನು ತೆರೆಯಲಾಗಿದೆ. ಮಣಿಪಾಲ-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕುಂಡೇಲುಕಾಡು ಭಾಗದಲ್ಲಿ ಗುಡ್ಡದ ಮಣ್ಣು ಕುಸಿಯಲಾಂಭಿಸಿದ್ದು, ಹೆದ್ದಾರಿ ಸಂಚಾರಕ್ಕೆ ತೊಂದರೆಯಾಗುವ ಆತಂಕ ಎದುರಾಗಿದೆ. ಪಡುಬಿದ್ರಿ ಸಮುದ್ರ ತೀರದಲ್ಲಿ ಕಡಲು ಕೊರೆತ ಉಂಟಾಗಿದೆ.

ಇನ್ಮುಂದೆ ಐತಿಹಾಸಿಕ ಹಂಪಿಯ ಕಲ್ಲಿನ ತೇರಿನ ಮುಂದೆ ಸೆಲ್ಫಿ‌ ಕ್ಲಿಕ್ಕಿಸಲು ಆಗಲ್ಲ: ಕಾರಣವೇನು ಗೊತ್ತಾ?

ಮಂಗಳವಾರ ಮಧ್ಯಾಹ್ನ ಬ್ರಹ್ಮಾವರ ಸಮೀಪದ ಬಾರ್ಕೂರು ಬಳಿ ಮರವೊಂದು ಕೊಂಕಣ ರೈಲ್ವೆ ಟ್ರ್ಯಾಕ್‌ನ ವಿದ್ಯುತ್‌ ಕಂಬದ ಮೇಲೆ ಉರುಳಿ ಬಿದ್ದಿದ್ದರಿಂದ ನಿಜಾಮುದ್ದೀನ್‌-ತಿರುವನಂತಪುರ ಎಕ್ಸ್‌ಪ್ರೆಸ್‌ ರೈಲನ್ನು ಉಡುಪಿ ರೈಲು ನಿಲ್ದಾಣದಲ್ಲಿ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಈ ಮಾರ್ಗದಲ್ಲಿನ ರೈಲುಗಳ ಓಡಾಟದಲ್ಲಿ ಎರಡು ಗಂಟೆ ವಿಳಂಬವಾಯಿತು. ಮಂಗಳೂರು ಹೊರವಲಯದ ಬಜಾಲ್‌ ಶಾಂತಿನಗರ ವ್ಯಾಪ್ತಿಯಲ್ಲಿ ಮರ ಬಿದ್ದು 2 ಮನೆಗಳಿಗೆ ಹಾನಿ ಸಂಭವಿಸಿದೆ.

ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಸಂಶುದ್ದೀನ್‌ ವೃತ್ತ ಮತ್ತು ರಂಗೀಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ-66ರ ಮೇಲೆ ನೀರು ತುಂಬಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಭಟ್ಕಳ ತಾಲೂಕಿನ ತಲಗೋಡಿನ ಮಾಡಮಾಸ್ತಿ ದೇವಸ್ಥಾನದ ಮೇಲೆ ಮರ ಬಿದ್ದು, ದೇವಾಲಯಕ್ಕೆ ಹಾನಿಯಾಗಿದೆ. ಕೊಡಗಿನಲ್ಲಿ ಮಡಿಕೇರಿ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಬಂದ್‌ ಮಾಡಿ, ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾರಿ ಗಾತ್ರದ ಮರ ಬಿದ್ದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಮಂಗಳವಾರ ಕೆಲ ಕಾಲ ರಸ್ತೆ ಸಂಚಾರಕ್ಕೆ ತೊಂದರೆಯುಂಟಾಯಿತು.

ಸಿಗ್ನಲಿಂಗ್‌ ಸಮಸ್ಯೆಯಿಂದ 6 ತಾಸು ಕೈಕೊಟ್ಟ ಮೆಟ್ರೋ: ಜನರ ಪರ​ದಾಟ

ವಿಜಯನಗರ ಹೊರವಲಯದ ರಾಯರಕೆರೆ ಪ್ರದೇಶದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬಿನ ಬೆಳೆಗೆ ನೀರು ನುಗ್ಗಿದೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ಮನೆ ಕುಸಿತಗೊಂಡಿದ್ದು, ಅದೃಷ್ಟವಶಾತ್‌ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಡಗು, ಕರಾವಳಿಯಾದ್ಯಂತ ಬುಧವಾರ ರೆಡ್‌ ಅಲರ್ಚ್‌ ಘೋಷಿಸಲಾಗಿದ್ದು, ಮಕ್ಕಳನ್ನು ಜಲಮೂಲಗಳ ಬಳಿ ಓಡಾಡಲು ಬಿಡದಂತೆ ಪೋಷಕರಿಗೆ ಸೂಚನೆ ನೀಡಲಾಗಿದೆ. ಪ್ರವಾಸಿಗರಿಗೆ ನದಿ ಮತ್ತು ಸಮುದ್ರ ಪ್ರವೇಶಿಸದಂತೆ ಸೂಚಿಸಲಾಗಿದೆ.